ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಶಿಲಾನ್ಯಾಸ

0

ಗುಣಮಟ್ಟ, ಸಮಯದಲ್ಲಿ ಕೋಂಪ್ರಮೈಸ್ ಇಲ್ಲ – ಸಂಜೀವ ಮಠಂದೂರು
ಸಮಸ್ಯೆ ಬರುವ ಮುಂದೆಯೇ ಘಟಕ ಸ್ಥಾಪನೆ ಉತ್ತಮ – ಗಿರೀಶ್‌ನಂದನ್
ತ್ಯಾಜ್ಯ ವಿಲೇವಾರಿಗಿಂತ ಸಂಪನ್ಮೂಲವಾಗಿ ಪರಿವರ್ತನೆ – ಕೇಶವಪ್ರಸಾದ್ ಮುಳಿಯ

ಪುತ್ತೂರು: ಶುಚಿತ್ವ ಮತ್ತು ನೈರ್ಮಲ್ಯ ಕಾಪಾಡಲು ಅವಶ್ಯಕತೆ ಇರುವ ನಿಟ್ಟಿನಲ್ಲಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರೂ. 26 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಘನತ್ಯಾಜ್ಯ ನಿರ್ವಹಣಾ ಘಟಕ್ಕೆ ಶಾಸಕ ಸಂಜೀವ ಮಠಂದೂರು ಅವರು ಶಿಲಾನ್ಯಾಸ ನೆರವೇರಿಸಿದರು. ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ವೈದಿಕ ಕಾರ್ಯಕ್ರಮ ನೆರವೇರಿಸಿದರು.


ಗುಣಮಟ್ಟ, ಸಮಯದಲ್ಲಿ ಕೋಂಪ್ರಮೈಸ್ ಇಲ್ಲ:
ಶಿಲಾನ್ಯಾಸ ನೆರವೇರಿಸಿದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ನಮ್ಮ ದೇಶವು ಹಿಂದೆ ಶೇ.80 ಕ್ಕಿಂತ ಹೆಚ್ಚು ಹಳ್ಳಿಯ ರಾಷ್ಟ್ರವಾಗಿತ್ತು. ಇವತ್ತು ಶೇ.60 ಕ್ಕೆ ಇಳಿದಿದೆ. ಶೇ.40 ನಗರವಾಗಿ ಪರಿವರ್ತನೆ ಆಗಿದೆ. ಹೀಗೆ ಆಗುವಾಗ ಅಷ್ಟೇ ಸಮಸ್ಯೆ ಉಲ್ಬಣವಾಗುತ್ತದೆ. ಆ ಸಂದರ್ಭ ತ್ಯಾಜ್ಯ ನಿರ್ವಾಹಣೆ ಪ್ರಮುಖವಾಗುತ್ತದೆ. ಉದ್ಯಾನ ನಗರಿ ಬೆಂಗಳೂರಿನಲ್ಲಿ 70 ಸಾವಿರ ನೌಕರರು ನಾಗರಿಕರ ತ್ಯಾಜ್ಯ ವಿಲೇವಾರಿ ಮಾಡುತ್ತಾರೆ.

ಒಂದು ವೇಳೆ ಅವರೆಲ್ಲ ಮುಷ್ಕರ ಹೂಡಿದರೆ ಬೆಂಗಳೂರು ಉದ್ಯಾನ ನಗರಿಯಿಂದ ಗಾರ್ಬೇಜ್ ನಗರಿಯಾಗಿ ಪರಿವರ್ತನೆ ಆಗುತ್ತದೆ. ಇಂತಹ ಸಂದರ್ಭದಲ್ಲಿ ತ್ಯಾಜ್ಯ ವಿಲೇವಾರಿಗೆ ಪ್ರಾಮುಖ್ಯತೆ ನೀಡಿ ದೇಶದ ಪ್ರಧಾನಿಯವರೇ ಸ್ವಚ್ಚಭಾರತ್ ಶ್ರೇಷ್ಠ ಭಾರತ್ ಎಂದು ಸ್ವಚ್ಛ ಭಾರತ ಮಿಷನರಿ ಘೋಷಣೆ ಮಾಡಿದ್ದರು. ಅವರ ಮುತುವರ್ಜಿಯಂತೆ ನಾವು ಕೂಡಾ ನಗರ ಪ್ರದೇಶದಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಿದ್ದೇವೆ.

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲೇ ರೂ. 2 ಕೋಟಿ ವೆಚ್ಚದ ಎಂ.ಆರ್.ಎಫ್ ಘಟಕ ಕೆದಂಬಾಡಿಯಲ್ಲಿ ಶಿಲಾನ್ಯಾಸ ಆಗಿದೆ. ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಬನ್ನೂರಿನಲ್ಲಿ ಕಸದಿಂದ ಗ್ಯಾಸ್ ಉತ್ಪಾದನೆ ಮಾಡುವ ದೊಡ್ಡ ಯೋಜನೆ ಕಾರ್ಯಗತವಾಗುತ್ತಿದೆ. ಅದೇ ರೀತಿ ದೇವಸ್ಥಾನದಲ್ಲೂ ತಮ್ಮ ಕಸವನ್ನು ತಾವೇ ವಿಲೇವಾರಿ ಮಡುವ ಮತ್ತು ಗೊಬ್ಬರವನ್ನಾಗಿ ಪರಿವರ್ತನೆ ಮಾಡುವ ಕಾರ್ಯ ನಡೆಸುತ್ತಿರುವುದು ಉತ್ತಮ ಬೆಳವಣಿಗೆ ಎಂದ ಅವರು ರೂ. 26 ಲಕ್ಷದ ತ್ಯಾಜ್ಯ ಘಟಕ ಗುಣಮಟ್ಟ ಮತ್ತು ಸಮಯದಲ್ಲಿ ಉದ್ಘಾಟನೆ ಆಗಬೇಕು. ಇದರಲ್ಲಿ ಯಾವುದೇ ಕೋಂಪ್ರಮೈಸ್ ಇಲ್ಲ ಎಂದು ಶಾಸಕರು ಇಂಜಿನಿಯರ್‌ಗೆ ಸೂಚನೆ ನೀಡಿದರು.

ಸಮಸ್ಯೆ ಬರುವ ಮುಂದೆಯೇ ಘಟಕ ಸ್ಥಾಪನೆ ಉತ್ತಮ:
ಸಹಾಯಕ ಕಮೀಷನರ್ ಗಿರೀಶ್‌ನಂದನ್ ಅವರು ಮಾತನಾಡಿ ಕಸ, ತ್ಯಾಜ್ಯ ವಿಲೇವಾರಿ ಮುಂದಿ ದಿನ ದೊಡ್ಡ ಸಮಸ್ಯೆಯಾಗಲಿದೆ. ಅದನ್ನು ಗಮನಿಸಿ ಈಗಾಗಲೇ ಘಟಕ ಸ್ಥಾಪನೆ ಮಾಡುವುದು ಉತ್ತಮ ವಿಚಾರ. ಈಗಾಗಲೇ ಎಲ್ಲಾ ಪಂಚಾಯತ್‌ಗಳಲ್ಲೂ ತ್ಯಾಜ್ಯ ವಿಲೇವಾರಿ ಸ್ಥಳ ಗುರುತು ಮಾಡಲಾಗಿದ್ದು, ಅಲ್ಲಿ ಘಟಕವನ್ನೂ ಸ್ಥಾಪನೆ ಮಾಡಲಾಗುತ್ತದೆ. ದೇವಸ್ಥಾನದಲ್ಲೂ ಇಂತಹ ಘಟಕ ಸ್ಥಾಪನೆ ಮಾಡಿ ತ್ಯಾಜ್ಯದಿಂದ ಗೊಬ್ಬರ ಮಾಡುವುದು ಉತ್ತಮ ಬೆಳವಣಿಗೆ ಎಂದರು.

ತ್ಯಾಜ್ಯ ವಿಲೇವಾರಿಗಿಂತ ಸಂಪನ್ಮೂಲವಾಗಿ ಪರಿವರ್ತನೆ:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ದೇವಳದಲ್ಲಿ ದಿನವೊಂದಕ್ಕೆ ಹಸಿ ಮತ್ತು ಇತರ ತ್ಯಾಜ್ಯ ಸೇರಿ 300 ಕೆ.ಜಿಯಷ್ಟು ಉತ್ಪತಿಯಾಗುತ್ತದೆ. ಜೊತೆಗೆ ವಾರಕ್ಕೆ ಸುಮಾರು 5 ಸಾವಿರ ಎಳನೀರಿನ ಸಿಪ್ಪೆಗಳು ಬರುತ್ತವೆ.

ಇವೆಲ್ಲವನ್ನು ನಿರ್ವಹಿಸುವುದು ಅಷ್ಟು ಸುಲಭದ ವಿಚಾರವಲ್ಲ. ಇಂತಹ ಸಂದರ್ಭದಲ್ಲಿ ಎಲ್ಲಾ ಎಂಡೋಮೆಂಡ್ ದೇವಸ್ಥಾನದಲ್ಲಿ ಶೂನ್ಯ ತ್ಯಾಜ್ಯ ನಿರ್ವಹಣೆಗೆ ಆದೇಶ ಬಂದಂತೆ ನಮ್ಮಲ್ಲೂ ಧಾರ್ಮಿಕ ದತ್ತಿ ಇಲಾಖೆಯಯಿಂದ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಅನುಮತಿ ನೀಡಿತ್ತು. ಆರಂಭದಲ್ಲಿ 72  ಲಕ್ಷ ವೆಚ್ಚದ ಅಂದಾಜು ಪಟ್ಟಿ ಬಂದಿದ್ದು, ಅದನ್ನು ಎರಡು ಹಂತವಾಗಿ ಮಾಡುವ ಸಲುವಾಗಿ ಪ್ರಥಮ ಹಂತವಾಗಿ ರೂ. 26 ಲಕ್ಷದ ಅಂದಾಜುಪಟ್ಟಿಯಂತೆ ಘನತ್ಯಾಜ್ಯ ನಿರ್ವಾಹಣೆ ಘಟಕ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ.ತ್ಯಾಜ್ಯ ವಿಲೇವಾರಿ ಎಂದು ಹೇಳುವ ಬದಲು ಅದನ್ನು ಸಂಪನ್ಮೂಲವನ್ನಾಗಿ ಪರಿವರ್ತನೆ ಮಾಡುವುದು ನಮ್ಮ ಉದ್ದೇಶ. ತ್ಯಾಜ್ಯದಿಂದ ಉಂಟಾದ ಗೊಬ್ಬರವನ್ನು ಮಾರಾಟ ಮಾಡುವ ಉದ್ದೇಶವೂ ಇದೆ ಎಂದರು.

ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ ಶುಭ ಹಾರೈಸಿದರು. ದೇವಳದ ವಾಸ್ತು ಇಂಜಿನಿಯರ್ ನಗರಸಭೆ ಸ್ಥಳೀಯ ಸದಸ್ಯ ಪಿ.ಜಿ ಜಗನ್ನಿವಾಸ ರಾವ್, ಕೆ ಆರ್ ಐ ಡಿ ಎಲ್ ಸಹಾಯಕ ಇಂಜಿನಿಯರ್ ದಿನೇಶ್ ಮತ್ತು ಗುತ್ತಿಗೆದಾರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವ್ಯವಸ್ಥಾನಾ ಸಮಿತಿ ಸದಸ್ಯರಾದ ರಾಮಚಂದ್ರ ಕಾಮತ್, ಡಾ.ಸುಧಾ ಎಸ್ ರಾವ್, ರಾಮದಾಸ್ ಗೌಡ, ವೀಣಾ ಬಿ ಕೆ, ಐತ್ತಪ್ಪ ನಾಯ್ಕ್ ಅತಿಥಿಗಳನ್ನು ಗೌರವಿಸಿದರು. ಶೇಖರ್ ನಾರಾವಿ ಸ್ವಾಗತಿಸಿದರು. ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್ ವಂದಿಸಿದರು. ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here