ಪತ್ರಿಕೆ, ಪುಸ್ತಕಗಳು ವ್ಯಕ್ತಿಯ ಬದುಕು ಕಟ್ಟುವುದಕ್ಕೆ ಸಹಕಾರಿ-ಮಠಂದೂರು
ಉಪ್ಪಿನಂಗಡಿ: ಇಲ್ಲಿನ ಗ್ರಾಮ ಪಂಚಾಯಿತಿ 15ನೇ ಹಣಕಾಸು ಮತ್ತು ಗ್ರಾಮ ಪಂಚಾಯಿತಿ ಸ್ವಂತ ನಿಧಿಯಿಂದ ಹಾಗೂ ಅಮೃತ ಯೋಜನೆಯಿಂದ 27 ಲಕ್ಷದ 25 ಸಾವಿರ ಅನುದಾನದಲ್ಲಿ ನಿರ್ಮಾಣ ಆಗಲಿರುವ ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಕಟ್ಟಡದ ಶಂಕು ಸ್ಥಾಪನೆ ಹಾಗೂ ಗ್ರಾಮ ಪಂಚಾಯಿತಿ ಸ್ವಂತ ನಿಧಿಯಿಂದ 5 ಲಕ್ಷ ರೂಪಾಯಿ ಅನುದಾನದಲ್ಲಿ ಸಮುದಾಯ ಆಸ್ಪತ್ರೆ ಎದುರಿನಲ್ಲಿ ನಿರ್ಮಾಣ ಆಗಲಿರುವ ಸಾರ್ವಜನಿಕ ಉದ್ಯಾನವನದ ಶಂಕು ಸ್ಥಾಪನೆ ಕಾರ‍್ಯಕ್ರಮ ಜ. 5ರಂದು ಜರಗಿತು.
ಶಾಸಕ ಸಂಜೀವ ಮಠಂದೂರು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ ಇಂದಿನ ಆಧುನಿಕ ಜಗತ್ತಿನಲ್ಲಿ ಮೊಬೈಲ್ ಎಷ್ಟೇ ಪ್ರಭಾವ ಬೀರಿದ್ದರೂ ಕೂಡಾ ಗ್ರಂಥಾಲಯ, ಪತ್ರಿಕೆ, ಪುಸ್ತಕಗಳು ವ್ಯಕ್ತಿಯ ಬದುಕು ಕಟ್ಟುವುದಕ್ಕೆ ಸಹಕಾರಿ ಆಗಿದೆ. ಜೀವನ ಪರಿಪಕ್ವಗೊಳಿಸಲು ಓದು ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಯ ಈ ಯೋಜನೆ ಎಲ್ಲರಿಗೂ ಸಹಕಾರಿ ಆಗಲಿ, ಕಟ್ಟಡ ಶೀಘ್ರ ನಿರ್ಮಾಣ ಆಗಲಿ ಎಂದು ಶುಭ ಹಾರೈಸಿದರು.
ಸಮುದಾಯ ಆಸ್ಪತ್ರೆ ಎದುರಿನಲ್ಲಿ ನಿರ್ಮಾಣ ಆಗಲಿರುವ ಸಾರ್ವಜನಿಕ ಉದ್ಯಾನವನಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಚಂದ್ರ ಮುಳಿಯ ಶಂಕು ಸ್ಥಾಪನೆ ನೆರವೇರಿಸಿದರು.
ಕಾರ‍್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಸುರೇಶ್ ಅತ್ರಮಜಲು, ಕೆ. ಅಬ್ದುಲ್ ರಹಿಮಾನ್, ಯು.ಟಿ. ತೌಸೀಫ್, ಧನಂಜಯ ಕುಮಾರ್ ನಟ್ಟಿಬೈಲ್, ಅಬ್ದುಲ್ ರಶೀದ್, ವಿದ್ಯಾಲಕ್ಮಿ ಪ್ರಭು, ರುಕ್ಮಿಣಿ, ಜಯಂತಿ, ಸಹಕಾರಿ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ್ ಕಾಯರ್ಪಾಡಿ, ಉಪಾಧ್ಯಕ್ಷ ಸುನಿಲ್ ಕುಮಾರ್ ದಡ್ಡು, ಸ್ಥಳೀಯ ಪ್ರಮುಖರಾದ ರಾಮಚಂದ್ರ ಮಣಿಯಾಣಿ, ಎನ್. ಉಮೇಶ್ ಶೆಣೈ, ಜಯಂತ ಪೊರೋಳಿ, ಆನಂದ ಕುಂಟಿನಿ, ವಿಶ್ವನಾಥ ಶೆಟ್ಟಿ ಕಂಗ್ವೆ, ಪ್ರಸಾದ್ ಬಂಡಾರಿ, ಆದೇಶ್ ಶೆಟ್ಟಿ, ಸುದರ್ಶನ್, ಸಿದ್ದಿಕ್ ಕೆಂಪಿ, ಕಂದಾಯ ನಿರೀಕ್ಷಕ ಚೆನ್ನಪ್ಪ, ಗ್ರಾಮಕರಣಿಕ ರಮೇಶ್ ಕೆ., ಗ್ರಂಥಾಲಯದ ಗ್ರಂಥಪಾಲಕಿ ಹೇಮಾವತಿ ಮತ್ತಿತರರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್ ಸ್ವಾಗತಿಸಿ, ಕಾರ‍್ಯದರ್ಶಿ ದಿನೇಶ್ ವಂದಿಸಿದರು.