- ನಿಶ್ಕಲ್ಮಶ ಮನಸ್ಸಿನಲ್ಲಿ ತನು, ಮನದ ಸಹಕಾರವಿದ್ದರೆ ಯಾವುದೇ ಕೆಲಸಗಳು ಯಶಸ್ಸಾಗಲು ಸಾಧ್ಯ: ಸೌಂದರ್ಯ ಮಂಜಪ್ಪ
- ಧರ್ಮನಿಷ್ಠೆಯಲ್ಲಿ ಮಾಡಿದ ಕೆಲಸದಲ್ಲಿ ಯಶಸ್ಸು ಹೆಚ್ಚು: ಸಂತೋಷ್ ಕುಮಾರ್ ರೈ ನಳೀಲು
- ಕ್ಷೇತ್ರದ ಅಭಿವೃದ್ದಿ ಕಾರ್ಯಗಳಿಗೆ ಗ್ರಾಮಸ್ಥರ ಸಹಕಾರ ಅಗತ್ಯ: ಜನಾರ್ದನ ಎರ್ಕಡಿತ್ತಾಯ
- ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಲು ಈ ಸಭೆಯ ಆಯೋಜನೆ: ಮನೋಹರ ನಾಯ್ಕ್ ಕೊಳಕ್ಕಿಮಾರ್
ಪುತ್ತೂರು: ಯಾವುದೇ ಕೆಲಸ ಆಗಲು ದುಡ್ಡು ಮುಖ್ಯವಲ್ಲ. ನಿಶ್ಕಲ್ಮಶ ಮನಸ್ಸಿನ ತನು, ಮನದ ಸಹಕಾರ ಒಂದಿದ್ದರೆ ಯಾವುದೇ ಕೆಲಸ ಯಶಸ್ಸಾಗಲು ಸಾಧ್ಯ. ಭಗವಂತನ ಪ್ರೇರಣೆಯಾದಾಗ ಎಲ್ಲಾ ಕೆಲಸಗಳು ಸಾಂಗವಾಗಿ ನೆರವೇರುತ್ತದೆ. ದೇವರ ಭಯವೇ ಜ್ಞಾನದ ಆರಂಭ. ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವಕ್ಕೆ ದಿನ ನಿಗದಿಯಾಗಿದೆ. ಎಲ್ಲರೂ ಒಂದಾಗಿ ಏಕಮನಸ್ಸಿನಿಂದ ಮುನ್ನಡೆದು ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದು ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಬೆಂಗಳೂರಿನ ಸೌಂದರ್ಯ ಸಮೂಹ ಸಂಸ್ಥೆಯ ಸಂಚಾಲಕರಾದ ಪಿ. ಮಂಜಪ್ಪ ರವರು ಹೇಳಿದರು.
ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಧ್ವಜಸ್ತಂಭ, ಬ್ರಹ್ಮರಥ ಸಮರ್ಪಣೆ ಹಾಗೂ ೨೦೨೪ನೇ ಮಾ.೨೦ರಿಂದ ಮಾ.೩೦ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವದ ಹಿನ್ನೆಲೆಯಲ್ಲಿ ಡಿ.೨೫ರಂದು ಕ್ಷೇತ್ರದ ವಠಾರದಲ್ಲಿ ನಡೆದ ಗ್ರಾಮಸ್ಥರ ಸಮಾಲೋಚನೆ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬದಲಾವಣೆ ಜಗದ ನಿಯಮ. ನಮ್ಮ ಸಂಪಾದನೆಯಲ್ಲಿ ಒಂದಂಶವನ್ನು ಸಮಾಜದ ಹಿತಕ್ಕೆ ದಾನ ಮಾಡಿದರೆ ನಮ್ಮ ಜನ್ಮ ಸಾರ್ಥಕವಾಗುತ್ತದೆ. ನಾವು ಬದುಕ್ಕಿದ್ದಾಗ ಮಾಡಿದ ಪುಣ್ಯದ ಕೆಲಸಗಳು ನಮ್ಮನ್ನು ಕಾಪಾಡುತ್ತದೆ. ಊರಿನ ದೇವಸ್ಥಾನದ ಅಭುವೃದ್ಧಿಗೆ ಊರವರ ಸಹಕಾರ ಅತೀ ಅಗತ್ಯ. ದೇವರ ಕಾರ್ಯಕ್ಕೆ ದುಡ್ಡು ಬರುತ್ತೆ. ದುಡ್ಡಿನ ವಿಚಾರ ಬದಿಗಿಟ್ಟು ಕೆಲಸ ಕಾರ್ಯಗಳಿಗೆ ಒತ್ತು ನೀಡಿ. ಪ್ರತಿಯೊಬ್ಬರೂ ದೇವಾಲಯದ ಕೆಲಸ ಕಾರ್ಯಗಳಿಗೆ ಕೈಜೋಡಿಸಿ. ಮನಸ್ಸು ಇದ್ದರೆ ಯಾವುದೇ ಕೆಲಸ ಕಾರ್ಯಗಳು ಸಲೀಸಾಗಲು ಸಾಧ್ಯ. ನಾವು ನಿಮಿತ್ತ ಮಾತ್ರ ಕೆಲಸವನ್ನು ದೇವರು ನಮ್ಮಿಂದ ಮಾಡಿಸ್ತಾರೆ. ಯುವಕರ ತಂಡ ಸದಾ ಮಂದೆ ಬರುವ ಅನಿವಾರ್ಯತೆ ಇದೆ. ನೀವೆಲ್ಲರೂ ಮುಂದೆ ಸಾಗಿದರೆ ನಾವು ಸದಾ ನಿಮ್ಮ ಹಿಂದಿನಿಂದಿದ್ದೇವೆ. ಯುವಕರೆಲ್ಲರನ್ನೂ ಸಂಘಟಿಸುವ ಕೆಲಸ ಆಗಬೇಕಾಗಿದೆ ಎಂದು ಹೇಳಿದ ಅವರು ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ನಡೆಯಬೇಕಾದ ಕೆಲಸ ಹಾಗೂ ಸಮಿತಿ ರಚನೆಯ ಕುರಿತು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ನಳೀಲು ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ನಳೀಲುರವರು ಮಾತನಾಡಿ ಕ್ಷೇತ್ರಕ್ಕೆ ಆರಂಭದಲ್ಲಿ ಬಂದಾಗಲೇ ನನಗೆ ತುಂಬಾ ಸಂತಸ ತಂದಿದೆ. ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ನಾವು ಯಥಾಪ್ರಕಾರ ಕೆಲಸಕಾರ್ಯಗಳನ್ನು ಚಾಚುತಪ್ಪದೆ ಮಾಡಿಕೊಂಡು ಬಂದಲ್ಲಿ ಯಾವುದೇ ಸಮಸ್ಯೆಗಳಿರುವುದಿಲ್ಲ. ಪ್ರತಿಯೊಂದೂ ಕ್ಷೇತ್ರಕ್ಕೂ ಅದರದ್ದೇ ಆದ ಪಾವಿತ್ರ್ಯವಿದೆ. ದೇವಾಲಯದ ಅಭಿವೃದ್ಧಿ ಕಾರ್ಯದಲ್ಲಿ ಇಲ್ಲಿನ ಗ್ರಾಮಸ್ಥರ ಸ್ಪಂಧನೆ ಅವಿಸ್ಮರಣೀಯವಾಗಿದೆ. ಧರ್ಮನಿಷ್ಠೆಯಲ್ಲಿ ಕೆಲಸ ನಿರ್ವಹಿಸಿದರೆ ಯಶಸ್ಸು ಹೆಚ್ಚು. ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿಯೇ ನಾವು ವಿವಿಧ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರಬೇಕಾಗಿದೆ. ದೇವರ ಸಂಕಲ್ಪದೊಂದಿಗೆ ನಾವು ಸದಾ ಮುನ್ನಡೆಯಬೇಕು. ಗ್ರಾಮ ದೇವಸ್ಥಾನದ ವಿಚಾರ ಬಂದಾಗ ನಾವು ದೇವರ ಸೇವೆ ಎಂದು ಕೆಲಸಕಾರ್ಯಗಳನ್ನು ಮಾಡಬೇಕು ಎಂದು ಹೇಳಿದ ಅವರು ತಾನು ಈ ಹಿಂದೆ ಹಲವಾರು ದೈವದೇವಸ್ಥಾನಗಳಲ್ಲಿ ಕೆಲಸ ಕಾರ್ಯಗಳನ್ನು ನಿರ್ವಹಿಸಿ ಯಶಸ್ಸು ಕಂಡಿರುವ ರೀತಿ ಹಾಗೂ ಅದನ್ನು ಇಲ್ಲಿ ಅಳವಡಿಸುವಂತೆ ಸಲಹೆ ನೀಡಿದರು.
ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಜನಾರ್ದನ ಎರ್ಕಡಿತ್ತಾಯರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಅಭಿವೃದ್ಧಿ ಸಮಿತಿ ಸ್ಥಾಪನೆಯಾದ ಬಳಿಕದ ದಿನಗಳಿಂದ ಕ್ಷೇತ್ರದಲ್ಲಿ ನಿರಂತರವಾಗಿ ಒಂದಲ್ಲಾ ಒಂದು ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಾ ಬಂದಿದೆ. ವಿವಿಧ ತಂಡಗಳನ್ನು ರಚನೆ ಮಾಡಿ ಗ್ರಾಮದ ಪ್ರತೀ ಮನೆಗಳಿಗೆ ತೆರಳಿ ಅವರನ್ನು ಸಂಪರ್ಕಿಸಿ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ದಿಯ ಕುರಿತಾಗಿ ಹಾಗೂ ಮುಂದೆ ನಡೆಯಲಿರುವ ಕೆಲಸ ಕಾರ್ಯಗಳ ಕುರಿತು ಮಾಹಿತಿ ನೀಡಲಾಗುತ್ತಿದೆ. ಕ್ಷೇತ್ರದ ಅಭಿವೃದ್ದಿ ಕಾರ್ಯಗಳಿಗೆ ಗ್ರಾಮಸ್ಥರ ಸಹಕಾರ ಅಗತ್ಯ ಎಂದು ಹೇಳಿದ ಅವರು ಈ ವರೆಗೆ ನಡೆದ ಕೆಲಸ ಕಾರ್ಯಗಳ ಕುರಿತು ಮಾಹಿತಿ ನೀಡಿದರು.
ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ಮನೋಹರ್ ನಾಯ್ಕ್ ಕೊಳಕ್ಕಿಮಾರ್ ರವರು ಮಾತನಾಡಿ ಕ್ಷೇತ್ರದ ಅಭಿವೃದ್ಧಿಯ ವಿಚಾರಗಳೆಲ್ಲವೂ ಗ್ರಾಮಸ್ಥರಿಗೆ ತಿಳಿದಿರಬೇಕೆನ್ನುವ ನಿಟ್ಟಿನಲ್ಲಿ ಈ ಒಂದು ಸಭೆಯನ್ನು ಕರೆಯಲಾಗಿದೆ. ಕ್ಷೇತ್ರದಲ್ಲಿ ಈ ವರೆಗೆ ನಡೆದ ಅಭಿವೃದ್ಧಿ ಕಾರ್ಯಗಳಿಗೆ ಊರವರ ಉತ್ತಮ ರೀತಿಯ ಸ್ಪಂಧನೆ ದೊರಕಿರುವುದು ಸಂತಸತಂದಿದೆ. ಇನ್ನು ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ನಡೆಯಲಿರುವ ಕೆಲಸ ಕಾರ್ಯಗಳ ಕುರಿತು ಮಾಹಿತಿ ನೀಡಿದ ಅವರು ಅಭಿವೃದ್ಧಿ ಕಾರ್ಯ ಆರಂಭದ ದಿನಗಳಿಂದ ಈ ವರೆಗೆ ಗ್ರಾಮಸ್ಥರಿಂದ ಸಂಗ್ರಹಿಸಲಾದ ದೇಣಿಗೆ ಹಾಗೂ ಕರ್ಚಾದ ಹಣದ ಲೆಕ್ಕವನ್ನು ಸಭೆಗೆ ಮಂಡಿಸಿ, ಈ ಹಿಂದೆ ವಾಗ್ದಾನ ಮಾಡಿರುವ ಮೊತ್ತವನ್ನು ಗ್ರಾಮಸ್ಥರು ತಲುಪಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಸುಬ್ರಹ್ಮಣ್ಯ ಗೌಡ ಹಣಿಯೂರು, ಅಶೋಕ್ ನಾಯ್ಕ್ ಹಣಿಯೂರು, ರಾಮ ಜೋಯಿಸ, ಪುರುಷೋತ್ತಮ ನಾಯ್ಕ್ ಹಣಿಯೂರು, ಮೋಹನ ನಾಯ್ಕ್ ಆನಾಜೆ, ವಾಸುದೇವ ಮಯ್ಯ, ರಾಧಾಕೃಷ್ಣ ನಾಯ್ಕ್ ಕೊಳಕ್ಕಿಮಾರ್, ಮುರಳೀಧರ ಬಡಿಕ್ಕಿಲಾಯ, ಶಾಂತಿ ಹೆಗ್ಡೆ, ಹೀರಾಉದಯ, ಮಹಾಬಲ ಗೌಡ ಗಡಿಮಾರು, ವೆಂಕಟ್ರಮಣ ಗೌಡ, ಅಭಿಜಿತ್ ಕೊಳಕ್ಕಿಮಾರ್ ಸಹಿತ ಗ್ರಾಮಸ್ಥರು ಸಲಹೆಸೂಚನೆಗಳನ್ನು ನೀಡಿದರು.
ಕ್ಷೇತ್ರದ ಪ್ರಧಾನ ಅರ್ಚಕರಾದ ಕೃಷ್ಣ ಬಡಿಕಿಲ್ಲಾಯ, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ರಾಮಜೋಯಿಸ, ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುಬ್ರಾಯ ನಾಯ್ಕ್ ಕೊಳಕ್ಕಿಮಾರ್, ಚಂದ್ರಶೇಖರ ನಾಯ್ಕ್ ಕುದ್ಮಾನ್ , ಲೀಲಾವತಿ ಹಿರ್ಕುಡೆಲು, ಸುದರ್ಶಣ್ ವೈಲಾಯ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಮಿತ ಮತ್ತು ಬಳಗದವರು ಪ್ರಾರ್ಥಿಸಿದರು.
ವ್ಯವಸ್ಥಾಪನಾ ಸಮಿತಿ ಸದಸ್ಯ ಸುಧೀರ್ ಪ್ರಸಾದ್ ಆನಾಜೆ ಸ್ವಾಗತಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಗಿರಿಧರ ಗೌಡ ಗೋಮುಖ ಕಾರ್ಯಕ್ರಮವನ್ನು ನಿರೂಪಿಸಿದರು.ಅಭಿವೃದ್ದಿ ಸಮಿತಿ ಜೊತೆಕಾರ್ಯದರ್ಶಿ ಮಹಾಬಲ ಗೌಡ ಗಡಿಮಾರು ವಂದಿಸಿದರು.