* ಮಕ್ಕಳಿಗೆ ಸಂಸ್ಕಾರ ನೀಡಿದರೆ ವೃದ್ಧಾಶ್ರಮಕ್ಕೆ ಸೇರಿಸುವುದು ನಿಲ್ಲುತ್ತದೆ-ಸುಬ್ರಹ್ಮಣ್ಯ ಶ್ರೀ
* ಭವ್ಯಕಾಶಿಯಂತೆ ವಿಷ್ಣುಮೂರ್ತಿ ದೈವಸ್ಥಾನ ನಿರ್ಮಾಣ-ಶಾಸಕ ಮಠಂದೂರು
ಪುತ್ತೂರು: ಮಕ್ಕಳಿಗೆ ಧರ್ಮ, ಸಂಸ್ಕಾರ ನೀಡಿ ಮಕ್ಕಳನ್ನು ಬೆಳೆಸಿದರೆ ವಯಸ್ಸಾದಾಗ ನಮ್ಮನ್ನು ವೃದ್ಧಾಶ್ರಮಕ್ಕೆ ಸೇರಿಸಬೇಕೆನ್ನುವ ಭಾವನೆ ಮಕ್ಕಳಿಗೆ ಬರಲು ಸಾಧ್ಯವಿಲ್ಲ. ಧರ್ಮ, ಸಂಸ್ಕಾರವನ್ನು ಪೋಷಕರ ಜೀವನದಲ್ಲಿ ಅಳವಡಿಸಿಕೊಂಡು, ರಕ್ಷಣೆ ಮಾಡಿದಾಗ ಅದು ಮಕ್ಕಳಲ್ಲಿಯೂ ಬಂದು ನಮ್ಮನ್ನು ಕಾಪಾಡಲು ಸಾಧ್ಯವಿದ್ದು ಸನಾತನ ಧರ್ಮ, ಸಂಸ್ಕೃತಿ ಕಾಪಾಡುವ ಕೆಲಸ ಪ್ರಥಮವಾಗಿ ಆಗಬೇಕು ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿಯವರು ಹೇಳಿದರು.
ಮುಂಡೂರು ಅಜಲಾಡಿ ಉದಯಗಿರಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಪುನಃಪ್ರತಿಷ್ಠೆ ಬ್ರಹ್ಮಕಲಶೋತ್ಸವದ ಅಂಗವಾಗಿ ಜ.1ರಂದು ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ನಮ್ಮ ನಡತೆಯೇ ಧರ್ಮ. ಸಂಸ್ಕಾರ, ಸಂಸ್ಕೃತಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಧರ್ಮ. ದೇವಸ್ಥಾನ, ದೈವಸ್ಥಾನ ಉಳಿಸಿಸುವ ಮೂಲಕ ಧರ್ಮ ಉಳಿಸಬೇಕು. ಕೇವಲ 57 ದಿನದಲ್ಲಿ ದೈವಸ್ಥಾನವನ್ನು ಅದ್ಬುತ ರೀತಿಯಲ್ಲಿ ನಿರ್ಮಿಸಿರುವುದೇ ಬಹು ದೊಡ್ಡ ಸಾಧನೆಯಾಗಿದೆ. ಇಲ್ಲಿ ಭಕ್ತಿ ಉಕ್ಕಿ ಬರುತ್ತಿದ್ದು ಮಾದರಿಯಾಗಿ ದೈವಸ್ಥಾನ ನಿರ್ಮಾಣಗೊಂಡಿದೆ ಎಂದರು. ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ನೀಡಿ ಬೆಳೆಸುವ ಹೊಣೆ ಪೋಷಕರಿಗಿದೆ. ಇಲ್ಲದಿದ್ದರೆ ಯಾವುದೇ ಆಮಿಷಕ್ಕೆ ಬಲಿಯಾಗಿ ಜೀವನನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬರಬಹುದು. ಹೆಣ್ಣು ಮಕ್ಕಳನ್ನು ಸಾಮಾಜಿಕ ಜಾಲತಾಣಗಳಿಂದ ದೂರವಿರುವಂತೆ ಮಾಡಬೇಕು. ತಾತ್ಕಾಲಿಕ ಆಕರ್ಷಣೆಗೆ ಒಳಗಾಗಬಾರದು. ಇದರಲ್ಲಿ ಮೊಸ ಮಾಡಿ, ಭಯೋತ್ಪಾದಕರನ್ನಾಗಿ ಸೇರಿಸುವ ಸಾಧ್ಯತೆಗಳಿವೆ ಎಂದು ಸ್ವಾಮಿಜಿಯವರು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಪ್ರಧಾನಿ ಮೋದಿಯವರು ದಿವ್ಯ ಕಾಶಿಯನ್ನು ಭವ್ಯ ಕಾಶಿಯನ್ನಾಗಿ ಮಾಡಿದಂತೆ ಉದಯಗಿರಿ ವಿಷ್ಣುಮೂರ್ತಿ ದೈವಸ್ಥಾನವನ್ನು ಅದೇ ಮಾದರಿಯಲ್ಲಿ ನಿರ್ಮಾಣಗೊಂಡಿದ್ದು ದಿವ್ಯತೆ, ಭವ್ಯತೆಯಿಂದ ಪೂಜಿಸುವಂತೆ ಮಾಡಿದ್ದಾರೆ. ಭವ್ಯ ಕ್ಷೇತ್ರ ನಿರ್ಮಿಸಿ ಇಲ್ಲಿನ ಜನತೆ ಕೃತಾರ್ಥರಾಗಿದ್ದೀರಿ ಎಂದರು. ದೈವಸ್ಥಾನ, ದೇವಸ್ಥಾನಗಳ ನಿರ್ಮಾಣ ಇತಿಹಾಸ ಸೃಷ್ಟಿಸಿದಂತೆ. ಪ್ರಜಾಪರಂಪರೆಯಲ್ಲಿ ಪ್ರಜೆಗಳೇ ದೈವಸ್ಥಾನ ನಿರ್ಮಿಸಿ ತಾವು ಇತಿಹಾಸ ಸೃಷ್ಠಿಸಿ ಪುರಾತನ ಪರಂಪರೆಯನ್ನು ಮುಂದಿನ ಪೀಳಿಗೆಗೂ ಉಳಿಸಿಕೊಡುವ ಕೆಲಸವಾಗಿದೆ. ಹಿಂದು ಸಮಾಜವನ್ನು ಒಟ್ಟಾಗಿ ಹಿಂದುತ್ವ ಕಡೆಗೆ ಕೊಂಡೊಯ್ಯುವ ಕೆಲಸ ವಿಷ್ಣುಮೂರ್ತಿ ದೈವಸ್ಥಾನದ ಮೂಲಕ ನಡೆದಿದೆ ಎಂದ ಅವರು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಈಗಾಗಲೇ ಅನುದಾನ ನೀಡಲಾಗಿದೆ. ಮುಂದಿನ ಅಭಿವೃದ್ಧಿ ಕಾರ್ಯಗಳಿಗೂ ಧಾರ್ಮಿಕ ದತ್ತಿ ಇಲಾಖೆಯಿಂದ ಅನುದಾನ ನೀಡಲು ಪ್ರಯತ್ನಿಸುವುದಾಗಿ ತಿಳಿಸಿದರು.
ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಸಣ್ಣ ಮಟ್ಟದಲ್ಲಿ ನಡೆಯುತ್ತಿದ್ದ ಒತ್ತೆಕೋಲ ವಿಜೃಂಭಣೆಯಿಂದ ನಡೆಯುತ್ತದೆ. ದೈವ ಸಾನಿಧ್ಯವನ್ನು ಅದ್ಬುತವಾಗಿ ನಿರ್ಮಿಸುವ ಮೂಲಕ ಇತಿಹಾಸದ ಸೃಷ್ಠಿಸಿದ್ದು ಸಮಿತಿಯವರು ಅಭಿನಂದನೀಯರು ಎಂದರು. ಮಕ್ಕಳಿಗೆ ಧಾರ್ಮಿಕ ಶಿಕ್ಷಣ ದೊರೆತಾಗ ಎಂತಹ ಸಂದರ್ಭದಲ್ಲಿಯೂ ವಿಚಲಿತರಾಗುವುದಿಲ್ಲ. ಶ್ರದ್ಧಾ ಕೇಂದ್ರಗಳ ಮೂಲಕ ಮಕ್ಕಳಿಗೆ ಧಾರ್ಮಿಕ ಪ್ರಜ್ಞೆ ಮೂಡಿಸುವ ಕೆಲಸವಾಗಬೇಕು. ತಾಲೂಕಿನಲ್ಲಿ 15 ಕೇಂದ್ರಗಳಲ್ಲಿ1200 ಮಕ್ಕಳು ಧಾರ್ಮಿಕ ಶಿಕ್ಷಣ ಪಡೆಯುತ್ತಿದ್ದಾರೆ. ಹೀಗಾಗಿ ಉದಯಗಿರಿಯಲ್ಲಿಯೂ ಧಾರ್ಮಿಕ ಶಿಕ್ಷಣ ಪ್ರಾರಂಭಿಸುವಂತೆ ಸಲಹೆ ನೀಡಿದರು.
ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ಸಮಿತಿಯ ಪದಾಧಿಕಾರಿಗಳ ಪ್ರಯತ್ನ ಊರಿನ ಪ್ರತಿಯೊಬ್ಬರ ಸೇವಾಮನೋಭಾವದ ಕಾರ್ಯದಿಂದ ಅದ್ಬುತ ರೀತಿಯಲ್ಲಿ ಕ್ಷೇತ್ರವು ಎದ್ದುನಿಂತಿದೆ. ದೈವ ಸಾನಿಧ್ಯವನ್ನು ಸಮಗ್ರವಾಗಿ ಜೀರ್ಣೋದ್ಧಾರಗೊಳಿಸಿ, ಬ್ರಹ್ಮಕಲಶೋತ್ಸವ ನೆರವೇರಿಸುವ ಮೂಲಕ ಇಲ್ಲಿಗೆ ಬಾಧಿಸುತ್ತಿದ್ದ ದುಷ್ಟ ಶಕ್ತಿಗಳ ಉಚ್ಚಾಟನೆಯಾಗಿದೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಆನಂದ ಮಾತನಾಡಿ, ಕ್ಷೇತ್ರದ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದಿಂದ ರೂ.50ಸಾವಿರ ದೇಣಿಗೆ ನೀಡಲಾಗಿದೆ. ಜೀರ್ಣೋದ್ದಾರ, ಬ್ರಹ್ಮಕಲಶೋತ್ಸವದಲ್ಲಿ ಯೋಜನೆಯ ಪ್ರಗತಿ, ಬಂದು ಸ್ವಸಹಾಯ ಸಂಘಗಳ ಸಹಕಾರ ನೀಡಿದ್ದಾರೆ. ಇಲ್ಲಿನ ನಡೆಯುವ ಮುಂದಿನ ಕಾರ್ಯದಲ್ಲಿಯೂ ಕ್ಷೇತ್ರದ ಸಂಪೂರ್ಣ ಸಹಕಾರವಿದೆ ಎಂದರು.
ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಅತ್ಯಂತ ಕ್ಷಿಪ್ರ ಅವಧಿಯಲ್ಲಿ ಅಭೂತಪೂರ್ವ ರೀತಿಯಲ್ಲಿ ದೈವ ಸಾನಿಧ್ಯ ನಿರ್ಮಾಣವಾಗಿದೆ. ಇಲ್ಲಿ ಅಯೋಧ್ಯೆಯಂತೆ ಸವಾಲು ಎದುರಿಸಿ, ಮಾದರಿ ಕ್ಷೇತ್ರವಾಗಿ ನಿರ್ಮಾಣ ಆಗಿದೆ ಎಂದರು.
ಕೆಯ್ಯೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಳ ಮಾತನಾಡಿ, ದೈವದ ಅನುಗ್ರಹದಂತೆ ಕ್ಷೇತ್ರದ ನಿರ್ಮಾಣವಾಗಿದೆ. ಧರ್ಮ ತಿಳಿಯದಿರುವವರಿಂದ ಹಿಂದು ಧರ್ಮಕ್ಕೆ ತೊಂದರೆ ಆಗಿದೆ. ಹಿಂದುಗಳು ಜಾತೀಯತೆ ಧರ್ಮದ ಉಳಿವಿಗಾಗಿ ಎಲ್ಲರೂ ಒಂದಾಗಬೇಕು. ಆಚರಣೆಗಳಲ್ಲಿ ವೈಜ್ಞಾನಿಕ ಹಿನ್ನೆಲೆಯಿದೆ. ಕೆಯ್ಯೂರು ದೇವಸ್ಥಾನದಲ್ಲಿ ಧಾರ್ಮಿಕ ಶಿಕ್ಷಣ ಪ್ರಾರಂಭಿಸಲಾಗುವುದು ಎಂದರು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿಷ್ಣುಮೂರ್ತಿ ದೈವಸ್ಥಾನದ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಭಾಸ್ಕರ ಆಚಾರ್ ಹಿಂದಾರು ಮಾತನಾಡಿ, ದೈವದ ಪ್ರೇರಣೆ, ಅನುಗ್ರಹ ಇದ್ದರೆ ಎಂತಹ ಸವಾಲುಗಳನ್ನು ಮೆಟ್ಟಿ ನಿಲ್ಲಬಹುದು ಎನ್ನುವುದಕ್ಕೆ ಈ ಕ್ಷೇತ್ರವೇ ಉದಾಹರಣೆಯಾಗಿದೆ. ಊರಿನ ಪ್ರತಿಯೊಬ್ಬರ ಸಹಕಾರದಿಂದ ಅದ್ಬುತವಾಗಿ ಕ್ಷೇತ್ರ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿಯೂ ಯಾವುದೇ ಅಡ್ಡಿ ಆತಂಕಗಳು ಬಂದರೂ ದೈವದ ಅನುಗ್ರಹದಿಂದ ಅದನ್ನು ಮೆಟ್ಟಿ ನಿಂತು ಎದುರಿಸುವ ಶಕ್ತಿ ಜನತೆಗಿದೆ. ಅನ್ಯಧರ್ಮಿಯರ ಜೊತೆ ಸೇರಿ ಅಡ್ಡಿಯುಂಟು ಮಾಡುವವರಿಗೆ ದೈವವೇ ಬುದ್ದಿ ನೀಡಲಿ. ಕ್ಷೇತ್ರವನ್ನು ಮುಂದಿನ ದಿನಗಳಲ್ಲಿಯೂ ಉಳಿಸುವ ಕೆಲಸವಾಗಬೇಕಿದ್ದು ಪ್ರತಿಯೊಬ್ಬರೂ ಸಹಕರಿಸುವಂತೆ ಮನವಿ ಮಾಡಿದರು.
ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಪ್ರಾಸ್ತಾವಿಕವಾಗಿ ಮಾತನಾಡಿ, 57 ದಿನಗಳ ಹಿಂದೆ ಪಾಲುಬಿದ್ದಿದ್ದ ಸಾನಿಧ್ಯವು ಭವ್ಯ ಕ್ಷೇತ್ರವಾಗಿ ನಿರ್ಮಾಣಗೊಂಡಿದೆ. ಕ್ಷೇತ್ರವು ಸಮಗ್ರ ಅಭಿವೃದ್ಧಿಗೊಳಿಸಿ ಲೋಕಾರ್ಪಣೆಗೊಂಡಿದೆ. ಊರಿನ ಭಕ್ತ ಜನರ ಹೃದಯ ಶ್ರೀಮಂತಿಕೆಯಿಂದಾಗಿ ಅಲ್ಪ ದಿನಗಳಲ್ಲಿ ನಿರ್ಮಾಣಗೊಳಿಸಿ ಕೃತಾರ್ಥರಾಗಿದ್ದೇವೆ. ಆದರೂ ಇಲ್ಲಿನ ಒತ್ತೆಕೋಲ ನಿಲ್ಲಿಸಬೇಕು ಎಂಬ ಉದ್ದೇಶದಿಂದ ಸಮಿತಿಯನ್ನು ಒಡೆಯುವ ಕೆಲಸಕ್ಕೆ ಅಬ್ದುಲ್ ಕುಂಞಿ ಮೂಲಕ ಮುಂದಾಗಿದ್ದರು. ಅವನ ಮೂಲಕ ಐದು ಮಂದಿ ಸಮಿತಿಯ ಬಗ್ಗೆ ಅಪಪ್ರಚಾರ, ತೇಜೋವಧೆ ಮಾಡುವ ಪ್ರಯತ್ನ ಮಾಡಿದ್ದರು. ಅವರ ಷಡ್ಯಂತ್ರವನ್ನು ಈ ಭಾಗದ ಜನ ಸವಾಲಾಗಿ ಸ್ವೀಕರಿಸಿ, 57 ದಿನಗಳಲ್ಲಿ ಜೀರ್ಣೋದ್ಧಾರ ಪೂರ್ಣಗೊಳಿಸುವ ಮೂಲಕ ಉಡುಪಿ ಹಾಗೂ ದ.ಕ ಜಿಲ್ಲೆಯ 34 ವಿಷ್ಣುಮೂರ್ತಿ ದೈವಸ್ಥಾನದ ಪೈಕಿ ಅಜಲಾಡಿ ಉದಯಗಿರಿ ದೈವಸ್ಥಾನವು ಇತಿಹಾಸ ನಿರ್ಮಿಸಿದೆ. ಕ್ಷೇತ್ರದ ಉಳಿವಿಗಾಗಿ ಮುಂದಿನ ಸವಾಲಾಗಿ ಸ್ವೀಕರಿಸಲು ಸಿದ್ದರಿದ್ದೇವೆ ಎಂದರು.
ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಹರಿಕೃಷ್ಣ ಪಾಣಾಜೆ, ಪ್ರಧಾನ ಕಾರ್ಯದರ್ಶಿ ಗಣೇಶ್ ಸುವರ್ಣ ಬೊಲ್ಲಗುಡ್ಡೆ, ಕೋಶಾಧಿಕಾರಿ ಅನಿಲ್ ಕುಮಾರ್ ಕಣ್ಣಾರ್ನೂಜಿ, ದೈವಸ್ಥಾನದ ಅಭಿವೃದ್ಧಿ ಟ್ರಸ್ಟ್‌ನ ಕಾರ್ಯದರ್ಶಿ ಸದಾಶಿವ ಶೆಟ್ಟಿ ಪಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡಿದ ಶಾಸಕ ಸಂಜೀವ ಮಠಂದೂರು, ಮರಮುಟ್ಟು ದೇಣಿಗೆ ನೀಡಿದ ಕೆಯ್ಯೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಳ, ರಾಮಣ್ಣ ಗೌಡ ಮಾಡಾವು, ಗುಳಿಗನ ಕಟ್ಟೆ ನಿರ್ಮಾಣದ ಪ್ರಾಯೋಜಕತ್ವ ನೀಡಿದ ಸಮಿತಿ ಕೋಶಾಧಿಕಾರಿ ಅನಿಲ್ ಕುಮಾರ್ ಕಣ್ಣಾರ್ನೂಜಿ, ದೊಡ್ಡ ಮಟ್ಟದ ದೇಣಿಗೆ ನೀಡಿದ ವಾರಿಜಾಕ್ಷಿ ಶೆಟ್ಟಿ, ಮುಳಿಯ ಕೇಶವ ಪ್ರಸಾದ್, ಪವಿತ್ರ ಸುಕುಮಾರ ಶೆಟ್ಟಿ, ಪುಟ್ಟಣ್ಣ ಗೌಡ ಗುತ್ತಿನಪಾಲುರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಸಿಂದುರಶ್ಮೀ ಶೆಟ್ಟಿ, ಭಾಗ್ಯಶ್ರೀ ಶೆಟ್ಟಿ, ವಿಂದ್ಯಾಶ್ರೀ ಶೆಟ್ಟಿ ಪ್ರಾರ್ಥಿಸಿದರು. ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಸ್ವಾಗತಿಸಿದರು. ನವೀನ್ ರೈ ಪಂಜಳ ಹಾಗೂ ಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸದಾಶಿವ ಶೆಟ್ಟಿ ಲಾವಣ್ಯ ದಂಪತಿ ಸ್ವಾಮಿಜಿಯವರಿಗೆ ಫಲಪುಷ್ಪ ನೀಡಿ ಗೌರವಿಸಿದರು. ಜಯರಾಮ, ಬಾಲಕೃಷ್ಣ ಶೆಟ್ಟಿ ಪಂಜಳ, ಸಂತೋಷ್ ಶೆಟ್ಟಿ ಪಂಜಳ, ಬಾಲಕೃಷ್ಣ ಪೆರಿಯಡ್ಕ, ರಾಮ ದಂಡ್ಯನಕುಕ್ಕು, ಶೀನ ನಾಯ್ಕ ಉದಯಗಿರಿ, ರಮೇಶ್ ಅಂಚನ್, ಜನಾರ್ದನ ಹಿಂದಾರು ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು. ನವೀನ್ ಕೋಟ್ಯಾನ್, ಪ್ರವೀಣ್ ಮುಲಾರ್, ರಾಮಣ್ಣ ಕೊರುಂಗು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ದೇವದಾಸ ವಂದಿಸಿದರು.