ಕನಸು ಕಾಣಬೇಕು, ನನಸು ಮಾಡುವ ಛಲ ಇರಬೇಕು-ಬಿ.ವಿ. ಸೂರ್ಯನಾರಾಯಣ
ಉಪ್ಪಿನಂಗಡಿ: ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಕನಸು ಕಾಣಬೇಕು, ಅದನ್ನು ನನಸು ಮಾಡುವ ಛಲ ಇರಬೇಕು ಆಗ ಮಾತ್ರ ತಮ್ಮ ಗುರಿ ಸಾಧಿಸಲು ಸಾಧ್ಯ ಎಂದು ಬೆಳ್ಳಾರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಬಿ.ವಿ. ಸೂರ್ಯನಾರಾಯಣ ಹೇಳಿದರು.
ಅವರು ಡಿ. 31ರಂದು ಉಪ್ಪಿನಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ ಸರ್ಕಾರಿ ಶಾಲೆ, ಕಾಲೇಜಿನ ಬಗ್ಗೆ ಬಹಳಷ್ಟು ಮಂದಿಯಲ್ಲಿ ತಾತ್ಸರ ಭಾವನೆಗಳಿವೆ. ಆದರೆ ಇಲ್ಲಿನ ವಿದ್ಯಾರ್ಥಿಗಳಲ್ಲಿ ಇರುವ ಪ್ರತಿಭೆ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸವಾಲು ಒಡ್ಡುವಂತಿದೆ ಎಂದ ಅವರು ಪ್ರತಿಯೊಂದು ಕ್ಷೇತ್ರದಲ್ಲೂ ಸವಾಲು ಇದೆ, ಸವಾಲನ್ನು ಸ್ವೀಕರಿಸಿ, ಅದನ್ನು ಜಯಿಸಿ ಮುಂದೆ ಬಂದರೆ ತಾವು ಎತ್ತರಕ್ಕೆ ಬೆಳಿಯುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದರು.
ಕಾಲೇಜಿನ ಹಿರಿಯ ವಿದ್ಯಾರ್ಥಿ, ಚಿಕ್ಕಮಗಳೂರು ಪೊಲೀಸ್ ಇನ್ಸ್ಪೆಕ್ಟರ್ ಸಲೀಂ ಅಬ್ಬಾಸ್ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿ ಮತ್ತು ಕಾನೂನಿನ ಅರಿವುನೊಂದಿಗೆ ಕಲಿಕೆಯಲ್ಲಿ ತೊಡಗಿಕೊಂಡರೆ ವಿದ್ಯಾರ್ಥಿ ದಿಸೆಯಿಂದಲೇ ಉತ್ತಮ ವ್ಯಕ್ತಿತ್ವವನ್ನು ರೂಪಿಸಲು ಸಾದ್ಯ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಮುಳಿಯ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಸುರೇಶ್ ಅತ್ರಮಜಲು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸನ್ಮಾನ:
ಸಮಾರಂಭದಲ್ಲಿ ನಿವೃತ್ತ ಯೋಧ ವಿಶ್ವನಾಥ ಶೆಣೈ, ಪೊಲೀಸ್ ಅಧಿಕಾರಿ ಸಲೀಂ ಅಬ್ಬಾಸ್, ಉಪನ್ಯಾಸಕರಾದ ದಯಾನಂದ, ಕಾತ್ಯಾಯಿನಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ, ರೊಟರಿ ಕ್ಲಬ್ ಮಾಜಿ ಅಧ್ಯಕ್ಷ ಅಜೀಜ್ ಬಸ್ತಿಕ್ಕಾರ್ ಮತ್ತಿತರರು ಉಪಸ್ಥಿತರಿದ್ದರು.
ಉಪನ್ಯಾಸಕ ಹರಿಶಂಕರ ಸ್ವಾಗತಿಸಿ, ಪ್ರಾಂಶುಪಾಲರಾದ ಸುಧೀರ್ ಕುಮಾರ್ ಶಾಲಾ ವಾರ್ಷಿಕ ವರದಿ ಮಂಡಿಸಿದರು. ರಮೇಶ್ ಹೆಚ್.ಜೆ. ವಂದಿಸಿದರು. ಇಬ್ರಾಹಿಂ ಎಂ., ಅಮೃತ ರಶ್ಮಿ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.