ನೆಲ್ಯಾಡಿ: ವಿದ್ಯಾರ್ಥಿಗಳು ಅಂಕ ಗಳಿಕೆಗೆ ಕೊಡುವಷ್ಟೇ ಪ್ರಾಮುಖ್ಯತೆಯನ್ನು ವ್ಯಕ್ತಿತ್ವ ನಿರ್ಮಾಣಕ್ಕೂ ಕೊಡಬೇಕು. ಕೇವಲ ಅಂಗ ಗಳಿಕೆಗೆ ಓದುತ್ತಿರುವವರು ನಿರುದ್ಯೋಗಿಗಳಾಗುತ್ತಾರೆ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಜಯಕುಮಾರ್ ಶೆಟ್ಟಿ ಹೆಳಿದರು.
ಅವರು ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಗಳ ಪ್ರತಿಭಾ ಪುರಸ್ಕಾರ ಮತ್ತು ವಾರ್ಷಿಕ ದಿನಾಚರಣೆಯ ಪ್ರಧಾನ ಅಭ್ಯಾಗತರಾಗಿ ಮಾತನಾಡಿದರು. ವಿದ್ಯಾರ್ಥಿಗಳು ಭ್ರಮ ನಿರಸನಕ್ಕೆ ಒಳಗಾಗಬಾರದು. ಭಾಷಾ ಪ್ರೌಢಿಮೆ, ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಸಂಸ್ಥೆಯ ಸಂಚಾಲಕ ಅಬ್ರಹಾಂ ವರ್ಗೀಸ್‌ರವರು ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಸ್ಮಾಯಿಲ್ ಶುಭಹಾರೈಸಿದರು.
ಸಾಧಕ ಪೂರ್ವ ವಿದ್ಯಾರ್ಥಿಗಳಾದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರುಕ್ಮಯ ಜೆ., ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಗಂಗಾಧರ ಶೆಟ್ಟಿ ಹೊಸಮನೆ, ಸಾಫ್ಟ್‌ವೇರ್ ಇಂಜಿನಿಯರ್ ರಕ್ಷಣ್ ಬಿ.ಜೆ.ಅವರನ್ನು ಸನ್ಮಾನಿಸಲಾಯಿತು. ಕ್ರೀಡೆಯಲ್ಲಿ ಜಿಲ್ಲಾ ಮತ್ತು ರಾಜ್ಯಮಟ್ಟದ ಸಾಧನೆ ಮಾಡಿದ ಸಂಸ್ಥೆಯ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಬಹುಮಾನ ನೀಡಿ ಗೌರವಿಸಲಾಯಿತು. ಸಾಂಸ್ಕೃತಿಕ ಚಾಂಪಿಯನ್‌ಗಳಾದ ಮಾನ್ಯ, ಅನಘ, ಮಧುಶ್ರೀ ಹಾಗೂ ಎಲ್ಲಾ ವಿಭಾಗದಲ್ಲೂ ವಿಶಿಷ್ಠ ಸಾಧನೆ ತೋರಿದ ಶ್ರೇಯ, ಮಧುಶ್ರೀ, ಪರ್ಣಮ್ಯರವರಿಗೆ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ವಿದ್ಯಾರ್ಥಿ ನಾಯಕಿ ಮಾನ್ಯ ಶಾಲಾ ಸಂಸತ್ತಿನ ವರದಿ ವಾಚಿಸಿದರು. ಪ್ರಾಚಾರ್ಯ ಎಂ.ಕೆ.ಏಲಿಯಾಸ್‌ರವರು ವಿದ್ಯಾಸಂಸ್ಥೆಯ ವರದಿ ಮಂಡಿಸಿದರು. ಕನ್ನಡ ಮಾಧ್ಯಮ ಪ್ರೌಢಶಾಲಾ ವಿಭಾಗದ ಮುಖ್ಯಗುರು ಎಂ.ಐ.ತೋಮಸ್ ಅಭಿನಂದನಾ ನುಡಿಗಳನ್ನಾಡಿದರು. ಆಂಗ್ಲಮಾಧ್ಯಮ ವಿಭಾಗದ ಮುಖ್ಯಗುರು ಹರಿಪ್ರಸಾದ್ ವಂದಿಸಿದರು. ಅಧ್ಯಾಪಕರಾದ ವರ್ಗೀಸ್ ಫ್ರಾನ್ಸಿಸ್, ಕರುಣಾಕರ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ಚೇತನ್ ಆನೆಗುಂಡಿ ಕಾರ್ಯಕ್ರಮ ನಿರೂಪಿಸಿದರು.