ಪುತ್ತೂರು: ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಸುಮಾರು 200 ವರ್ಷಗಳ ಬಳಿಕ ಜಾತ್ರೋತ್ಸವ ನಡೆಯಲಿದೆ. ಶ್ರೀ ದೇವರ ಜಾತ್ರೋತ್ಸವ ಹಾಗೂ ದೈವಗಳ ನೇಮೋತ್ಸವವು ಡಿ.26ರಿಂದ ಡಿ.28ರ ವರೆಗೆ ಕ್ಷೇತ್ರದ ತಂತ್ರಿಗಳಾದ ಕೆಮ್ಮಿಂಜೆ ವೇದಮೂರ್ತಿ ಬ್ರಹ್ಮರ್ಷಿ ಸುಬ್ರಹ್ಮಣ್ಯ ಬಳ್ಳಕ್ಕುರಾಯರ ನೇತೃತ್ವದಲ್ಲಿ ನಡೆಯಲಿದ್ದು ಆ ಪ್ರಯುಕ್ತ ಗೊನೆ ಮುಹೂರ್ತವು ಡಿ.20ರಂದು ನಡೆಯಿತು.
ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀರಾಮ ಕಲ್ಲೂರಾಯರವರು ಗೊನೆ ಮುಹೂರ್ತ ನೆರವೇರಿಸಿದರು. ಈ ಸಂದರ್ಭದಲ್ಲಿ ಅರ್ಚಕರಾದ ಶ್ರೀನಿವಾಸ ಉಡುಪ, ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಸಾದ್ ರೈ ಸೊರಕೆ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಚಂದ್ರಶೇಖರ್ ಎನ್.ಎಸ್.ಡಿ ಸರ್ವೆದೋಳಗುತ್ತು, ಪ್ರವೀಣಾ ಯಶೋಧರ ರೈ, ಜಯಂತಿ ನೆಕ್ಕಿತ್ತಡ್ಕ, ಜಾತ್ರೋತ್ಸವ ಸಮಿತಿಯ ಆನಂದ ಪೂಜಾರಿ ಸರ್ವೆದೋಳಗುತ್ತು, ಆನಂದ ಭಂಡಾರಿ ಸೊರಕೆ, ವಿನಯ ಕುಮಾರ್ ಸರ್ವೆ, ವಸಂತ ರೈ ಸೊರಕೆ, ಅಶೋಕ್ ನಾಯ್ಕ ಸೊರಕೆ ಹಾಗೂ ರಸಿಕಾ ರೈ ಮೇಗಿನಗುತ್ತು, ಅಂಜಲಿ ಭಂಡಾರಿ, ವಿನಯಾ ಶೆಟ್ಟಿ, ವಿಠಲ ಶೆಟ್ಟಿ, ತಿಮ್ಮಣ್ಣ ರೈ ಬೊಟ್ಯಾಡಿಗುತ್ತು, ದೇವಪ್ಪ ಕಾಡಬಾಗಿಲು, ಗುರುವ, ಕೇಶವ ಶಾಂತಿಗುರಿ, ಸೇಸಪ್ಪ ನಾಯ್ಕ, ವೆಂಕಪ್ಪ ನಾಯ್ಕ, ಪದ್ಮಯ್ಯ ನಾಯ್ಕ ಸರ್ವೆ, ಹರೀಶ್ ನಾಯ್ಕ ಕರ್ಮಿನಡ್ಕ ಮತ್ತಿತರರು ಉಪಸ್ಥಿತರಿದ್ದರು.
ಭಜನೆಯೊಂದಿಗೆ ಮನೆ-ಮನೆಗೆ ಜಾತ್ರೆಯ ಆಮಂತ್ರಣ:
ಜಾತ್ರೋತ್ಸವದ ಆಮಂತ್ರಣವನ್ನು ವಿಶಿಷ್ಟವಾಗಿ ಮತ್ತು ಅರ್ಥಪೂರ್ಣವಾಗಿ ಭಕ್ತರಿಗೆ ನೀಡಲಾಗಿದ್ದು 43 ದಿನಗಳಲ್ಲಿ ಸರ್ವೆ ವ್ಯಾಪ್ತಿಯ ಸುಮಾರು 800 ಕ್ಕೂ ಅಧಿಕ ಮನೆಗಳಿಗೆ ಭಜನೆ ಮೂಲಕ ತೆರಳಿ ಆಮಂತ್ರಣ ವಿತರಿಸಲಾಯಿತು. ಮಹಿಳೆಯರು, ಮಕ್ಕಳು ಸೇರಿದಂತೆ ಪ್ರತಿದಿನ 50 ಕ್ಕೂ ಮಿಕ್ಕಿದ ಜನರು ಮನೆ ಮನೆಗೆ ತೆರಳುವ ಭಜನಾ ತಂಡದಲ್ಲಿದ್ದರು.
ಕಾರ್ಯಕ್ರಮಗಳ ವಿವರ:
ಡಿ.23ರಂದು ಶ್ರೀ ದುರ್ಗಾ ಪರಮೇಶ್ವರಿ ದಶಾವತಾರ ಯಕ್ಷಗಾನ ಕಲಾ ಮಂಡಳಿ ಕಟೀಲು ಇವರಿಂದ ಯಕ್ಷಗಾನ ಬಯಲಾಟ `ಶ್ರೀ ದೇವಿ ಮಹಾತ್ಮೆ’ ನಡೆಯಲಿದ್ದು ಡಿ.25ರಂದು ಹೊರೆಕಾಣಿಕೆ ನಡೆಯಲಿದೆ. ಡಿ.26ರಂದು ಬೆಳಿಗ್ಗೆ ಗಂಟೆ 8-30ರಿಂದ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಗಣಪತಿ ಹೋಮ, ಕಲಶಪೂಜೆ, ಕಲಶಾಭಿಷೇಕ ನಡೆಯಲಿದೆ. ಮದ್ಯಾಹ್ನ ಗಂಟೆ 12-೦೦ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 7-೦೦ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ರಾತ್ರಿ ಗಂಟೆ ೮-೦೦ರಿಂದ ಶ್ರೀ ದೇವರ ಬಲಿ ಹೊರಟು ಉತ್ಸವ, ಕಟ್ಟೆಪೂಜೆ, ಅನ್ನಸಂತರ್ಪಣೆ ನಡೆಯಲಿದೆ.
ಡಿ.27 ರಂದು ಬೆಳಿಗ್ಗೆ ಗಂಟೆ 9 -೦೦ರಿಂದ ಶ್ರೀ ದೇವರ ಬಲಿ ಹೊರಟು ಉತ್ಸವ, ಕಟ್ಟೆಪೂಜೆ, ದರ್ಶನ ಬಲಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಸಂಜೆ ಗಂಟೆ 6-೦೦ರಿಂದ ದೈವಗಳ ಭಂಡಾರ ತೆಗೆಯುವುದು, ಸಂಜೆ ಗಂಟೆ 7-೦೦ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ರಾತ್ರಿ ಗಂಟೆ 7-30 ಕ್ಕೆ ರಂಗಪೂಜೆ, ಮಂತ್ರಾಕ್ಷತೆ, ರಾತ್ರಿ ಗಂಟೆ ೮-೩೦ಕ್ಕೆ ನೇಮೋತ್ಸವ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.
ಡಿ.28 ರಂದು ಬೆಳಿಗ್ಗೆ ಸಂಪ್ರೋಕ್ಷಣೆ, ಕಲಶಾಭಿಷೇಕ ನಡೆಯಲಿದ್ದು ಮದ್ಯಾಹ್ನ ಗಂಟೆ 12-೦೦ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಕಿರುಷಷ್ಠಿ, ಸಂಜೆ ಸತೀಶ್ ಶೆಟ್ಟಿ ಪಟ್ಲ ನೇತೃತ್ವದಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗಾವೃಜ ಕ್ಷೇತ್ರ ಪಾವಂಜೆ ಇವರಿಂದ ಶ್ರೀದೇವಿ ಮಹಾತ್ಮೆ ನಡೆಯಲಿದೆ.
ಭಕ್ತಾದಿಗಳಲ್ಲಿ ಸಂಭ್ರಮ:
ವಿಶೇಷ ಕಾರಣಿಕತೆಯನ್ನು ಹೊಂದಿರುವ ಸಂತಾನ ಫಲಪ್ರದಾಯಕ ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವರಿಗೆ 2021 ಡಿ.26ರಂದು ಪುನಃಪ್ರತಿಷ್ಠೆಗೊಂಡು ಬ್ರಹ್ಮಕಲಶೋತ್ಸವ ನಡೆದಿದೆ. ಆ ಬಳಿಕ ಶ್ರೀ ದೇವರಿಗೆ ಮೊದಲ ಜಾತ್ರೋತ್ಸವದ ಸಂಭ್ರಮ ಇದಾಗಿದೆ. ಈ ಹಿನ್ನೆಲೆಯಲ್ಲಿ ಇಡೀ ಗ್ರಾಮವೇ ಸಜ್ಜುಗೊಂಡಿದ್ದು ಭಕ್ತಾದಿಗಳಲ್ಲಿ ಸಂಭ್ರಮ ಮನೆಮಾಡಿದೆ.
ಸಂತಾನ ಫಲದಾಯಕ ಶ್ರೀ ಸುಬ್ರಹ್ಮಣ್ಯೇಶ್ವರ ದೇವರು:
ಸರ್ವೆಯಲ್ಲಿ ನೆಲೆನಿಂತು ಸರ್ವರನ್ನು ಸಲಹುತ್ತಿರುವ ಸರ್ವೇಶ್ವರನ ಕಾರಣಿಕತೆಗೆ ಮತ್ತೊಂದು ಜೀವಂತ ಸಾಕ್ಷಿಯೇ ಸಂತಾನ ಪ್ರಾಪ್ತಿ. ಇದು ಈ ಕ್ಷೇತ್ರದ ಪವಾಡಗಳಲ್ಲಿ ಒಂದಾಗಿದೆ. ಮಕ್ಕಳೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಮಕ್ಕಳೆಂದರೆ ದೇವರ ಇನ್ನೊಂದು ರೂಪ. ಮಕ್ಕಳಾಗದವರಿಗೆ ಇಲ್ಲಿಯ ಶ್ರೀ ಸುಬ್ರಹ್ಮಣ್ಯೇಶ್ವರ ದೇವರು ವರಪ್ರಸಾದರಾಗಿದ್ದಾರೆ. ಇಲ್ಲಿನ ದೇವರು `ಲಿಂಗ’ ರೂಪಿಯಾಗಿದ್ದಾನೆ. ಮಕ್ಕಳಾಗದ ದಂಪತಿಗಳು ಇಲ್ಲಿ ಬಂದು ಪ್ರಾರ್ಥಿಸಿಕೊಂಡರೆ ಅರ್ಥಾತ್ ಹರಕೆ ಹೇಳಿಕೊಂಡರೆ ಅವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ. ಅದೆಷ್ಟೋ ದಂಪತಿಗಳು ಇಲ್ಲಿ ಬಂದು ಹರಕೆ ಹೇಳಿಕೊಂಡ ಬಳಿಕ ಮಕ್ಕಳನ್ನು ಪಡೆದಿದ್ದಾರೆ. ಇದಕ್ಕೆ ನೂರಾರು ಜೀವಂತ ಸಾಕ್ಷಿಗಳು ಈ ಪ್ರದೇಶದಲ್ಲಿದೆ. ಇದಲ್ಲದೆ ಕೊಳವೆ ಬಾವಿ, ಕೆರೆ ಬಾವಿಗಳಲ್ಲಿ ನೀರಿಗಾಗಿ ಇಲ್ಲಿಯ ಸುಬ್ರಹ್ಮಣ್ಯ ದೇವರು ಜಲರೂಪಿಯಾಗಿದ್ದಾನೆ. ಈ ದೇವಾಲಯದ ಹತ್ತಿರದಲ್ಲೇ ಎರಡು ನಾಗನ ಬನಗಳನ್ನು ಕಾಣಬಹುದಾಗಿದೆ. ಸವಣೂರು, ನರಿಮೊಗರು, ಪುಣ್ಚಪ್ಪಾಡಿ, ಸರ್ವೆ, ಮುಂಡೂರು ಇತ್ಯಾದಿ ಗ್ರಾಮ ವ್ಯಾಪ್ತಿಯ ಸಾವಿರಕ್ಕೂ ಮಿಕ್ಕಿದ ಮನೆ ಮನಸ್ಸುಗಳಿಂದ ಕೂಡಿ ಈ ದೇವಾಲಯವು ಗ್ರಾಮ ದೇವಾಲಯವಾಗಿದೆ.