ರಾಮಕುಂಜ: ನೂತನವಾಗಿ ಆರಂಭಗೊಂಡ ಮೊಗೇರ ಸೇವಾ ಸಂಘ ಆಲಂಕಾರು ಇದರ ಉದ್ಘಾಟನಾ ಕಾರ್ಯಕ್ರಮ ಡಿ.೧೮ರಂದು ರಾಮಕುಂಜ ಗ್ರಾಮದ ಕುಂಡಾಜೆ ಕಿ.ಪ್ರಾ.ಶಾಲೆಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಆನಂದ ದೋಣಿಗಂಡಿರವರು ಮಾತನಾಡಿ, ಸಂಘವು ೨೪ ಅಂಶಗಳ ಬೈಲಾ ಹೊಂದಿದೆ. ಆ ಬೈಲಾ ಪ್ರಕಾರವೇ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಒದಗಿಸಿಕೊಡುವ ಉದ್ದೇಶವನ್ನು ಈ ಸಂಫವು ಮಾಡುತ್ತದೆ. ಮುಗೇರ ಸೇವಾ ಸಂಘ ಆಲಂಕಾರು ಎಂಬ ನೂತನ ಸಂಘವು ಪುತ್ತೂರು, ಕಡಬ ಹಾಗೂ ಸುಳ್ಯ ತಾಲೂಕು ವ್ಯಾಪ್ತಿಯ ಮುಗೇರ ಸಮುದಾಯದ ಪ್ರಮುಖರನ್ನು ಮತ್ತು ಜನರನ್ನು ಸಂಪರ್ಕಿಸಿ ಎಲ್ಲರ ಒಪ್ಪಿಗೆ ಬೆಂಬಲದೊಂದಿಗೆ ಮುಂದುವರೆಯುವುದು ಎಂದು ಹೇಳಿದರು. ನೂತನ ಸಂಘವನ್ನು ಉದ್ಘಾಟಿಸಿದ ಶ್ರೀ ಕ್ಷೇತ್ರ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಬಾಬು ಮರುವಂತಿಲ ಮಾತನಾಡಿ, ಈ ಮೊಗೇರ ಸೇವಾ ಸಂಘವು ಉರಿಯುವ ದೀಪದಂತೆ ತನ್ನ ಬೆಳಕನ್ನು ಎಲ್ಲೆಡೆ ಹರಡಲಿ ಎಂದು ಹೇಳಿ ಶುಭ ಹಾರೈಸಿದರು.
ಸಂಘಕ್ಕೆ ಜವಾಬ್ದಾರಿ ಹಸ್ತಾಂತರ ಮಾಡಿದ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ,ಬೆಳ್ಳಾರೆ ಕೆಪಿಎಸ್ ಸ್ಕೂಲ್‌ನ ಮುಖ್ಯಶಿಕ್ಷಕ ಮಾಯಿಲಪ್ಪ ಮಾಸ್ತರ್‌ರವರು ಮಾತನಾಡಿ, ನಮ್ಮ ಸಮುದಾಯದ ಬಂಧುಗಳ ಸೇವೆ ಮಾಡುವವರು ಈ ಕಾಲದಲ್ಲಿ ತುಂಬಾ ಕಡಿಮೆ. ನಮ್ಮ ಸಮುದಾಯದ ಜನರಲ್ಲಿ ಯಾವುದೇ ಮೋಸ ವಂಚನೆ ಇಲ್ಲ. ನಿಷ್ಠೆ ಸತ್ಯದಿಂದಲೇ ನಡೆಯುವವರು. ನಮ್ಮ ಸಮುದಾಯದ ಯುವಕ-ಯುವತಿಯರು ಉದ್ಯೋಗವಿಲ್ಲದೆ ಅಲೆದಾಡುತ್ತಿದ್ದಾರೆ. ಅಂತಹ ಯುವ ಜನರಿಗೆ ಈ ಮೊಗೇರ ಸೇವಾ ಸಂಘವು ಮಾಹಿತಿ ನೀಡಲು ಮತ್ತು ಸಹಾಯ ಮಾಡಲು ತಯಾರಾಗಿರಬೇಕು ಎಂದರು. ಮುಖ್ಯ ಅತಿಥಿಯಾಗಿದ್ದ ಕ್ಯಾನ್ಸರ್ ತಜ್ಞ ಡಾ. ಬಿ ರಘು ಬೆಳ್ಳಿಪ್ಪಾಡಿ ಮಾತನಾಡಿ, ಡಾ| ಬಿ.ಆರ್ ಅಂಬೇಡ್ಕರ್ ಹೇಳಿದ ಹಾಗೆ ಸಂಘಟನೆ ಇಲ್ಲದೆ ಯಾವ ಕೆಲಸವೂ ಆಗಲ್ಲ. ನಾವು ಹೋರಾಟ ಮಾಡಬೇಕಾದರೆ ಸಂಘಟನೆ ಬೇಕು. ಅದರ ಜೊತೆಗೆ ಶಿಕ್ಷಣವು ಅತ್ಯಗತ್ಯ ಎಂದರು.
ಕುಂಡಾಜೆ ಶಾಲೆ ಎಸ್‌ಡಿಎಂಸಿ ಅಧ್ಯಕ್ಷೆ ಜಯಶ್ರೀ ಗಾಣಂತಿ, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಕುಂಡಾಜೆ ಒಕ್ಕೂಟದ ಕಾರ್ಯದರ್ಶಿ ಅಣ್ಣುಕುಮಾರ್, ಒಡಿಯೂರು ಶ್ರೀ ಗ್ರಾ.ವಿ.ಯೋ.ಘಟ ಸಮಿತಿ ಕುಂಡಾಜೆ ಇದರ ಸಂಘಟನಾ ಕಾರ್ಯದರ್ಶಿ ಗುರುವಪ್ಪ ಕೆ., ತಾ.ಪಂ.ಮಾಜಿ ಸದಸ್ಯೆ ಲಲಿತಾ ಈಶ್ವರ್ ಶುಭಹಾರೈಸಿದರು. ಹಿರಿಯ ದೈವ ಪರಿಚಾರಕ ನಕ್ಕುರ ಮೊಗೇರ ಪುರುಷಬೆಟ್ಟು ಅವರನ್ನು ಸನ್ಮಾನಿಸಲಾಯಿತು. ತಾಲೂಕಿನ ವಿವಿಧ ಗ್ರಾಮಗಳ ಸಮುದಾಯದ ಭಾಂದವರು, ಸಂಘದ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.
ಮಹೇಶ್ ಕೊಲ್ಲಿಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ನಿಯೋಜಿತ ಅಧ್ಯಕ್ಷ ಕೇಶವ ಕುಪ್ಲಾಜೆ ಅವರು ಅತಿಥಿಗಳಿಗೆ ತಾಂಬೂಲ ನೀಡಿ, ಶಾಲು ಹಾಕಿ ಸ್ವಾಗತಿಸಿದರು. ಕೋಶಾಧಿಕಾರಿ ಚಿದಾನಂದ ಖಂಡಿಗ ವಂದಿಸಿದರು. ದಿನೇಶ್ ಗಾಣಂತಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಜಯಶ್ರೀ ವರದಿ ಮಂಡಿಸಿದರು. ಪುಟಾಣಿಗಳಾದ ಶಾನ್ವಿ, ಮನ್ವಿತ, ಮೋಕ್ಷ ಪ್ರಾರ್ಥಿಸಿದರು.