





ತಾಲೂಕಿನಾದ್ಯಂತ ಪಂಚಾಯತ್ ಕಛೇರಿ ತೆರೆದಿದ್ದರೂ ಸೇವೆ ಸ್ಥಗಿತ… ಸಾರ್ವಜನಿಕರಿಗೆ ತೊಂದರೆ


ಪುತ್ತೂರು: ಸಿ ಮತ್ತು ಡಿ ದರ್ಜೆ ಸ್ಥಾನಮಾನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯತ್ ನೌಕರರು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ (ಆರ್.ಡಿ.ಪಿ.ಆರ್)ದ ಮೂಲಕ ಬೆಳಗಾವಿ ಸುವರ್ಣ ವಿಧಾನ ಸೌಧದ ಮುಂದೆ ದ.19 ರಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದು ತಾಲೂಕಿನಾದ್ಯಂತ ಗ್ರಾಪಂ ಸೇವೆಗಳು ಸ್ಥಗಿತಗೊಂಡಿವೆ.






ಇದೇ ವೇಳೆ ಕರ್ನಾಟಕ ರಾಜ್ಯ ಸರಕಾರಿ ಎನ್.ಪಿ.ಎಸ್ ನೌಕರರ ಸಂಘವೂ ನಿಶ್ಚಿತ ಪಿಂಚಣಿಗಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ` ಮಾಡು ಇಲ್ಲವೆ ಮಡಿ’ ಎಂದು ಹೋರಾಟ ನಡೆಸುತ್ತಿದ್ದು ಇದರಲ್ಲಿ ಗ್ರಾಮ ಪಂಚಾಯತ್‌ನ ಬಹುತೇಕ ಅಭಿವೃದ್ಧಿ ಅಧಿಕಾರಿಗಳು ಭಾಗಿಯಾಗಿರುವುದರಿಂದ ಪಂಚಾಯತ್ ಸೇವೆಗಳಿಗೆ ಮತ್ತಷ್ಟು ತೊಡಕು ಉಂಟಾಗಿದೆ. ಪಂಚಾಯತ್ ಕಛೇರಿಗಳು ತೆರೆದಿದ್ದರೂ ಅಭಿವೃದ್ಧಿ ಅಧಿಕಾರಿಗಳು, ನೌಕರರು ಕೆಲಸಕ್ಕೆ ಹಾಜರಾಗದೇ ಇರುವುದರಿಂದ ಸಾರ್ವಜನಿಕರಿಗೆ ಗ್ರಾಪಂ ಸೇವೆಗಳು ಲಭ್ಯವಾಗಿಲ್ಲ.

ಬೇಡಿಕೆ ಈಡೇರಲೇ ಇಲ್ಲ…!
ಗ್ರಾಪಂ ನೌಕರರಿಗೆ ಸಿ ಮತ್ತು ಡಿ ದರ್ಜೆ ಸ್ಥಾನಮಾನ ಸೇರಿದಂತೆ ಹತ್ತು ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದ ಹಲವು ವರ್ಷಗಳಿಂದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘದ ಮೂಲಕ ಮುಖ್ಯಮಂತ್ರಿಗಳಿಗೆ, ಸಚಿವರಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದುವರೇಗೆ ಸರಕಾರದಿಂದ ಗ್ರಾಪಂ ನೌಕರರ ಮನವಿಗೆ ಯಾವುದೆ ರೀತಿಯ ಸ್ಪಂದನೆ ದೊರೆತಿಲ್ಲ ಈ ಹಿನ್ನೆಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಗ್ರಾಪಂ ನೌಕರರ ತಮ್ಮ ಮೂಲಭೂತ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಮಟ್ಟದಲ್ಲಿ ಬೃಹತ್ ಹೋರಾಟಕ್ಕೆ ಧುಮುಕಿದ್ದಾರೆ.
ರಾಜ್ಯ ಮಟ್ಟದ ಪ್ರತಿಭಟನೆ
ಇದು ರಾಜ್ಯ ಮಟ್ಟದ ಪ್ರತಿಭಟನೆಯಾಗಿದ್ದು ರಾಜ್ಯದ ಸುಮಾರು 5600 ಕ್ಕೂ ಅಧಿಕ ಗ್ರಾಪಂ ನೌಕರರು ಭಾಗವಹಿಸುತ್ತಿದ್ದಾರೆ. ದ.೧೯ ರಿಂದ 30 ರ ತನಕ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು ಇದೇ ಸಂದರ್ಭದಲ್ಲಿ ಪ್ರತಿಭಟನೆ ಕೂಡ ನಡೆಯುತ್ತಿದೆ. ಈ ಮೂಲಕ ರಾಜ್ಯ ಸರಕಾರಕ್ಕೆ ಗ್ರಾಪಂ ನೌಕರರ ಸಂಕಷ್ಟದ ಅರಿವು ಮೂಡಿಸುವ ಮೂಲಕ ಬಿಸಿ ಮುಟ್ಟಿಸಲು ನೌಕರರು ಸಜ್ಜಾಗಿದ್ದಾರೆ. ಗ್ರಾಪಂ ನೌಕರರಿಗೆ ಸೂಕ್ತ ಸ್ಥಾನಮಾನ ನೀಡದೇ ಕೇವಲ ಕನಿಷ್ಠ ವೇತನ ನೀಡುವ ಮೂಲಕ ದುಡಿಸಿಕೊಳ್ಳುತ್ತಿದ್ದಾರೆ. ಗ್ರಾಮೀಣ ಭಾಗದ ಜನರ ಎಲ್ಲಾ ಕೆಲಸಗಳು ಗ್ರಾಮ ಪಂಚಾಯತ್‌ನಿಂದಲೇ ಆಗುತ್ತಿದ್ದು ಇಲ್ಲಿರುವ ನೌಕರರು ಹಲವು ಒತ್ತಡಗಳಿದ್ದರೂ ಸಾರ್ವಜನಿಕರಿಗೆ ಸರಿಯಾದ ಸೇವೆಯನ್ನು ನೀಡುತ್ತಾ ಬಂದಿದ್ದಾರೆ. ಆದರೂ ಸರಕಾರ ಮಾತ್ರ ಗ್ರಾಪಂ ನೌಕರರ ಬಗ್ಗೆ ನಿರ್ಲಕ್ಷ್ಯ ಧೋರಣೆ ಮಾಡುತ್ತಿದ್ದ ಅವರ ಬೇಡಿಕೆಗಳಿಗೆ ಸ್ಪಂದನೆ ಕೊಡುತ್ತಿಲ್ಲ ಎನ್ನುವುದು ನೌಕರರ ನೋವಿನ ಮಾತುಗಳಾಗಿವೆ.
ಸೇವೆ ಸ್ಥಗಿತ, ಸಾರ್ವಜನಿಕರಿಗೆ ತೊಂದರೆ
ಎನ್.ಪಿ.ಎಸ್ ನೌಕರರ ಸಂಘದ ವತಿಯಿಂದ ಪಿಂಚಣಿಗಾಗಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯುತ್ತಿದ್ದು ಇದರಲ್ಲಿ ಗ್ರಾಪಂ ಪಿಡಿಓಗಳು ಭಾಗಿಯಾಗಿದ್ದು ಅತ್ತ ಬೆಳಗಾವಿಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಗ್ರಾಪಂ ನೌಕರರು ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಗ್ರಾಪಂ ಸೇವೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಗ್ರಾಪಂ ಕಛೇರಿಗಳನ್ನು ಬಂದ್ ಮಾಡಬಾರದು ಎಂಬ ನಿಯಮವಿರುವುದರಿಂದ ಗ್ರಾಪಂ ಗ್ರಂಥಾಲಯ ಸಹಾಯಕರು ಕಛೇರಿಯಲ್ಲಿ ಲಭ್ಯವಿದ್ದು ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದಾರೆ. ಗ್ರಾಪಂ ಸೇವೆಗಳು ಸ್ಥಗಿತಗೊಂಡಿರುವುದರಿಂದ ಅಗತ್ಯ ಸೇವೆಗಳಿಗೆ ತೊಡಕಾಗಿದ್ದು ಸಾರ್ವಜನಿಕರು ತೊಂದರೆಯಲ್ಲಿ ಸಿಲುಕಿದ್ದಾರೆ.
ಕುಡಿಯುವ ನೀರಿಗೆ ತೊಂದರೆ ಇಲ್ಲ
ಗ್ರಾಪಂನ ಸೇವೆಗಳಲ್ಲಿ ಬಹುಮುಖ್ಯ ಸೇವೆಯಾಗಿರುವ ಕುಡಿಯುವ ನೀರಿನ ಸರಬರಾಜಿಗೆ ಯಾವುದೇ ತೊಂದರೆ ಆಗಿಲ್ಲ. ಗ್ರಾಪಂ ನೌಕರರು ಸೇವೆಗೆ ಹಾಜರಾಗದೇ ಇದ್ದರೂ ನೀರು ನಿರ್ವಾಹಕರು ಎಂದಿನಂತೆ ಕೆಲಸ ಮಾಡಿಕೊಂಡಿರುವುದರಿಂದ ಸಾರ್ವಜನಿಕರು ಕುಡಿಯುವ ನೀರಿಗೆ ಬಗ್ಗೆ ಯಾವುದೇ ಆತಂಕ ಪಡಬೇಕಾಗಿಲ್ಲ.
ಏನೇನು ಬೇಡಿಕೆಗಳಿವೆ?
* ಗ್ರಾಪಂ ಕಛೇರಿಗಳಲ್ಲಿ ಕಾರ್ಯನಿರ್ವಹಿಸುವ ಕ್ಲರ್ಕ್ ಕಂ ಡಾಟ ಎಂಟ್ರಿ ಅಪರೇಟರ್, ಬಿಲ್ ಕಲೆಕ್ಟರ್‌ಗಳಿಗೆ ಸಿ ದರ್ಜೆ ಸ್ಥಾನಮಾನ ಮತ್ತು ಅಟೆಂಡರ್, ಕ್ಲೀನರ್, ವಾಟರ್ ಮ್ಯಾನ್, ಪಂಪು ಚಾಲಕರಿಗೆ ಡಿ ದರ್ಜೆ ಸ್ಥಾನಮಾನ ನೀಡಿ ನಗರ ಮತ್ತು ಪಟ್ಟಣ ಪಂಚಾಯತ್‌ನಂತೆ ಸೇವಾ ನಿಯಾಮವಳಿ, ವೇತನ ಶ್ರೇಣಿ ನಿಗದಿಪಡಿಸಬೇಕು.
* ಗ್ರಾಮ ಪಂಚಾಯತ್ ನೌಕರರು ಮತ್ತು ನೌಕರರ ಅವಲಂಭಿತರಿಗೆ ಆರೋಗ್ಯ ಭದ್ರತೆಯೊಂದಿಗೆ ನಿವೃತ್ತಿ ಜೀವನಕ್ಕೆ ಭವಿಷ್ಯ ನಿಧಿ/ಪಿಂಚಣಿ ವ್ಯವಸ್ಥೆಯನ್ನು ಮಾಡಬೇಕು.
* ಸರಕಾರದ ಆದೇಶ ದಿನಾಂಕ 29/9/2020 ರ ಪೂರ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಚಾಯತ್ ನೌಕರರಿಗೆ ಅವರ ವಿದ್ಯಾರ್ಹತೆ ಮತ್ತು ವಯೋಮಿತಿಯನ್ನು ಪರಿಗಣಿಸದೇ ಹಾಗೂ ಪಂಚಾಯತ್‌ಗಳಲ್ಲಿ ಹುದ್ದೆಗಳ ಗರಿಷ್ಠ ಮಿತಿಯನ್ನು ನಿಗದಿಪಡಿಸದೆ ಜಿಲ್ಲಾ ಪಂಚಾಯತ್‌ನಿಂದ ಅನುಮೋದನೆ ನೀಡಬೇಕು.
* ವಿದ್ಯಾರ್ಹತೆ ಹಾಗೂ ವಯೋಮಿತಿ ಹಾಗೂ ಇತರೆ ಸಮಸ್ಯೆಗಳಿಂದ ಜಿಲ್ಲಾ ಪಂಚಾಯ್ ಅನುಮೋದನೆಯಾಗದೆ ನಿವೃತ್ತಿಯಾದ ಹಾಗೂ ಮುಂದೆ ನಿವೃತ್ತಿಯಾಗುವ ಎಲ್ಲಾ ಗ್ರಾಮ ಪಂಚಾಯತ್ ನೌಕರರಿಗೆ ನಿವೃತ್ತಿ ಉಪ ಧನ ಮಂಜೂರು ಮಾಡಬೇಕು. ನಿವೃತ್ತಿ ಉಪ ಧನ ಪಾವತಿಸಲು ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಸರಕಾರವೇ ಒಂದು ಶಾಶ್ವತ ನಿಧಿಯನ್ನು ಕಾಯ್ದಿರಿಸಬೇಕು ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ.
ರಾಜ್ಯದಾದ್ಯಂತ ಗ್ರಾಪಂ ನೌಕರರು ಪ್ರತಿಭಟನೆ ನಡೆಸುತ್ತಿರುವುದು ಮತ್ತು ಬೆಂಗಳೂರಿನಲ್ಲಿ ಎನ್.ಪಿ.ಎಸ್ ನೌಕರರ ಸಂಘದ ವತಿಯಿಂದ ಪಿಂಚಣಿಯಾಗಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಿಡಿಓಗಳು ಭಾಗವಹಿಸುತ್ತಿರುವುದರಿಂದ ಗ್ರಾಪಂ ಸೇವೆಗಳು ಸ್ಥಗಿತಗೊಂಡಿವೆ. ಇನ್ನೆರಡು ದಿನಗಳಲ್ಲಿ ಪಿಡಿಓಗಳು ಕರ್ತವ್ಯಕ್ಕೆ ಹಾಜರಾಗಬಹುದು. ಕುಡಿಯುವ ನೀರಿನ ಸೇವೆಯಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗಿದೆ. ಪಂಚಾಯತ್ ಕಛೇರಿಗಳನ್ನು ತೆರೆದಿಟ್ಟು ಅಲ್ಲಿ ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರನ್ನು ಕುಳಿತುಕೊಂಡು ಕಛೇರಿಗೆ ಬರುವ ಸಾರ್ವಜನಿಕರಿಗೆ ಮಾಹಿತಿ ನೀಡಲು ತಿಳಿಸಲಾಗಿದೆ.
ನವೀನ್ ಭಂಡಾರಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಪುತ್ತೂರು
ಗ್ರಾಪಂ ನೌಕರರು ಹಾಗೂ ಅಭಿವೃದ್ಧಿ ಅಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿರುವುದರಿಂದ ಗ್ರಾಪಂ ಸೇವೆಗಳು ಸ್ಥಗಿತಗೊಂಡಿವೆ. ಗ್ರಾಪಂ ಕಛೇರಿಗಳನ್ನು ತೆರೆದು ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರನ್ನು ಕುಳಿತುಕೊಳ್ಳಲು ಹೇಳಿದ್ದೇವೆ. ಗ್ರಾಪಂ ಅಧ್ಯಕ್ಷರುಗಳು ಕೂಡ ಕಛೇರಿಯಲ್ಲಿದ್ದು ಕಛೇರಿಗೆ ಬರುವ ಸಾರ್ವಜನಿಕರಿಗೆ ಸರಿಯಾದ ಮಾಹಿತಿಯನ್ನು ನೀಡುತ್ತಿದ್ದೇವೆ.
ರತನ್ ರೈ ಕುಂಬ್ರ, ಅಧ್ಯಕ್ಷರು ಕೆದಂಬಾಡಿ ಗ್ರಾಪಂ








