ಬಲ್ಯ: ರಸ್ತೆ ಅಭಿವೃದ್ಧಿ ಕಾಮಗಾರಿ ವಿಚಾರ – ಸಚಿವರೊಂದಿಗೆ ಗ್ರಾಮಸ್ಥರ ಅಸಮಾಧಾನ, ಬಿಜೆಪಿ ಮುಖಂಡರೊಂದಿಗೆ ವಾಗ್ವಾದ

0

ನೆಲ್ಯಾಡಿ: ರಸ್ತೆ ಕಾಮಗಾರಿ ಗುದ್ದಲಿಪೂಜೆಗೆ ಬಂದಿದ್ದ ಸಚಿವ ಎಸ್.ಅಂಗಾರ ಅವರ ಜೊತೆಗೆ ಕಾಮಗಾರಿ ವಿಚಾರಕ್ಕೆ ಸಂಬಂಧಿಸಿ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿ ಸ್ಥಳದಿಂದ ತೆರಳಿದ ಹಾಗೂ ಆ ಬಳಿಕ ನಡೆದ ಮಾತುಕತೆ ವೇಳೆ ಬಿಜೆಪಿ ಮುಖಂಡರು ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ನಡೆದ ಘಟನೆ ಬಲ್ಯದಲ್ಲಿ ನಡೆದಿದೆ.

25 ಲಕ್ಷ ರೂ.,ಅನುದಾನದಲ್ಲಿ ನಡೆಯುವ ಬಲ್ಯ ಗ್ರಾಮದ ದೇವತ್ತಡ್ಕ -ಕರಂದಾಯ-ಬಾರಿಕೆ-ನಾಲ್ಗುತ್ತು ಹಾಗೂ 20 ಲಕ್ಷ ರೂ.,ಅನುದಾನದಲ್ಲಿ ನಡೆಯುವ ಬಲ್ಯ ಗ್ರಾಮದ ಗುತ್ತು-ಕಲ್ಲೇರಿ ರಸ್ತೆಯ ಕಾಂಕ್ರಿಟೀಕರಣ ಕಾಮಗಾರಿಗೆ ಶಿಲಾನ್ಯಾಸಕ್ಕೆಂದು ಜ.2ರಂದು ಪೂರ್ವಾಹ್ನ ಸುಳ್ಯ ಶಾಸಕರೂ ಆಗಿರುವ ಸಚಿವ ಎಸ್.ಅಂಗಾರರವರು ಬಲ್ಯಕ್ಕೆ ಆಗಮಿಸಿದ್ದರು. ಬಲ್ಯ ಗ್ರಾಮದ ದೇವತ್ತಡ್ಕ ಎಂಬಲ್ಲಿ ಸದ್ರಿ ಎರಡೂ ರಸ್ತೆಯ ಗುದ್ದಲಿಪೂಜೆಗೆ ಸ್ವಸ್ತಿಕವಿಟ್ಟು ಸಿದ್ಧತೆ ಮಾಡಲಾಗುತ್ತಿತ್ತು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಅಶ್ವತ್ಥಾಮ ಪುತ್ತಿಲ, ರಾಧಾಕೃಷ್ಣ ರೈ, ಮಹೇಶ್ ಬಿ. ಸೇರಿದಂತೆ 25ಕ್ಕೂ ಹೆಚ್ಚು ಗ್ರಾಮಸ್ಥರು ಸಚಿವರಿಗೆ ಮನವಿಯೊಂದನ್ನು ಸಲ್ಲಿಸಲು ಮುಂದಾದರು. ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಸಚಿವರಿಗೆ ಮನವಿ ನೀಡುವಂತೆ ಪಕ್ಷದ ಮುಖಂಡರು ಈ ವೇಳೆ ಗ್ರಾಮಸ್ಥರಿಗೆ ಮನವಿ ಮಾಡಿದರು. ಈ ವೇಳೆ ಮಾತನಾಡಿದ ಅಶ್ವತ್ಥಾಮ ಹಾಗೂ ಇತರೇ ಗ್ರಾಮಸ್ಥರು ನಾಲ್ಕು ವರ್ಷದ ಹಿಂದೆಯೇ ನಾವು ಇಲ್ಲಿನ ರಸ್ತೆ ಅಭಿವೃದ್ಧಿಗೆ ಮನವಿ ಮಾಡಿದ್ದೆವು. 1 ವರ್ಷದೊಳಗೆ ರಸ್ತೆ ಅಭಿವೃದ್ಧಿಗೊಳಿಸುವ ಭರವಸೆಯೂ ನೀಡಿದ್ದೀರಿ. ಈಗ ಗುದ್ದಲಿ ಪೂಜೆ ನಡೆಸುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಸಚಿವ ಎಸ್.ಅಂಗಾರರವರು ಕೋವಿಡ್, ಪ್ರಾಕೃತಿಕ ವಿಕೋಪದಿಂದಾಗಿ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗಿದೆ. ಮನವಿ ಕೊಟ್ಟ ಕೂಡಲೇ ಕೆಲಸ ಆಗುತ್ತದೆಯೇ? ನೀವು ಮನವಿ ಕೊಟ್ಟರೂ, ಕೊಡದಿದ್ದರೂ ನಾವು ಕೆಲಸ ಮಾಡುತ್ತೇವೆ. ಸರಕಾರದಿಂದ ಅನುದಾನ ಬರಬೇಕು ಎಂದು ಹೇಳಿದರು. ಇದರಿಂದ ಅಸಮಾಧಾನಗೊಂಡ, ಮನವಿ ನೀಡಲು ಬಂದ ಗ್ರಾಮಸ್ಥರು ನಮ್ಮ ಸಮಸ್ಯೆಗೆ ಪರಿಹಾರವಿಲ್ಲವಾದರೆ ನಾವು ಇಲ್ಲಿಂದ ಹೋಗುವ ಎಂದು ಹೇಳಿಕೊಂಡು ಸ್ಥಳದಿಂದ ತೆರಳಿದರು. ಬಳಿಕ ಸಚಿವ ಎಸ್.ಅಂಗಾರ ಅವರು ಸ್ಥಳದಲ್ಲಿ ಇದ್ದ ಗ್ರಾಮಸ್ಥರು ಹಾಗೂ ಪಕ್ಷದ ಮುಖಂಡರ ಉಪಸ್ಥಿತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಮುಖಂಡರೊಂದಿಗೆ ವಾಗ್ವಾದ:

ಗುದ್ದಲಿ ಪೂಜೆ ಬಳಿಕ ಸಚಿವ ಎಸ್.ಅಂಗಾರ, ಬಿಜೆಪಿ ಮುಖಂಡರಾದ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಕೃಷ್ಣ ಶೆಟ್ಟಿ ಕಡಬ ಸೇರಿದಂತೆ ಪಕ್ಷದ ಮುಖಂಡರು ಸ್ಥಳದಿಂದ ತೆರಳಿದ್ದ ಅಸಮಾಧಾನಿತ ಗ್ರಾಮಸ್ಥರೊಂದಿಗೆ ಮಾತುಕತೆಗೆ ಮುಂದಾದರು. ಈ ವೇಳೆ ಗ್ರಾಮಸ್ಥರು ಹಾಗೂ ಬಿಜೆಪಿ ಮುಖಂಡರೊಂದಿಗೆ ವಾಗ್ವಾದವೂ ನಡೆಯಿತು. ನಾವು ನಾಲ್ಕು ವರ್ಷದ ಹಿಂದೆಯೇ ಈ ರಸ್ತೆಗೆ ಅನುದಾನ ನೀಡಿ ಎಂದು ಮನವಿ ಮಾಡಿದ್ದೆವು. ನೀವು ಈಗ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಗುದ್ದಲಿಪೂಜೆ ಮಾಡಿದ್ದೀರಿ. ರಸ್ತೆ ಕಾಮಗಾರಿ ನಡೆಯುತ್ತದೆ ಎಂಬುದನ್ನು ನಾವು ನಂಬುವುದಿಲ್ಲ ಎಂದೂ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪಕ್ಷದ ಮುಖಂಡರು ವಾಸ್ತವಿಕ ವಿಚಾರವನ್ನು ಗ್ರಾಮಸ್ಥರಿಗೆ ಮನವರಿಕೆ ಮಾಡಿ ಸಮಾಧಾನಪಡಿಸಲು ಮುಂದಾದರು. ಆದರೂ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಸಚಿವರು ಹಾಗೂ ಪಕ್ಷದ ಮುಖಂಡರು ದೇರಾಜೆಯಲ್ಲಿ ನಡೆಯುವ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲು ತೆರಳಿದರು.

ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಸುಳ್ಯ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಕೃಷ್ಣ ಎಂ.ಆರ್, ಬಿಜೆಪಿ ಕೊಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರದೀಪ್ ರೈ ಮನವಳಿಕೆ, ಕಾರ್ಯದರ್ಶಿ ಸುರೇಶ್ ದೇಂತಾರು, ಹೊಸಮಠ ಸಿಎ ಬ್ಯಾಂಕಿನ ಅಧ್ಯಕ್ಷ ಶಿವಪ್ರಸಾದ್ ಪುತ್ತಿಲ, ಬಿಜೆಪಿ ಮುಖಂಡರಾದ ಧನಂಜಯ ಕೊಡಂಗೆ, ಜನಾರ್ದನ ಗೌಡ, ಪೂರ್ಣೇಶ್ ಬಾಬ್ಲಬೆಟ್ಟು, ಕುಟ್ರುಪ್ಪಾಡಿ ಗ್ರಾ.ಪಂ.ಅಧ್ಯಕ್ಷ ಮೋಹನ ಕೆರೆಕ್ಕೋಡಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

85 ಲಕ್ಷ ರೂ. ಕಾಮಗಾರಿಗೆ ಗುದ್ದಲಿಪೂಜೆ

ಸಚಿವ ಎಸ್.ಅಂಗಾರರವರು ಬಲ್ಯ ಗ್ರಾಮದಲ್ಲಿ 85 ಲಕ್ಷ ರೂ.ಅನುದಾನದಲ್ಲಿ ನಡೆಯುವ 3 ರಸ್ತೆಯ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು. ರಾಜ್ಯ ಸರಕಾರದ ವಿಶೇಷ ಅನುದಾನದಲ್ಲಿ ಬಲ್ಯ ಗ್ರಾಮದ ಗುತ್ತು-ಕಲ್ಲೇರಿ ರಸ್ತೆ ಕಾಂಕ್ರಿಟೀಕರಣಕ್ಕೆ ರೂ.20 ಲಕ್ಷ, ದೇವತ್ತಡ್ಕ-ಕರಂದಾಯ- ಬಾರಿಕೆ-ನಾಲ್ಗುತ್ತು ರಸ್ತೆ ಕಾಂಕ್ರಿಟೀಕರಣ ರೂ.25 ಲಕ್ಷ ಹಾಗೂ ಹೊಸ್ಮಠ-ಬಲ್ಯ-ದೇರಾಜೆ-ಪನ್ಯಾಡಿ ರಸ್ತೆ ಕಾಂಕ್ರಿಟೀಕರಣಕ್ಕೆ 40 ಲಕ್ಷ ರೂ. ಅನುದಾನ ಮಂಜೂರುಗೊಂಡಿದ್ದು ಇದರ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

LEAVE A REPLY

Please enter your comment!
Please enter your name here