ಸುದಾನ ಶಾಲೆಯಲ್ಲಿ ಜ್ಯೂನಿಯರ್ ವಿಭಾಗದ ವಾರ್ಷಿಕೋತ್ಸವ : ಭೂಮಿ ನಮ್ಮನ್ನು ಬೆಳೆಸುತ್ತಿದೆ, ಸಂರಕ್ಷಿಸುವುದು ನಮ್ಮ ಕರ್ತವ್ಯ-ಕು|ಅವನಿ ಕೋಡಿಬೈಲು

0

 

 

ಪುತ್ತೂರು: ಭೂಮಿ ಎಂಬುದು ಬಹಳ ಪವಿತ್ರ. ನಾವು ಈ ಭೂಮಿಯಲ್ಲಿ ಮೆಟ್ಟಿ ನಡೆಯೋದಕ್ಕೆ ಕ್ಷಮಾಪಣೆಯನ್ನು ಕೇಳಬೇಕು. ಪ್ರತಿದಿನ ಎದ್ದು ಭೂಮಿತಾಯಿಯನ್ನು ನಮಸ್ಕರಿಸುವುದು ಭಾರತೀಯ ಸಂಸ್ಕೃತಿ. ನಾವು ನಮ್ಮ ಭೂಮಿ ತಾಯಿಯ ಮಹತ್ವವನ್ನು ತಿಳಿದು ಮುಂದೆ ಸಾಗಬೇಕು. ಭೂಮಿ ನಮ್ಮನ್ನು ಬೆಳೆಸುತ್ತದೆ. ಇದನ್ನು ಉಳಿಸಿ ಬೆಳೆಸುವ ಮೂಲಕ ನಾವು ನಮ್ಮ ಮುಂದಿನ ಪೀಳಿಗೆಯ ಹಾಗೂ ನಮ್ಮ ಉಳಿವಿಗಾಗಿ ಸಂರಕ್ಷಿಸಬೇಕು ಎಂದು ಶಾಲಾ ಹಿರಿಯ ವಿದ್ಯಾರ್ಥಿನಿ ಪ್ರಸ್ತುತ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಕು|ಅವನಿ ಕೋಡಿಬೈಲುರವರು ಹೇಳಿದರು.
ದ.17 ರಂದು ನೆಹರುನಗರ ಸುದಾನ ವಸತಿಯುತ ಶಾಲೆಯ ಜ್ಯೂನಿಯರ್ ವಿಭಾಗದ ವಾರ್ಷಿಕೋತ್ಸವದಲ್ಲಿ `ಇರುವುದೊಂದೇ ಭೂಮಿ ಉಳಿಸೋಣ ಬನ್ನಿ’ ಎಂಬ ಪರಿಕಲ್ಪನೆಯೊಂದಿಗೆ ನಡೆದ ನಡೆದ ವಾರ್ಷಿಕೋತ್ಸವ-ವಿಶೇಷ ಸಾಧಕರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಸಾಧಕರನ್ನು ಅಭಿನಂದಿಸುವ ಮೂಲಕ ಮಾತನಾಡಿದರು. ಹೆತ್ತವರ ಮತ್ತು ಶಿಕ್ಷಕರ ಮಾರ್ಗದರ್ಶನದಿಂದ ನಾವು ಸದಾ ಬೆಳೆಯುತ್ತೇವೆ. ವಿದ್ಯೆಯು ವಿನಯವನ್ನು ಕೊಡುತ್ತದೆ, ವಿನಯದಿಂದ ಅರ್ಹತೆ, ಜನರ ಪ್ರೀತಿ, ಸುಖವೂ ಪ್ರಾಪ್ತಿಯಾಗುತ್ತದೆ. ವಿದ್ಯೆಯನ್ನು ಕಲಿಯುತ್ತಾ ಹೋದಂತೆ ನಮ್ಮಲ್ಲಿ ವಿನಯತೆಯು ಇರಲೇಬೇಕು. ಶಿಕ್ಷಣ ಎಂಬುದು ಒಂದು ವಿಕಸಿತ ಕಮಲ. ಶಾಲಾ ಶಿಕ್ಷಣವು ಆ ಕಮಲದ ಒಂದು ದಳ ಎನ್ನಬಹುದು. ಕಲಿಯುವಿಕೆ ಎಂಬುದು ಪರಿಪೂರ್ಣವಾಗಿ ಸಮಾಪ್ತಿಯಾಯಿತು ಎನ್ನುವಂತದ್ದಲ್ಲ. ಜೀವನದುದ್ದಕ್ಕೂ ನಾವು ಕಲಿಯುವುದು ಇದ್ದೇ ಇದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಹಿರಿಯ ವಿದ್ಯಾರ್ಥಿ ಪ್ರಸ್ತುತ ಶಕ್ತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆದ್ಯಾ ಸುಲೋಚನಾ ಮುಳಿಯರವರು ಮಾತನಾಡಿ, ಸುದಾನ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಸಂದರ್ಭ ಲಾಸ್ಟ್ ಬೆಂಚ್‌ನಲ್ಲಿ ಕುಳಿತಿರುತ್ತಿದ್ದ ನನಗೆ ಇಲ್ಲಿನ ಶೈಕ್ಷಣಿಕ ವಾತಾವರಣ ಬಹಳ ಆನಂದ ಕೊಡುತ್ತಿತ್ತು. ಇಲ್ಲಿನ ಶಿಕ್ಷಕ ವೃಂದ ನಮಗೆ ನೀಡುತ್ತಿದ್ದ ಮಾರ್ಗದರ್ಶನ ನಿಜಕ್ಕೂ ಅವಿಷ್ಮರಣೀಯ. ವಿಜ್ಞಾನ ಮಾಡೆಲ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ನನಗೆ ಇದೇ ವೇದಿಕೆಯಲ್ಲಿ ಅಂದು ಗಾಯಕಿ ಅಖಿಲಾ ಪಜಿಮಣ್ಣುರವರು ಸನ್ಮಾನಿಸಿರುವುದು ನನ್ನ ಬಾಳಿನ ಅವಿಷ್ಮರಣೀಯ ಕ್ಷಣಗಳಲ್ಲೊಂದು. ನನ್ನ ಸಾಧನೆಯ ಹಿಂದೆ ಸುದಾನ ಶಾಲೆ ನಿಜಕ್ಕೂ ಫ್ಲ್ಯಾಟ್‌ಫಾರಂ ಎನಿಸಿದೆ ಎಂದರೆ ಸುಳ್ಳಲ್ಲ ಎಂದರು.
ವಿಶೇಷ ಸಾಧಕರಿಗೆ ಅಭಿನಂದನೆ:
ಒಂದರಿಂದ ಐದನೇ ತರಗತಿ ವರೆಗಿನ ಜ್ಯೂನಿಯರ್ ವಿಭಾಗದ ವಿಶೇಷ ಸಾಧಕರಾದ ಎರಡನೇ ತರಗತಿಯ ಆರ್ಯ ಎಸ್.ಶೆಟ್ಟಿ(ಅಬಾಕಸ್ ಚಾಂಪಿಯನ್), ರಾಹಿ(ಸ್ವಿಮ್ಮಿಂಗ್), ಮೂರನೇ ತರಗತಿಯ ಪ್ರಣಿತ್(ಕರಾಟೆ), ನಾಲ್ಕನೇ ತರಗತಿಯ ದತ್ತಚರಣ್ ಸಿ.ಎಸ್(ಚೆಸ್), ಪ್ರಧಾನ್ ಪಿ(ರಾಜ್ಯ ಮಟ್ಟದ ಕರಾಟೆ), ಕ್ಷಮಾ ಎಚ್.ಎಸ್, ಶ್ರೀ ಇಶಾ ಎನ್.ಹೆಗ್ಡೆ, ಅನೂಷ್ ಕೃಷ್ಣ(ಗೋಲ್ಡನ್ ಆ್ಯರೋ), ಅನೀಶ್ ಎಂ.ಎಚ್(ಕರಾಟೆ, ಚತರ‍್ಥಚರಣ), ಆಯುರ್ವೇಶ, ಶ್ರೀರಾಂ(ಚತರ‍್ಥಚರಣ), ಐದನೇ ತರಗತಿಯ ಶಿಬಾನಿ, ಸಾನ್ವಿತಾ ಎಂ.ಎಸ್, ದರ್ಶಿಕಾ ನಾಯ್ಕ್(ಚತರ‍್ಥಚರಣ), ಆದಿತ್ಯ ಕೆ, ಆಶ್ರಿತ್ ಕೃಷ್ಣ ದಾಲಿಂಬ, ಅನಿರುದ್ಧ್ ರೈ, ಕೃತನ್ ವಿಹಾರಿ, ಪೂಜಿತ್ ಕೆ, ಇಂಪನಾ ಸಿ.ಭಟ್, ರಿಶೆಲ್ ಮಿನೇಜಸ್, ಸೃಷ್ಟಿ ಎನ್.ವಿ, ಹೃತ್ವಿಕಾ ಆರ್.ನಾಯ್ಕ್, ಲಿಪಿಕಾ ಆರ್.ಕೆ, ಐಶ್ವರ್ಯ, ಪ್ರಜ್ವಿತಾ(ಗೋಲ್ಡನ್ ಆ್ಯರೋ), ನಿನಾದ ಪಿ(ರಾಜ್ಯ ಮಟ್ಟದ ಕರಾಟೆ)ರವರನ್ನು ಅಭಿನಂದಿಸಲಾಯಿತು.
ಹೈಸ್ಕೂಲ್ ವಿಭಾಗದ ಇನ್‌ಚಾರ್ಜ್ ಶಿಕ್ಷಕಿ ಪ್ರತಿಮಾ ಎನ್.ಜಿ ಸಾಧಕರ ಹೆಸರನ್ನು ಓದಿದರು.
ಗೂಡುದೀಪ ವಿಜೇತರಿಗೆ ಅಭಿನಂದನೆ:
ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಗೂಡುದೀಪ ರಚನೆ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಇದರಲ್ಲಿ ಉತ್ತಮ ಗೂಡುದೀಪ ರಚನೆಯನ್ನು ಮಾಡಿದ ಐವರು ವಿದ್ಯಾರ್ಥಿಗಳಾದ 5ನೇ ತರಗತಿಯ ಅಭಿಜ್ಞಾ ಪ್ರಥಮ, 3ನೇ ತರಗತಿಯ ರ‍್ಯ ಎಸ್.ಶೆಟ್ಟಿ ದ್ವಿತೀಯ, 3ನೇ ತರಗತಿಯ ಅವನಿ ಎಸ್.ಆಚಾರ್ಯ ತೃತೀಯ, 7ನೇ ತರಗತಿಯ ಯಕ್ಷಿತ್ ಬಿ ಚತುರ್ಥ, 1ನೇ ತರಗತಿಯ ಶಹಾಜ್ ಪಂಚಮ ಸ್ಥಾನವನ್ನು ಗಳಿಸಿದ್ದು ಇವರುಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವಿಜೇತ ವಿದ್ಯಾರ್ಥಿಗಳ ಹೆತ್ತವರು ಉಪಸ್ಥಿತರಿದ್ದರು.
ಶಾಲಾ ಸಂಚಾಲಕ ರೆ|ವಿಜಯ ಹಾರ್ವಿನ್, ಕಾರ್ಯದರ್ಶಿ ಡಾ|ಪೀಟರ್ ವಿಲ್ಸನ್ ಪ್ರಭಾಕರ್, ಕೋಶಾಧಿಕಾರಿ ಆಸ್ಕರ್ ಆನಂದ್, ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾ ನಾಗಾರಾಜ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಡಾ|ರಾಜೇಶ್ ಬೆಜ್ಜಂಗಳ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವಪ್ರಸಾದ್ ಮುಳಿಯರವರು ಸಾಧಕರಿಗೆ ಸ್ಮರಣಿಕೆ ನೀಡಿ ಅಭಿನಂದಿಸಿದರು. ಶಾಲಾ ನಾಯಕ ಸನ್ವರ್ಯ ಸ್ವಾಗತಿಸಿ, ಅಶೋನ್ ಮಿರಾಂದ ವಂದಿಸಿದರು. ಶಾಲಾ ಉಪನಾಯಕಿ ಕು|ಸೃಷ್ಟಿ, ಕಾರ್ಯದರ್ಶಿ ಕು|ಹಿಶಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ವೃಂದ ಪ್ರಾರ್ಥಿಸಿದರು. ಶಿಕ್ಷಕರಾದ ಪ್ರೀತಂ ಡಿ’ಸೋಜ ಹಾಗೂ ಪ್ರತಿಭಾ ರೈ ಕಾರ್ಯಕ್ರಮ ನಿರೂಪಿಸಿದರು.

ಪಕ್ಷಿಧಾಮ, ಸಂಜೀವನಿ ಮೂಲಿಕಾವನ ಉದ್ಘಾಟನೆ..
ಆರಂಭದಲ್ಲಿ ಕ್ಯಾಂಪಸ್‌ನಲ್ಲಿನ ಪಕ್ಷಿಧಾಮವನ್ನು ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಡಾ|ಪೀಟರ್ ವಿಲ್ಸನ್ ಪ್ರಭಾಕರ್ ಮತ್ತು ಸಂಜೀವನಿ ಮೂಲಿಕಾವನವನ್ನು ಕೋಟಕ್ಕಲ್ ಆರ್ಯವೈದ್ಯ ಶಾಲಾ ಇದರ ಡಾ.ಪ್ರದೀಪ್ ಕುಮಾರ್‌ರವರು ಉದ್ಘಾಟಿಸಿದರು. ಸುದಾನ ಪಕ್ಷಿಧಾಮವು ಪಂಜರವಲ್ಲ. ಇಲ್ಲಿರುವ ಹಕ್ಕಿಗಳಿಗೆ ಮನುಷ್ಯರೆಂದರೆ ಭಯವಿಲ್ಲ. ಅವುಗಳನ್ನು ಹೊರಗೆ ಹಾರಲು ಬಿಟ್ಟರೂ ಅವು ಮರಳಿ ಬರುತ್ತವೆ. ವಿದೇಶಿ ಮೂಲದ ಕೋನಿಯೂರ್ಸ್ ಎನ್ನುವ ಹಕ್ಕಿಯೂ ಸೇರಿ ಅನೇಕ ಮನುಷ್ಯ ಸ್ನೇಹಿ ಹಕ್ಕಿಗಳು ಇಲ್ಲಿವೆ. ಇವುಗಳನ್ನು ಮನೆಯ ಮಗುವಿನಂತೆ ಜೋಪಾನ ಮಾಡಲಾಗುತ್ತಿದೆ. ಸಂಜೀವನಿ ಮೂಲಿಕಾವನದಲ್ಲಿ ಅನೇಕ ಔಷಧೀಯ ಗಿಡಗಳಿದ್ದು, ಅದನ್ನು ವಿಸ್ತಾರವಾಗಿ ಬೆಳೆಸುವ ಯೋಜನೆಯನ್ನು ಮಾಡಲಾಗಿದೆ. ವಿದ್ಯಾರ್ಥಿಗಳಲ್ಲಿಯೇ ಗಿಡಗಳನ್ನು ನೆಡಿಸುವ ಮೂಲಕ ಸಸ್ಯಗಳನ್ನು ಪ್ರೀತಿಸುವುದನ್ನು ಕಲಿಸಲಾಗುತ್ತಿದೆ. ಇವೆರಡು ಯೋಜನೆಯ ರೂವಾರಿ ಸುಶಾಂತ್ ಹಾರ್ವಿನ್ ಮತ್ತು ಶಾಲಾ ಸಂಚಾಲಕ ರೆ.ವಿಜಯ ಹಾರ್ವಿನ್‌ರವರು. ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಪ್ರೀತಿ ಮತ್ತು ಅರಿವು ಮೂಡಿಸುವ ಉದ್ದೇಶದಿಂದ ಈ ಯೋಜನೆಯನ್ನು ಆಯೋಜಿಸಲಾಗಿದೆ.

ದ.16 ರಂದು ಸೀನಿಯರ್ ವಿಭಾಗದ ವಾರ್ಷಿಕೋತ್ಸವ ಜರಗಲಿದ್ದು, ಅಧ್ಯಕ್ಷತೆಯನ್ನು ಶಾಲಾ ಹಿರಿಯ ವಿದ್ಯಾರ್ಥಿ ಪ್ರಸ್ತುತ ಮಹಾವೀರ ಆಸ್ಪತ್ರೆಯಲ್ಲಿ ಮೂಳೆ ಚಿಕಿತ್ಸಾ ತಜ್ಞರಾದ ಡಾ.ಸಚಿನ್ ಶಂಕರ್ ಹಾರಕೆರೆರವರು ವಹಿಸಲಿರುವರು. ಮುಖ್ಯ ಅತಿಥಿಯಾಗಿ ಉಜಿರೆ ಎಸ್‌ಡಿಎಂ ಪದವಿ ಕಾಲೇಜಿನ ವಿದ್ಯಾರ್ಥಿನಿ ಆಧ್ಯಾಯಯನ ಸಿ.ಎರವರು ಭಾಗವಹಿಸಲಿದ್ದಾರೆ. ಸುದ್ದಿ ಯೂಟ್ಯೂಬ್ ಚಾನೆಲ್ ವಾರ್ಷಿಕೋತ್ಸವದ ನೇರ ಪ್ರಸಾರವನ್ನು ಮಾಡುತ್ತಿದ್ದು, ಸಾವಿರಾರು ಮಂದಿ ವೀಕ್ಷಿಸಿದ್ದಾರೆ.

ಇರುವುದೊಂದೇ ಭೂಮಿ ಉಳಿಸೋಣ ಬನ್ನಿ, ಪರಿಕಲ್ಪನೆ…
ಪ್ರತಿವರ್ಷವೂ ಒಂದು ಧ್ಯೇಯ ವಾಕ್ಯವನ್ನಿಟ್ಟುಕೊಂಡು, ಅದರಂತೆಯೇ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳನ್ನು ಆಯೋಜಿಸುತ್ತಾ ಬರುವುದು ಸುದಾನ ವಸತಿ ಶಾಲೆಯ ವಿಶೇಷತೆ. ಅಂತೆಯೇ 2022-23ನೇ ಶೈಕ್ಷಣಿಕ ವರ್ಷದಲ್ಲಿ `ಇರುವುದೊಂದೇ ಭೂಮಿ ಉಳಿಸೋಣ ಬನ್ನಿ’ ಎಂಬ ಪರಿಕಲ್ಪನೆಯೊಂದಿಗೆ ಶಾಲೆಯು ಕಾರ್ಯಾಚರಿಸುತ್ತಿದೆ ಮಾತ್ರವಲ್ಲದೆ ಈ ಬಾರಿಯ ಶಾಲಾ ವಾರ್ಷಿಕೋತ್ಸವದಲ್ಲಿ ಇದನ್ನು ಕಾಣಬಹುದಾಗಿದೆ. ಸಕಲ ಜೀವಿಗಳಿಗೂ ಆಶ್ರಯ ಸ್ಥಾನವಾಗಿರುವ ಭೂಮಿಯು ಮನುಷ್ಯನ ಅವಿವೇಕದಿಂದಾಗಿ ಸಂಕಷ್ಟಕ್ಕೆ ಒಳಗಾಗಿದೆ. ಪ್ರಾಕೃತಿಕ ವೈಪರೀತ್ಯಗಳ ಮೂಲಕ ಭೂಮಿಯು ಎಚ್ಚರಿಕೆಯನ್ನು ನೀಡುತ್ತಿದ್ದರೂ ಅದನ್ನು ಗಮನಿಸದೆ ಹಾಳುಗೆಡಹುವ ಪ್ರವೃತ್ತಿಯು ಹೆಚ್ಚುತ್ತಿದೆ. ಭೂಮಿ ಇದ್ದರಷ್ಟೇ ನಮ್ಮ ಬಾಳು, ಪರಿಸರವು ಅಳಿದರೆ ನಮಗಿಲ್ಲ ಉಳಿವು ಎನ್ನುವುದನ್ನು ವಿದ್ಯಾರ್ಥಿಗಳಲ್ಲಿ ಜಾಗ್ರತಗೊಳಿಸಲು “ಇರುವುದೊಂದೇ ಭೂಮಿ ಉಳಿಸೋಣ ಬನ್ನಿ” ಎಂಬ ಪರಿಕಲ್ಪನೆಯನ್ನು ಆಯೋಜಿಸಿ ಅನುಸರಿಸುತ್ತಿದೆ.

LEAVE A REPLY

Please enter your comment!
Please enter your name here