ಪ್ರಸ್ತುತ ಕಡಬ ತಹಸೀಲ್ದಾರ್ ಸೇರಿದಂತೆ 16 ಮಂದಿ ವಿರುದ್ದ ಎಫ್.ಐ.ಆರ್ ದಾಖಲು
ಸಿ.ಐ.ಡಿ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ -ಟಿ. ರಮೇಶ್ ಬಾಬು
ಕಡಬ: ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಹಿಮ್ಮಾವು ಗ್ರಾಮದ ಸರ್ವೆ ನಂ.390 ರಿಂದ 422 ಮತ್ತು 424 ರ ಜಮೀನುಗಳಿಗೆ ಸಂಬಂಧಿಸಿ ಅಧಿಕಾರಿಗಳಿಂದ ಭಾರಿ ವಂಚನೆ ನಡೆದಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಪ್ರಕರಣವನ್ನು ಸರಕಾರ ಸಿಐಡಿ ತನಿಖೆಗೆ ಆದೇಶಿಸಿದ್ದು, ಈ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಕಡಬ ತಹಸೀಲ್ದಾರ್ ಟಿ. ರಮೇಶ್ ಬಾಬು ತಿಳಿಸಿದ್ದಾರೆ.
ಸರ್ಕಾರದ ಬೊಕ್ಕಸಕ್ಕೆ 79.29 ಕೋಟಿ ರೂ. ನಷ್ಟ ಮಾಡಿದ ಭಾರಿ ಹಗರಣಕ್ಕೆ ಸಂಬಂಧಿಸಿ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿದೆ. ಎಸಿ, ತಹಸೀಲ್ದಾರ್, ಶಿರಸ್ತೇದಾರ್, ವಿಲೇಜ್ ಅಕೌಂಟೆಂಟ್ ಸೇರಿದಂತೆ 16 ಮಂದಿ ವಿರುದ್ದ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರ್.ಟಿ.ಐ. ಕಾರ್ಯಕರ್ತ ಬಿ.ಎನ್. ನಾಗೇಂದ್ರ ಸಲ್ಲಿಸಿದ್ದ ದೂರಿಗೆ ಸ್ಪಂದಿಸಿದ ಸರ್ಕಾರ ದಾಖಲೆಗಳನ್ನ ಪರಿಶೀಲಿಸಿ ಹಗರಣದಲ್ಲಿ ಭಾಗಿಯಾದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.
ಪ್ರಕರಣ ಏನು..?:
ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಹಿಮ್ಮಾವು ಗ್ರಾಮದ ಸರ್ವೆ ನಂ.390 ರಿಂದ 424 ರವರೆಗಿನ 891 ಎಕ್ರೆ ಒಂದು ಗುಂಟೆ ಜಮೀನು ಮೈಸೂರಿನ ತ್ರಿಪುರ ಭೈರವಿ ಮಠದ ಸ್ವಾಮೀಜಿ ಶ್ರೀ ಮಹಂತ ಕೃಷ್ಣಾನಂದಗಿರಿ ಗೋಸ್ವಾಮಿ ಹೆಸರಿನಲ್ಲಿತ್ತು. 1989 ರಲ್ಲಿ ಶ್ರೀ ಮಹಂತ ಕೃಷ್ಣಾನಂದಗಿರಿ ಗೋಸ್ವಾಮಿ ವಿಧಿವಶರಾದರು. ನಂತರ ಶ್ರೀ ಮಹಂತ ಕೃಷ್ಣ ಮೋಹನಾನಂದ ಗಿರಿ ಗೋಸ್ವಾಮಿ ರವರು ಪಟ್ಟಾಭಿಷೇಕ ಮಾಡಿಕೊಂಡು ಪೀಠಾಽಪತಿಯಾದರು. ಈ ವೇಳೆ ಕಾಲವಾದ ಶ್ರೀ ಮಹಂತ ಕೃಷ್ಣಾನಂದ ಗಿರಿಗೋಸ್ವಾಮಿ ರವರ ಸಹೋದರ ಭೀಷ್ಮಪಿತಾಮಹ ಹಾಗೂ ಹಾಲಿ ಸ್ವಾಮೀಜಿಗಳಾದ ಶ್ರೀ ಮಹಂತ ಕೃಷ್ಣಮಹಾನಂದ ಗಿರಿಗೋಸ್ವಾಮಿ ರವರ ನಡುವೆ ಆಸ್ತಿವಿವಾದ ಪ್ರಾರಂಭವಾಯಿತು. ಇದೇ ಜಮೀನುಗಳಿಗೆ ಸಂಬಂಧಿಸಿದಂತೆ ಭೂ ನ್ಯಾಯ ಮಂಡಳಿಯಲ್ಲಿ ಪ್ರಕರಣ ಬಾಕಿ ಇತ್ತು. ಇತ್ಯರ್ಥವಾಗದ ಪ್ರಕರಣವನ್ನ ಏಕಾಏಕಿ ಕೈಗೆತ್ತಿಕೊಂಡ ಆಗಿನ ಭೂ ನ್ಯಾಯ ಮಂಡಳಿಯ ಅಧ್ಯಕ್ಷರಾಗಿದ್ದ ಹೆಚ್.ಕೆ.ಕೃಷ್ಣಮೂರ್ತಿ 14-9-2011 ರಂದು 891 ಎಕ್ರೆ ಜಮೀನು ಪೈಕಿ ಮೃತರಾದ ಶ್ರೀ ಕೃಷ್ಣಾನಂದ ಗಿರಿಗೋಸ್ವಾಮಿಗೆ 10 ಯೂನಿಟ್(54 ಎಕ್ರೆ), ಶ್ರೀ ಕೃಷ್ಣಾನಂದಗಿರಿ ಗೋಸ್ವಾಮಿಯ ಸಹೋದರಿ ಸತ್ಯಭಾಮರವರಿಗೆ 10 ಯೂನಿಟ್(54 ಎಕ್ರೆ), ಭೀಷ್ಮಪಿತಾಮಹ ಹಾಗೂ ಇವರ ಮಗ ಕುಲದೀಪ್ ಪ್ರಕಾಶ್ ಎಂಬುವರಿಗೆ 20 ಯೂನಿಟ್(108 ಎಕ್ರೆ) ನೀಡುವಂತೆ ಆದೇಶಿಸಿದರು. ಈ ಆದೇಶದಂತೆ ಭೀಷ್ಮಪಿತಾಮಹ ಹಾಗೂ ಕುಲದೀಪ್ ಪ್ರಕಾಶ್ ರವರು ಖಾತೆ ಮಾಡಿಸಿಕೊಂಡು ಪರಿಹಾರ ಪಡೆದಿದ್ದಾರೆ. ಅಲ್ಲದೆ ಈಗಾಗಲೇ ಮೃತಪಟ್ಟಿರುವ ಸತ್ಯಭಾಮ ಭಾಗಕ್ಕೆ ಬಂದ 54 ಎಕ್ರೆ ಜಮೀನಿಗೆ ಹರ್ಷಕುಮಾರ್ ಎಂಬ ವ್ಯಕ್ತಿಗೆ ಅಕ್ರಮವಾಗಿ ಖಾತೆ ಮಾಡಿದ್ದಾರೆ. ಈ ವೇಳೆ ಸತ್ಯಭಾಮ ರವರ ಡೆತ್ ಸರ್ಟಿಫಿಕೇಟ್ ಆಗಲಿ, ವಂಶವೃಕ್ಷವಾಗಲಿ ಅಥವಾ ಕಂದಾಯ ಇಲಾಖೆಗೆ ಸಂಬಂಧಿಸಿದ ದಾಖಲೆಗಳನ್ನ ಪಡೆಯದೆ ಅಕ್ರಮವಾಗಿ ಖಾತೆ ಮಾಡಿದ್ದಾರೆ ಎನ್ನಲಾಗಿದೆ. ಮುಂದುವರಿದಂತೆ ಮೃತರಾದ ಕೃಷ್ಣಾನಂದ ಗಿರಿಗೋಸ್ವಾಮಿರವರ ಭಾಗಕ್ಕೆ ಬಂದ 54 ಎಕ್ರೆ ಜಮೀನನ್ನ ಯಾವುದೇ ದಾಖಲೆಗಳನ್ನ ಪಡೆಯದೆ ಸೋನು.ಬಿನ್.ಸುಧೀರ್ ಹಾಗೂ ಪ್ರದೀಪ್.ಬಿನ್.ಸುಧೀರ್ ಎಂಬುವರಿಗೆ ಅಕ್ರಮವಾಗಿ ಖಾತೆ ಮಾಡಿದ್ದಾರೆ ಎನ್ನಲಾಗಿದೆ.
ಇಷ್ಟೆಲ್ಲಾ ಅಕ್ರಮಗಳ ನಂತರ ಉಳಿದ ಜಮೀನುಗಳ ಮೇಲೂ ಅಧಿಕಾರಿಗಳ ಕೆಂಗಣ್ಣು ಬಿದ್ದಿದೆ. ಟ್ರಿಬ್ಯುನಲ್ ಅಧ್ಯಕ್ಷರಾಗಿದ್ದ ಕೃಷ್ಣಮೂರ್ತಿ ರವರು ಮತ್ತೊಮ್ಮೆ ಶೋಭಾದೇವಿ ಎಂಬುವರಿಗೆ 10 ಯೂನಿಟ್(54 ಎಕ್ರೆ),ಹೇಮಲತಾ ಎಂಬುವರಿಗೆ 10 ಯೂನಿಟ್(54 ಎಕ್ರೆ),ನಿಶಾ ಶರ್ಮ ಎಂಬುವರಿಗೆ 10 ಯೂನಿಟ್(54 ಎಕ್ರೆ),ಅಂಜನಾಶರ್ಮ ಎಂಬುವರಿಗೆ 10 ಯೂನಿಟ್(54 ಎಕ್ರೆ) ಹಾಗೂ ವಿಜಯಲಕ್ಷ್ಮಿ ಎಂಬುವರಿಗೆ 10 ಯೂನಿಟ್(54 ಎಕ್ರೆ) ಗಳು ನೀಡಿದ್ದಾರೆ. ಸದರಿ ಜಮೀನುಗಳಿಗೆ ಖಾತೆ ಸಹ ಆಗಿದೆ. ಮತ್ತೊಂದು ವಿಶೇಷ ಎಂದರೆ ಇಲ್ಲಿ ಭೂನ್ಯಾಯ ಮಂಡಳಿ ಅಧ್ಯಕ್ಷರೂ ಹಾಗೂ ಕೆ.ಐ.ಎ.ಡಿ.ಬಿ.ಭೂಸ್ವಾಧೀನ ಅಧಿಕಾರಿಯೂ ಕೃಷ್ಣಮೂರ್ತಿ ರವರೇ ಆಗಿದ್ದಾರೆ. ಎರಡು ಹುದ್ದೆಯನ್ನ ಒಬ್ಬರೇ ಅಲಂಕರಿಸಿದ್ದ ಇವರು ಎಲ್ಲಾ ನಿಯಮಗಳನ್ನ ಗಾಳಿಗೆ ತೂರಿ ಖಾತೆ ಮಾಡಿದ್ದಾರೆ. ಸದರಿ ಜಮೀನುಗಳನ್ನ ಕೆ.ಐ.ಎ.ಡಿ.ಬಿ ರವರು ಭೂಸ್ವಾಧೀನಪಡಿಸಿಕೊಂಡು 79.29 ಕೋಟಿ ರೂ. ಅಕ್ರಮವಾಗಿ ಪರಿಹಾರ ನೀಡಲಾಗಿದೆ ಎಂದು ತಿಳಿದು ಬಂದಿದೆ. ಈ ಎಲ್ಲಾ ಚೆಕ್ ಗಳು ರಾಷ್ಟ್ರೀಕೃತ ಕಾರ್ಪೊರೇಷನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಗದಾಗಿದೆ.
ಅಂದಿನ ನಂಜನಗೂಡು ತಹಸೀಲ್ದಾರ್ ಆಗಿದ್ದ ನವೀನ್ ಜೋಸೆಫ್, ಶಿರಸ್ತೇದಾರ್ ಆಗಿದ್ದ ಟಿ.ರಮೇಶ್ ಬಾಬು(ಪ್ರಸ್ತುತ ಕಡಬ ತಹಸೀಲ್ದಾರ್) ಆರ್.ಐ. ಶಿವರಾಜು, ವಿ.ಎ. ವೆಂಕಟೇಶ್ ರವರು ಶ್ರೀ ಕೃಷ್ಣಾನಂದಗಿರಿ ಗೋಸ್ವಾಮಿ ಹಾಗೂ ಸತ್ಯಭಾಮ ರವರು ಮರಣ ಹೊಂದಿದ್ದರೂ ನೇರ ವಾರಸುದಾರರಿಗೆ ಕಾನೂನಿನಂತೆ ನಾಡಕಚೇರಿಯಿಂದ ವಂಶವೃಕ್ಷ, ಮರಣ ಪ್ರಮಾಣ ಪತ್ರ ಪಡೆಯದೆ ಭೂ ನ್ಯಾಯ ಮಂಡಳಿ ಆದೇಶ ಎಂದು ನಮೂದಿಸಿ ಅಕ್ರಮವಾಗಿ ಪೌತಿ ಖಾತೆ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಸರ್ಕಾರಕ್ಕೆ 79 ಕೋಟಿ 29 ಲಕ್ಷ ರೂ. ನಷ್ಟ ಉಂಟಾಗಿದೆ. ಇಷ್ಟೆಲ್ಲಾ ಬೊಕ್ಕಸಕ್ಕೆ ನಷ್ಟವಾಗಿದ್ದರೂ 2011 ರಿಂದಲೂ ಅಧಿಕಾರಿಗಳು ಸರಿಪಡಿಸುವ ಗೋಜಿಗೆ ಹೋಗಿಲ್ಲ ಎನ್ನುವ ಆರೋಪ ಇದೆ.
ಈ ಅಕ್ರಮಕ್ಕೆ ಸಂಬಂಧಿಸಿದಂತೆ ತ್ರಿಪುರ ಭೈರವಿ ಮಠದ ಸ್ವಾಮೀಜಿ ಶ್ರೀ ಮಹಂತ ಕೃಷ್ಣ ಮೋಹನಾನಂದ ಗಿರಿ ಗೋಸ್ವಾಮಿ ಹಾಗೂ ಆರ್.ಟಿ.ಐ ಕಾರ್ಯಕರ್ತ ಬಿ.ಎನ್.ನಾಗೇಂದ್ರ ರವರು ಕರ್ನಾಟಕ ಸರ್ಕಾರ ಪ್ರಧಾನ ಕಾರ್ಯದರ್ಶಿಗೆ ಲಿಖಿತ ರೂಪದಲ್ಲಿ ದೂರು ನೀಡಿದ್ದರು. ಅಲ್ಲಿಂದ ತನಿಖೆ ಆರಂಭವಾಗಿ ಕೇಂದ್ರ ಸರ್ಕಾರದ ಭಾರತ ಲೆಕ್ಕ ನಿಯಂತ್ರಕರು ಹಾಗೂ ಮಹಾಲೆಕ್ಕ ಪರಿಶೋಧಕರು ಎಸ್.ಕಮಲವಲ್ಲಿ(ಡೆಪ್ಯೂಟಿ ಅಕೌಂಟ್ಸ್ ಜನರಲ್) ರವರು ದಾಖಲೆಗಳನ್ನ ಪರಿಶೀಲಿಸಿ 28-5-2015 ರಂದು 79 ಕೋಟಿ 29ಲಕ್ಷ ರೂ. ನಷ್ಟದ ಬಗ್ಗೆ ವರದಿ ನೀಡಿದ್ದರು.
ನಂತರ 2014-15 ಸಾಲಿನ ಕಂಡಿಕೆ 3.13 ರಂತೆ ಅರ್ಹರಲ್ಲದ ವ್ಯಕ್ತಿಗಳಿಗೆ ಭೂಪರಿಹಾರ ಪಾವತಿ ಮಾಡಿರುವುದರಿಂದ ಸದರಿ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಎಲ್.ವರಲಕ್ಷ್ಮಿ ರವರು ಅಕ್ರಮ ಎಸಗಿರುವ ಅಧಿಕಾರಿಗಳು, ಸಿಬ್ಬಂದಿವರ್ಗ ಹಾಗೂ ವ್ಯಕ್ತಿಗಳ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಸಿ.ಐ.ಡಿ ತನಿಖೆಗೆ ವರ್ಗಾಯಿಸುವಂತೆ ಆದೇಶಿಸಿದ್ದಾರೆ.
ಸದರಿ ಆದೇಶದಂತೆ ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ರವರು ನಂಜನಗೂಡು ತಹಸೀಲ್ದಾರ್ ಶಿವಮೂರ್ತಿ ರವರಿಗೆ ನಿರ್ದೇಶನ ನೀಡಿ ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವರದಿ ನೀಡುವಂತೆ ಆದೇಶಿಸಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶದ ಅನ್ವಯದಂತೆ 26-12-2022 ರಂದು ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಅಂದಿನ ಭೂ ನ್ಯಾಯಮಂಡಳಿ ಆಧ್ಯಕ್ಷರಾದ ಕೃಷ್ಣಮೂರ್ತಿ ಸೇರಿದಂತೆ 16 ಮಂದಿ ವಿರುದ್ದ ಎಫ್.ಐ.ಆರ್. ದಾಖಲಿಸಲಾಗಿದೆ.
ಸಿಐಡಿ ತನಿಖೆಗೆ ಒಪ್ಪಿಸಿರುವುದು ಸ್ವಾಗತಾರ್ಹ, ಸಿಐಡಿ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ- ಟಿ.ರಮೇಶ್ ಬಾಬು:
ನಂಜನಗೂಡು ತಾಲೂಕು ಹಿಮ್ಮಾವು ಗ್ರಾಮದ ಸರ್ವೆ ನಂ.390 ರಿಂದ 422 ಮತ್ರು 424 ರ ಜಮೀನುಗಳಿಗೆ ಸಂಬಂಧಿಸಿದಂತೆ ಖಾತೆ ಮಾಡಿರುವ ಸಂಬಂಧ ಸರ್ಕಾರದ ಬೊಕ್ಕಸಕ್ಕೆ 79.29 ಕೋಟಿ ರೂ. ನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂ ನ್ಯಾಯ ಮಂಡಳಿ ಆದೇಶವನ್ನು ಮೈಸೂರು ಜಿಲ್ಲೆಯ ಎಸಿ ಹಾಗೂ ಡಿಸಿ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯ ಎತ್ತಿ ಹಿಡಿದಿತ್ತು. ನ್ಯಾಯಾಲಯಗಳು ನೀಡಿದ ಆದೇಶವನ್ನು ಮಾತ್ರ ಕಂದಾಯ ಇಲಾಖೆಯ ಅಧಿಕಾರಿಗಳು ಪಾಲಿಸಿದ್ದೇವೆ ಎಂದು ತಹಸಿಲ್ದಾರ್ ರಮೇಶ್ ಬಾಬು ತಿಳಿಸಿದರು. ಪ್ರಕರಣದ ಬಗ್ಗೆ ಕಡಬ ತಹಸೀಲ್ದಾರ್ ಟಿ. ರಮೇಶ್ ಬಾಬು ಸುದ್ದಿಯೊಂದಿಗೆ ಮಾತನಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.
ಸಿಐಡಿ ತನಿಖೆಗೆ ಒಪ್ಪಿಸಿರುವುದು ಸ್ವಾಗತಾರ್ಹ:
ಅನೇಕ ವರ್ಷಗಳಿಂದ ಈ ಪ್ರಕರಣ ವಿವಿಧ ನ್ಯಾಯಾಲಯಗಳ ಮೊರೆಹೋಗಿತ್ತು. ಈಗ ಸಿಐಡಿಗೆ ಒಪ್ಪಿಸಲಾಗಿದೆ. ಇದನ್ನು ನಾನು ವೈಯಕ್ತಿಕವಾಗಿ ಸ್ವಾಗತಿಸುತ್ತೇನೆ. ಈ ಪ್ರಕರಣ ನಡೆದ ಸಂದರ್ಭದಲ್ಲಿ ನಾನು ನಂಜನಗೂಡು ತಾಲ್ಲೂಕಿನ ಶಿರಸ್ಥೆದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದೆ. ನ್ಯಾಯಾಲಯ ನೀಡಿದ ಆದೇಶವನ್ನು ಎತ್ತಿ ಹಿಡಿದಿದ್ದೇನೆ ಹೊರತು ನಾನು ಕಾನೂನು ಚೌಕಟ್ಟು ಮೀರಿ ಅಥವಾ ಕಾನೂನಿಗೆ ವಿರುದ್ಧವಾಗಿ ಏನನ್ನೂ ಮಾಡಿಲ್ಲ.
ನಡೆದಿರುವುದೇನು? ರಮೇಶ್ ಬಾಬು ಹೇಳಿದ್ದು..:
ಮೊದಲನೆಯದಾಗಿ ಇದು ಖಾಸಗಿಯವರ ಜಮೀನು, 1969ರಲ್ಲೇ ತಮಗೆ 861ಎಕರೆ ಜಮೀನು ನಂಜನಗೂಡ ತಾಲ್ಲೂಕಿನಲ್ಲಿ ಇದೆ ಎಂದು ಶ್ರೀ ಕೃಷ್ಣನಂದಗಿರಿ ಗೋಸ್ವಾಮಿ ಡಿಕ್ಲರೇಶನ್ ಮಾಡಿಕೊಂಡಿದ್ದರು. 1991ರಲ್ಲಿ ಲ್ಯಾಂಡ್ ಟ್ರಿಬ್ಯೂನಲ್ 4 ಜನಕ್ಕೆ40 ಯೂನಿಟ್ ಮಂಜೂರು ಮಾಡಿತು. ಆದರೆ ಶ್ರೀ ಕೃಷ್ಣ ಮೋಹನನಂದಗಿರಿ ಉಚ್ಚ ನ್ಯಾಯಾಲಯಕ್ಕೆ ಹೋದರು. ನ್ಯಾಯಾಲಯ ಆದೇಶವನು ಸ್ಕ್ವಾಶ್ ಮಾಡಿ ಮರು ವಿಚಾರಣೆಗೆ ಹಾಕಿತು. ಮತ್ತೆ 1999ರಲ್ಲಿ ಮತ್ತೆ ಎರಡನೇ ಭೂ ನ್ಯಾಯಮಂಡಳಿ 40 ಯೂನಿಟ್ ಮಂಜೂರು ಮಾಡಿತು. ಆನಂತರ ಭೀಷ್ಮಪಿತ ಅವರ ಮಕ್ಕಳು ನಾವು 9 ಮಂದಿ ಇದ್ದೇವೆ. ಹಿಂದೂ ಅವ್ಯಕ್ತ ಕುಟುಂಬದ ಪ್ರಕಾರ 53/64 ಪ್ರಕಾರ ನಮಗೂ ಮಂಜೂರು ಮಾಡಬೇಕೆಂದು ನ್ಯಾಯಾಲಯಕ್ಕೆ ಹೋದರು. ನ್ಯಾಯಾಲಯ 2006ರಲ್ಲಿ ಎರಡನೇ ಬಾರಿಯೂ ಸ್ಕ್ವಾಶ್ ಮಾಡಿತು. ನಂತರ ಮೂರನೇ ಟ್ರಿಬ್ಯೂನಲ್‌ನಲ್ಲಿ 2007ರಿಂದ 2011ರವರೆಗೆ ವಿಚಾರಣೆ ನಡೆಯಿತು. ಅವರ ಕುಟುಂಬದಲ್ಲಿದ್ದ 9 ಜನಕ್ಕೆ ಟ್ರಿಬ್ಯೂನಲ್ ಒಬ್ಬೊಬ್ಬರಿಗೆ 10 ಯೂನಿಟ್ ಮಂಜೂರು ಮಾಡಿತು. (10 ಯೂನಿಟ್ ಗೆ 54ಎಕರೆ.) ಒಟ್ಟು 90 ಯೂನಿಟ್ ಮಂಜೂರು ಆಗಿತ್ತು. ಆಗ ತಹಸೀಲ್ದಾರರಾಗಿದ್ದ ನವೀನ್ ಜೋಸೆಫ್ ಈ ವಿಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಈ ತೀರ್ಮಾನಕ್ಕೆ ಟ್ರಿಬ್ಯೂನಲ್ ಸದಸ್ಯರು ಒಪ್ಪಿದ್ದಾರೆ. ಆದರೆ ಅಧ್ಯಕ್ಷರು ಒಪ್ಪಿಲ್ಲ. ಇದನ್ನು ಉಚ್ಚ ನ್ಯಾಯಾಲಯದ ಅನುಮತಿಗೆ ಹಾಕಬೇಕೆ? ಅಥವಾ ಖಾತೆ ಮಾಡಬೇಕೆ? ಸ್ಪಷ್ಟೀಕರಣ ಕೊಡಿ ಎಂದು ಕೇಳಿ ಪತ್ರ ಬರೆದಿದ್ದರು. ಆಗಿನ ಜಿಲ್ಲಾಧಿಕಾರಿ ವಸ್ತ್ರದ್ ಅವರು ಭೂನ್ಯಾಯ ಮಂಡಳಿ ಆದೇಶದಂತೆ ನಿಯಮಾನುಸಾರ ಖಾತೆ ಮಾಡಿ ಎಂದು ಆದೇಶ ಕೊಟ್ಟಿದ್ದರು. ಆದೇಶದಂತೆ 90 ಯೂನಿಟ್ ಗೆ ಖಾತೆಯಾಯಿತು. ನಂತರ ಶ್ರೀ ಕೃಷ್ಣ ಮೋಹನಾನಂದಗಿರಿ ಗೋಸ್ವಾಮಿ ಅವರು ಎಸಿ ನ್ಯಾಯಾಲಯಕ್ಕೆ ಅಪೀಲ್ ಹೋದರು ಎಸಿ ನ್ಯಾಯಾಲಯ ಟ್ರಿಬ್ಯೂನಲ್ ಆದೇಶವನ್ನು ಎತ್ತಿ ಹಿಡಿಯಿತು. ಮತ್ತೆ ಡಿಸಿ ನ್ಯಾಯಾಲಯಕ್ಕೆ ಹೋದರು. ಜಿಲ್ಲಾಧಿಕಾರಿ ಸಿ.ಶಿಖಾ ಅವರೂ ಟ್ರಿಬ್ಯೂನಲ್ ಆದೇಶ ಎತ್ತಿ ಹಿಡಿದರು. ಗೋಸ್ವಾಮಿಯವರು ಮತ್ತೆ ಉಚ್ಚ ನ್ಯಾಯಾಲಯಕ್ಕೆ ಹೋದರು. ಉಚ್ಚ ನ್ಯಾಯಾಲಯ ಕೂಡ ಟ್ರಿಬ್ಯೂನಲ್ (14-5-2011 ಮೂರನೇ ನ್ಯಾಯಮಂಡಳಿ) ಆದೇಶವನ್ನೇ ಎತ್ತಿ ಹಿಡಿಯಿತು. ಟ್ರಿಬ್ಯೂನಲ್ ಅಧ್ಯಕ್ಷರಾಗಿದ್ದ ಕಷ್ಣಮೂರ್ತಿ ಕಬಿನಿ ಜಲಾಶಯದಲ್ಲಿದ್ದರು ಪರಿಹಾರ ನೀಡುವ ಸಂದರ್ಭದಲ್ಲಿ ಕೆಐಎಡಿಬಿ ಎಸ್‌ಎಲ್‌ಓ ವರ್ಗವಾದರು. ಅವರು ತಮ್ಮ ಮುಖ್ಯ ಕಚೇರಿಯಿಂದ ಅನುಮತಿ ಪಡೆದರು. ನಿಯಮಾನುಸಾರ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ವಜಾ ಆಗಿದ್ದು ಯಾವುದೇ ಮೇಲ್ಮನವಿ ಇಲ್ಲದ್ದರಿಂದ ಭೂ ಮಾಲೀಕರಿಂದ ಪೂರ್ಣ ದಾಖಲೆಗಳನ್ನು ಪಡೆದು ಪರಿಹಾರ ಕೊಡಿ ಎಂದು ತಿಳಿಸಿದರು. ನಂತರ ಪರಿಹಾರ ವಿತರಣೆಯಾಯಿತು. ಬಳಿಕ ಇದಕ್ಕೆ ಎಜಿ(ಆಡಿಟ್ ಜನರಲ್) ಯವರು 2017ರಲ್ಲಿ ಆಕ್ಷೇಪಣೆ ಸಲ್ಲಿಸಿದರು. ಒಂದು ಕುಟುಂಬಕ್ಕೆ 20 ಯೂನಿಟ್ ಮಾತ್ರ ನೀಡಬೇಕು, ನೀವು 90 ಯೂನಿಟ್ ನೀಡಿರುವುದು ತಪ್ಪು ಎಂದು ಆಕ್ಷೇಪಣೆ ವ್ಯಕ್ತ ಪಡಿಸಿದ್ದರು. ಉಚ್ಚ ನ್ಯಾಯಾಲಯವೇ ಆದೇಶ ಎತ್ತಿ ಹಿಡಿದಿದ್ದರಿಂದ ಅದನ್ನು ಯಾರೂ ಪ್ರಶ್ನೆ ಮಾಡಲು ಸಾಧ್ಯವಿರಲಿಲ್ಲ. ಮತ್ತೆ ರಿವ್ಯೂ ಪಿಟೀಶನ್ ಹಾಕಲಾಗಿತ್ತು ಆದೂ ಕೂಡ ವಜಾ ಆಯಿತು. ಈಗ ಸರ್ಕಾರದಿಂದ ಅಪೀಲ್ ಹಾಕಿದ್ದಾರೆ. ಎಲ್ಲವೂ ಕಾನೂನು ಕ್ರಮ ಬದ್ಧವಾಗಿ ನಡೆದಿದೆ ಎಂದು ರಮೇಶ್ ಬಾಬು ವಿವರವಾಗಿ ಹೇಳಿದರು. ಎಜಿ ರಿಪೋರ್ಟ್ ಆಧಾರದ ಮೇಲೆ ಪಬ್ಲಿಕ್ ಅಕೌಂಟ್ ಕಮಿಟಿ ಅಧ್ಯಕ್ಷ ಕೃಷ್ಣ ಭೈರೇಗೌಡ ಸಿಐಡಿಗೆ ವಹಿಸಿದ್ದಾರೆ. ಈ ಬಗ್ಗೆ ಯಾರೂ ದೂರು ನೀಡಿಲ್ಲ. ಭೂ ನ್ಯಾಯಮಂಡಳಿ ಆದೇಶವನ್ನು ಪಾಲಿಸಿದ್ದೇವೆ. ಕೆಐಎಡಿಬಿ ಕೂಡ ಮುಖ್ಯ ಕಚೇರಿಯಿಂದ ಅನುಮತಿ ಪಡೆದು ಪರಿಹಾರ ನೀಡಿದ್ದಾರೆ ಎಂದು ಹೇಳಿದ್ದಾರೆ.