ಪುತ್ತೂರು: 34 ನೇ ನೆಕ್ಕಿಲಾಡಿ ಗ್ರಾಮದ ಶಾಂತಿನಗರದಲ್ಲಿರುವ ಶ್ರೀ ಮಹಾವಿಷ್ಣು ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಅಂಗವಾಗಿ ದ.21 ರಂದು ರಾತ್ರಿ ‘ರಾಮ ಜಾನಕಿ’ ವೇದಿಕೆಯಲ್ಲಿ ಧಾರ್ಮಿಕ ಸಭೆ ನಡೆಯಿತು.
ದೇವಳದ ಹಿರಿಯ ಮೊಕ್ತೇಸರ ಪುರುಷೋತ್ತಮ ಪ್ರಭು ಹನಂಗೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಹೊಸದಿಗಂತ ಪತ್ರಿಕೆಯ ಸ್ಥಾನೀಯ ಸಂಪಾದಕ ಪ್ರಕಾಶ್ ಇಳಂತಿಲ ಧಾರ್ಮಿಕ ಉಪನ್ಯಾಸ ನೀಡಿದರು.
ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಉದ್ಯಮಿ ಧನ್ಯಕುಮಾರ್ ರೈ ಬಿಳಿಯೂರುಗುತ್ತು ಮತ್ತು ಕಳೆದ ಬ್ರಹ್ಮಕಲಶೋತ್ಸವದ ಪ್ರಧಾನ ಕಾರ್ಯದರ್ಶಿಯಾಗಿದ್ದ ಪುತ್ತೂರು ತಾ.ಪಂ.ಮಾಜಿ ಅಧ್ಯಕ್ಷ ಕೆ.ಜಯಾನಂದ ಕೋಡಿಂಬಾಡಿ ಅವರು ಶುಭ ಹಾರೈಸಿದರು. ವೇದಿಕೆಯಲ್ಲಿ ಅನ್ನದಾನ ಸಮಿತಿಯ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದ್ದ ವಾರಿಸೇನ ಜೈನ್ ಕೋಡಿಯಾಡಿ, ದಾನಿ ಸುದೇಶ್ ಶೆಟ್ಟಿ ಶಾಂತಿನಗರ, ಮೊಕ್ತೇಸರರಾದ ಗಣಪತಿ ಭಟ್ ಪರನೀರು, ರಾಜೇಶ್ ಶಾಂತಿನಗರ, ಬೈಲುವಾರು ಪ್ರಮುಖರಾದ ಚಂದ್ರಶೇಖರ ಗೌಡ ಪಣಿತೋಟ, ಮೋನಪ್ಪ ಗೌಡ ಪಮ್ಮನಮಜಲು ಮತ್ತು ಸತೀಶ್ ಕೋಟೆ ಆದರ್ಶನಗರ ಉಪಸ್ಥಿತರಿದ್ದರು.
ಕೋರ್ ಕಮಿಟಿಯ ಗೋಪಾಲಕೃಷ್ಣ ಭಟ್ ಅತಿಥಿಗಳಿಗೆ ವೀಳ್ಯ ನೀಡಿ ಸ್ವಾಗತಿಸಿದರು. ಕು. ತೇಜಸ್ವಿನಿ ಕುಕ್ಕಿಲ ಪ್ರಾರ್ಥಿಸಿದರು. ಆಡಳಿತ ಮೊಕ್ತೇಸರ ಯು.ಜಿ.ರಾಧ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೀತಮ್ ಶೆಟ್ಟಿ ಬಿ.ಕೆ. ವಂದಿಸಿದರು. ಸಂತೋಷ್ ಕುಮಾರ್ ಶಾಂತಿನಗರ, ಶೇಖರ ಪೂಜಾರಿ ಜೇಡರಪಾಲು ಮತ್ತು ಸೇಸಪ್ಪ ಎಸ್. ಕಾರ್ಯಕ್ರಮ ನಿರೂಪಿಸಿದರು.
ಸಭೆಯ ಬಳಿಕ ಅನ್ನಪ್ರಸಾದ ವಿತರಣೆ ನಡೆಯಿತು. ನಂತರ ಗಯಾಪದ ಕಲಾವಿದೆರ್ ಉಬಾರ್ ಇವರಿಂದ ರವಿಶಂಕರ್ ಶಾಸ್ತ್ರಿ ಮಣಿಲ ರಚಿಸಿ ನಿರ್ದೇಶಿಸಿರುವ ತುಳು ಹಾಸ್ಯ ನಾಟಕ ‘ನಮ ತೆರಿಯೊನುಗ….ಇನಿ ಅತ್ತ್ಂಡ ನನ ಏಪ’ ಜರಗಿತು. ಬೆಳಿಗ್ಗೆಯಿಂದ ರಾತ್ರಿಯವರೆಗೆ ಮಹಾವಿಷ್ಣು ಯಾಗ ಸಹಿತ ವಿವಿಧ ವೈದಿಕ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆದಿದ್ದು ಇದರೊಂದಿಗೆ ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ ಜರಗಿತು. ಸಂಜೆ ಹಿ.ಪ್ರಾ.ಶಾಲೆ ನೆಕ್ಕಿಲಾಡಿ ಮತ್ತು ಹಿ.ಪ್ರಾ. ಶಾಲೆ ಶಾಂತಿನಗರ ಹಾಗೂ ಶಾಂತಿನಗರ ಅಂಗನವಾಡಿ ಕೇಂದ್ರದ ಪುಟಾಣಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಭಾರತಮಾತೆಗೆ ಪುಷ್ಪಾರ್ಪಣೆ
ವೇದಿಕೆಯ ಮುಂಭಾಗದಲ್ಲಿ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾಪಣೆ ಮಾಡುವ ಮೂಲಕ ಧಾರ್ಮಿಕ ಸಭೆಗೆ ಚಾಲನೆ ನೀಡಲಾಯಿತು.
ಇಂದು ದೇವಳದಲ್ಲಿ
ದ.22ರಂದು ವೈದಿಕ ಕಾರ್ಯಕ್ರಮಗಳೊಂದಿಗೆ ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ, ಸಂಜೆ ಶಾಂತಾ ಕುಂಟಿನಿ ಸಾರಥ್ಯದ ಸತ್ಯಶಾಂತಾ ಪ್ರತಿಷ್ಠಾನ ಉಪ್ಪಿನಂಗಡಿ ಇವರು ಅರ್ಪಿಸುವ, ದ.ಕ.ಜಿಲ್ಲೆಯ ಹೆಸರಾಂತ ಕಲಾವಿದರಿಂದ ‘ಗಾನ-ನೃತ್ಯ-ವೈಭವ’ ನಡೆಯಲಿದೆ. ಬಳಿಕ ಆಡಳಿತ ಮೊಕ್ತೇಸರ ಯು.ಜಿ.ರಾಧ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ನಂತರ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ‘ಗೀತ ಸಾಹಿತ್ಯ ಸಂಭ್ರಮ’ ನಡೆಯಲಿದೆ.