ಮನೆಯಂಗಳದಲ್ಲಿ ಕೈಬಾಂಬ್ ಸಿಡಿಸಿ ಕೊಲೆಬೆದರಿಕೆ: ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ದೂರು

0

ಪುತ್ತೂರು: ಕುಟುಂಬ ಸಮೇತ ಕಾಣಿಯೂರಿನ ಮನೆಯಲ್ಲಿ ರಾತ್ರಿ ನಿದ್ರಿಸುತ್ತಿದ್ದ ಸಮಯ ಮನೆಯ ಅಂಗಳದಲ್ಲಿ ಕೆಲವರು ಕೈಬಾಂಬುಗಳನ್ನು ಸಿಡಿಸಿ ಅವಾಚ್ಯಶಬ್ದಗಳಿಂದ ನಿಂದಿಸಿ ಕೊಲೆಬೆದರಿಕೆ ಹಾಕಿರುವುದಾಗಿ ಆರೋಪಿಸಿ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಅವರು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಾನು ಮತ್ತು ನನ್ನ ಪತ್ನಿ ದ.೨೦ರಂದು ರಾತ್ರಿ ಮನೆಯಲ್ಲಿ ನಿದ್ರಿಸುತ್ತಿದ್ದ ಸಮಯ ರಾತ್ರಿ ೧೨ ಗಂಟೆಯ ನಂತರ ನಮ್ಮ ಮನೆಯ ಅಂಗಳದಲ್ಲಿ ಕೈ ಬಾಂಬುಗಳನ್ನು ಸಿಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕುತ್ತಾ ಸುಮಾರು ೧೫ರಿಂದ ೨೦ ಜನರ ತಂಡ ಬಂದು ಕಿಟಕಿಯ ಬಾಗಿಲು ಮತ್ತು ಮನೆಯ ಬಾಗಿಲುಗಳಿಗೆ ಬಡಿದ ಬಗ್ಗೆ ಪೊಲೀಸ್ ಕಂಟ್ರೋಲ್ ರೂಂಗೆ ಫೋನ್ ಮಾಡಿದಾಗ ತಾವುಗಳು ಮತ್ತು ರಾತ್ರಿ ಕರ್ತವ್ಯದ ಸುಳ್ಯ ಪೊಲೀಸರು ಧೈರ್ಯ ತುಂಬಿ ಹೋಗಿರುತ್ತೀರಿ.ಅದಲ್ಲದೆ ದ.೨೧ರಂದು ಪೂರ್ವಾಹ್ನದಿಂದ ಪುತ್ತೂರು ವಲಯ ಅರಣ್ಯ ಅಧಿಕಾರಿಯವರ ಕಚೇರಿಗೆ ನುಗ್ಗಿದ ಮುರಳೀಕೃಷ್ಣ ಹಸಂತಡ್ಕ ಎಂಬವರ ೫೦ರಿಂದ ಅಧಿಕ ಜನರ ತಂಡ ಕೊಲೆ ಬೆದರಿಕೆಯನ್ನು ಬಹಿರಂಗವಾಗಿ ಹಾಕಿರುತ್ತಾರೆ.ಅದಲ್ಲದೆ, ನನ್ನ ತಂಗಿಯ ಮನೆ ಕುದ್ಮಾರಿನಲ್ಲಿದ್ದು ಅಲ್ಲಿಗೆ ೧೦೦ಕ್ಕಿಂತ ಅಧಿಕ ಜನರ ತಂಡ ಬಂದು ದ.೨೧ರಂದು ೪ ಗಂಟೆ ಸಮಯಕ್ಕೆ ಕೊಲೆ ಬೆದರಿಕೆ ಹಾಕಿದ ಬಗ್ಗೆ ಬೆಳ್ಳಾರೆ ಠಾಣೆಯ ಪೊಲೀಸ್ ಕೃಷ್ಣಪ್ಪರವರಿಗೆ ದೂರವಾಣಿ ಮೂಲಕ ತಿಳಿಸಿದ್ದು ಗೃಹಸಚಿವರಿಗೆ ಬರೆದ ಪತ್ರದ ನಕಲನ್ನು ವಾಟ್ಸಾಪ್ ಮೂಲಕ ಕಳುಹಿಸಿಕೊಟ್ಟಿರುತ್ತೇನೆ.ಆದರೆ, ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿದ ಜನರ ಬಗ್ಗೆ ಬೆಳ್ಳಾರೆ ಪೊಲೀಸ್ ಇಲಾಖೆಯ ಎಲ್ಲಾ ಪೊಲೀಸರಿಗೂ ಗೊತ್ತಿದ್ದರೂ, ನಾನು ಹಾಗೂ ನನ್ನ ಪತ್ನಿಗೆ ಬಹಿರಂಗ ಬೆದರಿಕೆ ಹಾಕಿದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದರೂ ತಾವು ಯಾವುದೇ ರೀತಿಯ ಕ್ರಮಕೈಗೊಳ್ಳದಿರುವುದು ತುಂಬಾ ದು:ಖದ ವಿಚಾರವಾಗಿದೆ.ತಾವುಗಳು ಗೂಂಡಾಗಳಿಗೆ ಸಹಕಾರ ನೀಡುತ್ತಿರುವ ಬಗ್ಗೆ ನಮಗೆ ಅನುಮಾನ ಇದೆ.ಆದುದರಿಂದ ತಾವುಗಳು ಕೂಡಲೇ, ನಮಗೆ ಕೊಲೆ ಬೆದರಿಕೆ ಹಾಕಿದ ಗೂಂಡಾಗಳನ್ನು ಬಂಧಿಸಿ ನಮಗೆ ಸೂಕ್ತ ಭದ್ರತೆ ಕೊಡಬೇಕಾಗಿ ಸಂಜೀವ ಪೂಜಾರಿಯವರು ದೂರಿನಲ್ಲಿ ತಿಳಿಸಿದ್ದಾರೆ.ವಸಂತ ಎಂ, ತೀರ್ಥೇಶ್ ಎಂ., ಬಿ.ಜಯಂತ ಕುಮಾರ್, ಚೇತನ್, ಸಂತೋಷ್ ದೋಳ, ರವಿಕುಮಾರ್, ಲೋಕೇಶ್, ಪ್ರಸನ್ನ, ಲಕ್ಷ್ಮೀನಾರಾಯಣ ಬೆದರಿಕೆ ಹಾಕಿದವರು ಎಂದು ದೂರಿನಲ್ಲಿ ಹೆಸರಿಸಿದ್ದಾರೆ.

ಗೃಹ ಸಚಿವರಿಗೆ ದೂರು: ಘಟನೆ ಕುರಿತು ಸಂಜೀವ ಪೂಜಾರಿಯವರು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೂ ದೂರು ನೀಡಿ, ಆರೋಪಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ವಿನಂತಿಸಿದ್ದಾರೆ.

ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿಯವರು ಭಜನೆ ಹಾಗೂ ಭಜಕರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ, ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರುವ ರೀತಿಯ ಲೇಖನಗಳನ್ನು ಪ್ರಕಟಿಸಿರುವುದಾಗಿ ಆರೋಪಿಸಿ, ಅವರ ವಿರುದ್ಧ ಕೂಡಲೇ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಪುತ್ತೂರು ವಲಯ ಅರಣ್ಯ ಇಲಾಖಾ ಕಚೇರಿ ಎದುರು ಪ್ರತಿಭಟನೆ ನಡೆದಿತ್ತು.ವಾರದೊಳಗೆ ಸಂಜೀವ ಪೂಜಾರಿ ಅವರನ್ನು ಸೇವೆಯಿಂದ ಅಮಾನತುಗೊಳಿಸುವ ಕುರಿತು ಕ್ರಮಕೈಗೊಳ್ಳುವುದಾಗಿ ಹಿರಿಯ ಅಧಿಕಾರಿಗಳು ಭರವಸೆ ನೀಡಿದ್ದ ಬಳಿಕ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದರು. ಸಂಜೀವ ಪೂಜಾರಿಯವರ ವಿರುದ್ಧ ಪೊಲೀಸರಿಗೆ ದೂರನ್ನೂ ನೀಡಲಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಸಂಜೀವ ಪೂಜಾರಿಯವರು ಬೆಳ್ಳಾರೆ ಪೊಲೀಸರಿಗೆ ಹಾಗೂ ರಾಜ್ಯ ಗೃಹ ಸಚಿವರಿಗೆ ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here