ಮೀನುಗಾರಿಕಾ ಇಲಾಖೆ ಪುತ್ತೂರು ಉಪ ವಿಭಾಗದ ಸಹಾಯಕ ನಿರ್ದೇಶಕರ ಕಚೇರಿ ಉದ್ಘಾಟನೆ

0

ಪುತ್ತೂರು: ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕುಗಳನ್ನೊಳಗೊಂಡ ಪುತ್ತೂರು ಉಪವಿಭಾಗ ವ್ಯಾಪ್ತಿಯ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯು ಜ.4 ರಂದು ತಾ. ಪಂ. ಕಟ್ಟಡದಲ್ಲಿ ಉದ್ಘಾಟನೆಗೊಂಡಿತು.


ನೂತನ ಕಚೇರಿಯನ್ನು ಉದ್ಘಾಟಿಸಿದ ರಾಜ್ಯ ಬಂದರು ಮತ್ತು ಒಳನಾಡು ಮೀನುಗಾರಿಕಾ ಇಲಾಖೆ ಸಚಿವ ಎಸ್. ಅಂಗಾರ ಮಾತನಾಡಿ, ಇಂದು ಒಳನಾಡು ಮೀನುಗಾರಿಕೆಗೆ ಸಂಬಂಧಿಸಿ ಅನೇಕ ಬದಲಾವಣೆಗಳಾಗಿವೆ. ಅಡಿಕೆ ಬೆಳೆಗೆ ಬೇಕಾಗುವಷ್ಟು ಭೂಮಿಯ ಅವಶ್ಯಕತೆ ಮೀನು ಸಾಕಾಣಿಕೆಗೆ ಇಲ್ಲ. ಕೇವಲ ಸ್ವಲ್ಪ ಜಾಗದಲ್ಲೇ, ಸಣ್ಣ ಕುಟುಂಬವೂ ಮೀನು ಸಾಕಾಣಿಕೆ ಮಾಡಿ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದ ಅವರು ನೀರಿನ ವ್ಯವಸ್ಥೆ ಇರುವ ಕೃಷಿಕರು ಮೀನು ಸಾಕಾಣಿಕೆಗೆ ಮುಂದೆ ಬರಬೇಕು. ಉಪ ಬೆಳೆಯಾಗಿ ಅತಿ ಬೇಡಿಕೆ ಪಡೆಯುತ್ತಿರುವ ಕಡಿಮೆ ಜಾಗ, ಖರ್ಚು ಬಯಸುವ ಮೀನಿನ ಕೃಷಿಗೆ ಮುಂದಾಗಬೇಕು ಎಂದು ಹೇಳಿದರು.


ಒಳನಾಡು ಮೀನುಗಾರಿಕೆ ಉತ್ತೇಜನಕ್ಕಾಗಿ ಇಲಾಖೆಯಿಂದ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಇಲಾಖೆ ಅಧಿಕಾರಿಗಳೇ ನೀರಿನ ಲಭ್ಯತೆ ಇರುವ ಕೃಷಿಕರ ಮನೆ ಬಾಗಿಲಿಗೆ ಭೇಟಿ ಮಾಡಲಿದ್ದಾರೆ. ಇಲಾಖೆಯ ಸೌಲಭ್ಯಗಳನ್ನು ರೈತನಿಗೆ ತಿಳಿಸುವ ಕೆಲಸ ಅಧಿಕಾರಿಗಳು ಮಾಡಲಿದ್ದಾರೆ. ಆ ಮೂಲಕ ಇಲಾಖೆ ಕಡೆಯಿಂದ ಗರಿಷ್ಠ ಪ್ರೋತ್ಸಾಹಕ್ಕೆ ಒತ್ತು ನೀಡಲಾಗುತ್ತದೆ. ಮೀನು ಕೃಷಿ ಮಾಡುವವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಗ್ರಾಮ ಸಹಾಯಕ, ಸಾಗರಮಿತ್ರ ಯೋಜನೆಗಳು ಕಾರ್ಯನಿರ್ವಹಿಸುತ್ತಿವೆ. ಹಾಲಿ ಅಧಿಕಾರಿಗಳ ಕೊರತೆ ಇರುವುದರಿಂದ ಸಾಗರ ಮಿತ್ರ ಯೋಜನೆಯಲ್ಲಿ ಪ್ರತೀ ಗ್ರಾಮದಲ್ಲಿ ಗುತ್ತಿಗೆ ಆಧಾರದಲ್ಲಿ ಅಧಿಕಾರಿಗಳನ್ನು ನೇಮಕ ಮಾಡಲೂ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಜ.13  ಸುಳ್ಯದಲ್ಲಿ ಕಾರ್ಯಾಗಾರ:
ಪ್ರಸ್ತುತ ಮೀನುಗಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮೀನು ಕೃಷಿಕರಿಗೆ ಅಗತ್ಯ ಸಾಮಾಗ್ರಿಗಳ ಕಿಟ್ ನೀಡುವ ವ್ಯವಸ್ಥೆ ಇಲಾಖೆಯಿಂದ ಮಾಡಲಾಗುತ್ತಿದೆ. ಆ ಮೂಲಕ ಇಲಾಖೆಯಿಂದ ಅವರಿಗೆ ಸಹಕಾರ ನೀಡಲಾಗುತ್ತಿದೆ. ಜ.೧೩ರಂದು ಸುಳ್ಯದಲ್ಲಿ ಒಳನಾಡು ಮೀನುಗಾರಿಕೆಗೆ ಸಂಬಂಧಿಸಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಚಿವ ಎಸ್.ಅಂಗಾರರವರು ಮಾಹಿತಿ ನೀಡಿದರು.

ಪ್ರವಾಸೋದ್ಯಮಕ್ಕೆ ಉತ್ತೇಜನ:
ಮರಿಗಳನ್ನೂ ರಾಜ್ಯದಲ್ಲೇ ಉತ್ಪಾದಿಸಲು ಕ್ರಮ ಕೈಗೊಳ್ಳಲಾಗಿದ್ದು, ಬಾಗಲಕೋಟೆಯ ಆಲಮಟ್ಟಿಯಲ್ಲಿ ನೀರಾವರಿ ನಿಗಮ 25ಎಕ್ರೆ ಜಮೀನನ್ನು ಮೀನುಗಾರಿಕಾ ಇಲಾಖೆಗೆ ನೀಡಿದೆ. ಆ ಜಮೀನಿನಲ್ಲೂ ಮೀನು ಮರಿ ಉತ್ಪಾದನೆ ಕಾರ್ಯ ಆರಂಭವಾಗಲಿದೆ. ಅಲ್ಲದೆ ಆಲಮಟ್ಟಿಗೆ ದೋಣಿಯ ಸಂಪರ್ಕವನ್ನೂ ಕಲ್ಪಿಸುವ ಮೂಲಕ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಾಗುವುದು ಎಂದರು.

ಮೀನುಗಾರಿಕೆ ಇಲಾಖೆ ಮಂಗಳೂರು ಜಂಟಿ ನಿರ್ದೇಶಕ ಹರೀಶ್ ಕುಮಾರ್, ಉಪನಿರ್ದೇಶಕಿ ಡಾ. ಸುಶ್ಮಿತಾ ರಾವ್, ಪುತ್ತೂರು ಸಹಾಯಕ ನಿರ್ದೇಶಕಿ ಮಂಜುಳಾಶ್ರೀ ಶೆಣೈ, ತಾ.ಪಂ. ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಮಾಜಿ ಸದಸ್ಯ ಹರೀಶ್ ಬಿಜತ್ರೆ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಕೋಡಿಂಬಾಡಿ ಗ್ರಾ.ಪಂ ಅಧ್ಯಕ್ಷ ರಾಮಚಂದ್ರ ಪೂಜಾರಿ ಶಾಂತಿನಗರ, ಬನ್ನೂರು ಗ್ರಾ.ಪಂ ಜಯ ಏಕ, ಸದಸ್ಯರಾದ ರಮಣಿ ಡಿ ಗಾಣಿಗ, ಸ್ಮಿತಾ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here