ಆಲಂಕಾರು: ಕೊಯಿಲ ಗ್ರಾಮದ ಸಬಳೂರು ಆರುವಾರ ಬಾಳಿಕೆ ಸಂತೋಷ್ ರೈ ಸಬಳೂರುರವರ ಶ್ರದ್ದಾಂಜಲಿ ಕಾರ್ಯಕ್ರಮ ಉಪ್ಪಿನಂಗಡಿ ಸುಧೀಂದ್ರ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಂಘದ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗು ಆಲಂಕಾರು ವಲಯ ಬಂಟರ ಸಂಘದ ಕಾರ್ಯದರ್ಶಿ ಪ್ರಶಾಂತ ರೈ ಮನವಳಿಕೆ ನುಡಿನಮನ ಸಲ್ಲಿಸಿ ಸಂತೋಷ್ ರೈಯವರು ಡಿ.8 ರಂದು ನಿಧನರಾಗಿದ್ದು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 30 ವರ್ಷಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿ ಶಾಖಾ ವ್ಯವಸ್ಥಾಪಕರಾಗಿ ಸೆಪ್ಟಂಬರ್‌ನಲ್ಲಿ ನಿವೃತ್ತರಾಗಿದ್ದರು. ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷರಾಗಿ, ದೇವಸ್ಥಾನದ ಜೀರ್ಣೋದ್ದಾರ ಸಮಿತಿ, ಆಲಂಕಾರು ವಲಯ ಬಂಟರ ಸಂಘದ ಕೋಶಾಧಿಕಾರಿಯಾಗಿ, ಏಣಿತ್ತಡ್ಕ ಶ್ರೀ ಶಿರಾಡಿ ದೈವಸ್ಥಾನದ ಆಡಳಿತ ಮೊಕ್ತೇಸರರಾಗಿ, ಆರ್‍ವಾರ ಬಾಳಿಕೆ ಟ್ರಸ್ಟ್‌ನ ಅಧ್ಯಕ್ಷರಾಗಿ, ಕೊಯಿಲ-ರಾಮಕುಂಜ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಸಬಳೂರು ಸರಕಾರಿ ಶಾಲಾ ಸುವರ್ಣಮಹೋತ್ಸವ ಸಮಿತಿ ಸೇರಿದಂತೆ ಹಲವು ಸಾಮಾಜಿಕ, ಧಾರ್ಮಿಕ ಸಂಘ ಸಂಸ್ಥೆಗಳಲ್ಲಿ ಹಾಗು ದೈವದ ಮಧ್ಯಸ್ಥರಾಗಿಯೂ ಸೇವೆ ಸಲ್ಲಿಸಿದವರು. ಆಲಂಕಾರು ಸಿ.ಎ ಬ್ಯಾಂಕ್ ಮಾರಾಟ ವಿಭಾಗದಲ್ಲಿ ಕೃಷಿ ಪರಿಕರವನ್ನು ಮಾರಾಟ ಮಾಡಿ ರೈತರಿಗೆ ಒಬ್ಬ ಕೃಷಿ ತಜ್ಞರಾಗಿ ಮಾಹಿತಿಯನ್ನು ನೀಡುತ್ತಿದ್ದರು. ಯಾವುದೇ ಸಭೆ ಸಮಾರಂಭಗಳಲ್ಲಿ ಮುಂದೆ ನಿಂತು ಕಾರ್ಯಕ್ರಮದ ಯಶಸ್ಸಿಗೆ ದುಡಿಯುತ್ತಿದ್ದರು. ಸಮಾಜದಲ್ಲಿ ಹುಟ್ಟಿನಿಂದ ಸಾಯುವ ತನಕ ಮದುವೆ ಇನ್ನಿತರ ಶುಭ ಕಾರ್ಯಕ್ರಮ ಹಾಗು ದೈವರಾಧನೆಯ ಬಗ್ಗೆ ಅನುಭವ ಹೊಂದಿದ ವ್ಯಕ್ತಿಯಾಗಿದ್ದು “ಅಳಿಯುವುದು ಕಾಯ ಉಳಿಯವುದು ಕಾರ್ಯ” ಎನ್ನುವಂತೆ ಸಂತೋಷ ರೈ ಯವರ ಕೆಲಸ ಕಾರ್ಯ ಸಮಾಜದಲ್ಲಿ ಅಚ್ಚಳಿಯಾಗಿ ಉಳಿಯಲಿದೆ ಎಂದು ತಿಳಿಸಿ ಸಂತೋಷ ರೈ ಯವರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ವೇದಿಕೆಯಲ್ಲಿ ಮೃತರ ಪತ್ನಿ ಕಾಣಿಯೂರು ಸರಕಾರಿ ಪ.ಪೂ.ಕಾಲೇಜಿನ ಉಪನ್ಯಾಸಕಿ ಶಶಿಕಲಾ ರೈ, ಪುತ್ರಿ ಧೃತಿ ರೈ, ಸಹೋದರರಾದ ಆರುವಾರ ಪುರಂದರ ರೈ, ನ್ಯಾಯವಾದಿ ದಿನಕರ ರೈ, ಜವಾಹಾರ್ ರೈ, ಪ್ರಕಾಶ್ ರೈ, ಸಹೋದರಿಯರಾದ ಪವಿತ್ರಾ ರೈ, ಸೇವಂತಿ ಶೆಟ್ಟಿಯವರು ಸೇರಿದಂತೆ ಅನೇಕ ಮಂದಿ ಉಪಸ್ಥಿತರಿದ್ದರು. ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೋಟ್ಟು, ಪುತ್ತೂರು ಕೋಟಿ ಚೆನ್ನಯ ಜೋಡು ಕರೆ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರಿನ ಪುತ್ತೂರು ತಾಲೂಕು ಸಮಿತಿಯ ಸಂಚಾಲಕ ದಯಾನಂದ ರೈ ಮನವಳಿಕೆ, ಆಲಂಕಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ರಾಧಾಕೃಷ್ಣ ರೈ ಮನವಳಿಕೆ, ಪ್ರಮುಖರಾದ ಶಶಿಧರ ರೈ ಮನವಳಿಕೆ, ಆಲಂಕಾರು ವಲಯ ಬಂಟರ ಸಂಘದ ಅಧ್ಯಕ್ಷ ಸೇಸಪ್ಪರೈ ಕೆ, ಉಪಾಧ್ಯಕ್ಷ ರಾಮಮೋಹನ ರೈ ಸುರುಳಿ, ಆಲಂಕಾರು ಸಿ.ಎ ಬ್ಯಾಂಕ್ ಅಧ್ಯಕ್ಷ ಧರ್ಮಪಾಲ ರಾವ್ ಕಜೆ, ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಪ್ಪ ಗೌಡ, ಪುತ್ತೂರು ತಾಲೂಕು ಬಂಟರ ಸಂಘದ ನಿರ್ದೇಶಕ ಸುಭಾಸ್ ಶೆಟ್ಟಿ ಆರುವಾರ, ಉಪ್ಪಿನಂಗಡಿ ರೋಟರಿ ಕ್ಲಬ್ ನ ಮಾಜಿ ಅಧ್ಯಕ್ಷ ನೀರಾಜ್ ಕುಮಾರ್ ರೈ, ಶ್ರೀ ಶಿರಾಡಿ ದೈವಸ್ಥಾನ ಏಣಿತಡ್ಕದ ಉತ್ಸವ ಸಮಿತಿ ಅಧ್ಯಕ್ಷ ರಾಮಚಂದ್ರ ಏಣಿತ್ತಡ್ಕ ಸೇರಿದಂತೆ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಸಂತೋಷ ರೈ ಆರುವಾರ ಕುಟುಂಬಸ್ಥರು, ಹಿತೈಷಿಗಳು ಕಾರ್ಯಕ್ರಮದಲ್ಲಿಉಪಸ್ಥಿತರಿದ್ದರು.