ಉಪ್ಪಿನಂಗಡಿ: 15 ನೇ ಶತಮಾನದಲ್ಲಿ ಸೋದೆ ಮಠಾಧೀಶರಾದ ಶ್ರೀ ವಾದಿರಾಜರಿಂದ ಪ್ರತಿಷ್ಠಾಪಿಸಲ್ಪಟ್ಟ ಕಳೆಂಜ- ದೇಂತಡ್ಕದ ಶ್ರೀ ವಿಷ್ಣುಮೂರ್ತಿ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಭಾನುವಾರದಂದು ವಿದ್ಯುಕ್ತ ಚಾಲನೆ ದೊರಕಿದೆ.
ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಪೆರ್ನೆ ಹಾಗೂ ಬಿಳಿಯೂರು ಗ್ರಾಮದ ಅಷ್ಠ ದಿಕ್ಕುಗಳಿಂದಲೂ ಶ್ರೀ ದೇವಾಲಯಕ್ಕೆ ಹಸಿರು ಹೊರೆಕಾಣಿಕೆ ಸಾಗರೋಪದಿಯಲ್ಲಿ ಹರಿದುಬಂದಿದ್ದು, ಪೆರ್ನೆಯಲ್ಲಿ ಎಲ್ಲವನ್ನೂ ಕ್ರೂಢೀಕರಿಸಿ ಅವುಗಳನ್ನು ವೈಭವದ ಮೆರವಣಿಗೆಯ ಮೂಲಕ ತಂದು ಶ್ರೀ ದೇವಾಲಯಕ್ಕೆ ಸಮರ್ಪಿಸಲಾಯಿತು. ಕೆಮ್ಮಿಂಜೆ ಕಾರ್ತಿಕ್ ತಂತ್ರಿಯವರು ದೀಪ ಬೆಳಗಿಸಿದರು. ಶ್ರೀ ದೇವಾಲಯದ ಅಂಗಳಕ್ಕೆ ಹಾಕಲಾಗಿದ್ದ ಶಾಶ್ವತ ಚಪ್ಪರವನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಉಗ್ರಾಣ ಮುಹೂರ್ತ ನೆರವೇರಿಸಿದರು. ಉದ್ಯಮಿ ಕೃಷ್ಣರಾಜ್ ಭಟ್ ಪಾಕಶಾಲೆ ಉದ್ಘಾಟಿಸಿದರು. ಕೃಷ್ಣಮೂರ್ತಿ ಕಾರಂತ ಶಂಕ್ರಯ್ಯರ ಪಾಲು ಕಾರ್ಯಾಲಯ ಉದ್ಘಾಟಿಸಿದರು.
ಶ್ರೀ ದೇವಾಲಯದಲ್ಲಿ ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಭಜನಾ ಸೇವೆಗಳು ನಡೆದವು. ಮಧ್ಯಾಹ್ನ ಮಹಾಪೂಜೆಯಾಗಿ ಅನ್ನ ಸಂತರ್ಪಣೆ ನಡೆಯಿತು.
ಈ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಭರತ್ ಕುಮಾರ್ ಅರಿಗ ಪಟ್ಟೆಗುತ್ತು, ಕಳೆಂಜಗುತ್ತುವಿನ ಶ್ರೀಮತಿ ಪದ್ಮಾಸಿನಿ ಎನ್. ಜೈನ್, ಅಧ್ಯಕ್ಷರಾದ ಬಿ. ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಕಾರ್ಯದರ್ಶಿ ಉಮಾನಾಥ ಶೆಟ್ಟಿ ಸಂಪಿಗೆಕೋಡಿ, ಕೋಶಾಧಿಕಾರಿ ಅಶೋಕ ಕುಮಾರ್ ಮುಳಿಪಡ್ಪು, ಆಡಳಿತ ಸಮಿತಿಯ ಅಧ್ಯಕ್ಷರಾದ ರೋಹಿತಾಕ್ಷ ಬಾಣಬೆಟ್ಟು, ಕಾರ್ಯದರ್ಶಿ ಗೋಪಾಲ ಶೆಟ್ಟಿ ಎನ್., ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರಾದ ಅವಿನಾಶ್ ಜೈನ್ ಪರಂಗಾಜೆ, ಅಧ್ಯಕ್ಷರಾದ ಶಂಭು ಭಟ್ ಬಡೆಕೋಡಿ, ಕಾರ್ಯದರ್ಶಿ ರಮೇಶ್ ತೋಟ, ಕೋಶಾಧಿಕಾರಿ ಪದ್ಮನಾಭ ಸಾಮಾನಿ ಹಿರುಬೈಲು, ದೇವಾಲಯದ ಪವಿತ್ರಪಾಣಿ ಬಿ. ಕೃಷ್ಣರಾವ್ ಬಾಗ್ಲೋಡಿ, ಅರ್ಚಕರಾದ ಎಂ. ನಾರಾಯಣ ಭಟ್, ಹೊರೆಕಾಣಿಕೆ ಸಮಿತಿಯ ಸಂಚಾಲಕ ನವೀನ್ ಕುಮಾರ್ ಪದಬರಿ, ಮಾಧ್ಯಮ ಮತ್ತು ಪ್ರಚಾರ ಸಮಿತಿಯ ಸಂಚಾಲಕ ಮೋಹನ್ ಶೆಟ್ಟಿ, ಸಹ ಸಂಚಾಲಕ ಹರೀಶ್, ಸ್ವಾಗತ ಸಮಿತಿಯ ಸಂಚಾಲಕ ಕಿರಣ್ ಶೆಟ್ಟಿ ಮುಂಡೇವಿನಕೋಡಿ ಮತ್ತಿತರರು ಉಪಸ್ಥಿತರಿದ್ದರು.