ವಿಶೇಷಚೇತನರಿಗೆ ಸಹಾಯಹಸ್ತ ನೀಡಿದಾಗ ದೇವರನ್ನು ಕಾಣಬಲ್ಲೆವು-ಪ್ರಕಾಶ್ ಕಾರಂತ್
ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ
ಪುತ್ತೂರು: ನಾವೆಲ್ಲಾ ದೇವಾಲಯದಲ್ಲಿ ಕಣ್ಣಿಗೆ ಕಾಣದ ದೇವರನ್ನು ಪೂಜಿಸುತ್ತೇವೆ, ಬೇಡುತ್ತೇವೆ. ನಾವು ಇಂತಹ ವಿಶೇಷಚೇತನರಿಗೆ ನೆರವಿನ ಸಹಾಯಹಸ್ತ ನೀಡಿದರೆ ನಿಜಕ್ಕೂ ದೇವರನ್ನು ಕಾಣುತ್ತೇವೆ ಎಂದು ರೋಟರಿ ಜಿಲ್ಲೆ 3181 ಇದರ ಜಿಲ್ಲಾ ಗವರ್ನರ್ ಮೇಜರ್ ಡೋನರ್ ಪ್ರಕಾಶ್ ಕಾರಂತ್‌ರವರು ಹೇಳಿದರು.
ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಹಾಗೂ ದಿ.ಬೈತಡ್ಕ ಕುನ್ಹಾಲಿ ಮತ್ತು ಐಸಮ್ಮ ಮೆಮೋರಿಯಲ್ ಹ್ಯೂಮಾನಿಟಿ ಟ್ರಸ್ಟ್‌ನ ಸಹಭಾಗಿತ್ವದಲ್ಲಿ ಮೊಹಮದ್, ಮರಿಯಮ್, ಲತೀಫಾ ಇವರ ಪ್ರಾಯೋಜಕತ್ವದಲ್ಲಿ ದ.15 ರಂದು ಸಂಜೆ ಪುತ್ತೂರು-ಬೈಪಾಸ್ ರಸ್ತೆಯ ಆಶ್ಮಿ ಕಂಫರ್ಟ್‌ನಲ್ಲಿ ಜರಗಿದ ಅರ್ಹ ಫಲಾನುಭವಿಗಳಿಗೆ ಗಾಲಿ ಕುರ್ಚಿ, ವಾಕರ್ ಹಾಗೂ ರೇಶನ್ ಕಿಟ್ ಕೊಡುಗೆ ಹಸ್ತಾಂತರ ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿಗಳಿಗೆ ನೆರವನ್ನು ಹಸ್ತಾಂತರಿಸಿ ಮಾತನಾಡಿದರು. ಸಮಾಜದಲ್ಲಿ ಎಲ್ಲರಿಗೂ ಬದುಕುವ ಹಕ್ಕನ್ನು ಭಗವಂತ ಕರುಣಿಸಿದ್ದಾನೆ. ಪ್ರಕೃತಿಯಲ್ಲಿ ಹೇಗೆ ನದಿ ಹರಿದು ಎಲ್ಲರಿಗೂ ಉಪಯುಕ್ತ ಕಾಣಿಕೆ ನೀಡುತ್ತದೆಯೋ ಹಾಗೆಯೇ ಸುಲೈಮಾನ್ ಬೈತ್ತಡ್ಕ ಕುಟುಂಬ ಅಶಕ್ತರ ಕಣ್ಣೀರೊರೆಸುವ ಕಾಯಕದಲ್ಲಿ ತೊಡಗಿಸಿಕೊಂಡಿರುವುದು ವಿಶೇಷತೆ ಸರಿ. ಜೀವನ ಎನ್ನುವುದು ನಮಗಾಗಿ ಅಲ್ಲ, ಅದು ಮತ್ತೊಬ್ಬರಿಗಾಗಿ, ನಾವೆಲ್ಲರೂ ಹೃದಯ ತಟ್ಟುವ ಕಾಯಕದಲ್ಲಿ ಮುಂದುವರಿಯೋಣ ಎಂದರು.
ರೋಟರಿ ಜಿಲ್ಲೆ 3181 ಇದರ ಜಿಲ್ಲಾ ಕಾರ್ಯದರ್ಶಿ ಎ.ಕೆ.ಎಸ್ ಕೆ.ವಿಶ್ವಾಸ್ ಶೆಣೈ ಮಾತನಾಡಿ, ವಿಕಲಚೇತನರನ್ನು ಇಂದಿಲ್ಲಿ ನೋಡಿದಾಗ ಮನಸ್ಸಿನಲ್ಲಿ ದುಃಖ ಹಾಗೂ ಉಲ್ಲಾಸ ಹೊಂದಿಕೊಳ್ಳುವ ಭಾವನೆ ಬರುತ್ತದೆ. ಶಾಸಕ ಮಠಂದೂರುರವರ ಮಾರ್ಗದರ್ಶನದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿಯಲ್ಲಿ ತೊಡಗಿಸಿಕೊಂಡಿರುವ ರಫೀಕ್ ದರ್ಬೆರವರ ಶ್ರಮ ಶ್ಲಾಘನೀಯ. ಡಯಾಲಿಸಿಸ್ ರೋಗಿಗಳಿಗೆ ಸರ್ವ ವ್ಯವಸ್ಥೆಗಳನ್ನು ಮಾಡುವ ರಫೀಕ್‌ರವರ ಸೇವೆ ಎದ್ದು ಕಾಣುತ್ತಿದೆ ಎಂದರು.
ರೋಟರಿ ವಲಯ ಐದರ ರೋಟರಿ ಅಸಿಸ್ಟೆಂಟ್ ಗವರ್ನರ್ ಎ.ಜೆ ರೈ ಮಾತನಾಡಿ, ರೋಟರಿ ಸೆಂಟ್ರಲ್ ಅಧ್ಯಕ್ಷ ರಫೀಕ್ ದರ್ಬೆರವರ ನೇತೃತ್ವದಲ್ಲಿ ಹಮ್ಮಿಕೊಂಡ ಗಾಲಿ ಕುರ್ಚಿ ವಿತರಣೆ ಕಾರ್ಯಕ್ರಮ ಸಾಮಾಜಿಕ ಕಳಕಳಿಯುಂತಹುದು. ದೂರದ ಗಲ್ಫ್‌ನಲ್ಲಿ ಉದ್ಯೋಗ ಮಾಡಿಕೊಂಡು ಊರಿನಲ್ಲಿರುವ ಫಲಾನುಭವಿಗಳಿಗೆ ನೆರವು ನೀಡುತ್ತಿರುವ ಬೈತ್ತಡ್ಕ ಹ್ಯುಮಾನಿಟಿ ಸಂಸ್ಥೆಗೆ ಚಿರಋಣಿಯಾಗಿದ್ದೇವೆ. ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ವ್ಹೀಲ್‌ಚೇರ್ ಫೌಂಡೇಶನ್ ಆರಂಭಿಸುವ ಕನಸಿನ ಯೋಜನೆಗೆ ಸಹಕಾರ ನೀಡಬೇಕಾಗಿದೆ ಎಂದರು.
ವಲಯ ಐದರ ವಲಯ ಸೇನಾನಿ ಡಾ|ಹರ್ಷಕುಮಾರ್ ರೈ ಮಾಡಾವು ಕೆ.ಎಂ ಮಾತನಾಡಿ, ವಿಕಲಚೇತನ ಮಕ್ಕಳು ದೇವರ ಮಕ್ಕಳು. ರೋಟರಿ ಸೆಂಟ್ರಲ್ ವಿಕಲಚೇತನ ಮಕ್ಕಳಿಗೆ ಬೆಳಕಾಗುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಇದೇ ರೀತಿ ಎಲ್ಲರೂ ನೊಂದವರ ಕಣ್ಣೀರೊರೆಸುವ ಕಾರ್ಯ ನಿರಂತರ ಸಾಗಲಿ ಎಂದರು.
ದಿ.ಬೈತಡ್ಕ ಕುನ್ಹಾಲಿ ಮತ್ತು ಐಸಮ್ಮ ಮೆಮೋರಿಯಲ್ ಹ್ಯೂಮಾನಿಟಿಯ ಸುಲೈಮಾನ್ ಬೈತಡ್ಕ ಸಹೋದರ ಮೊಹಮದ್ ಬೈತಡ್ಕ ಮಾತನಾಡಿ, ಎಲ್ಲಾ ಧರ್ಮದ ಮೂಲ ಅಶಕ್ತರನ್ನು, ಅನಾರೋಗ್ಯದಲ್ಲಿರುವವರನ್ನು, ನಿರ್ಗತಿಕರನ್ನು ಸಲಹುವ ಉದ್ದೇಶವಿರುವಂತಹುದು. ಮುಸ್ಲಿಂ ಸಮುದಾಯದಲ್ಲಿ ತಾನು ಗಳಿಸಿದ ಆದಾಯದಲ್ಲಿ ಶೇ.2.5 ದಾನ, ಜಕಾತ್ ಮಾಡಬೇಕಾಗಿ ಹೇಳುತ್ತದೆ. ಇಂದಿಲ್ಲಿ ಗಾಲಿ ಕುರ್ಚಿ, ವಾಕರ್ ಸ್ಚೀಕರಿಸಿದವರ ಬಾಳು ಉತ್ತಮ ಆರೋಗ್ಯದಿಂದ, ಉತ್ತಮ ಆಯಸ್ಸಿನಿಂದ ಕೂಡಿರಲಿ ಎಂಬುದೇ ನಮ್ಮ ಪ್ರಾರ್ಥನೆಯಾಗಿದೆ ಎಂದರು.
ದಿ.ಬೈತಡ್ಕ ಕುನ್ಹಾಲಿ ಮತ್ತು ಐಸಮ್ಮ ಮೆಮೋರಿಯಲ್ ಹ್ಯೂಮಾನಿಟಿಯ ಸುಲೈಮಾನ್ ಬೈತಡ್ಕ ಮಾತನಾಡಿ, ವಿಕಲಚೇತನವುಳ್ಳವರು ದೇವರ ಪ್ರಥಮ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಾರೆ. ರೋಟರಿ ಸಂಸ್ಥೆ ಮಾಡುವ ಸಮಾಜಮುಖಿ ಕಾರ್ಯ ತಿಳಿದು ನಾವು ನಮ್ಮ ಸಂಸ್ಥೆಯಿಂದ ಈ ಕಾರ್ಯ ಮಾಡಿದ್ದೇವೆ. ಸಮಾಜದಲ್ಲಿ ನಾವೆಲ್ಲರೂ ಒಂದೇ. ಹುಟ್ಟಿ ಬೆಳೆದ ನಾಡಿಗೆ ಏನಾದರೂ ಕೊಡುಗೆ ನೀಡಬೇಕು ಎಂದುಕೊಂಡು ಸೇವೆ ರೂಪದಲ್ಲಿ ಇದನ್ನು ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸಮಾಜದ ಅಶಕ್ತರಿಗೆ ನೆರವಾಗಲು ವ್ಹೀಲ್ ಚೇರ್ ಫೌಂಡೇಶನ್ ಎಂಬ ಯೋಜನೆ ಪುತ್ತೂರಿನಲ್ಲಿ ಆರಂಭಿಸುವ ಕನಸನ್ನು ಹೊಂದಿದ್ದು, ಇದಕ್ಕೆ ಸರ್ವರ ಸಹಕಾರ, ಪ್ರೋತ್ಸಾಹ ಬೇಕಾಗಿದೆ ಎಂದರು.
ರೋಟರಿ ಸೆಂಟ್ರಲ್ ನಿಕಟಪೂರ್ವ ಅಧ್ಯಕ್ಷ ನವೀನ್ ಚಂದ್ರ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನವ್ಯಶ್ರೀ ನಾಯ್ಕ್ ಪ್ರಾರ್ಥಿಸಿದರು. ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷ ಮೊಹಮದ್ ರಫೀಕ್ ದರ್ಬೆ ಸ್ವಾಗತಿಸಿ, ಉಪಾಧ್ಯಕ್ಷ ಅಶೋಕ್ ನಾಯ್ಕ್ ವಂದಿಸಿದರು. ಕಾರ್ಯದರ್ಶಿ ಚಂದ್ರಹಾಸ ರೈ ಕಾರ್ಯಕ್ರಮ ನಿರೂಪಿಸಿದರು.
ರೋಟರಿ ಸೆಂಟ್ರಲ್‌ನ ಸ್ಥಾಪಕಾಧ್ಯಕ್ಷ ಹಾಗೂ ಮಾಜಿ ಅಸಿಸ್ಟೆಂಟ್ ಗವರ್ನರ್ ಸಂತೋಷ್ ಶೆಟ್ಟಿ, ಕೋಶಾಧಿಕಾರಿ ಡಾ|ರಾಮಚಂದ್ರ, ಸದಸ್ಯರಾದ ಪದ್ಮನಾಭ ಶೆಟ್ಟಿ, ಪುರುಷೋತ್ತಮ್ ಶೆಟ್ಟಿ, ಜಯಪ್ರಕಾಶ್ ಎ.ಎಲ್, ಜಯಪ್ರಕಾಶ್ ಸೆಲ್‌ಝೋನ್, ಅಶ್ರಫ಼್ ಮುಕ್ವೆ, ಸನತ್ ರೈ, ಅಮಿತಾ ಶೆಟ್ಟಿ, ಶಿವರಾಮ್ ಎಂ.ಎಸ್, ಪ್ರದೀಪ್ ಪೂಜಾರಿ, ಯತೀಶ್ ಸುವರ್ಣ, ರಮೇಶ್ ರೈ ಬೊಲೋಡಿ, ರೋಟರಿ ಸ್ವರ್ಣ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ, ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಉಮಾನಾಥ್ ಪಿ.ಬಿ, ರೋಟರಿ ಕ್ಲಬ್ ಈಸ್ಟ್ ಅಧ್ಯಕ್ಷ ಶರತ್ ಕುಮಾರ್ ರೈ, ರೋಟರಿ ಭೀಷ್ಮ ರತ್ನಾಕರ್ ಶೆಣೈ, ಪುರಸಭಾ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು, ರೋಟರಿ ಮಾಜಿ ಅಸಿಸ್ಟೆಂಟ್ ಗವರ್ನರ್ ರತ್ನಾಕರ್ ರೈ, ಆಸ್ಕರ್ ಆನಂದ್ ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
- 13 ಗಾಲಿ ಕುರ್ಚಿ, 6 ವಾಕರ್ | ರೂ.1.30 ಲಕ್ಷ ವೆಚ್ಚ
- ಬೇರಿಕೆ ಶಾಲೆಯ ನಂದನ್, ವಿನ್ಯಾಸ್ ರೈ, ವಿಟ್ಲ ಕೇಪುವಿನ ಕಾಂತು, ಆಸ್ಯಮ್ಮ ಗಡಿಯಾರರವರಿಗೆ ಗಾಲಿ ಕುರ್ಚಿ
- 12 ವರ್ಷಗಳಿಂದ ಸೊಂಟದ ಕೆಳಭಾಗದ ಶಕ್ತಿ ಕಳೆದುಕೊಂಡು, ಕಿಡ್ನಿ ವೈಫಲ್ಯಕ್ಕೊಳಗಾಗಿ, ವಿಧವೆ ತಾಯಿಯ ಆಸರೆಯಲ್ಲಿರುವ ಸಾಕಿರ್ ಮೊಟ್ಟೆತ್ತಡ್ಕರವರಿಗೆ ಗಾಲಿ ಕುರ್ಚಿ
- 4 ಹೆಣ್ಣು ಮಕ್ಕಳ ತಾಯಿಯಾಗಿದ್ದು ಅಪಘಾತವೊಂದರಲ್ಲಿ ಕಾಲಿನ ಶಕ್ತಿ ಕಳೆದುಕೊಂಡ ಜೈನಾಬಿರವರಿಗೆ ಗಾಲಿ ಕುರ್ಚಿ
- ರೋಗಿಗಳ ಪಾಲಿಗೆ ಅಪತ್ಭಾಂಧವರಾಗಿರುವ ಎಸ್‌ಕೆಎಸ್‌ಎಸ್‌ಎಫ್ ವಿಖಾಯ ಸಂಸ್ಥೆಗೆ 2 ಗಾಲಿ ಕುರ್ಚಿ
- ಸಾಮಾಜಿಕ ಚಟುವಟಿಕೆಗಳೊಂದಿಗೆ ಕೆಲಸ ನಿರ್ವಹಿಸುವ ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಗೆ 2೨ ಗಾಲಿ ಕುರ್ಚಿ
- ಸರಕಾರಿ ಆಸ್ಪತ್ರೆಯಲ್ಲಿ 52 ಮಂದಿ ಡಯಾಲಿಸಿಸ್ ಮಾಡುತ್ತಿದ್ದು, 12 ಬೆಡ್‌ನ ಹೊಸ ಡಯಾಲಿಸಿಸ್ ಯೂನಿಟ್ ಪ್ರಾರಂಭಗೊಳ್ಳಲಿದ್ದು 2 ಗಾಲಿ ಕುರ್ಚಿ
- 260 ಆಶ್ರಮವಾಸಿಗಳ ಪೈಕಿ 158 ವೃದ್ಧರಿರುವ ಕನ್ಯಾನದ ಭಾರತ್ ಸೇವಾಶ್ರಮಕ್ಕೆ 1 ಗಾಲಿ ಕುರ್ಚಿ
- ನೆಲ್ಲಿಕಟ್ಟೆ ಶಾಲೆಯ ಮುಬಶಿರ(6ನೇ), ಸಾರ್ಥಕ್ ಸರ್ವೆ(4ನೇ), ಸರಕಾರಿ ಆಸ್ಪತ್ರೆಯ ಅಬ್ದುಲ್ಲಾ, ಸರಕಾರಿ ಆಸ್ಪತ್ರೆಯ ಡಯಾಲಿಸಿಸ್ ವಿಭಾಗಕ್ಕೆ 1, ಸರಕಾರಿ ಆಸ್ಪತ್ರೆಯ ಆದಂ ಶಾಂತಿಗೋಡುರವರಿಗೆ ವಾಕರ್
5 ಮಂದಿಗೆ ರೇಶನ್ ಕಿಟ್..
ಪ್ರತೀ ತಿಂಗಳು 5 ಮಂದಿ ಡಯಾಲಿಸಿಸ್ ರೋಗಿಗಳಿಗೆ ರೂ.1 ಸಾವಿರ ಬೆಲೆಯ ರೇಶನ್ ಕಿಟ್ ಅನ್ನು ಫಲಾನುಭವಿಗಳಾದ ಯಕ್ಷ ನೆಲ್ಯಾಡಿ, ಹಮ್ಜಾ ಕೂರ್ನಡ್ಕ, ಮೋನಪ್ಪ ಬಂಗೇರ ಮಾಡಾವು, ಲೂವಿಸ್ ಉಪ್ಪಿನಂಗಡಿ, ಸಾಕಿರ್ ಮೊಟ್ಟೆತ್ತಡ್ಕರವರಿಗೆ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರು ವಿತರಿಸಿದರು.