ಗೃಹ ಸಚಿವರ ಹೇಳಿಕೆ ಖಂಡಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ

ಕಾಂಗ್ರೆಸ್ ಸರಕಾರ ಬಂದು ಖಂಡಿತವಾಗಿಯೂ ಅಡಿಕೆಗೆ ಪ್ರೋತ್ಸಾಹ-ಶಕುಂತಳಾ ಶೆಟ್ಟಿ
 ವಲಯ ಮಟ್ಟದಲ್ಲೂ ಪ್ರತಿಭಟನೆ-ಎಂ.ಬಿ.ವಿಶ್ವನಾಥ ರೈ
 ಬಿಜೆಪಿಯಿಂದ ಅಡಿಕೆ ಬೆಳೆಗಾರರನ್ನು ತುಳಿಯುವ ಕೆಲಸ-ಕೃಪಾ ಅಮರ್ ಆಳ್ವ
 ಮುಂದಿನ ಚುನಾವಣೆಯಲ್ಲಿ ನಿಮಗೆ ಭವಿಷ್ಯವಿಲ್ಲ-ಎಂ.ಎಸ್.ಮೊಹಮ್ಮದ್
 ಅಡಿಕೆ ಬೆಳೆಗಾರರ ಭವಿಷ್ಯ ಕಸಿಯುತ್ತಿರುವ ಸರಕಾರ-ಧನಂಜಯ ಅಡ್ಪಂಗಾಯ
ರೈತರ ಬೆನ್ನೆಲುಬು ಮುರಿಯುವ ಕೆಲಸ-ಡಾ.ರಾಜಾರಾಮ್
 ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತೆ-ಭರತ್ ಮುಂಡೋಡಿ
 ಜನರ ಸಮಸ್ಯೆಗೆ ಸ್ಪಂದನೆ ಇಲ್ಲದ ಸರಕಾರ-ಅಮಳ ರಾಮಚಂದ್ರ
 ಬಿಜೆಪಿಯವರಿಗೆ ಭವಿಷ್ಯವಿಲ್ಲ-ಕೌಶಲ್‌ಪ್ರಸಾದ್ ಶೆಟ್ಟಿ

ಪುತ್ತೂರು:`ಅಡಿಕೆಯ ಭವಿಷ್ಯ ಬಹಳಷ್ಟು ದಿವಸವಿಲ್ಲ.ಹಾಗಾಗಿ ಈ ಬೆಳೆಗೆ ಜಾಸ್ತಿ ಪ್ರೋತ್ಸಾಹ ಕೊಡಬಾರದು.ಅಡಿಕೆ ಜಾಸ್ತಿ ಬೆಳೆಯೋದರಲ್ಲಿ ಅರ್ಥವೇ ಇಲ್ಲ.ಏಕೆಂದರೆ ನಮ್ಮ ಭವಿಷ್ಯಕ್ಕೆ ಬಹಳ ಮಾರಕವಾಗುತ್ತದೆ’ ಎಂದು ರಾಜ್ಯ ಗೃಹ ಸಚಿವರು ಹೇಳಿಕೆ ನೀಡಿದ್ದು ಬಿಜೆಪಿ ಸರಕಾರ ಅಡಿಕೆ ಬೆಳೆಗಾರರ ಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡಿ ರೈತರ ವಿರೋಧಿಯಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಕಿಸಾನ್ ಘಟಕದ ವತಿಯಿಂದ ಜ.೨ರಂದು ಪುತ್ತೂರು ಕಿಲ್ಲೆ ಮೈದಾನದ ಅಮರ್ ಜವಾನ್ ಸ್ಮಾರಕ ಜ್ಯೋತಿಯ ಎದುರು ಪ್ರತಿಭಟನೆ ನಡೆಸಲಾಯಿತು.

ಕಾಂಗ್ರೆಸ್ ಸರಕಾರ ಬಂದು ಅಡಿಕೆಗೆ ಹೆಚ್ಚಿನ ಪ್ರೋತ್ಸಾಹ ದೊರೆಯಲಿದೆ:
ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಯವರು ಪ್ರತಿಭಟನಾ ಸಭೆಯನ್ನುದ್ದೆಶಿಸಿ ಮಾತನಾಡಿ ಸರಕಾರ ಒಳ್ಳೆಯ ಕೆಲಸ ಮಾಡುವ ಬದಲು ಅಡಿಕೆ ಬೆಳೆಗಾರರನ್ನು ತುಳಿಯುವ ಕೆಲಸಕ್ಕೆ ಕೈ ಹಾಕಿದ ಹಾಗೆ ಕಾಣುತ್ತಿದೆ.ಅಡಿಕೆಗೆ ಪ್ರೋತ್ಸಾಹ ಕೊಡಬಾರದು ಎಂದು ಗೃಹಮಂತ್ರಿ ನೀಡಿದ ಹೇಳಿಕೆಯಿಂದ ಸರಕಾರದ ಮನಸ್ಥಿತಿ ಅರ್ಥವಾಗಿದೆ.ದೈವ ದೇವರಿಗೆ ಬೂಲ್ಯ ಕೊಡುವಲ್ಲಿಂದ ಹಿಡಿದು ಮದುವೆ ಮುಂಜಿಗಳಿಗೆ ಪ್ರಥಮವಾಗಿ ಬೇಕಾದ, ಭಾರತೀಯ ಹಿಂದು ಶಾಸ್ತ್ರದಲ್ಲಿ ಬಹಳ ಗೌರವ ಹೊಂದಿರುವ ಅಡಿಕೆಗೆ ಇವತ್ತು ಅವಮಾನ ಆಗಿದೆ.ಅಡಿಕೆಗೆ ಹಳದಿ ರೋಗ ಕಾಡುತ್ತಿದ್ದಾಗ ಈ ಕುರಿತು ಮಾಧ್ಯಮದಲ್ಲಿ ಬಂದರೂ, ಎಷ್ಟೇ ಬೊಬ್ಬೆ ಹೊಡೆದರೂ ಬಿಜೆಪಿ ಸರಕಾರ ಯಾವುದೇ ಪರಿಹಾರ ನೀಡುತ್ತಿಲ್ಲ.ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರಿಗೆ ಅಡಿಕೆ ಬೆಳೆಗಾರರು ಶರಣು ಶರಣು ಹೇಳಬೇಕಾಗಿದೆ.ಯಾಕೆಂದರೆ ಅಡಿಕೆಗೆ ಬೆಂಬಲ ಬೆಲೆ ಘೋಷಣೆ ಮಾಡಿದ್ದು,ರೈತರ ಸಾಲ ಮನ್ನಾ ಮಾಡಿದ್ದು, ಬಡ್ಡಿ ರಹಿತ ಸಾಲ ನೀಡಿದ್ದು, ಕೊಳೆ ರೋಗಕ್ಕೆ ಪರಿಹಾರ ಧನ ಘೊಷಣೆ ಮಾಡಿದ್ದು ಎಲ್ಲವೂ ಕಾಂಗ್ರೆಸ್ ಸರಕಾರ.ಇವತ್ತು ಜನರಿಗೆ ಇದು ಅರ್ಥವಾಗಿದೆ.ಹಾಗಾಗಿ ಮುಂದೆ ಖಂಡಿತವಾಗಿಯೂ ನಮ್ಮ ಸರಕಾರ ಬರುತ್ತದೆ.ಆ ವೇಳೆ ಅಡಿಕೆ ಬೆಳೆಗಾರರಿಗೆ ಹೆಚ್ಚಿನ ಸಹಕಾರ ಸಿಗುತ್ತದೆ.ಬೆಂಬಲ ಬೆಲೆ ಘೋಷಣೆ ಮಾಡಲು ಎಲ್ಲರೂ ಒತ್ತಾಯ ಮಾಡುತ್ತೇವೆ ಎಂದರು.ಹಿಂದುತ್ವದ ಹೆಸರಿನಲ್ಲಿ ಬಂದ ಬಿಜೆಪಿ ಸರಕಾರ ಇವತ್ತು ಮಹಾಲಿಂಗೇಶ್ವರ ದೇವಸ್ಥಾನದ ರಥ ಮಂದಿರ ಬಳಿಯ ಅಂಗಡಿಯೊಂದನ್ನು ತೆರವು ಮಾಡುವ ಮೂಲಕ,ಒಂದು ಸಣ್ಣ ಅಂಗಡಿ ಹಾಕಿದ ಹಿಂದೂಗಳಿಗೆ ಗತಿ ಇಲ್ಲದಂತೆ ಮಾಡಿದೆ.ಇವರ ಹಿಂದುತ್ವಕ್ಕೆ ಅರ್ಥ ಉಂಟಾ ಎಂದು ಶಕುಂತಳಾ ಶೆಟ್ಟಿ ಪ್ರಶ್ನಿಸಿದರು.

ವಲಯ ಮಟ್ಟದಲ್ಲೂ ಪ್ರತಿಭಟನೆ:
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಅವರು ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದೆಷ್ಟೋ ರೈತರು ತಮ್ಮ ಮಕ್ಕಳ ಭವಿಷ್ಯವನ್ನು ಅಡಿಕೆ ಬೆಳೆ ಮೇಲೆ ಹೊಂದಿಕೊಂಡಿದ್ದಾರೆ. ಅದೆಷ್ಟೋ ಕೂಲಿ ಕಾರ್ಮಿಕರು, ವ್ಯಾಪಾರಸ್ಥರು ಕೂಡಾ ಅಡಿಕೆ ಬೆಳೆಯನ್ನು ಅವಲಂಬಿಸಿದ್ದಾರೆ.ಪರ್ಯಾಯ ಬೆಳೆ ರಬ್ಬರ್ ನಮ್ಮಲ್ಲಿ ಸರಿಯಾಗಿ ಆಗುವುದಿಲ್ಲ.ಒಳ್ಳೆ ಮೆಣಸಿಗೂ ಸರಿಯಾದ ಬೆಲೆ ಇಲ್ಲ.ಅಡಿಕೆ ಬಿಟ್ಟರೆ ಬೇರೆ ಯಾವ ಬೆಳೆಯೂ ನಮ್ಮ ದಕ್ಷಿಣ ಕನ್ನಡ ಜಿಲ್ಲೆಗೆ ಯೋಗ್ಯವಾದದ್ದು ಅಲ್ಲ.ನಮಗೆ ಈ ಬೆಳೆ ಬಿದ್ದು ಹೋದರೆ ನಾವು ಕೂಡಾ ಬಿಜಾಪುರದವರ ಹಾಗೆ ಇರಬೇಕಾದೀತು.ಹಾಗಾಗಿ ಸರಕಾರ ಅಡಿಕೆ ಬೆಳೆಯನ್ನು ಉಳಿಸುವ ಕೆಲಸ ಮಾಡಬೇಕು.ಈ ನಿಟ್ಟಿನಲ್ಲಿ ಮುಂದೆ ಎಲ್ಲಾ ವಲಯ ಮಟ್ಟದಲ್ಲೂ ಪ್ರತಿಭಟನೆ ಮತ್ತು ಜಾಥಾ ನಡೆಸಿ ಎಲ್ಲರನ್ನು ಎಚ್ಚರಿಸಲಿದೆವೆ ಎಂದರು.

ಬಿಜೆಪಿಯಿಂದ ಅಡಿಕೆ ಬೆಳೆಗಾರರನ್ನು ತುಳಿಯುವ ಕೆಲಸ:
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ಕೃಪಾ ಅಮರ್ ಆಳ್ವ ಅವರು ಮಾತನಾಡಿ ಕೃಷಿ ಮುಂದೆ ಹೋದರೆ ಮಾತ್ರ ನಮ್ಮ ದೇಶ ಮುಂದೆ ಹೋಗುತ್ತದೆ.೨೦೨೨ನಲ್ಲಿ ಕಿಸಾನ್ ದುಪ್ಪಟ್ಟು ಸಹಕಾರ ನೀಡುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದರು.ಆದರೆ ಇವತ್ತು ಅದನ್ನು ದುಪ್ಪಟ್ಟು ಮಾಡುವ ಬದಲು ತುಳಿಯುವ ಕಾರ್ಯವನ್ನು ಸರಕಾರ ಮಾಡುತ್ತಿದೆ.ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅಡಿಕೆ ಬೆಳೆಗಾರರನ್ನು ತುಳಿಯುವ ಅರ್ಥದ ಬೇಜವಾಬ್ದಾರಿ ಹೇಳಿಕೆ ನೀಡಿರುವುದು ಖಂಡನೀಯ ಎಂದರು.ಮೋದಿಯವರು ಮೇಡ್ ಇನ್ ಇಂಡಿಯಾ ಎಂದು ಹೇಳುತ್ತಾರೆ.ಮತ್ತೊಂದು ಕಡೆ ಅಡಿಕೆಯನ್ನು ಆಮದು ಮಾಡುತ್ತಾರೆ.ಇಂತಹ ಪರಿಸ್ಥಿತಿಯಲ್ಲಿ ಡಬಲ್ ಇಂಜಿನ್ ಸರಕಾರ ಏನು ಮಾಡುತ್ತಿದೆ ಎಂದು ಅವರು ಪ್ರಶ್ನಿಸಿದರು.

ಮುಂದಿನ ಚುನಾವಣೆಯಲ್ಲಿ ನಿಮಗೆ ಭವಿಷ್ಯವಿಲ್ಲ:
ಜಿ.ಪಂ ಮಾಜಿ ಉಪಾಧ್ಯಕ್ಷ ಎಂ.ಎಸ್ ಮೊಹಮ್ಮದ್ ಅವರು ಮಾತನಾಡಿ ಅಡಿಕೆ ವಿಚಾರದಲ್ಲಿ ಭವಿಷ್ಯ ಇಲ್ಲವೆಂದು ನಿರ್ಲಕ್ಷ್ಯ ತೋರಿದ ರಾಜ್ಯ ಬಿಜೆಪಿ ಸರಕಾರವನ್ನು ರಾಜ್ಯದ ಅಡಿಕೆ ಬೆಳೆಗಾರರು ಮುಂದಿನ ಚುನಾವಣೆಯಲ್ಲಿ ನಿಮಗೆ ಭವಿಷ್ಯ ಇಲ್ಲದಂತೆ ಮಾಡಲಿದ್ದಾರೆ.ಭೂಮಸೂದೆ ಮೂಲಕ ಕೃಷಿ, ಭೂಮಿ, ಉಚಿತ ವಿದ್ಯುತ್ ನೀಡಿದ್ದು ಕಾಂಗ್ರೆಸ್ ಸರಕಾರ.ಆದರೆ ಅಡಿಕೆಯನ್ನು ನಿರ್ನಾಮ ಮಾಡುತ್ತಿರುವುದು ಬಿಜೆಪಿ ಸರಕಾರ ಎಂದರು.ಬಿಜೆಪಿ ಸರಕಾರಕ್ಕೆ ಭವಿಷ್ಯದಲ್ಲಿ ಯಾವ ಪ್ರತಿಭಟನೆಯೂ ಅರ್ಥವಾಗುತ್ತಿಲ್ಲ.ಇದೊಂದು ಕಣ್ಣು, ಮನಸ್ಸು, ಹೃದಯವಿಲ್ಲದ ಸರಕಾರ. ಅತ್ಯಂತ ದುರ್ಬಲ ಮುಖ್ಯಮಂತ್ರಿ ಇಲ್ಲಿದ್ದಾರೆ ಎಂದು ಅವರು ಹೇಳಿದರು.

ಅಡಿಕೆ ಬೆಳೆಗಾರರ ಭವಿಷ್ಯ ಕಸಿಯುತ್ತಿರುವ ಸರಕಾರ:
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಅವರು ಮಾತನಾಡಿ ಅಡಿಕೆ ವಿಚಾರದಲ್ಲಿ ಅಸಮರ್ಪಕ ಹೇಳಿಕೆ ನೀಡಿದ ಗೃಹ ಮಂತ್ರಿ ಆರಗ ಜ್ಞಾನೇಂದ್ರ ಅವರು ಜ್ಞಾನಿಗಳೇ ಅಥವಾ ಅಜ್ಞಾನಿಗಳೇ ಎಂದು ಪ್ರಶ್ನೆ ಮಾಡಬೇಕಾಗಿದೆ.೨೦೧೧ರಲ್ಲಿಯೇ ಗೋರಕ್‌ನಾಥ್ ಸಮಿತಿ ಬಂದಿದ್ದರೂ ಬಿಜೆಪಿ ಆಡಳಿತ,ಇದೀಗ ಚುನಾವಣೆಗೆ ಒಂದು ತಿಂಗಳು ಇರುವಾಗ ಸಮಿತಿಗೆ ವಿಜ್ಞಾನಿಗಳನ್ನು ನೇಮಕ ಮಾಡುತ್ತಿದೆ.ಇವತ್ತು ಅಡಿಕೆ ಬೆಳೆಗೆ ಭವಿಷ್ಯ ನಿರ್ಮಾಣ ಮಾಡುವ ವೇದಿಕೆಯಲ್ಲಿ ಭವಿಷ್ಯ ಕಸಿಯುವ ಕೆಲಸ ಆಗುತ್ತಿದೆ.ಈ ನಿಟ್ಟಿನಲ್ಲಿ ಭವಿಷ್ಯದಲ್ಲಿ ಬಿಜೆಪಿಯನ್ನು ಸೋಲಿಸಿ, ಕಾಂಗ್ರೆಸ್‌ನ್ನು ಗೆಲ್ಲಿಸಬೇಕೆಂದು ಹೇಳಿದರು.

ರೈತರ ಬೆನ್ನೆಲುಬು ಮುರಿಯುವ ಕೆಲಸ:
ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ.ಅವರು ಮಾತನಾಡಿ ದೇಶದ ಬೆನ್ನೆಲುಬು ರೈತರು ಎಂದು ಹೇಳಿ ಇವತ್ತು ಬಿಜೆಪಿ ಸರಕಾರದಿಂದ ರೈತರ ಬೆನ್ನೆಲುಬು ಮುರಿಯುವ ಕೆಲಸ ಆಗಿದೆ.ರಾಜ್ಯದ ೧೨ ಜಿಲ್ಲೆಗಳಲಿ ಸುಮಾರು ೨ ಕೋಟಿಯಷ್ಟು ಜನರು ಅಡಿಕೆ ಬೆಳೆಸುತ್ತಿದ್ದಾರೆ.ಈ ನಡುವೆ ಹಳದಿ ರೋಗ, ಎಲೆಚುಕ್ಕಿ ರೋಗದಿಂದ ಅಡಿಕೆ ಬೆಳೆಗೆ ಹಾನಿಯಾಗಿದೆ.ಆದರೆ ಬಿಜೆಪಿ ಸರಕಾರದ ಗೃಹ ಮಂತ್ರಿ, ಅರೆಜ್ಞಾನ ಹೊಂದಿರುವ ಅರೆಜ್ಞಾನೇಂದ್ರ ಆಗಿ ವಿವಿಧ ಹೇಳಿಕೆ ನೀಡುವ ಮೂಲಕ ರೈತ ವಿರೋಧಿ ಧೋರಣೆ ಮಾಡುತ್ತಾ ರೈತರಿಗೆ ಮರಣಶಾಸನ ಹೊರಡಿಸುತ್ತಿದ್ದಾರೆ ಎಂದರು.

ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತೆ:
ಕೆಪಿಸಿಸಿ ವಕ್ತಾರ ಭರತ್ ಮುಂಡೋಡಿ ಅವರು ಮಾತನಾಡಿ ಗೃಹ ಮಂತ್ರಿ ಆರಗ ಜ್ಞಾನೇಂದ್ರ ಅವರಿಗೆ ಸಾಮಾನ್ಯ ಜ್ಞಾನ ಇಲ್ಲ.ಯಾಕೆಂದರೆ ಅವರು ಆರ್‌ಎಸ್‌ಎಸ್‌ನ ಬೈಠಕ್‌ನಿಂದ ರಾಜಕೀಯಕ್ಕೆ ಬಂದವರು.ನಾವೆಲ್ಲ ಕೃಷಿ ಮಾಡಿ ರಾಜಕೀಯಕ್ಕೆ ಬಂದವರು.ಇವರಿಗೆ ಜನಪರ ಕೆಲಸ ಮಾಡಲು ಗೊತ್ತಿಲ್ಲ ಹಾಗಾಗಿ ಇವರಿಗೆ ಸರಕಾರ ಕೊಟ್ಟಿರುವುದು ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತಾಗಿದೆ.ಇವತ್ತು ಜನರ ಸಮಸ್ಯೆಗೆ ಪ್ರತಿ ಇಲಾಖೆಯ ಹೊರಗೆ ಕಾಂಗ್ರೆಸ್ ಕಾರ್ಯಕರ್ತರು ನೆರವಾಗುತ್ತಿದ್ದಾರೆ.ಆದರೆ ಬಿಜೆಪಿ ಕಾರ್ಯಕರ್ತರು ಇಲಾಖೆ ಕಚೇರಿಯೊಳಗೆ ವಿ.ಎ.ಗಳೊಂದಿಗೆ ಕೂತು ಶೇ.೪೦ ಕಮಿಷನ್ ದಂಧೆ ಮಾಡುತ್ತಿದ್ದಾರೆ.ಇವರ ಬ್ರೋಕರ್ ಹಾವಳಿಯಿಂದ ಇವತ್ತು ಜನಪರ ಕೆಲಸ ಆಗುತ್ತಿಲ್ಲ ಎಂದು ಆರೋಪಿಸಿದರು.

ಜನರ ಸಮಸ್ಯೆಗೆ ಸ್ಪಂದನೆ ಇಲ್ಲದ ಸರಕಾರ:
ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಅವರು ಮಾತನಾಡಿ ಅಧಿಕಾರ ಇದೆ ಎಂದು ಹೇಳಿ ಬಾಯಿಗೆ ಬಂದ ಹಾಗೆ ಮಾತನಾಡುವ ಬಿಜೆಪಿಗರು ಇವತ್ತು ಜನರ ಸಮಸ್ಯೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ.ಸಂಜೀವ ಮಠಂದೂರು ಅವರಿಗೆ ಅಡಿಕೆ ಬೆಳೆಗಾರರ ಮೇಲೆ ಪ್ರೀತಿ ಇರುತ್ತಿದ್ದರೆ ಹಳದಿ ರೋಗ, ಎಲೆಚುಕ್ಕಿ ರೋಗಕ್ಕ ಔಷಧಿಗೆ ಸಂಶೋಧನೆ ಮಾಡಲು ಸಿಪಿಸಿಆರ್‌ಐಗೆ ಸೂಚನೆ ನೀಡುವಂತೆ ತಿಳಿಸಬೇಕಾಗಿತ್ತು.ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಈ ಹಿಂದೆ ಅಡಿಕೆಗೆ ಬೆಂಬಲ ಬೆಲೆಗಾಗಿ ಜಾಥಾ ಮಾಡುವ ಮೂಲಕ ಎಲ್ಲೆಲ್ಲೋ ಹೋಗಿ ಮಲಗುವ ಬದಲು ಅಡಿಕೆ ಬೆಳಗಾರರ ಪರವಾಗಿ ಇಲ್ಲಿ ಹೋರಾಟ ಮಾಡಲಿ ಎಂದರು.

ಬಿಜೆಪಿಯವರಿಗೆ ಭವಿಷ್ಯವಿಲ್ಲದಂತೆ ಮಾಡಲಿದ್ದಾರೆ:
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿಯವರು ಮಾತನಾಡಿ ಸರಕಾರದ ಬೇಜವಾಬ್ದಾರಿ ಹೇಳಿಕೆಯಿಂದ ಭವಿಷ್ಯದಲ್ಲಿ ಬಿಜೆಪಿಯವರಿಗೆ ಭವಿಷ್ಯ ಇಲ್ಲದಂತೆ ಜನರು ಮಾಡಲಿದ್ದಾರೆ.ನಮ್ಮ ಪ್ರತಿಭಟನೆ ಗ್ರಾಮ ಗ್ರಾಮಗಳಲ್ಲಿ ಮುಂದುವರಿಯಲಿದೆ ಎಂದರು.ಪ್ರತಿಭಟನೆಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿ, ಜಿಲ್ಲಾ ಸೇವಾದಳದ ಅಧ್ಯಕ್ಷ ಜೋಕಿಂ ಡಿ ಸೋಜಾ,ದ.ಕ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸೋಮನಾಥ, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಅಭಿಷೇಕ್ ಬೆಳ್ಳಿಪ್ಪಾಡಿ, ಪ್ರಧಾನ ಕಾರ್ಯದರ್ಶಿ ರಂಜಿತ್ ಬಂಗೇರ, ನಗರ ಸಭಾ ಮಾಜಿ ಅಧ್ಯಕ್ಷೆ ಶ್ರೀಮತಿ ಜಯಂತಿ ಬಲ್ನಾಡ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಶಾರದಾ ಅರಸ್,ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಶ್ರೀಮತಿ ಸಾಹಿರ ಝುಬೈರ್,ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ಲ್ಯಾನ್ಸಿ ಮಸ್ಕರೇನಸ್, ಅನ್ವರ್ ಖಾಸಿಂ, ಅಲ್ಪ ಸಂಖ್ಯಾತ ಘಟಕದ ಜಿಲ್ಲಾ ಕಾರ್ಯದರ್ಶಿ ಅಬೂಬಕ್ಕರ್ ಕೊರಿಂಗಿಲ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಮೌರೀಸ್ ಮಸ್ಕರೇನಸ್, ಅಲಿಕುಂಞಿ ಕೊರಿಂಗಿಲ, ಮಹಾಬಲ ರೈ ಒಳತಡ್ಕ, ಮನೋಹರ್ ರೈ ಎಂಡೆಸಾಗು, ಯಾಕೂಬು ಮುಲಾರ್, ಕೃಷ್ಣಪ್ರಸಾದ್ ಆಳ್ವ, ವಲಯ ಕಾಂಗ್ರೆಸ್ ಅಧ್ಯಕ್ಷರುಗಳಾದ ಬಾಬು ರೈ ಕೋಟೆ, ಪುರಂದರ ರೈ ಕೋರಿಕ್ಕಾರ್, ಮೂಸಾನ್ ನೆಟ್ಟಣಿಗೆ ಮುಡ್ನೂರು,ಗೋಪಾಲಕೃಷ್ಣ ಪಡುವನ್ನೂರು,ಸನತ್ ರೈ ಕುರಿಯ,ಪುತ್ತೂರು ಯುವ ಕಾಂಗ್ರೆಸ್ ಉಪಾಧ್ಯಕ್ಷ ಬಾಲಕೃಷ್ಣ ಗೌಡ ಕೆಮ್ಮಾರ, ಬ್ಲಾಕ್ ಹಿಂದುಳಿದ ವರ್ಗದ ಅಧ್ಯಕ್ಷ ಹರೀಶ್ ಕೋಟ್ಯಾನ್, ಬ್ಲಾಕ್ ಕಾರ್ಮಿಕ ಘಟಕದ ಅಧ್ಯಕ್ಷ ಶರೊನ್ ಸಿಕ್ವೆರಾ,ಬ್ಲಾಕ್ ಸೇವಾದಳದ ಅಧ್ಯಕ್ಷ ವಿಶ್ವಜಿತ್ ಅಮ್ಮು೦ಜೆ,ಬ್ಲಾಕ್ ಎಸ್ ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್,ಬ್ಲಾಕ್ ಸಾಮಾಜಿಕ ಜಾಣತಾಲದ ಅಧ್ಯಕ್ಷ ಸಿದ್ದಿಕ್ ಸುಲ್ತಾನ್,ಬ್ಲಾಕ್ ಕಿಸಾನ್ ಘಟಕದ ಪದಾಧಿಕಾರಿಗಳಾದ ವಿಕ್ರಂ ರೈ ಸಾಂತ್ಯ, ನವೀನ್ ರೈ ಚೆಲ್ಯಡ್ಕ,ಯೂಸುಫ್ ಕಣ್ಣೂರು,ಗಿರೀಶ್ ಗೋಲ್ವಾಳ್ಕರ್,ಶ್ರೀಧರ ಪೂಜಾರಿ ಕೊಳ್ತಿಗೆ,ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ವಿಕ್ಟರ್ ಪಾಯ್ಸ್, ರಶೀದ್ ಮುರ,ಜಿಲ್ಲಾ ಕಾಂಗ್ರೆಸ್ ಮಾಜಿ ಕೋಶಾಧಿಕಾರಿ ವಿಜಯ ಕುಮಾರ್ ಸೊರಕೆ,ಅರಿಯಡ್ಕ ಪಂಚಾಯತ್ ಸದಸ್ಯೆ ಶ್ರೀಮತಿ ಜಯಂತಿ,ಮುಂಡೂರು ಪಂಚಾಯತ್ ಮಾಜಿ ಉಪಾಧ್ಯಕ್ಷ ಇಬ್ರಾಹಿಂ ಮುಲಾರ್,ಹಾರೀಸ್ ಸಂಟ್ಯಾರ್,ಸಲಾಂ ಸಂಪ್ಯ,ಸನತ್ ರೈ ಒಳತಡ್ಕ, ಗುರುಪ್ರಸಾದ್ ಬಡಗನ್ನೂರು,ಜಯಂತ ನೆಹರುನಗರ,ಅಬೂಬಕ್ಕರ್ ಶಾಫಿ ಕಂಜಿಲ್ಕುಂಜ, ಮೋನಪ್ಪ ಪೂಜಾರಿ ಕೆರೆಮಾರ್,ಇಸ್ಮಾಯಿಲ್ ಗಟ್ಟಮನೆ, ಮಾಜಿ ನಗರ ಸಭಾ ಸದಸ್ಯ ಮುಕೇಶ್ ಕೆಮ್ಮಿ೦ಜೆ,ಶರೀಫ್ ಬಲ್ನಾಡ್, ಮೋನು ಬಪ್ಪಳಿಗೆ ಮೊದಲಾದವರು ಉಪಸ್ಥಿತರಿದ್ದರು.ಬ್ಲಾಕ್ ಕಿಸಾನ್ ಘಟಕ ಅಧ್ಯಕ್ಷ ಮುರಳೀಧರ ಗೌಡ ಕೆಮ್ಮಾರ ಸ್ವಾಗತಿಸಿ, ವಿಕ್ರಂ ರೈ ಸಾಂತ್ಯ ವಂದಿಸಿದರು, ಗಿರೀಶ್ ಗೋಲ್ವಾಳ್ಕರ್ ಕಾರ್ಯಕ್ರಮ ನಿರೂಪಿಸಿದರು.

ವಲಯ ಮಟ್ಟದಲ್ಲೂ
ಪ್ರತಿಭಟನೆ

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಅವರು ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದೆಷ್ಟೋ ರೈತರು ತಮ್ಮ ಮಕ್ಕಳ ಭವಿಷ್ಯವನ್ನು ಅಡಿಕೆ ಬೆಳೆ ಮೇಲೆ ಹೊಂದಿಕೊಂಡಿದ್ದಾರೆ. ಅದೆಷ್ಟೋ ಕೂಲಿ ಕಾರ್ಮಿಕರು, ವ್ಯಾಪಾರಸ್ಥರು ಕೂಡಾ ಅಡಿಕೆ ಬೆಳೆಯನ್ನು ಅವಲಂಬಿಸಿದ್ದಾರೆ.ಪರ್ಯಾಯ ಬೆಳೆ ರಬ್ಬರ್ ನಮ್ಮಲ್ಲಿ ಸರಿಯಾಗಿ ಆಗುವುದಿಲ್ಲ.ಒಳ್ಳೆ ಮೆಣಸಿಗೂ ಸರಿಯಾದ ಬೆಲೆ ಇಲ್ಲ.ಅಡಿಕೆ ಬಿಟ್ಟರೆ ಬೇರೆ ಯಾವ ಬೆಳೆಯೂ ನಮ್ಮ ದಕ್ಷಿಣ ಕನ್ನಡ ಜಿಲ್ಲೆಗೆ ಯೋಗ್ಯವಾದದ್ದು ಅಲ್ಲ.ನಮಗೆ ಈ ಬೆಳೆ ಬಿದ್ದು ಹೋದರೆ ನಾವು ಕೂಡಾ ಬಿಜಾಪುರದವರ ಹಾಗೆ ಇರಬೇಕಾದೀತು.ಹಾಗಾಗಿ ಸರಕಾರ ಅಡಿಕೆ ಬೆಳೆಯನ್ನು ಉಳಿಸುವ ಕೆಲಸ ಮಾಡಬೇಕು.ಈ ನಿಟ್ಟಿನಲ್ಲಿ ಮುಂದೆ ಎಲ್ಲಾ ವಲಯ ಮಟ್ಟದಲ್ಲೂ ಪ್ರತಿಭಟನೆ ಮತ್ತು ಜಾಥಾ ನಡೆಸಿ ಎಲ್ಲರನ್ನು ಎಚ್ಚರಿಸಲಿದ್ದೆವೆ ಎಂದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.