ಸುಳ್ಯದ ಪಯಸ್ವಿನಿ ಕೃಷಿ ಮೇಳದಲ್ಲಿ ಹಬ್ಬದ ವಾತಾವರಣ

0

ಕೃಷಿಯ ಮೌಲ್ಯವರ್ಧನೆ-ಕೃಷಿಕರ ಮೌಲ್ಯವರ್ಧನೆಯೂ ಆಗಬೇಕು

ಕೃಷಿಕ ಕೈಒಡ್ಡುವವನಾಗದೆ ಕೊಡುವವನಾಗಬೇಕು-ಸ್ವತಂತ್ರನಾಗಬೇಕು

ಸುಳ್ಯದಲ್ಲಿ ಡಿ. 16, 17, 18ರಂದು ನಡೆದ ಪಯಸ್ವಿನಿ ಕೃಷಿ ಮೇಳ ಯಶಸ್ವಿಯಾಗಿದೆ. ಕೃಷಿ ಮೇಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಪ್ರಣವ ಸೊಸೈಟಿಯ ಅಧ್ಯಕ್ಷರೂ ಆಗಿರುವ ಪ್ರಸಾದ್ ಜಿ.ಆರ್.ರವರ ನೇತೃತ್ವದಲ್ಲಿ ತಂಡ ಅತ್ಯುತ್ತಮವಾಗಿ ಕೆಲಸ ಮಾಡಿದೆ. 150ಕ್ಕೂ ಮಿಕ್ಕಿ ಸ್ಟಾಲ್‌ಗಳು ಬಂದಿದ್ದು ಜನರ ನಿರೀಕ್ಷೆಯನ್ನು ಮೀರಿ ಸಫಲವಾಗಿದೆ. ಪಾರಂಪರಿಕ ಗ್ರಾಮ, ತಾರಾಲಯ, ವಿವಿಧ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶೇಷ ಮೆರುಗನ್ನು ನೀಡಿವೆ. ಸುದ್ದಿ ಕೃಷಿ ಮಾಹಿತಿ ಸೇವಾ ಕೇಂದ್ರ ಈ ಕಾರ್ಯಕ್ಕೆ ಸಂಪೂರ್ಣ ಬೆಂಬಲ ನೀಡಿ ಸಕ್ರಿಯವಾಗಿ ಭಾಗವಹಿಸಿದೆ. ಸುದ್ದಿ ಮಾಧ್ಯಮ ಇಡೀ ಮೇಳವನ್ನು, ಸ್ಟಾಲ್‌ಗಳನ್ನು, ವಿಚಾರ ಗೋಷ್ಠಿಗಳನ್ನು, ಸಭಾ ಮತ್ತು ಮನೋರಂಜನಾ ಕಾರ್ಯಕ್ರಮಗಳನ್ನು ಚಿತ್ರೀಕರಿಸಿ ದಾಖಲಿಸಿದೆ. ಆ ಎಲ್ಲಾ ಚಿತ್ರೀಕರಣ ಸುದ್ದಿ ಯೂ ಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರಗೊಂಡು ಜಗತ್ತಿನಾದ್ಯಂತ ಮನೆ ಮನೆಗೆ ತಲುಪಿದೆ. ಮುಂದಿನ ಜನಾಂಗಕ್ಕೂ ದೊರಕಲಿದೆ. ಸುಳ್ಯದ ಸುದ್ದಿ ಕೃಷಿ ಮಾಹಿತಿ ಕೇಂದ್ರದಲ್ಲಿ ಆ ಮಾಹಿತಿ ಸದಾ ಲಭ್ಯವಿರುತ್ತದೆ.

ಸುದ್ದಿ ಕೃಷಿ ಮಾಹಿತಿ ಕೇಂದ್ರದ ಉದ್ದೇಶ ಪಯಸ್ವಿನಿ ಕೃಷಿ ಮೇಳದ ಉದ್ದೇಶವೇ ಆಗಿರುವುದರಿಂದ ಅದು ನಮಗೆ ಅತ್ಯಂತ ಸಂತೋಷ ಕೊಟ್ಟಿದೆ. ಈಗ ಅದರ ಮುಂದುವರಿದ ಭಾಗವಾಗಿ ಮುಂದಿನ ಜನವರಿ 7 ಮತ್ತು 8ರಂದು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಸಸ್ಯ ಜಾತ್ರೆ ಎಂಬ ಕೃಷಿ ಮೇಳ ಸುದ್ದಿ ಮಾಹಿತಿ ಟ್ರಸ್ಟ್ ರಿ. ಪುತ್ತೂರು ಇದರ ಪ್ರಾಯೋಜಕತ್ವದಲ್ಲಿ ಜರಗಲಿದೆ. ಅಲ್ಲಿ ಮನೆ ತೋಟಕ್ಕೆ ಬೇಕಾದ ಹೂ, ಹಣ್ಣಿನ ಗಿಡಗಳು, ತರಕಾರಿ (ಟೆರೇಸ್ ಗಾರ್ಡನ್), ಔಷಧೀಯ ಗಿಡಗಳು, ಅಲಂಕಾರಿಕ ಗಿಡಗಳ ಬಗ್ಗೆ ಪ್ರದರ್ಶನ ಮಾರಾಟಕ್ಕೆ ಒತ್ತು ಕೊಡಲಾಗಿದೆ. ಸಂಜೀವಿನಿ ಒಕ್ಕೂಟದವರ ಉತ್ಪನ್ನಗಳ ಪ್ರದರ್ಶನ ಮತ್ತು ಸಾಧನೆಗೆ ವಿಶೇಷ ಆದ್ಯತೆ ನೀಡಲಾಗಿದೆ.

ಕೃಷಿ ಮೇಳ ಸಾಧಕ ಕೃಷಿಕರಿಂದ ಉದ್ಘಾಟಿಸಲ್ಪಟ್ಟು, ಪುತ್ತೂರಿನ ಶಾಸಕರು, ನಗರಸಭಾ ಅಧ್ಯಕ್ಷರು, ದ.ಕ. ಜಿಲ್ಲಾಧಿಕಾರಿ, ದ.ಕ. ಜಿ.ಪಂ. ಸಿಓ, ಕ್ಯಾಂಪ್ಕೋ ಹಾಗೂ ಕೆಎಂಎಫ್ ಅಧ್ಯಕ್ಷರು ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಭಾಕಾರ್ಯಕ್ರಮದಲ್ಲಿ ಸಂಜೀವಿನಿ ಒಕ್ಕೂಟದ ಅಲ್ಲದೆ ಸಾಧನೆ ಮಾಡಿದ ಹಿರಿಯ ಕೃಷಿಕರನ್ನು ಗುರುತಿಸಲಾಗುವುದು. ಪ್ರಥಮ ದಿನ ಅಪರಾಹ್ನ ಟೆರೇಸ್ ಗಾರ್ಡನ್, ತರಕಾರಿ ಗಿಡಗಳು, ಹಣ್ಣಿನ ಗಿಡಗಳು, ಅಲಂಕಾರಿಕ ಗಿಡಗಳು, ಔಷಧೀಯ ಸಸ್ಯಗಳ ಬಗ್ಗೆ ವಿಚಾರ ಗೋಷ್ಠಿ ಇದ್ದರೆ, ಎರಡನೇಯ ದಿನ ಬೆಳಿಗ್ಗೆ ಅಡಿಕೆ ಕೃಷಿಯ ಸಮಸ್ಯೆಗಳು, ಅಡಿಕೆಗೆ ಪರ್ಯಾಯ ಕೃಷಿ, ಜೇನು ಕೃಷಿಯ ಬಗ್ಗೆ, ಅಪರಾಹ್ನ ಕೃಷಿಯ ಮೌಲ್ಯ ವರ್ಧನೆ ಬಗ್ಗೆ ವಿಚಾರ ಗೋಷ್ಠಿ ನಡೆಯಲಿದೆ.

ಎರಡು ದಿವಸಗಳ ಕಾಲ ವಿವಿಧ ಮನೋರಂಜನಾ ಕಾರ್ಯಕ್ರಮಗಳೂ ಇದ್ದು, ಪುತ್ತೂರಿನ ಕಾಲೇಜಿನ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಎರಡು ದಿವಸವೂ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಕೃಷಿಯಲ್ಲಿ ಆಸಕ್ತಿ ಹುಟ್ಟುವಂತೆ ಮಾಡುವ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಿದ್ದೇವೆ. ವಿಶೇಷ ಆಕರ್ಷಣೆಯ ವಿವಿಧ ಖಾದ್ಯಗಳ ಮೇಳಕ್ಕೂ ಅವಕಾಶ ಕಲ್ಪಿಸಲಾಗಿದೆ. ಒಟ್ಟಿನಲ್ಲಿ ಆಸಕ್ತ ಕೃಷಿಕರನ್ನು ಮಾತ್ರವಲ್ಲ, ವಿದ್ಯಾರ್ಥಿಗಳನ್ನು, ಯುವಕರನ್ನು ಕೃಷಿಯ ಕಡೆಗೆ ಆಕರ್ಷಿಸಲು ಕೃಷಿ ಉತ್ಪಾದನೆಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಲು, ಕೃಷಿಗೆ ಅಗತ್ಯವುಳ್ಳ ಮಾಹಿತಿ ನೀಡಲು ಪ್ರಯತ್ನಿಸಲಾಗುವುದು. ಕೃಷಿಕರ ಉತ್ಪನ್ನಗಳನ್ನು ಮಾತ್ರವಲ್ಲ ಅವರ ಬದುಕಿನ, ಶ್ರಮ, ಸಾಧನೆಗಳನ್ನು ಗುರುತಿಸಿ ಅವರಿಗೆ ಗೌರವ ಪ್ರಾಪ್ತಿ ಮಾಡುವುದು ನಮ್ಮ ಧ್ಯೇಯವಾಗಿದೆ. ಕೃಷಿಕ ತಲೆಯೆತ್ತಿ ಸ್ವಾವಲಂಬಿಯಾಗಿ ಬದುಕಲು ಬೇಕಾದ ವಾತಾವರಣ ನಿರ್ಮಾಣದೊಂದಿಗೆ ಲಂಚ, ಭ್ರಷ್ಟಾಚಾರ ಮುಕ್ತ ಸ್ವತಂತ್ರ ಜೀವನ ನಡೆಸುವಂತಾಗಬೇಕು ಎಂಬುದು ನಮ್ಮ ಮುಖ್ಯ ಉದ್ದೇಶವಾಗಿದೆ.

LEAVE A REPLY

Please enter your comment!
Please enter your name here