ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ

ಸಹಕಾರ ಸಹಾನುಭೂತಿಯ ಚಿಂತನೆ ಎಲ್ಲರಲ್ಲೂ ಬರಲಿ: ಮಾಣಿಲ ಶ್ರೀ

  • ಸಮಾಜ ವಿಶ್ವಾಸ, ನಂಬಿಕೆಯ ಮೇಲೆ ನಿಂತಿದೆ: ರಾಜಾರಾಮ ಭಟ್
  • ವಿಷವನ್ನು ಅಮೃತಮಾಡುವ ಶಕ್ತಿ ಗೋವುಗಳಿಗಿದೆ: ಈಶ್ವರ ಭಟ್ ಪಂಜಿಗುಡ್ಡೆ
  • ಅರ್ಪಣಾ ಭಾವದ ಸೇವೆ ನಮ್ಮಲ್ಲಿರಲಿ: ಸಂತೋಷ್ ಕುಮಾರ್ ರೈ ನಳೀಲು
  • ನಾವು ಮಾಡುವ ಕೆಲಸದ ಬಗ್ಗೆ ನಮಗೆ ಅರಿವಿರಬೇಕು: ಸೂರ್ಯನಾರಾಯಣ ಭಟ್ ಕಶೆಕೋಡಿ
  • ಎಲ್ಲರೂ ಒಟ್ಟಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ: ಎಂ.ಹೆಚ್. ರಮೇಶ್ ಭಟ್

ವಿಟ್ಲ: ಹಿಂದೂ ಸಮಾಜದ ನೈತಿಕ ಬದ್ದತೆಯನ್ನು ಉಳಿಸುವ ಕೆಲಸವಾಗಬೇಕು. ಜಗತ್ತಿನ ಸೃಷ್ಟಿಯಲ್ಲಿ ರಕ್ತ ಬಹಳಷ್ಟು ಪವಿತ್ರವಾದುದು. ಮಕ್ಕಳು ದೇವರಿಗೆ ಸಮಾನ. ಮಂಗಳ ಕಾರ್ಯದಲ್ಲಿ ಅಮಂಗಳವಿರಬಾರದು. ದೇವಸ್ಥಾನ, ಮಠ ಮಂದಿರಗಳಿಂದ ತೃಪ್ತಿ ಲಭಿಸಲು ಸಾಧ್ಯ. ದೇವಾಲಯದ ಒಳಗೆ ರಾಜಕೀಯ, ಜಾತಿ, ಮೇಲುಕೀಳೆಂಬ ಭಾವ ಬೇಡ. ಸಹಕಾರ ಸಹಾನುಭೂತಿಯ ಚಿಂತನೆ ಎಲ್ಲರಲ್ಲೂ ಬರಲಿ. ಎಂದು ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಹೇಳಿದರು. ಅವರು ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜ.3ರಿಂದ ಜ.8ರ ವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವದ ಅಂಗವಾಗಿ ಜ.4ರಂದು ಕ.ಶಿ.ವಿಶ್ವನಾಥ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ನಮ್ಮ ಆರೋಗ್ಯ ಹದಗೆಡಲು ನಮ್ಮ ಆಹಾರ ಪದ್ದತಿಯೇ ಕಾರಣ. ಹಿಂದೂ ಸಮಾಜ ಒಂದಾಗಬೇಕು. ನಮ್ಮ ಮನಸ್ಸು ಭಾವನೆ ಒಂದಾಗಬೇಕು. ಹಿಂದೂ ಸಮಾಜ ಜಾಗೃತರಾಗಬೇಕು. ತ್ಯಾಗಪೂರ್ಣ ಸೇವೆ ನಮ್ಮದಾಗಬೇಕು. ಜೀವಿತದಲ್ಲಿ ಮಾಡಿದ ದಾನದ ಫಲ ಅಪಾರ. ಹಿಂದೂ ಸಮಾಜವನ್ನು ಬೆಳೆಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಇಡ್ಕಿದು ಮಣ್ಣಿನ ಕೀರ್ತಿ ಎಲ್ಲೆಡೆ ಪಸರಿಸಲಿ. ತಾಯಂದಿರು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತಾಗಬೇಕು. ಧ್ವೇಷ ಭಾವ ತೊರೆದು ಪ್ರೀತಿ ಭಾವದಲಿ ಮುಂದುವರಿಯಿರಿ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ರಾಜಾರಾಮ ಭಟ್ ರವರು ಮಾತನಾಡಿ, ಹಲವಾರು ಕಾರಣಿಕತೆಗೆ ಸಾಕ್ಷಿಯಾಗಿರುವ ಕ್ಷೇತ್ರ ಕೋಲ್ಪೆ. ಗೋಮಾತೆಯನ್ನು ಪೂಜೆ ಮಾಡಿದಲ್ಲಿ ಎಲ್ಲಾ ದೇವರು ನಮಗೊಲಿಯಲು ಸಾಧ್ಯ. ಹಿಂದೂ ಸಮಾಜವನ್ನು ಬಡಿದೆಬ್ಬಿಸುವ ಕಾರ್ಯವಾಗಬೇಕಿದೆ. ಶತ್ರುವನ್ನು ಜಾಣ್ಮೆಯಿಂದ ಹಿಮ್ಮೆಟ್ಟಿಸುವ ಛಲ ಬೇಕು. ಸಮಾಜ ವಿಶ್ವಾಸ, ನಂಬಿಕೆಯ ಮೇಲೆ ನಿಂತಿದೆ. ನಮ್ಮ ವಿಶ್ವಾಸ ನಮ್ಮನ್ನು ಕಾಪಾಡುತ್ತದೆ. ಗ್ರಾಮದ ಜನರ ಜೀವನ ಪಾವನವಾಗಲಿ ಎಂದರು.

ಬನ್ನೂರು ರೈತಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಈಶ್ಬರ ಭಟ್ ಪಂಜಿಗುಡ್ಡೆರವರು ಮಾತನಾಡಿ ಬ್ರಹ್ಮಕಲಶಕ್ಕೆ ಬಹಳ ಪಾವಿತ್ರ್ಯವಿದೆ. ದೇವಾಲಯದ ನಿಯಮಗಳನ್ನು ಪಾಲನೆ ಮಾಡಿಕೊಂಡು ನಾವು ಮುಂದುವರೆಯಬೇಕು. ಹಿಂದೂ ಧರ್ಮ ಶ್ರೇಷ್ಟವಾದುದು. ನಮ್ಮ ಧರ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು. ವಿಷವನ್ನು ಅಮೃತಮಾಡುವ ಶಕ್ತಿ ಗೋವುಗಳಿಗಿದೆ. ಪ್ರತೀ ಮನೆಮನೆಗಳಲ್ಲಿ ಗೋವುಗಳನ್ನು ಸಾಕುವಂತಾಗಬೇಕು ಎಂದರು.

ನಳೀಲು ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸಂತೋಷ್ ಕುಮಾರ್ ರೈ ನಳೀಲುರವರು ಮಾತನಾಡಿ, ನಾವು ನಂಬಿದ ದೇವರು ನಮ್ಮನ್ನು ಕೈಬಿಡುವುದಿಲ್ಲ. ಅರ್ಪಣಾ ಭಾವದ ಸೇವೆ ನಮ್ಮಲ್ಲಿರಲಿ. ಕಾಲ ಬದಲಾದರೂ ನಮ್ಮ ಸಂಸ್ಕೃತಿಯನ್ನು ಉಳಿಸುವ ಕೆಲಸವಾಗಬೇಕು ಎಂದರು.

ರಾಜ್ಯಧಾರ್ಮಿಕ ಪರಿಷತ್ ನ ಸದಸ್ಯರಾದ ಸೂರ್ಯನಾರಾಯಣ ಭಟ್ ಕಶೆಕೋಡಿ ಧಾರ್ಮಿಕ ಉಪನ್ಯಾಸ ನೀಡಿ ನಾವು ಮಾಡುವ ಕೆಲಸದ ಬಗ್ಗೆ ನಮಗೆ ಅರಿವಿರಬೇಕು. ವೇದಗಳ ಆಧಾರದಲ್ಲಿ ಹಿಂದೂ ಧರ್ಮ ನಿಂತಿದೆ. ನಾವು ನಡೆದು ಬಂದ ದಾರಿಯನ್ನು ಅವಲೋಕನ ಮಾಡಿದಾಗ ಜೀವನ ಸಾರ್ಥಕವಾಗುತ್ತದೆ. ನಮ್ಮ ಪ್ರಯತ್ನವನ್ನು ನಾವು ನಿರಂತರವಾಗಿ ಮಾಡಬೇಕು. ಮಕ್ಕಳನ್ನು ಸ್ವಪ್ರಜ್ಞೆ ಮೂಡುವ ರೀತಿಯಲ್ಲಿ ಬೆಳೆಸಬೇಕು. ನಮ್ಮ ಮಕ್ಕಳನ್ನು ತಿದ್ದುವ ಮೊದಲು ನಾವು ಬದಲಾಗಬೇಕು. ಸಂಸ್ಕೃತಿ ಕಲಿಸುವ ಕೆಲಸ ಇಂತಹ ದೇವಾಲಯಗಳಿಂದ ಆಗಬೇಕಾಗಿದೆ. ಜವಾಬ್ದಾರಿಯುತವಾಗಿ ಕೆಲಸ ಮಾಡಿದಾಗ ಯಶಸ್ಸು ಸಾಧ್ಯ. ಕಷ್ಟವನ್ನು ಮೆಟ್ಟಿನಿಂತಾಗ ಆದರ್ಶ ವ್ಯಕ್ತಿಯಾಗಲು ಸಾಧ್ಯ ಎಂದರು.

ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಎಂ.ಹೆಚ್. ರಮೇಶ್ ಭಟ್ ಮಿತ್ತೂರುರವರು ಮಾತನಾಡಿ, ಕ್ಷೇತ್ರದ ಅಭಿವೃದ್ಧಿಯಲ್ಲಿ ಹಲವರ ನಿಸ್ವಾರ್ಥ ಸೇವೆ ಇದೆ. ಎಲ್ಲರೂ ಒಟ್ಟಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು.

ನವಚೇತನಾ ಚಿಟ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ಲೊಕೇಶ್ ಶೆಟ್ಟಿ, ಕುಂಜಾರು ಮದಗಶ್ರೀ ಜನಾರ್ದನ ದೇವಸ್ಥಾನದ ಅಧ್ಯಕ್ಷ ಹಾರೆಕೆರೆ ವೆಂಕಟ್ರಮಣ ಭಟ್, ನಳೀಲು ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು, ಪಾಣೆಮಂಗಳೂರು ಸುಮಂಗಲಿ ಕ್ರೆಡಿಟ್ ಕೋ- ಅಪರೇಟಿವ್ ಸೊಸೈಟಿಯ ಅಧ್ಯಕ್ಷ ನಾಗೇಶ್ ಕಲ್ಲಡ್ಕ, ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪಿ.ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಯುವಕ ಮಂಡಲದ ಅಧ್ಯಕ್ಷ ಹಿಮಕರ ಗಾಣಿಗ, ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ ಕಂಬಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ತಿಮ್ಮಪ್ಪ ಸಪಲ್ಯ ದೇವಸ್ಯ, ಶಿವಶಂಕರ ಭಟ್, ಶಶಿಧರ ಭಂಡಾರಿ ಸೂರ್ಯ, ಪದ್ಮಾವತಿ ಬೀಡಿನ ಮಜಲು, ತಿಮ್ಮಪ್ಪ ಗೌಡ ಕೊಡಂಗೆರವರನ್ನು ಗೌರವಿಸಲಾಯಿತು. ಜಯಸ್ಮಿತಾ ಪ್ರಾರ್ಥಿಸಿದರು. ಬ್ರಹ್ಮಕಲಶ ಮತ್ತು ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಪುಲ್ಲಚಂದ್ರ ಪಿ.ಜಿ.ಕೋಲ್ಪೆರವರು ಸ್ವಾಗತಿಸಿದರು. ದಿನೇಶ್ ಕೊಪ್ಪಳ ವಂದಿಸಿದರು. ಜಯಶ್ರೀ ಇಡ್ಕಿದು ಕಾರ್ಯಕ್ರಮ ನಿರೂಪಿಸಿದರು.

ವೈದಿಕ ಕಾರ್ಯಕ್ರಮ: ಜ.4ರಂದು ಬೆಳಗ್ಗೆ 5ರಿಂದ ವೈದಿಕ ಕಾರ್ಯಕ್ರಮಗಳು ಆರಂಭಗೊಂಡಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಿತು. ಸಾಯಂಕಾಲ ದೀಪಾರಾಧನೆ ಅಂಕುರಪೂಜೆ, ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮ: ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 9ರಿಂದ ಶ್ರೀ ಸೀತಾರಾಮಾಂಜನೇಯ ಮಹಿಳಾ ಭಜನಾ ಮಂಡಳಿ ಮಿತ್ತೂರು ಇವರಿಂದ ಭಜನೆ ನಡೆಯಿತು. ಬೆಳಗ್ಗೆ 11ರಿಂದ ಶ್ರೀ ದುರ್ಗಾಪರಮೇಶ್ವರೀ ಉಳ್ಳಾಲ್ತಿ ಮಲರಾಯ ಯಕ್ಷಗಾನ ಪ್ರತಿಷ್ಠಾನ ಬೊಳ್ವಾರು ಇವರಿಂದ ಯಕ್ಷಗಾನ ತಾಳಮದ್ದಳೆ ನಡೆಯಿತು. ಸಾಯಂಕಾಲ 5 ರಿಂದ ಶ್ರೀದೇವಿ ಭಜನಾ ಮಂಡಳಿ ಮುಡಿಪು ಇವರಿಂದ ನೃತ್ಯ ಭಜನೆ ನಡೆಯಿತು. ರಾತ್ರಿ 9ಗಂಟೆಯಿಂದ ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ತುಳುನಾಟಕ ಶಿವದೂತೆ ಗುಳಿಗೆ ನಡೆಯಿತು.

ಇಂದು ಕ್ಷೇತ್ರದಲ್ಲಿ…

ಬೆಳಗ್ಗೆ 5ಗಂಟೆಯಿಂದ ಉಷಾಪೂಜೆ, ಮಹಾಗಣಪತಿ ಹೋಮ, ಅಂಕುರಪೂಜೆ, ಸ್ವ-ಶಾಂತಿ, ಶ್ವಾನಶಾಂತಿ, ಅದ್ಭುತ ಶಾಂತಿ, ಚೋರ ಶಾಂತಿ ಹೋಮಾದಿಗಳು.

ಮಧ್ಯಾಹ್ನ ಗಂಟೆ 12:೦೦ಕ್ಕೆ ಹೋಮಗಳ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ 5:30 ರಿಂದ ದೀಪಾರಾಧನೆ, ಅಂಕುರ ಪೂಜೆ, ಕುಂಭೇಶ ಕರ್ಕರೀಪೂಜೆ, ಅನುಜ್ಞಾಕಲಶ ಪೂಜೆ, ಪರಿಕಲಶ ಪೂಜೆ, ಅಧಿವಾಸ ಹೋಮ, ಕಲಶಾಧಿವಾಸ, ದುರ್ಗಾಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ಸಾಯಂಕಾಲ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಬ್ರಹ್ಮಕಲಶ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಪಿ. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತುರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಪತ್ರಕರ್ತ ಶ್ರೀಕಾಂತ್ ಶೆಟ್ಟಿರವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ವಿವಿಧ ಕ್ಷೇತ್ರದ ಸಾಧಕರು ಈ ಸಂದೆರ್ಭದಲ್ಲಿ ಉಪಸ್ಥಿತರಿರಲಿದ್ದಾರೆ. 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.