ಅಡಿಕೆ ಬೆಳೆಗಾರರ ಜಿಲ್ಲಾ ಮಟ್ಟದ ಹಕ್ಕೊತ್ತಾಯ ಸಭೆ

0

ಕುಮ್ಕಿಹಕ್ಕು ಕಾನೂನಿನ ತಿದ್ದುಪಡಿಗೆ ಸಚಿವರ ಬಳಿಗೆ ನಿಯೋಗ; ಮಠಂದೂರು ಭರವಸೆ

  • ಅಡಿಕೆಯಿಂದ ಮೌಲ್ಯವರ್ಧಿತ ಉತ್ಪನ್ನ ಮಾಡಬೇಕಾಗಿದೆ – ಶಂನಾ ಖಂಡಿಗೆ
  • ರೈತರಿಗೆ ಸಮಸ್ಯೆ ಆಗುವಾಗ ಧ್ವನಿಯಾಗಬೇಕು – ಶಕುಂತಳಾ ಶೆಟ್ಟಿ

ಪುತ್ತೂರು: ಕರಾವಳಿಯ ಬಹುತೇಕ ಅಡಕೆ ಬೆಳೆಗಾರರು ಕುಮ್ಕಿ ಹಕ್ಕಿನ ಕಾನೂನುಬದ್ಧ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಇದನ್ನು ಕೊಡುವ ನಿಟ್ಟಿನಲ್ಲಿ ಕಾನೂನಿಗೆ ತಿದ್ದುಪಡಿ ತರಲು ಆಗ್ರಹಿಸಿ ವಾರದೊಳಗೆ ಕಾನೂನು ಸಚಿವರ ಬಳಿಗೆ ನಿಯೋಗ ಕೊಂಡೊಯ್ಯುವುದಾಗಿ ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ಜ.4ರಂದು ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ವಿಜಯ ಕರ್ನಾಟಕ ಪತ್ರಿಕೆಯ ಆಶ್ರಯದಲ್ಲಿ ನಡೆದ ಅಡಿಕೆ ಬೆಳೆಗಾರರ ಜಿಲ್ಲಾ ಮಟ್ಟದ ಹಕ್ಕೊತ್ತಾಯ ಸಮಾವೇಶದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದರು. ಕುಮ್ಕಿ ಹಕ್ಕು ಕೊಡುವ ಬಗ್ಗೆ 2012ರ ಹೊತ್ತಿನಲ್ಲಿ ಸರಕಾರ ಕಾನೂನು ತಿದ್ದುಪಡಿ ಪ್ರಕ್ರಿಯೆ ನಡೆಸಿತ್ತು. ಚುನಾವಣೆ ಬಂದ ಕಾರಣ ಸ್ಥಗಿತಗೊಂಡಿತು. ನಂತರದ ಸರಕಾರದ ಅವಧಿಯಲ್ಲಿ ಕುಮ್ಕಿ ಭೂಮಿಯನ್ನು ಶ್ರೀಮಂತರಿಗೆ ನೀಡಲಾಗುತ್ತಿದೆ, ಬಡವರಿಗೆ ಜಮೀನಿಲ್ಲ ಎಂಬ ಕೂಗು ಬಲವಾಗಿ ಕೇಳಿಬಂದ ಕಾರಣ ಆಗಲೂ ಸ್ಥಗಿತಗೊಂಡಿತು. ನಮ್ಮ ಸರಕಾರ ಈ ಬಾರಿ ಕೊಡಲು ಮುಂದಾದ ಸಂದರ್ಭದಲ್ಲಿ ಡೀಮ್ಡ್ ಅರಣ್ಯದ ಸಮೀಕ್ಷೆ ವಿಚಾರ ಬಂತು. ಕುಮ್ಕಿಯೂ ಸೇರಿದಂತೆ ಒಟ್ಟು 9 ಲಕ್ಷ ಹೆಕ್ಟೇರ್ ಭೂಮಿಯನ್ನು ಡೀಮ್ಡ್ ಅರಣ್ಯದ ಪಟ್ಟಿಯಲ್ಲಿ ಸೇರಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಇದು ತೊಡಕಾಗಿ ಪರಿಣಮಿಸಿತು. ಕೊನೆಗೂ ಸರಕಾರ ಉಪಕ್ರಮ ಕೈಗೊಂಡು 6 ಲಕ್ಷ ಹೆಕ್ಟೇರ್ ಜಾಗವನ್ನು ಕುಮ್ಕಿಯಿಂದ ವಿರಹಿತಗೊಳಿಸಿದೆ. ಈ ಬಾರಿ ಕಾನೂನು ತಿದ್ದುಪಡಿ ಮಾಡಿ ಕುಮ್ಕಿ ಹಕ್ಕು ಕೊಡಿಸುವ ಸಂಬಂಧ ಕಾನೂನು ಸಚಿವರ ಬಳಿಗೆ ನಿಯೋಗ ಕೊಂಡೊಯ್ಯಲಿದ್ದೇನೆ ಎಂದು ಶಾಸಕರು ರೈತರ ಪ್ರಶ್ನೆಗೆ ಉತ್ತರಿಸಿದರು. ಇದರ ಜೊತೆಗೆ ತಾಲೂಕಿಗೊಂದು ಮಣ್ಣು ಪರೀಕ್ಷೆ ಕೇಂದ್ರ ತೆರೆಯಬೇಕಾಗಿದೆ. ಹಳದಿ ರೋಗ, ಎಲೆಚುಕ್ಕಿ ರೋಗದ ಹಿನ್ನೆಲೆಯಲ್ಲಿ ರೈತರ ಅಲ್ಪಾವಧಿ ಸಾಲವನ್ನು ಮಧ್ಯಮಾವಧಿ ಸಾಲವಾಗಿ, ಮಧ್ಯಮಾವಧಿ ಸಾಲವನ್ನು ದೀರ್ಘಾವಧಿ ಸಾಲವಾಗಿ ಪರಿವರ್ತಿಸುವುದಕ್ಕೆ ನನ್ನ ಸಹಮತವಿದೆ ಎಂದು ಹೇಳಿದರು.

ಜಿಲ್ಲೆಗೆ ರೂ. 3.25 ಕೋಟಿ: ಅಡಿಕೆ ಹಳದಿ ರೋಗ ಪರಿಹಾರ ಮತ್ತು ಸಂಶೋಧನೆಗೆ ಸಂಬಂಧಿಸಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಘೋಷಣೆ ಮಾಡಿದ್ದ 25 ಕೋಟಿ ರೂ. ಪ್ಯಾಕೇಜ್‌ನಲ್ಲಿ ದ.ಕ. ಜಿಲ್ಲೆಗೆ 3.25 ಕೋಟಿ ರೂ.ಗಳ ಕ್ರಿಯಾಯೋಜನೆ ಸಿದ್ಧಗೊಂಡಿದೆ. ಈ ಹಣ ವಿತರಿಸಲು ಸರಕಾರ ಬದ್ಧವಾಗಿದೆ. 2018-19ರಲ್ಲಿ ಮೈತ್ರಿ ಸರಕಾರ ಘೋಷಣೆ ಮಾಡಿದ 1 ಲಕ್ಷ ರೂ. ಸಾಲ ಮನ್ನಾ ಯೋಜನೆಯಲ್ಲಿ 24 ಸಾವಿರ ಕೋಟಿ ರೂ.ಗಳನ್ನು ಬಿಎಸ್‌ವೈ ಸರಕಾರ ಬಿಡುಗಡೆ ಮಾಡಿದ್ದು, ಇದರಲ್ಲಿ 17 ಸಾವಿರ ಕೋಟಿ ರೂ. ವಿತರಣೆಯಾಗಿದೆ. ತಾಂತ್ರಿಕ ಸಮಸ್ಯೆಯಿಂದ ಅನೇಕರಿಗೆ ಸಿಕ್ಕಿಲ್ಲ. ಗ್ರೀನ್ ಲಿಸ್ಟ್‌ನಲ್ಲಿರುವವರಿಗೆ ಮನ್ನಾ ಸೌಲಭ್ಯ ನೀಡಲು 200 ಕೋಟಿ ರೂ. ಬೇಕಾಗಿದ್ದು, ಅದನ್ನು ಬಿಡುಗಡೆ ಮಾಡುವಂತೆ ಸಹಕಾರ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಹಕ್ಕೊತ್ತಾಯ ವಿಧಾನಮಂಡಲದಲ್ಲಿ ಪ್ರಸ್ತಾಪಿಸುತ್ತೇನೆ: ಸಮಾವೇಶದಲ್ಲಿ ಅಂಗೀಕಾರಗೊಂಡ 7 ಹಕ್ಕೊತ್ತಾಯಗಳನ್ನು ಕೂಡ ಗಮನಿಸಿದ್ದೇವೆ. ಇವುಗಳ ಜಾರಿಗೆ ಸರಕಾರದ ಮಟ್ಟದಲ್ಲಿ ಯತ್ನಿಸುವೆ ಎಂದು ಶಾಸಕ ಸಂಜೀವ ಮಠಂದೂರು ಭರವಸೆ ನೀಡಿದರು. ಅಡಿಕೆ ಮಂಡಳಿ ರಚನೆಯ ಲಾಭದ ಬಗ್ಗೆ ಚರ್ಚೆ ನಡೆಯಬೇಕಾಗಿದೆ. ಹಕ್ಕೊತ್ತಾಯದ ಜತೆಗೆ ನನ್ನ ಪತ್ರವನ್ನೂ ಇಟ್ಟು ತೋಟಗಾರಿಕೆ, ಕೃಷಿ, ಸಹಕಾರಿ ಇಲಾಖೆ ಹಾಗೂ ಮುಖ್ಯಮಂತ್ರಿಗಳಿಗೆ ಸಲ್ಲಿಸುತ್ತೇನೆ. ಸ್ವತಃ ನಾನೇ ವಿಧಾನ ಮಂಡಲದಲ್ಲಿ ಪ್ರಸ್ತಾಪಿಸುತ್ತೇನೆ. ಗೋರಖ್‌ಸಿಂಗ್ ವರದಿ ಜಾರಿಯ ವಿಚಾರದಲ್ಲೂ ಪ್ರಯತ್ನಿಸುತ್ತೇನೆ. ರೋಗದಿಂದ ಬೆಳೆ ನಷ್ಟ ಹೊಂದಿದವರಿಗೆ ಪರಿಹಾರ ಕಲ್ಪಿಸಲು ಈಗಾಗಗೇ ಸರಕಾರ ಬಿಡುಗಡೆ ಮಾಡಿದ ಪ್ಯಾಕೇಜ್‌ನಲ್ಲಿ ಅವಕಾಶವಿದೆ ಎಂದು ಹೇಳಿದರು.

ಅಡಿಕೆಯಿಂದ ಮೌಲ್ಯವರ್ಧಿತ ಉತ್ಪನ್ನ ಮಾಡಬೇಕಾಗಿದೆ: ಕ್ಯಾಂಪ್ಕೋ ಸಂಸ್ಥೆಯ ಉಪಾಧ್ಯಕ್ಷ ಶಂನಾ ಖಂಡಿಗೆ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಡಿಕೆ ಭಾರತದ ಆರ್ಥಿಕ ಸಬಳತೆಗೆ ಮುನ್ನುಡಿ ಬರೆದ ಕೃಷಿ. ಕರಾವಳಿ, ಮಳೆನಾಡು ಸೇರಿದಂತೆ ಇವತ್ತು ಆಂಧ್ರ, ತಮಿಳುನಾಡು, ಅಸ್ಸಾಂ, ಮೇಘಾಲಯಕ್ಕೆ ವಿಸ್ತರಿಸಿದೆ. ಕೊರೋನಾ ನಂತರ ಅಡಿಕೆಗೆ ಅತ್ಯದ್ಭುತ ಧಾರಣೆ ಬಂದಿದೆ. ಹಾಗಾಗಿ ಅಡಿಕೆ ಕುರಿತು ಬೆಳೆಗಾರರಿಗೆ ಆತಂಕ ಬೇಡ. ಪೂರೈಕೆ ಜಾಸ್ತಿಯಾಗಿ ಬೇಡಿಕೆ ಕಡಿಮೆ ಆದಾಗ ಸಮಸ್ಯೆ ಬರುವುದು ಸಹಜ. ಕ್ಯಾಂಪ್ಕೋ ಅಡಿಕೆ ಧಾರಣೆಯನ್ನು ಹಿಂದಕ್ಕೆ ಬರಲು ಬಿಡುತ್ತಿಲ್ಲ ಎಂದರು. ಇವತ್ತು ಅಡಿಕೆಯಿಂದ ಮೌಲ್ಯ ವರ್ಧಿತ ಉತ್ಪನ್ನ ಮಾಡಬೇಕಾಗಿದೆ. ಈಗಾಗಲೇ ಅಡಿಕೆ ಬೇರೆ ಬೇರೆ ಕ್ಷೇತ್ರದಲ್ಲಿ ಮೌಲ್ಯ ವರ್ಧಿತವಾಗಿದೆ. ಕೆಂಪಡಿಕೆ ಡಯಾಬಿಟಿಸ್‌ಗೆ ಔಷಧಿಯಾಗಿದೆ. ಬಣ್ಣದ ದೃಷ್ಟಿಯಿಂದ ವಿದೇಶಗಳಿಂದ ಅಡಿಕೆ ತೊಗರುಗೆ ಬೇಡಿಕೆ ಇದೆ. ಹಣ್ಣು ಅಡಿಕೆಯ ಸಿಪ್ಪೆಯಿಂದ ಸಾಬೂನು ಹೀಗೆ ಮೌಲ್ಯ ವರ್ಧಿತ ಉತ್ಪನ್ನ ಮಾಡುವವರಿಗೆ ನೂರಕ್ಕೆ ನೂರು ಸಹಕಾರ ಕೊಡಲು ಅಡಿಕೆ ಬೆಳೆಗಾರರು ಚಿಂತನೆ ಮಾಡಬೇಕು. ಮುಂದೆ ಕೃಷಿಕರು ಅಡಿಕೆ ಕೃಷಿಯ ಜೊತೆಗೆ ಔಷಧಿಯ ಗಿಡ ಯಾಕೆ ಬೆಳೆಯಬಾರದು ಎಂದು ಪ್ರಶ್ನಿಸಿದ ಅವರು ಗಿಡ ಮೂಲಿಕೆಗಳನ್ನು ತೋಟದ ಒಳಗೆ ಬೆಳೆಯುವ ಕುರಿತು ಕ್ಯಾಂಪ್ಕೋ ಚಿಂತನೆ ಮಾಡುತ್ತಿದೆ ಎಂದರು.

ರೈತರಿಗೆ ಸಮಸ್ಯೆ ಆಗುವಾಗ ಧ್ವನಿಯಾಗಬೇಕು: ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಮಾತನಾಡಿ, ಇವತ್ತು ಅಡಿಕೆ ಬೆಳೆಗೆ ಬೆಲೆ ಬೇಕು. ಹಕ್ಕೊತ್ತಾಯ ಕಾರ್ಯಕ್ರಮದಲ್ಲಿ ರೈತರು ಪೂರ್ಣ ಪ್ರಮಾಣದಲ್ಲಿ ಭಾಗವಹಿಸಬೇಕು ಎಂದ ಅವರು ಇವತ್ತು ರೈತರಿಗೆ ಸಮಸ್ಯೆ ಆಗುವಾಗ ನಾವೆಲ್ಲರೂ ಧ್ವನಿಯಾಗಬೇಕು ಎಂದರು. ಹಳದಿ ರೋಗ, ಎಲೆಚುಕ್ಕಿ ರೋಗ ಹೆಚ್ಚಾಗಿದೆ. ಇದರ ಪರಿಹಾರಕ್ಕೆ ಸಂಶೋಧನೆ ನಡೆದಿಲ್ಲ. ಸಂಶೋಧನೆ ಮುಗಿಯುವಾಗ ತೋಟವೇ ಖಾಲಿಯಾಗುತ್ತದೆಯೋ ಏನೋ ಗೊತ್ತಿಲ್ಲ. ಮತ್ತೊಂದು ಕಡೆ ಅಡಿಕೆಗೆ ಭವಿಷ್ಯ ಇಲ್ಲ ಎಂದು ಗೊಂದಲದ ಹೇಳಿಕೆ ನೋಡಿದಾಗ ನಾವು ರೈತನ ಜೊತೆಗೆ ಧ್ವನಿಯಾಗಬೇಕಾಗಿದೆ. ರೈತ ಇಲ್ಲದಿದ್ದರೆ ಜಿಲ್ಲೆಯಲ್ಲಿ ಏನು ಇಲ್ಲ. ಇವತ್ತು ಜಿಲ್ಲೆಯಲ್ಲಿ ಏಳೆಂಟು ಮೆಡಿಕಲ್ ಕಾಲೇಜು ಬಂದಿರುವುದು ನಮ್ಮ ಸಾಧನೆ ಅಲ್ಲ. ಅದು ಅಡಿಕೆ ಬೆಳೆಗಾರರ ಸಾಧನೆ. ಹಾಗಾಗಿ ಅಡಿಕೆ ಬೆಳೆಗಾರರನ್ನು ಉಳಿಸುವ ಮತ್ತು ಬೆಳೆಸುವ ಎಂದರು.

ಆದಾಯ ಜಾಸ್ತಿಯ ಬದಲು ಖರ್ಚು ಕಡಿಮೆ ಮಾಡುವಲ್ಲಿ ಪ್ರಯತ್ನಿಸಿ: ಸಿಪಿಸಿಆರ್‌ಐ ವಿಟ್ಲ ಇದರ ಹಿರಿಯ ವಿಜ್ಞಾನಿ ನಾಗರಾಜ್ ಎನ್.ಆರ್ ಅವರು ಮಾತನಾಡಿ, ಹಲವಾರು ಕೃಷಿಕರು ರೈತ ವಿಜ್ಞಾನಿಗಳೇ ಆಗಿದ್ದಾರೆ. ಅವರು ಆಗಾಗ ಸಂಶೋಧನೆ ಮಾಡುತ್ತಿದ್ದಾರೆ. ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ಪರಿಹಾರ ಒದಗಿಸಲು ಆರಂಭಗೊಂಡ ಸಿಪಿಸಿಆರ್‌ಐ ಹಲವಾರು ತಂತ್ರಜ್ಞಾನಗಳ ಮೂಲಕ ರೈತರ ಸಮಸ್ಯೆಗೆ ಪರಿಹಾರ ಕಂಡು ಕೊಂಡಿದೆ ಎಂದ ಅವರು ಅಧಿಕ ಇಳುವರಿ ಕೊಡುವ ಅಡಿಕೆ ಬೆಳೆಯ ಕುರಿತು ಮಾಹಿತಿ ನೀಡಿದರು. ಕನಿಷ್ಟ 3 ವರ್ಷಕ್ಕೊಮ್ಮೆ ಮಣ್ಣು ಪರೀಕ್ಷೆ ಮಾಡಿ. ಸರಿಯಾದ ಪೋಷಕಾಂಶ ಮಣ್ಣಿಗೆ ನೀಡುವ ಮೂಲಕ ಅಧಿಕ ಇಳುವರಿ ಪಡೆಯಬಹುದು ಎಂದರು. ಅಡಿಕೆ ಬೆಳೆಗಾರರು ಆದಾಯ ಜಾಸ್ತಿ ಮಾಡುವುದರ ಬದಲು ಖರ್ಚನ್ನು ಕಡಿಮೆ ಮಾಡಬೇಕೆಂಬ ಚಿಂತನೆ ಹೊಂದಬೇಕು. ಇದಕ್ಕೆ ಸಣ್ಣ ಸಣ್ಣ ಮಣ್ಣು ಪರೀಕ್ಷೆಯಂತಹ ತಾಂತ್ರಿಕತೆ ಅಳವಡಿಸಬೇಕು. ಅಡಿಕೆಯ ಜೊತೆ ಬಹು ಬೆಳೆ ಪದ್ದತಿ ಅಳವಡಿಸಬೇಕು ಎಂದರು.

ಎಲೆ ಚುಕ್ಕೆ ರೋಗ ಹೊಸದಲ್ಲ: ಎಲೆ ಚುಕ್ಕೆ ರೋಗ ಹೊಸ ರೋಗ ಅಲ್ಲ. ಬದಲಾದ ಮಳೆಗಾಲ, ನೀರಿನ ಅತಿಯಾದ ಸಾಂದ್ರತೆ, ಗಾಳಿ, ಪೋಷಕಾಂಶ ನಿರ್ವಹಣೆ ಇಲ್ಲದೆ ಎಲೆ ಚುಕ್ಕಿರೋಗ ಬಂದಿದೆ. ಈ ಕುರಿತು ಸಂಶೋಧನೆ ನಡೆಯುತ್ತಿದೆ. ಸದ್ಯಕ್ಕೆ ನಿವಾರಣೆ ಮಾಡಲು ಶಿಲೀಂದ್ರ ನಾಶಕ ವ್ಯವಸ್ಥೆ ಮಾಡಬಹುದು. ಇದನ್ನು ಸಮುದಾಯದ ಮಟ್ಟದಲ್ಲಿ ಮಾಡಬೇಕೆಂದು ಹಿರಿಯ ವಿಜ್ಞಾನಿ ನಾಗರಾಜ್ ಎನ್.ಆರ್. ಅವರು ಹೇಳಿದರು.

ವಿಜಯಕರ್ನಾಟಕ ಪತ್ರಿಕೆಯ ಮಂಗಳೂರು ಬ್ಯೂರೋದ ರವೀಂದ್ರ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ರೈತರು ಸಂಸದರನ್ನಾಗಲಿ, ಶಾಸಕರನ್ನಾಗಲಿ ಬೈದು, ತರಾಟೆಗೆ ತೆಗೆದುಕೊಂಡು ಪ್ರಯೋಜನವಿಲ್ಲ. ಅವರು ನಿಮ್ಮ ಬೇಡಿಕೆಗಳನ್ನು ಸರಕಾರಕ್ಕೆ, ಶಾಸನ ಮಾಡುವರರಿಗೆ ತಲುಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾರೆ. ಕೃಷಿ ಕ್ಷೇತ್ರ ಅಂದಾಕ್ಷಣ ಅನೇಕ ಸಮಸ್ಯೆ ಇದೆ. ಇದನ್ನು ನೇರವಾಗಿ ಸರಕಾರಕ್ಕೆ ಸಲ್ಲಿಸಲು ಕಷ್ಟ. ಅದಕ್ಕಾಗಿ ಈ ವೇದಿಕೆಯನ್ನು ಕಲ್ಪಿಸಿಕೊಟ್ಟಿದ್ದೇವೆ ಎಂದರು.

ಸಭೆಯಲ್ಲಿ ಬಂದ ಅಭಿಪ್ರಾಯ: ಅಡಿಕೆಗಳನ್ನು ಚೆನ್ನಾಗಿ ಒಣಗಿಸಿ, ಅಡಿಕೆ ಚೀಲದ ಒಳಗೆ ಮಾತ್ರೆ ಹಾಕಬೇಡಿ, ಮಣ್ಣು ಪರೀಕ್ಷೆ ವ್ಯವಸ್ಥೆ ಇಲ್ಲ, ಸಬ್ಸಿಡಿಯಲ್ಲಿ ಪ್ರಯೋಜನವಿಲ್ಲ, ಜವಾಬ್ದಾರಿ ಸ್ಥಾನದಲ್ಲಿರುವವರು ಆತಂಕಕಾರಿ ಹೇಳಿಕೆ ಕೊಡುವುದು ಸರಿಯಲ್ಲ, ಹವಾಮಾನ ಆಧಾರಿತ ವಿಮೆ ಸರಿಯಾಗಿ ನೀಡಿ, ಎಲೆ ಚುಕ್ಕಿ ರೋಗ, ಹಳದಿ ರೋಗ ಬಂದಿದ್ದರಿಂದ ಸಾಲ ಮನ್ನ ಮಾಡಬೇಕು, ಮಟ್ಟಾಳೆ ಉದ್ಯಮ ಆರಂಭಿಸಬೇಕು, ಅಡಿಕೆ ಹಾನಿಕಾರವೇ ಎಂಬ ವಿಷಯದ ಚರ್ಚೆ ಆಗಬೇಕು, ಇಲಾಖೆ ಮತ್ತು ಸಿಪಿಸಿಆರ್‌ಐ ನಡುವಿನ ಸಮನ್ವಯದ ಕೊರತೆ ಹೋಗಲಾಡಿಸಬೇಕು, ಅಡಿಕೆ ಹಾನಿಕಾರ ಅಲ್ಲ ಎಂಬುದನ್ನು ಸಾಬೀತುಪಡಿಸಲು ಅತ್ಯಾಧುನಿಕ ಲ್ಯಾಬ್ ಆಗಬೇಕು, ಆಹಾರ ಬೆಳೆ ಬೆಳೆಯುವವನ ಉತ್ಪಾದನೆಗೆ ಲಾಭದಾಯಕ ಬೆಲೆ ನೀಡಲು ಸರಕಾರ ಪ್ರಯತ್ನ ಮಾಡಬೇಕು, ಪರ್ಯಾಯ ಬೆಳೆಗೂ ಸೂಕ್ತ ಬೆಲೆ ಕೊಡಬೇಕು. ತಾಲೂಕಿನಲ್ಲಿ ಮಣ್ಣು ಪರೀಕ್ಷಾ ಕೇಂದ್ರ ಆಗಬೇಕೆಂಬ ವಿವಿಧ ಸಲಹೆ ಮತ್ತು ಬೇಡಿಕೆಗಳನ್ನು ಸಭೆಯಲ್ಲಿ ಕೃಷಿಕರು ಪ್ರಸ್ತಾಪಿಸಿದರು.

ಹಿರಿಯ ಕೃಷಿಕರಾದ ಕಡಮಜಲು ಸುಭಾಶ್ ರೈ, ನಾರಾಯಣ ಪ್ರಕಾಶ್, ರೂಪೇಶ್ ರೈ ಅಲಿಮಾರ್, ರವಿಕಿರಣ್ ಪುಣಚ, ಮೋಹನ್ ರೈ ನರಿಮೊಗರು, ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಣ್ಚಪ್ಪಾಡಿ, ಭಾರತೀಯ ಕಿಸಾನ್ ಸಂಘದ ದ.ಕ ಜಿಲ್ಲಾ ಸಮಿತಿಯ ಸುಬ್ರಾಯ ಬಿ ಎಸ್, ಪ್ರವೀಣ್ ಕುಮಾರ್ ಕಡೆಂಜಿಗುತ್ತು, ಡಾ.ನಿಶು ಕುಮಾರ್, ಕೃಷ್ಣಪ್ರಸಾದ್ ಆಳ್ವ, ಧರ್ಣಪ್ಪ ಮೂಲ್ಯ, ಪದ್ಮಬಾಭ ಐರ್ವನಾಡು, ಅಶೋಕ್, ನವೀನ್ ರೈ ಚೆಲ್ಯಡ್ಕ, ಸತ್ಯಪ್ರಸಾದ್ ಆಲೇಟಿ ಅಭಿಪ್ರಾಯ ಮಂಡಿಸಿದರು.

ಪುತ್ತೂರು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ರೇಖಾ, ಬಂಟ್ವಾಳ ತೋಟಗಾರಿಕೆ ಇಲಾಖೆಯ ಹಿರಿಯ ನಿರ್ದೇಶಕ ಪ್ರದೀಪ್ ಡಿ ಸೋಜ, ವಿಜಯ ಕರ್ನಾಟಕ ಪತ್ರಿಕೆಯ ಎಜಿಎಮ್ ರಾಮಕೃಷ್ಣ, ಪ್ರಸರಣ ವಿಭಾಗದ ಮುಖ್ಯಸ್ಥ ನಾರಾಯಣ, ಸ್ಥಾನೀಯ ಸಂಪಾದಕ ರವೀಂದ್ರ ಶೆಟ್ಟಿ, ಕೃಷಿ ಇಲಾಖೆಯ ಪ್ರಭಾರ ನಿರ್ದೇಶಕ ಯಶಸ್ಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿಜಯ ಕರ್ನಾಟಕ ಪತ್ರಿಕೆಯ ಆರ್.ಸಿ ಭಟ್ ಹಕ್ಕೊತ್ತಾಯ ಮಂಡನೆ ಮಂಡಿಸಿದರು. ಇದೇ ಸಂದರ್ಭದಲ್ಲಿ ವಿಜಯ ಕರ್ನಾಟಕ ಪತ್ರಿಕೆಯ ವತಿಯಿಂದ ಶಾಸಕರನ್ನು ಗೌರವಿಸಲಾಯಿತು. ಯೋಗೀಶ್ ಹೊಳ್ಳ, ರವೀಂದ್ರ ದೇರಳ, ಧನುಷ್ ಕಲ್ಲಡ್ಕ, ಆರ್.ಸಿ ಭಟ್, ಶ್ರೀಕೃಷ್ಣ ಭಟ್, ಸ್ಥಾನೀಯ ಸಂಪಾದಕ ರವೀಂದ್ರ ಶೆಟ್ಟಿ ಅತಿಥಿಗಳಿಗೆ ತುಳುನಾಡಿನ ಹೆಮ್ಮೆಯ ಸಂಕೇತ ಮುಟ್ಟಲೆ ಮತ್ತು ಹೂವು ನೀಡಿ ಗೌರವಿಸಿದರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ವಿಜಯಕರ್ನಾಟಕ ಪತ್ರಿಕೆ ಪುತ್ತೂರು ಜಿಲ್ಲಾ ವರದಿಗಾರ ಸುಧಾಕರ್ ಸುವರ್ಣ ಸ್ವಾಗತಿಸಿ, ಜಿಲ್ಲಾ ಮುಖ್ಯ ವರದಿಗಾರ ಮಹಮ್ಮದ್ ಆರೀಫ್ ಪಡುಬಿದ್ರೆ ವಂದಿಸಿದರು.

ಅಡಿಕೆ ಬೆಳೆಗಾರರ‌ ಸಮಾವೇಶದ ಹಕ್ಕೊತ್ತಾಯಗಳು

೧. ಅಡಿಕೆಯನ್ನು ಕೇವಲ ಜಗಿದು, ಉಗಿಯುವ ವಸ್ತುವೆಂದು ಪರಿಗಣಿಸದೆ ಅಡಕೆಯನ್ನು ಆಹಾರ ವಸ್ತುಗಳಲ್ಲಿ ಮತ್ತು ವಿಶೇಷವಾಗಿ ಅಡಿಕೆಯಲ್ಲಿರುವ ಔಷಧೀಯ ಅಂಶಗಳ ಕಡೆಗೆ ಗಮನ ಹರಿಸಬೇಕು. ಈಗಾಗಲೇ ರೈತ ವಿಜ್ಞಾನಿಗಳು ಅಡಕೆಯಿಂದ ಅನೇಕ ಬಗೆಯ ಆಹಾರ ವಸ್ತುಗಳು, ಪಾನೀಯ, ಐಸ್‌ಕ್ರೀಂ ಮತ್ತಿತರ ತಿನಿಸುಗಳನ್ನು ತಯಾರಿಸಿದ್ದಾರೆ. ವಿದೇಶದಲ್ಲಿ ಅಡಿಕೆ ಆಧಾರಿತ ಆಹಾರ ವಸ್ತುಗಳು ಬಳಕೆಯಲ್ಲಿವೆ. ಅಡಕೆಯ ಮೌಲ್ಯವರ್ಧಿತ ಉತ್ಪನ್ನಗಳ ಸಂಶೋಧನೆಯತ್ತ ಸರಕಾರ ಗಮನ ಹರಿಸಬೇಕು.

೨. ಕ್ಯಾನ್ಸರ್ ಸೇರಿದಂತೆ ಅನೇಕ ರೋಗಗಳಿಗೆ ಅಡಿಕೆಯಲ್ಲಿ ಔಷಧವಿದೆ ಎಂಬ ಅಂಶ ಈಗಾಗಲೇ ಪ್ರಾಥಮಿಕ ಸಂಶೋಧನೆಯಿಂದ ಬೆಳಕಿಗೆ ಬಂದಿರುವ ಮಾಹಿತಿ ಬಿತ್ತರಗೊಂಡಿದೆ. ಈ ನಿಟ್ಟಿನಲ್ಲಿ ಸರಕಾರ ಅಧಿಕೃತವಾಗಿ ಸಂಶೋಧನೆ ನಡೆಸಬೇಕು. ಅಡಿಕೆಯನ್ನು ಮೆಡಿಸಿನ್ ಪ್ಲ್ಯಾಂಟ್ (ಔಷಧೀಯ ಸಸ್ಯ) ಎಂದು ಘೋಷಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕು.

೩. ಅಡಿಕೆ ಕ್ಯಾನ್ಸರ್ ಕಾರಕ ಎಂಬ ಆಪಾದನೆ ಸರ್ವೋಚ್ಚ ನ್ಯಾಯಾಲಯದ ವಿಚಾರಣೆಯ ಹಂತದಲ್ಲಿದೆ. ಆಧಾರ ರಹಿತವಾದ ಈ ಆಪಾದನೆಯನ್ನು ನ್ಯಾಯಾಲಯದಲ್ಲಿ ಸುಳ್ಳೆಂದು ಸಾಬೀತುಪಡಿಸುವ ನಿಟ್ಟಿನಲ್ಲಿ ಕಟಿಬದ್ಧವಾದ ನ್ಯಾಯಾಂಗ ಹೋರಾಟ ಮಾಡಬೇಕಾಗಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅಡಿಕೆ ಆರೋಗ್ಯಕ್ಕೆ ಉತ್ತೇಜಕ ಎಂಬ ವರದಿಯನ್ನು ನ್ಯಾಯಾಲಯಕ್ಕೆ ತಕ್ಷಣ ಸಲ್ಲಿಸಬೇಕು.

೪. ಅಡಿಕೆ ಆಮದು ಪ್ರಮಾಣ ಮತ್ತು ವಿದೇಶದಿಂದ ಅಡಿಕೆ ಕಳ್ಳಸಾಗಾಣಿಕೆ ಪ್ರಮಾಣ ಕಡಿಮೆಯಾದ ನಂತರ ಅಡಿಕೆ ಧಾರಣೆ ಏರುಗತಿಯಾಗಿದೆ. ಅಡಿಕೆ ಆಮದು ಪ್ರಮಾಣ ಮತ್ತೆ ಹಚ್ಚಳಗೊಂಡಲ್ಲಿ, ಕಳ್ಳಸಾಗಣಿಕೆ ನಿಯಂತ್ರಣ ತಪ್ಪಿದಲ್ಲಿ ಧಾರಣೆ ಕುಸಿಯುವ ಅಪಾಯವಿದೆ. ಹೀಗಾಗಿ ಅಡಿಕೆ ಆಮದು ನಿಯಂತ್ರಣ, ಆಮದು ಸುಂಕ ಹೆಚ್ಚಳ, ಕಳ್ಳಸಾಗಾಣಿಕೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರದ ಮೇಲೆ ರಾಜ್ಯ ಸರಕಾರ ಒತ್ತಡ ತರಬೇಕು.

೫. ಅಡಿಕೆ ಅಭಿವೃದ್ಧಿ ಮಂಡಳಿ ಸ್ಥಾಪಿಸಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು.

೬. ಈಗಾಗಲೇ ಹಳದಿ ರೋಗ ಮತ್ತು ಎಲೆಚುಕ್ಕಿ ರೋಗದಿಂದ ಬೆಳೆಗಾರರು ಸಾಕಷ್ಟು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಇವರಿಗೆ ರೋಗ ನಷ್ಟದ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕು. ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಲ್ಲಿ ಪರಿಹಾರ ಮೊತ್ತವು ಹೆಕ್ಟೇರ್‌ಗೆ ಗರಿಷ್ಠ 60 ಸಾವಿರ ರೂ. ಪ್ರಾಪ್ತಿಯಾಗಿದ್ದು, ಅಡಿಕೆ ಬೆಳೆಯು ರೋಗಕ್ಕೆ ತುತ್ತಾಗಿರುವ ಕಾರಣ ಈ ಮೊತ್ತವನ್ನು 1 ಲಕ್ಷ ರೂ.ಗಳಿಗೆ ಏರಿಸಬೇಕು. ಹಳದಿ ರೋಗದ ಬಗ್ಗೆ ಸಂಶೋಧನೆ ಕೈಗೊಂಡು ಶಾಶ್ವತ ಔಷಧ ಕಂಡು ಹಿಡಿಯಬೇಕು.

೭. ಅಡಿಕೆ ಬೆಳೆಗಾರರ ಕಲ್ಯಾಣಕ್ಕೆ ಸಂಬಂಧಿಸಿ ಗೋರಖ್‌ಸಿಂಗ್ ಸಮಿತಿ ಸಲ್ಲಿಸಿದ ವರದಿಯ ಅಂಶಗಳನ್ನು ಅನುಷ್ಠಾನಗೊಳಿಸಬೇಕು.

LEAVE A REPLY

Please enter your comment!
Please enter your name here