ಉಪ್ಪಿನಂಗಡಿ ಪಿಡಿಒ. ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್ ವರ್ಗಾವಣೆ ಆದೇಶ ರದ್ದು

0

ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯಿಂದ ಉಪ್ಪಿನಂಗಡಿಯಲ್ಲಿ ಪುನರ್ ಸ್ಥಾಪಿಸಿ ಆದೇಶ

 21-12-22ಕ್ಕೆ ಹೊರ ತಾಲೂಕಿಗೆ ವರ್ಗಾವಣೆಗೊಳಿಸಿ ಸರ್ಕಾರದಿಂದ ಆದೇಶ
————————————————
 29-10-22ಕ್ಕೆ ಆದೇಶ ಪ್ರಶ್ನಿಸಿ ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್‌ರಿಂದ ನ್ಯಾಯ ಮಂಡಳಿಯ (ಕೆಎಟಿ) ಮೊರೆ
——————————————————————
24-11-22ಕ್ಕೆ ಉಪ್ಪಿನಂಗಡಿ ಪಂಚಾಯಿತಿಗೆ ಮರು ಸ್ಥಾಪಿಸಲು ಸರ್ಕಾರಕ್ಕೆ ಆದೇಶ
—————————————————-
 9-12-22ಕ್ಕೆ ನ್ಯಾಯ ಮಂಡಳಿ ಆದೇಶದನ್ವಯ ಸರ್ಕಾರದಿಂದ ಮರು ಸ್ಥಾಪನೆಗೆ ಆದೇಶ
——————————————————-
 27-12-22ಕ್ಕೆ ಸರ್ಕಾರದದ ಆದೇಶದಂತೆ ದ.ಕ. ಜಿಲ್ಲಾ ಪಂಚಾಯಿತಿಯಿಂದ ಆದೇಶ.
——————————————————
 28-12-22ಕ್ಕೆ ಉಪ್ಪಿನಂಗಡಿ ಪಿಡಿಒ. ಆಗಿ ಮರು ಅಧಿಕಾರ ಸ್ವೀಕಾರ, ಕರ್ತವ್ಯಕ್ಕೆ ಹಾಜರಿ.

 


ಉಪ್ಪಿನಂಗಡಿ: ಇಲ್ಲಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್‌ರವರನ್ನು ವರ್ಗಾವಣೆಗೊಳಿಸಿ ಸರ್ಕಾರ ನೀಡಿದ್ದ ಆದೇಶವನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ) ರದ್ದುಪಡಿಸಿ, ಉಪ್ಪಿನಂಗಡಿ ಗ್ರಾಮ ಪಂಚಾಯಿತಿಯಲ್ಲೇ ಮರು ಸ್ಥಾಪಿಸಿ ಆದೇಶ ನೀಡಿದ್ದು, ಅದರನ್ವಯ ಸರ್ಕಾರ ನೀಡಿರುವ ಆದೇಶದಂತೆ ಡಿ. 28 ರಂದು ಪಿಡಿಒ. ಉಪ್ಪಿನಂಗಡಿ ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರ ಸ್ವೀಕರಿಸಿ, ಕರ್ತವ್ಯಕ್ಕೆ ಹಾಜರಾಗಿದ್ದಾರೆ.

1-1-2021 ರಂದು ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿಯಿಂದ ಉಪ್ಪಿನಂಗಡಿ ಗ್ರಾಮ ಪಚಾಯಿತಿಗೆ ವರ್ಗಾವಣೆ ಹೊಂದಿ ಆಗಮಿಸಿದ್ದ ಇವರನ್ನು 21 -10-22 ರಂದು ಹೊರ ತಾಲೂಕಿಗೆ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ನೀಡಿತ್ತು. 2-11-22 ರಂದು ದ.ಕ. ಜಿಲ್ಲಾ ಪಂಚಾಯಿತಿ ಇವರನ್ನು ನೂಜಿಬಾಳ್ತಿಲ ಗ್ರಾಮ ಪಂಚಾಯಿತಿಗೆ ವರ್ಗಾವಣೆಗೊಳಿಸಿತ್ತು. ಆ ಬಳಿಕ ಕಡಬ ತಾಲೂಕು ಪಂಚಾಯಿತಿ ಕಾರ್‍ಯನಿರ್ವಹಣಾಧಿಕಾರಿಯವರು ಕಡಬ ತಾಲೂಕು ಪಂಚಾಯಿತಿ ಲೆಕ್ಕ ಅಧೀಕ್ಷಕರಾಗಿ ನೇಮಕಗೊಳಿಸಿ ಆದೇಶಸಿತ್ತು.

ವರ್ಗಾವಣೆ ಕಾನೂನಾತ್ಮಕವಾಗಿಲ್ಲ, ನಿಯಮಗಳಿಗೆ ವಿರುದ್ಧವಾಗಿದೆ:
ಈ ಮಧ್ಯೆ ಪಿಡಿಒ. ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್ “ನನ್ನನ್ನು ಅವಧಿ ಪೂರ್ವವಾಗಿ ವರ್ಗಾವಣೆ ಮಾಡಲಾಗಿದೆ, ಇದು ಸರಿಯಾದ ಕ್ರಮ ಅಲ್ಲ” ಎಂದು ವರ್ಗಾವಣೆ ಆದೇಶವನ್ನು ಪ್ರಶ್ನಿಸಿ ನ್ಯಾಯ ಮಂಡಳಿಯ (ಕೆಎಟಿ) ಮೊರೆ ಹೋಗಿದ್ದರು. ಪಿಡಿಒ. ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್ ಪರ ವಾದವನ್ನು ಆಲಿಸಿದ ನ್ಯಾಯ ಮಂಡಳಿ “ಸರ್ಕಾರದ ಆದೇಶ ರಾಜಕೀಯ ಹಿತಾಶಕ್ತಿಯಿಂದ ಕೂಡಿದ್ದು, ಅವಧಿ ಪೂರ್ವ ವರ್ಗಾವಣೆ ಆಗಿರುತ್ತದೆ ಮತ್ತು ಕಾನೂನಾತ್ಮಕವಾಗಿಲ್ಲ, ವರ್ಗಾವಣೆ ನಿಯಮಗಳಿಗೆ ವಿರುದ್ಧವಾಗಿದೆ” ಎಂದು ತಿಳಿಸಿ, ಪಿಡಿಒ. ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್‌ರವರನ್ನು ಉಪ್ಪಿನಂಗಡಿ ಗ್ರಾಮ ಪಂಚಾಯಿತಿಯಲ್ಲಿ ಪುನರ್ ಸ್ಥಾಪಿಸಿ ಆದೇಶ ನೀಡಿದೆ. ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್ ಪರ ಹೈಕೋರ್ಟು ವಕೀಲ ಪಿ.ಪಿ. ಹೆಗ್ಡೆ ವಾದಿಸಿದ್ದರು.

ನ್ಯಾಯ ಮಂಡಳಿ ಆದೇಶವನ್ನು ಮನ್ನಿಸಿರುವ ಸರ್ಕಾರ 9-12-22ರಂದು ಉಪ್ಪಿನಂಗಡಿ ಗ್ರಾಮ ಪಂಚಾಯಿತಿಯಲ್ಲಿ ಮರುಸ್ಥಾಪನೆಗೆ ಆದೇಶ ನೀಡಿದ್ದು, ಅದರನ್ವಯ 27-12-22ರಂದು ದ.ಕ. ಜಿಲ್ಲಾ ಪಂಚಾಯಿತಿ, ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್‌ರನ್ನು ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಪಿಡಿಒ. ಆಗಿ ಮರುಸ್ಥಾಪಿಸಿ ಆದೇಶ ನೀಡಿದೆ. ಅದರಂತೆ 28-12-22ರಂದು ಅವರು ಉಪ್ಪಿನಂಗಡಿ ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರ ಸ್ವೀಕರಿಸಿ, ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಸುದ್ದಿ ಬಿಡುಗಡೆಯಿಂದ ಉತ್ತಮ ಅಧಿಕಾರಿ ಪ್ರಶಸ್ತಿ ಪಡೆದಿದ್ದರು.
ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಪಿಡಿಒ. ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಅಕ್ರಮ, ಅನಧಿಕೃತ ಅಂಗಡಿ, ಕಟ್ಟಡಗಳ ತೆರವು ಕಾರ್‍ಯಾಚರಣೆ ನಡೆಸಿ ಗ್ರಾಮಸ್ಥರ ಮೆಚ್ಚುಗೆ ಪಡೆದಿದ್ದರು. ಅದಾಗ್ಯೂ ಆಡಳಿತಾತ್ಮಕ ವಿಚಾರದಲ್ಲಿ ಖಡಕ್ ಆಗಿ ಕರ್ತವ್ಯ ನಿರ್ವಹಿಸುವ ಮೂಲಕವೂ ಪ್ರಶಂಸೆ ಪಡೆದಿದ್ದರು. ಈ ಮಧ್ಯೆ ಸುದ್ದಿ ಬಿಡುಗಡೆ ನಡೆಸಿದ ಭ್ರಷ್ಟಾಚಾರ ರಹಿತವಾಗಿ, ಉತ್ತಮ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ಆಯ್ಕೆ ಸಂಬಂಧಿಸಿದ ಮತದಾನ ಪ್ರಕ್ರಿಯೆಯಲ್ಲಿ ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್‌ರವರು ಹೆಚ್ಚು ಮತ ಪಡೆದು ಉತ್ತಮ ಅಧಿಕಾರಿ ಎಂಬ ಪ್ರಶಸ್ತಿಗೆ ಭಾಜನರಾಗಿದ್ದರು.

LEAVE A REPLY

Please enter your comment!
Please enter your name here