ಕೆದಂಬಾಡಿಯಲ್ಲಿ 23 ಕಟ್ಟಡಗಳಲ್ಲಿ 37 ಅನಧಿಕೃತ ಅಂಗಡಿಗಳು..!

0

ಗ್ರಾಪಂ ಮನವಿಗೆ ಇಲಾಖೆಗಳು ನೀಡುತ್ತಿಲ್ಲ ಪ್ರತ್ಯುತ್ತರ…!
ಕೆದಂಬಾಡಿ ಗ್ರಾಪಂ ಸಾಮಾನ್ಯ ಸಭೆ

ಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 170 ಅಂಗಡಿ ವ್ಯಾಪಾರ ಮಳಿಗೆಗಳಿದ್ದು ಇದರಲ್ಲಿ 133 ಅಧಿಕೃತ ಅಂಗಡಿಗಳಾಗಿದ್ದು ಇನ್ನುಳಿದಂತೆ 23 ಕಟ್ಟಡಗಳಲ್ಲಿ 37  ಅನಧಿಕೃತ ಅಂಗಡಿಗಳಿವೆ.

ಈಗಾಗಲೇ ಅಧಿಕೃತ ಅಂಗಡಿಗಳಲ್ಲಿ 62 ಅಂಗಡಿದಾರರು ತಮ್ಮ ವ್ಯಾಪಾರ ಪರವಾನಗೆ ನವೀಕರಣಗೊಳಿಸಿದ್ದು ಇನ್ನುಳಿದ 71 ಅಂಗಡಿದಾರರು ದ.31 ರೊಳಗೆ ಪರವಾನಗೆ ನವೀಕರಣಗೊಳಿಸಬೇಕು ಈ ಬಗ್ಗೆ ಅವರಿಗೆ ತಿಳಿಸುವುದು ಮತ್ತು ಅನಧಿಕೃತ ಅಂಗಡಿದಾರರಿಗೆ ದಂಡನೆ ವಿಧಿಸುವುದು ಎಂದು ಕೆದಂಬಾಡಿ ಗ್ರಾಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು. ಸಭೆಯು ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರರವರ ಅಧ್ಯಕ್ಷತೆಯಲ್ಲಿ ದ.15 ರಂದು ಗ್ರಾಪಂ ಸಭಾಂಗಣದಲ್ಲಿ ನಡೆಯಿತು.

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಉಪಾಧ್ಯಕ್ಷ ಭಾಸ್ಕರ ರೈ ಮಿತ್ರಂಪಾಡಿಯವರು, ಅಂಗಡಿದಾರರ ಪರವಾನಗೆ ನವೀಕರಣ ಹಾಗೂ ಅನಧಿಕೃತ ಅಂಗಡಿದಾರರಿಗೆ ದಂಡನೆ ವಿಧಿಸುವ ವಿಚಾರದಲ್ಲಿ ಈಗಾಗಲೇ ಅನಧಿಕೃತ ಅಂಗಡಿದಾರರು ದಂಡನೆ ಕಟ್ಟುತ್ತಿಲ್ಲ ಈ ಕಡೆಯಲ್ಲಿ ಅಧಿಕೃತ ಅಂಗಡಿದಾರರು ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿ ಎಂದು ಒತ್ತಡ ಹಾಕುತ್ತಿದ್ದಾರೆ ಏನು ಮಾಡುವುದು ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಅಧ್ಯಕ್ಷ ರತನ್ ರೈಯವರು, ಈಗಾಗಲೇ ಗ್ರಾಮದಲ್ಲಿ 170 ಅಂಗಡಿಗಳಿದ್ದು ಇದರಲ್ಲಿ 133 ಅಧಿಕೃತ ಪರವಾನಗೆ ಪಡೆದ ಅಂಗಡಿಗಳಿವೆ. ಇದರಲ್ಲಿ 62 ಮಂದಿ ಪರವಾನಗೆ ನವೀಕರಣಗೊಳಿಸಿದ್ದು ೫೧ ಮಂದಿ ಬಾಕಿ ಇದ್ದಾರೆ. ಇವರು ಈ ಕೂಡಲೇ ಪರವಾನಗೆ ನವೀಕರಣಗೊಳಿಸಬೇಕು ಇದಲ್ಲದೆ 23 ಕಟ್ಟಡಗಳಲ್ಲಿ 37 ಅನಧಿಕೃತ ಅಂಗಡಿಗಳಿವೆ. ಇವರಿಗೆ ದಂಡನೆ ವಿಧಿಸುವುದು ಇವರು ದಂಡನೆ ಪಾವತಿ ಮಾಡಬೇಕು ಏಕೆಂದರೆ ಅಧಿಕೃತ ಪರವಾನಗೆ ಪಡೆದ ಅಂಗಡಿದಾರರಿಂದ ಪಂಚಾಯತ್‌ಗೆ ಒತ್ತಡವೂ ಬರುತ್ತಿದೆ ಎಂದರು.

ಕಸ ಸಂಗ್ರಹ, ಸ್ವಚ್ಚತೆಯ ವಿಷಯ ಸೇರಿದಂತೆ ಪಂಚಾಯತ್‌ನೊಂದಿಗೆ ಸಹಕರಿಸದೇ ಇದ್ದರೆ ದಂಡನೆ ಪಾವತಿ ಮಾಡಲು ನಿರಾಕರಿಸಿದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆಯೂ ಇದೆ ಎಂದು ಹೇಳಿದರು. ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರು ಕೂಡ ಪಂಚಾಯತ್‌ನಿಂದ ಪರವಾನಗೆ ಪಡೆದುಕೊಳ್ಳುವುದು ಅಗತ್ಯ ಎಂಬುದನ್ನು ಕೂಡ ತಿಳಿಸಿದರು.

ವಾರದಲ್ಲಿ ಎರಡು ದಿನ ಕಸ ಸಂಗ್ರಹ
ವಾರದಲ್ಲಿ ಎರಡು ದಿನ ಅಂದರೆ ಸೋಮವಾರ ಮತ್ತು ಗುರುವಾರ ಕಸ ಸಂಗ್ರಹಕ್ಕೆ ಸ್ವಚ್ಛ ವಾಹಿನಿ ವಾಹನ ಬರಲಿದೆ. ಸೋಮವಾರ ಮುಖ್ಯ ಪೇಟೆಗಳಲ್ಲಿ ವಾಹನ ಸಂಚರಿಸಲಿದ್ದು ಅಂಗಡಿ ಮುಂಗಟ್ಟು, ವಾಣಿಜ್ಯ ಮಳಿಗೆಗಳಿಂದ ಕಸ ಸಂಗ್ರಹ ಮಾಡಲಿದೆ. ಗುರುವಾರ ಪ್ರತಿ ವಾರ್ಡ್‌ಗೆ ವಾಹನ ಬರಲಿದ್ದು ಮನೆಮನೆಯಿಂದ ಕಸ ಸಂಗ್ರಹ ಮಾಡಲಿದೆ. ಪ್ರತಿ ವಾರದ ಗುರುವಾರ ಒಂದು ವಾರ್ಡ್‌ಗೆ ಅದರಂತೆ ತಿಂಗಳ ನಾಲ್ಕು ಗುರುವಾರ ನಾಲ್ಕು ವಾರ್ಡ್‌ಗಳಲ್ಲಿ ವಾಹನ ಸಂಚರಿಸಲಿದೆ. ಗ್ರಾಮಸ್ಥರು ಹಾಗೂ ವ್ಯಾಪಾರಸ್ಥರು ತಮ್ಮಲ್ಲಿರುವ ಒಣ ಕಸವನ್ನು ವಾಹನಕ್ಕೆ ನೀಡುವ ಮೂಲಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಅಧ್ಯಕ್ಷರು ಮನವಿ ಮಾಡಿಕೊಂಡರು.

ಪಂಚಾಯತ್ ಮನವಿಗೆ ಬೆಲೆ ನೀಡುತ್ತಿಲ್ಲ ಇಲಾಖೆಗಳು..!?
ಪಂಚಾಯತ್‌ನಿಂದ ಇಲಾಖೆಗಳಿಗೆ ಮಾಹಿತಿಗಾಗಿ ಕಳುಹಿಸುವ ಮನವಿಗಳಿಗೆ ಇಲಾಖೆಗಳು ಪ್ರತ್ಯುತ್ತರ ನೀಡದೆ ನಿರ್ಲಕ್ಷ್ಯ ಮಾಡುತ್ತಿವೆ ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು. ಇದಕ್ಕೆ ಎಲ್ಲಾ ಸದಸ್ಯರು ಧ್ವನಿಗೂಡಿಸಿ, ಗ್ರಾಮಸ್ಥರ ಸಮಸ್ಯೆ, ತೊಂದರೆಗಳ ಬಗ್ಗೆ ಮಾಹಿತಿ ಕೇಳಿ ಸಂಬಂಧಪಟ್ಟ ಇಲಾಖೆಗಳಿಗೆ, ಅಧಿಕಾರಿಗಳಿಗೆ ಪಂಚಾಯತ್‌ನಿಂದ ಮನವಿ ಮಾಡಲಾಗುತ್ತಿದೆ ಆದರೆ ಪಂಚಾಯತ್‌ನ ಮನವಿಗೆ ಇಲಾಖೆಗಳು, ಅಧಿಕಾರಿಗಳು ಯಾವುದೇ ಪ್ರತ್ಯುತ್ತರ ನೀಡುತ್ತಿಲ್ಲ, ಪಂಚಾಯತ್‌ನ ಮನವಿಗೆ ಸ್ಪಂದನೆಯೇ ಕೊಡುತ್ತಿಲ್ಲ ಎಂದು ಎಷ್ಟು ಸರಿ? ಅಧಿಕಾರಿಗಳು,ಇಲಾಖೆಗಳು ಈ ರೀತಿ ಮಾಡಿದರೆ ಗ್ರಾಮಸ್ಥರಿಗೆ ಉತ್ತರ ಕೊಡುವುದು ಹೇಗೆ ಎಂದು ಪ್ರಶ್ನಿಸಿದರು. ಗ್ರಾಮಸಭೆಗೂ ಕೆಲವು ಇಲಾಖೆಯವರು ಬರುವುದೇ ಇಲ್ಲ ಕೃಷ್ಣ ಕುಮಾರ್ ಇದ್ಯಪೆ ತಿಳಿಸಿದರು.

ವಾಟ್ಸಫ್ ಗ್ರೂಪ್ ಮೂಲಕ ಜನರ ಸಮಸ್ಯೆ ಆಲಿಸಿದ ಅಧ್ಯಕ್ಷರು
ಸುಮಾರು 234 ಸದಸ್ಯರನ್ನು ಒಳಗೊಂಡ ಕೆದಂಬಾಡಿ ಗ್ರಾಮ ಪಂಚಾಯತ್ ಎನ್ನುವ ವಾಟ್ಸಫ್ ಗ್ರೂಪ್ ಇದ್ದು ಅಧ್ಯಕ್ಷರು ಇದರ ಅಡ್ಮಿನ್ ಆಗಿದ್ದು ಇದು ಅಡ್ಮಿನ್ ಓನ್ಲಿ ಗ್ರೂಪ್ ಆಗಿದೆ. ಸಾಮಾನ್ಯ ಸಭೆಗೆ ಒಂದು ದಿನಕ್ಕೆ ಮುಂಚಿತವಾಗಿ ಗ್ರಾಮದಲ್ಲಿರುವ ಸಮಸ್ಯೆಗಳನ್ನು ತಿಳಿಸಲು ಈ ಗ್ರೂಪ್‌ನಲ್ಲಿ ಅವಕಾಶ ನೀಡಲಾಗುತ್ತದೆ. ಸಾಮಾನ್ಯ ಸಭೆಯ ದಿನ ಗ್ರೂಪ್ ಅನ್ನು ಮತ್ತೆ ಅಡ್ಮಿನ್ ಓನ್ಲಿ ಮಾಡಲಾಗುತ್ತದೆ. ಹೀಗೆ ಗ್ರೂಪ್‌ನಲ್ಲಿ ಬಂದ ಸಮಸ್ಯೆಗಳನ್ನು ಸಭೆಯಲ್ಲಿ ಓದಲಾಗುತ್ತದೆ ಮತ್ತು ಇದಕ್ಕೆ ಸೂಕ್ತ ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ. ಗ್ರಾಮದ ಸಮಸ್ಯೆಗಳನ್ನು ವಾಟ್ಸಫ್ ಮೂಲಕ ತಿಳಿಸಲು ಪಂಚಾಯತ್ ಈ ರೀತಿಯ ಅವಕಾಶ ಮಾಡಿಕೊಟ್ಟಿದ್ದು ಬಹಳಷ್ಟು ಸಮಸ್ಯೆಗಳು ಗ್ರೂಪ್‌ನಲ್ಲಿ ಬಂದಿರುವುದು ವಿಶೇಷವಾಗಿತ್ತು.

ಮನೆ ದುರಸ್ತಿಗೆ ಸಹಾಯಧನ ಕೊಡಬೇಕು
ಗ್ರಾಮದಲ್ಲಿ ಎಸ್.ಸಿ ಮತ್ತು ಎಸ್.ಟಿಗಳಲ್ಲಿ ಬಹಳಷ್ಟು ಮಂದಿ ಕಡುಬಡವರಿದ್ದಾರೆ. ಪ್ರತಿ ವರ್ಷ ಮನೆ ದುರಸ್ತಿ ಮಾಡಲು ಕೂಡ ಕಷ್ಟ ಪಡುವವರಿದ್ದಾರೆ. ಆದ್ದರಿಂದ ಪಂಚಾಯತ್‌ನಿಂದ ಅರ್ಹ ಫಲಾನುಭವಿಗಳಿಗೆ ಮನೆ ದುರಸ್ತಿಗೆ ಸಹಾಯಧನ ಕೊಡುವಂತೆ ಮಾಡಬೇಕು ಎಂದು ಕೃಷ್ಣ ಕುಮಾರ್ ಇದ್ಯಪೆ ತಿಳಿಸಿದರು. ಈ ಬಗ್ಗೆ ನಿರ್ಣಯಿಸಲಾಯಿತು. ಕೊಡಂಕೀರಿ ಜಂಕ್ಷನ್‌ನಲ್ಲಿ ರಾತ್ರಿ ವೇಳೆ ವಾಹನಗಳು, ಜನರು ಸೇರುತ್ತಿದ್ದು ಇಲ್ಲಿ ಸಿಸಿ ಕ್ಯಾಮರ ಅಳವಡಿಸಬೇಕು ಎಂದು ಕೃಷ್ಣ ಕುಮಾರ್ ತಿಳಿಸಿದರು.

3 ತಿಂಗಳು ನೀರಿನ ಬಿಲ್ ಕಟ್ಟದಿದ್ದರೆ ಸಂಪರ್ಕ ಕಡಿತ
ನೀರಿನ ಬಿಲ್‌ಗಿಂತ ವಿದ್ಯುತ್ ಬಿಲ್ ಜಾಸ್ತಿ ಬರುತ್ತಿದ್ದು ಯಾಕೆ ಈ ರೀತಿ ಆಗುತ್ತಿದೆ ಗೊತ್ತಾಗುತ್ತಿಲ್ಲ. ನೀರು ಬಿಡುವವರ ಸಮಸ್ಯೆಯೇ ಎಂಬುದನ್ನು ಪರಿಶೀಲನೆ ಮಾಡಬೇಕಾಗಿದೆ ಎಂದ ಅಧ್ಯಕ್ಷರು, ಈಗಾಗಲೇ ಬಹಳಷ್ಟು ಮಂದಿ ನೀರಿನ ಬಿಲ್ ಪಾವತಿಸದೇ ಇದ್ದು ಯಾರು 3 ತಿಂಗಳು ನೀರಿನ ಬಿಲ್ ಪಾವತಿ ಮಾಡದೇ ಇರುತ್ತಾರೋ ಅಂಥವರ ಮನೆಯ ನೀರಿನ ಸಂಪರ್ಕವನ್ನು ಕಡಿತ ಮಾಡುವುದು ಎಂದು ನಿರ್ಣಯಿಸಲಾಯಿತು.

ಬಸ್ಸು ತಂಗುದಾಣ ಕೆಡವಿದ ಪ್ರಕರಣ- ಪೊಲೀಸ್ ಠಾಣೆಗೆ ಮನವಿ
ಕಜೆಯಲ್ಲಿರುವ ಸಾರ್ವಜನಿಕ ಬಸ್ಸು ತಂಗುದಾಣವನ್ನು ಕೆಡವಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮೋದ್ ಕುಮಾರ್ ರೈಯವರ ವಿರುದ್ಧ ಗ್ರಾಮ ಪಂಚಾಯತ್ ಪುತ್ತೂರು ಗ್ರಾಮಾಂತರ ಠಾಣೆಗೆ ದೂರು ನೀಡಿತ್ತು ಇದರ ಬೆಳವಣಿಗೆ ಏನಾಯಿತು ಎಂದು ಉಪಾಧ್ಯಕ್ಷ ಭಾಸ್ಕರ ರೈ ಮಿತ್ರಂಪಾಡಿಯವರು ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದ ಅಧ್ಯಕ್ಷ ರತನ್ ರೈಯವರು, ಬಸ್ಸು ತಂಗುದಾಣ ಕೆಡವಿದ ವಿಚಾರದಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿ ತಿಂಗಳು ಕಳೆದರೂ ಪೊಲೀಸ್ ಠಾಣೆಯಿಂದ ಪಂಚಾಯತ್‌ಗೆ ಯಾವುದೇ ಪ್ರತ್ಯುತ್ತರ ಬಂದಿಲ್ಲ. ಆದ್ದರಿಂದ ಪ್ರಕರಣ ಬಗ್ಗೆ ಏನು ತನಿಖೆ ಆಗಿದೆ ಎಂಬ ವಿಚಾರವನ್ನು ಪಂಚಾಯತ್‌ಗೆ ನೀಡುವಂತೆ ಮತ್ತೊಮ್ಮೆ ಪೊಲೀಸ್ ಠಾಣೆಗೆ ಮನವಿ ಮಾಡಿಕೊಳ್ಳುವ ಎಂದು ತಿಳಿಸಿದರು. ಅದರಂತೆ ನಿರ್ಣಯಿಸಲಾಯಿತು.

ಗ್ರಾಪಂ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆ ದ.19 ರಿಂದ ಬೆಳಗಾವಿಯಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಹಾಜರಾಗಲು ರಜೆ ಮಂಜೂರು ಮಾಡುವಂತೆ ಗ್ರಾಪಂ ನೌಕರರು ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.

ಉಪಾಧ್ಯಕ್ಷ ಭಾಸ್ಕರ ರೈ ಮಿತ್ರಂಪಾಡಿ, ಸದಸ್ಯರುಗಳಾದ ವಿಠಲ ರೈ ಮಿತ್ತೋಡಿ, ಕೃಷ್ಣ ಕುಮಾರ್ ಇದ್ಯಪೆ, ಅಸ್ಮಾ ಗಟ್ಟಮನೆ, ಸುಜಾತ, ರೇವತಿ ಬೋಳೋಡಿ, ಸುಜಾತ ಮುಳಿಗದ್ದೆ, ಜಯಲಕ್ಷ್ಮೀ ಬಲ್ಲಾಳ್ ಚರ್ಚೆಯಲ್ಲಿ ಪಾಲ್ಗೊಂಡರು. ಗ್ರೇಡ್೧ ಕಾರ್ಯದರ್ಶಿ ಸುನಂದ ರೈ ಸ್ವಾಗತಿಸಿ, ನಿರ್ಣಯಗಳನ್ನು ದಾಖಲಿಸಿಕೊಂಡರು. ಸಿಬ್ಬಂದಿ ಜಯಂತ ಮೇರ್ಲ ಸಾರ್ವಜನಿಕ ಅರ್ಜಿಗಳನ್ನು ಓದಿದರು. ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ ಸರಕಾರದ ಸುತ್ತೋಲೆಗಳನ್ನು ಓದಿದರು. ಸಿಬ್ಬಂದಿಗಳಾದ ಗಣೇಶ್, ವಿದ್ಯಾಪ್ರಸಾದ್, ಮೃದುಳ, ಶಶಿಪ್ರಭಾ ರೈ ಸಹಕರಿಸಿದ್ದರು.

` ಪರವಾನಗೆ ನವೀಕರಣ ಮಾಡದೇ ಇರುವ ಅಂಗಡಿದಾರರು ಈ ತಿಂಗಳೊಳಗೆ ಪರವಾನಗೆ ನವೀಕರಣ ಮಾಡಿಕೊಳ್ಳಬೇಕು. ಅನಧಿಕೃತ ಅಂಗಡಿದಾರರು ದಂಡನೆ ಪಾವತಿ ಮಾಡಬೇಕು. ಇವರು ಪಂಚಾಯತ್‌ನೊಂದಿಗೆ ಸಹಕರಿಸದೇ ಇದ್ದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕಾದ ಅನಿವಾರ್‍ಯತೆ ಇದೆ.’
– ರತನ್ ರೈ ಕುಂಬ್ರ, ಅಧ್ಯಕ್ಷರು ಕೆದಂಬಾಡಿ ಗ್ರಾಪಂ

LEAVE A REPLY

Please enter your comment!
Please enter your name here