ನೆಲ್ಯಾಡಿ ವಿವಿ ಕಾಲೇಜಿನಲ್ಲಿ ಮಾನವ ಹಕ್ಕುಗಳ ದಿನಾಚರಣೆ, ವಿಶೇಷ ಉಪನ್ಯಾಸ-ಸಂವಾದ

0

ನೆಲ್ಯಾಡಿ: ವಿಶ್ವ ವಿದ್ಯಾನಿಲಯ ಘಟಕ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕ ಮತ್ತು ಲಲಿತ ಕಲಾ ಸಂಘದ ವತಿಯಿಂದ ಮಾನವ ಹಕ್ಕುಗಳ ದಿನಾಚರಣೆ ಪ್ರಯುಕ್ತ ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು.


ಸಂಪನ್ಮೂಲ ವ್ಯಕ್ತಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ನೋಟರಿ ಮತ್ತು ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿಯವರು ಮಾತನಾಡಿ, ಮಾನವ ಹಕ್ಕುಗಳ ಬಗ್ಗೆ ರಾಷ್ಟ್ರ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧಿಕಾರ, ಕಾರ್ಯಗಳ ಕುರಿತು ತಿಳಿಸಿದರು.

ಮಾನವ ಹಕ್ಕುಗಳ ಬಗ್ಗೆ ಅರಿವು ಬೆಳೆಸಿಕೊಳ್ಳಲು ಕಾನೂನಾತ್ಮಕ ತಿಳಿವಳಿಕೆ ತುಂಬಾ ಅವಶ್ಯಕತೆಯಾಗಿದೆ. ಎಲ್ಲಾ ವಿಷಯಗಳ ಬಗ್ಗೆ ಸಾಮಾನ್ಯ ಜ್ಞಾನ ಹೇಗೆ ಅವಶ್ಯಕವೋ ಹಾಗೆ ನಮ್ಮ ಹಕ್ಕುಗಳ ಬಗ್ಗೆ, ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಬೇಕಾಗುವ ಕಾನೂನಿನ ಸಾಮಾನ್ಯ ಜ್ಞಾನ ತುಂಬಾ ಮಹತ್ವದ್ದು ಎಂದರು. ಎಷ್ಟೋ ಬಾರಿ ನಮ್ಮ ಸಮಸ್ಯೆಗಳಿಗೆ ನಮ್ಮ ನಿರ್ಲಕ್ಷ್ಯಗಳೇ ಕಾರಣವಾಗಿರುತ್ತವೆ. ನಮ್ಮ ಜೀವನದಲ್ಲಿ ಚಿಕ್ಕ ಚಿಕ್ಕ ನಿರ್ಲಕ್ಷ್ಯಗಳಿಗೆ ದೊಡ್ಡ ಬೆಲೆ ತೆರಬೇಕಾದ ಅನೇಕ ಪ್ರಸಂಗಗಳು ಎದುರಾಗುತ್ತವೆ, ಅಂತಹ ಸಂದರ್ಭದಲ್ಲಿ ಬೇರೆಯವರನ್ನು ದೂರಿ ಪ್ರಯೋಜನವಿರುವುದಿಲ್ಲ. ಹಾಗಾಗಿ ಇಂತಹ ಸ್ಥಿತಿಗಳಿಗೆ ನಮ್ಮ ಹಕ್ಕು ಮತ್ತು ಅವುಗಳ ಬಗೆಗಿರುವ ಕಾನೂನಿನ ಸಾಮಾನ್ಯ ಜ್ಞಾನದ ಕೊರತೆಯೇ ಮುಖ್ಯ ಕಾರಣ. ಕಾನೂನು ಎಲ್ಲರಿಗೂ ಸಮಾನವಾದದ್ದು ಮತ್ತು ಎಲ್ಲರ ಹಕ್ಕುಗಳ ರಕ್ಷಣೆ ಮಾಡುತ್ತದೆ. ಹಾಗಾಗಿ ಕಾನೂನಿನ ಸಾಮಾನ್ಯ ತಿಳಿವಳಿಕೆ ಎಷ್ಟು ಅವಶ್ಯಕತೆ ಎಂಬುದನ್ನು ಅನೇಕ ಉದಾಹರಣೆ ಮತ್ತು ನಿದರ್ಶನಗಳ ಮೂಲಕ ವಿವರಿಸಿದರು. ಜೊತೆಗೆ ವಿದ್ಯಾರ್ಥಿಗಳು ಬೆಳೆಸಿಕೊಳ್ಳಲೇಬೇಕಾದ ಮಹತ್ವದ ಅಂಶಗಳಾದ ಹಿರಿಯರಿಗೆ, ತಂದೆ-ತಾಯಿಗಳಿಗೆ, ಗುರುಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ ಗೌರವಿಸುತ್ತಾ ಸಮಾಜಕ್ಕೆ ಬೆಳಕಾಗುವ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕೆಂದು ಆಶಿಸಿದರು.


ಉಪನ್ಯಾಸದ ನಂತರ ಮಾನವ ಹಕ್ಕುಗಳು ಮತ್ತು ಕಾನೂನಾತ್ಮಕ ಅರಿವಿನ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರಶ್ನೆಗಳನ್ನು ಕೇಳಿ ಸಲಹೆಗಳನ್ನು ಪಡೆದುಕೊಳ್ಳುವ ಮೂಲಕ ಸಂವಾದವನ್ನು ಯಶಸ್ವಿಗೊಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಸಹ ಸಂಯೋಜಕರಾದ ಡಾ.ಸೀತಾರಾಮ ಪಿ ಅವರು ಮಾತನಾಡುತ್ತಾ ಮಾನವ ಹಕ್ಕುಗಳ ಅರಿವು ಮತ್ತು ರಕ್ಷಣೆಯು ಪ್ರಸ್ತುತ ಕಾಲದ ಅತಿ ಅವಶ್ಯಕವಾದ ವಿಷಯವಾಗಿದೆ. ಮಹಾಯುದ್ಧಗಳ ಮತ್ತು ಅನೇಕ ರೀತಿಯ ಮಾನವ ಹಕ್ಕುಗಳ ದಮನಕಾರಿ ಸಂದರ್ಭಗಳ ಪರಿಣಾಮದಿಂದ ಮಾನವ ಹಕ್ಕುಗಳ ರಕ್ಷಣೆಗೆ ಮಹತ್ವದ ಕಾನೂನುಗಳು ರಚನೆಯಾಗಿದ್ದು ಇವುಗಳ ಅರಿವನ್ನು ವಿದ್ಯಾರ್ಥಿ ದೆಸೆಯಿಂದಲೇ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದರು.

ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿಯಾಗಿರುವ ಡಾ.ನೂರಂದಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳ ಪರಿಚಯದೊಂದಿಗೆ ಸ್ವಾಗತಿಸಿದರು. ರಾಜ್ಯಶಾಸ್ತ್ರದ ಉಪನ್ಯಾಸಕಿಯಾದ ಡೀನಾ ಪಿ.ಪಿ. ವಂದಿಸಿದರು. ಲಲಿತ ಕಲಾ ಸಂಘದ ಸಂಚಾಲಕಿ ದಿವ್ಯಶ್ರೀ ಜಿ., ಕಾರ್ಯಕ್ರಮ ನಿರ್ವಹಿಸಿದರು. ಯುವ ರೆಡ್ ಕ್ರಾಸ್ ವಿದ್ಯಾರ್ಥಿ ಸ್ವಯಂಸೇವಕರಾದ ಭಾರತಿ, ಧನ್ಯಶ್ರೀ ತಂಡದವರು ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಯುವ ರೆಡ್ ಕ್ರಾಸ್ ಘಟಕದ ಕಾರ್ಯದರ್ಶಿ ಮತ್ತು ವಿದ್ಯಾರ್ಥಿ ಸಂಘದ ನಾಯಕರಾದ ಗುರುಪ್ರಸಾದ್, ಯುವ ರೆಡ್ ಕ್ರಾಸ್ ಘಟಕದ ವಿದ್ಯಾರ್ಥಿ ಸ್ವಯಂಸೇವಕರು, ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಗ್ರಂಥಪಾಲಕರಾದ ಶೋಭಾ ಮತ್ತು ಎಲ್ಲಾ ವಿಭಾಗಗಳ ಉಪನ್ಯಾಸಕ ವೃಂದದವರು, ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here