ಧರ್ಮ ಮಾರ್ಗದ ಜೀವನ ಸಮಾಜದಲ್ಲಿ ಉನ್ನತ ಸ್ಥಾನಮಾನಕ್ಕೆ ಪ್ರೇರಣೆ – ಪದ್ಮನಾಭ ತಂತ್ರಿ
ಭಕ್ತಿ ಸಾಗರದ ಅಲೆಗಳು ಪ್ರಪಂಚದ ಪ್ರತಿಯೊಂದು ದೇಶಕ್ಕೆ ತಲುಪಲಿ- ಪ್ರದೀಪ್ ಆರ್ ಗೌಡ
ಕಾಣಿಯೂರು: ದೇವಸ್ಥಾನವು ಮಕ್ಕಳಿಂದ ಹಿರಿಯರವರೆಗೆ ಅವರ ಜೀವನ ಕ್ರಮವನ್ನು ಕೊಡುವಂತಹ ಕ್ಷೇತ್ರವಾಗಿದೆ. ದೇವಸ್ಥಾನದ ನಿಯಮವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಸ್ವಾಭಾವಿಕವಾಗಿ, ಆಧ್ಯಾತ್ಮಿಕವಾಗಿ, ದೈಹಿಕವಾಗಿ, ಬೌದ್ಧಿಕವಾದಂತಹ ಶಕ್ತಿ ಉದ್ಧೀಪನಗೊಳ್ಳುತ್ತದೆ ಎಂದು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಹೇಳಿದರು.
ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಮಾಚಿಲ ಶ್ರೀ ಉಳ್ಳಾಕುಲು ಮತ್ತು ಶ್ರೀ ಉಳ್ಳಾಲ್ತಿ ಪ್ರತಿಷ್ಠೆ ಹಾಗೂ ನೇಮೋತ್ಸವದ ಪ್ರಯುಕ್ತ ಜ 4 ರಂದು ನಡೆದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ದೈಹಿಕವಾದ ಚಿಂತನೆ, ಆಧ್ಯಾತ್ಮಿಕ ಚಿಂತನೆಯನ್ನು ಒಟ್ಟಾಗಿ ಸಮಗ್ರವಾಗಿ ತೆಗೆದುಕೊಂಡಾಗ ಮಾತ್ರ ಒಬ್ಬ ವ್ಯಕ್ತಿ ವ್ಯಕ್ತಿಯಾಗಿ ಬೆಳಗುತ್ತಾನೆ. ಮನುಷ್ಯ ಮನುಷ್ಯನಾಗಿ ಬದುಕುವುದೇ ದೊಡ್ಡ ಧರ್ಮ. ಭಗವಂತನನ ಸೇವೆಯೇ ಮುಕ್ತಿಯ ದಾರಿ. ಧರ್ಮ ಮಾರ್ಗದ ಜೀವನ, ಸತ್ಯ ನಿಷ್ಠೆಯ ಬದುಕು ಸಮಾಜದಲ್ಲಿ ಉನ್ನತ ಸ್ಥಾನಮಾನಕ್ಕೆ ಪ್ರೇರಣೆಯಾಗುತ್ತದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಪ್ರದೀಪ್ ಆರ್ ಗೌಡ ಮಾತನಾಡಿ, ಧರ್ಮವನ್ನು ಎತ್ತಿ ಹಿಡಿದಂತಹ ನಮ್ಮ ರಾಷ್ಟ್ರದಲ್ಲಿ ಧಾರ್ಮಿಕ ಸಂಸ್ಥೆಗಳಲ್ಲಿ ಆಗುವಂತಹ ಸೇವೆಗಳಲ್ಲಿ ಅಧಿಕಾರದ ಪ್ರಶ್ನೆ ಬರುವುದಿಲ್ಲ. ಸೇವೆಯ ದೃಷ್ಠಿಯಲ್ಲಿ ದೇವಸ್ಥಾನದಲ್ಲಿ ಹಲವಾರು ಮಂದಿ ಹಗಲಿರುಲು ಕೆಲಸ ನಿರ್ವಹಿಸಿದ್ದಾರೆ. ಅವರನ್ನು ನೆನಪಿಸಿಕೊಳ್ಳುವುದು ನಮ್ಮ ಧರ್ಮ. ನಮ್ಮಲ್ಲಿರುವ ಆದರ್ಶ ಮತ್ತು ತತ್ವ, ಆಂತರಿಕ ಶುದ್ಧತೆ, ನಿಷ್ಕಲ್ಮಶ ಭಕ್ತಿಯ ವಿಚಾರವಾಗಿ ಅತ್ಯಂತ ವೇಗವಾಗಿ ಓಡುತ್ತಿರುವ ಸಂದರ್ಭದಲ್ಲಿಯೂ ಪ್ರಪಂಚದ ಎಲ್ಲಾ ರಾಷ್ಟ್ರಗಳು ಭಾರತದ ಕಡೆಗೆ ನೋಡುತ್ತಿದೆ. ಭಕ್ತಿ ಸಾಗರದ ಅಲೆಗಳು ಪ್ರಪಂಚದ ಪ್ರತಿಯೊಂದು ದೇಶಕ್ಕೆ ಈ ವೇದಿಕೆಯಿಂದ ತಲುಪಲಿ ಎಂದರು.
ಕಾಣಿಯೂರು ಗ್ರಾ.ಪಂ.ಉಪಾಧ್ಯಕ್ಷ ಗಣೇಶ್ ಉದನಡ್ಕ ಮಾತನಾಡಿ, ನಮ್ಮ ಧರ್ಮ ರಕ್ಷಣೆಯ ಜತೆಗೆ ಮಕ್ಕಳಿಗೆ ಸಂಸ್ಕಾರ ನೀಡುವ ಕೆಲಸ ಧಾರ್ಮಿಕ ಕೇಂದ್ರಗಳಿಂದ ಆಗಬೇಕು ಎಂದರು. ದೇವಸ್ಥಾನಗಳಿಗೆ ಬಂದ ವಿವಿಧ ಅನುದಾನದ ಬಗ್ಗೆ ಅವರು ವಿವರಿಸಿದರು.
ಮಂಗಳೂರು ಗೋಕರ್ಣನಾಥೇಶ್ವರ ಕೋ-ಆಪರೇಟಿವ್ ಬ್ಯಾಂಕ್‌ನ ನಿರ್ದೇಶಕ ವಿಜಯಕುಮಾರ್ ಸೊರಕೆ ಮಾತನಾಡಿ, ದೇವಸ್ಥಾನದ ಕಾರ್ಯಕ್ರಮಗಳಲ್ಲಿ ಎಲ್ಲರೂ ಏಕಮನಸ್ಸಿನಿಂದ ಭಾಗವಹಿಸಿದಾಗ ಯಾವುದೇ ಕೆಲಸ ಕಾರ್ಯ ಒಳ್ಳೆಯದಾಗಿ ನಡೆಯುತ್ತದೆ, ಅದಕ್ಕೆ ದೇವರ ಸಹಾಯವೂ ಇರುತ್ತದೆ. ಊರಿನ ದೇವಸ್ಥಾನ, ನಮ್ಮ ದೇವಸ್ಥಾನ ಎಂದು ಭಾವಿಸಿ ಕೆಲಸ ಮಾಡಿದಾಗ ದೇವಸ್ಥಾನ ಪ್ರಗತಿಯತ್ತ ಸಾಗಲು ಸಾಧ್ಯವಾಗುತ್ತದೆ ಎಂದರು.
ಗ್ರಾ.ಪಂ.ಸದಸ್ಯರಾದ ಕೀರ್ತಿಕುಮಾರಿ ಅಂಬುಲ, ಗಂಗಮ್ಮ ಗುಜ್ಜರ್ಮೆ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೇಮಣ್ಣ ಗೌಡ ಅಂಬುಲ, ಮೊಕ್ತೇಸರರಾದ ನಾರ್ಣಪ್ಪ ಗೌಡ ಮಾಚಿಲ, ಕ್ಷೇತ್ರೇಶರಾದ ಪೆರ್ಗಡೆ ಗೌಡ ಮಾಚಿಲ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷೆ ಚಂದ್ರಕಲಾ ಜಯರಾಮ್ ಅರುವಗುತ್ತು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯಂ. ವೆಂಕಪ್ಪ ಗೌಡ ಮಾಚಿಲ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಯು.ಪಿ ರಾಮಕೃಷ್ಣ ಗೌಡ ಗುಜ್ಜರ್ಮೆ, ಉಪಾಧ್ಯಕ್ಷರಾದ ದೇವಯ್ಯ ಗೌಡ ಖಂಡಿಗ, ಕಾರ್ಯದರ್ಶಿ ಜತ್ತಪ್ಪ ಗೌಡ ಉದ್ಲಡ್ಡ, ಕೋಶಾಧಿಕಾರಿ ವಿಶ್ವನಾಥ ಅಂಬುಲ, ಉಪ ಕಾರ್ಯದರ್ಶಿ ವಿಜಿತ್ ಮಾಚಿಲ, ಆಡಳಿತ ಪಂಗಡ ಸಂಚಾಲಕ ಸುಂದರ ಗೌಡ ದೇವಸ್ಯ, ಅರ್ಚಕ ಗಣಪತಿ ಭಟ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಕಾಶ್ ಗೌಡ ಅರುವ, ವೆಂಕಪ್ಪ ಗೌಡ ಕಂಪ, ವಸಂತ ಕುಂಬಾರ ಕೊಪ್ಪ, ಸುಮಲತಾ ದೇವಸ್ಯ, ಸುಲೋಚನಾ ಮಿಯೋಳ್ಪೆ, ಕಿನ್ನಿಗ ಓಡದಕೆರೆ ಹಾಗೂ ವಿವಿಧ ಸಮಿತಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಬ್ರಹ್ಮಕಲಶ ಸಮಿತಿ ಉಪಾಧ್ಯಕ್ಷರಾದ ಪ್ರವೀಣ್ ಕುಂಟ್ಯಾನ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಸಿ.ಪಿ ಜಯರಾಮ ಗೌಡರು ಸೇರಿದಂತೆ ಹಲವಾರು ಹಿರಿಯರ ಪರಿಶ್ರಮದಿಂದ ಇವತ್ತು ದೇವಸ್ಥಾನ ಬೆಳಗುತ್ತಿದೆ. ಸಿ.ಪಿ ಜಯರಾಮ ಗೌಡರ ಕಲ್ಪನೆಯಂತೆ ದೇವಸ್ಥಾನದಲ್ಲಿ ಪ್ರತಿ ವರ್ಷ ಆಡಳಿತ ಪಂಗಡ ರಚಿಸಿಕೊಂಡು ಬರುತ್ತಿದ್ದು, ಇವತ್ತಿಗೂ ಅದರ ಅನುಕರಣೆ ಬರಲಾಗುತ್ತಿದೆ ಎಂದರು.
ಜಯಂತ್ ಅಂಬುಲ ವಂದಿಸಿದರು. ದಯಾನಂದ ಅಂಬುಲ, ಪ್ರಶಾಂತ್ ಅಂಬುಲ ಕಾರ್ಯಕ್ರಮ ನಿರೂಪಿಸಿದರು.
ಸಚಿವೆ ಶೋಭಾ ಕರಂದ್ಲಾಜೆ ಭೇಟಿ: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆಯವರು ಜ 5 ರಂದು ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಸನ್ಮಾನ: ಕಾರ್ಯಕ್ರಮದಲ್ಲಿ ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರನ್ನು ಹಾಗೂ ಹೂವಿನ ಅಲಂಕಾರಕ್ಕೆ ಸಹಕರಿಸಿದ ಶ್ರೀ ಕ್ಷೇತ್ರ ದೈಪಿಲ ಕ್ರೀಡಾ ಸೇವಾ ಸಂಘದ ಪದಾಧಿಕಾರಿಗಳನ್ನು ಗೌರವಿಸಲಾಯಿತು.
ಅಷ್ಟಬಂಧ ಬ್ರಹ್ಮಕಲಶೋತ್ಸವ..
ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಜ ೫ರಂದು ಬೆಳಿಗ್ಗೆ ಗಣಪತಿ ಹೋಮ, ಕುಂಭಲಗ್ನದಲ್ಲಿ ಅಷ್ಟಬಂಧ ಲೇಪನ, ಮೀನ ಲಗ್ನದಲ್ಲಿ ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ರಂಗಪೂಜೆ, ಶ್ರೀ ಭೂತ ಬಲಿ, ರಾಜಾಂಗಣ ಪ್ರಸಾದ, ಬಟ್ಟಲು ಕಾಣಿಕೆ, ನಾಲ್ಕಂಭ ಕ್ಷೇತ್ರದಲ್ಲಿ ಕಟ್ಟೆ ಪೂಜೆ, ಮಂತ್ರಾಕ್ಷತೆ ನಡೆಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ, ಬೆಳಂದೂರು ಲಕ್ಷ್ಮೀಪ್ರಿಯಾ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ಸಾಕ್ಷಾತ್ ಶಿವ ಭಜನಾ ತಂಡದಿಂದ ಕುಣಿತ ಭಜನೆ ನಡೆಯಿತು.
ಇಂದು ಕ್ಷೇತ್ರದಲ್ಲಿ..
ಜ 6ರಂದು ಸಂಜೆ ಶ್ರೀ ಉಳ್ಳಾಕುಲು ಭಂಡಾರ ತೆಗೆಯುವುದು, ರಾತ್ರಿ ಶ್ರೀರಾಗ್ ಮ್ಯೂಸಿಕ್ ಪುತ್ತೂರು- ಮಂಗಳೂರು ಅರ್ಪಿಸುವ ದೀಪಕ್ ರೈ ಪಾಣಾಜೆ ಸಾರಥ್ಯದ ಮಸ್ಕಿರಿ ಕುಡ್ಲ ತಂಡದಿಂದ ತೆಲಿಕೆ ಬಂಜಿ ನಿಲಿಕೆ ಹಾಸ್ಯ ಗೊಂಚಿಲು ಹಾಗೂ ನೃತ್ಯ ಗಾನ ವೈಭವ ಕಾರ್ಯಕ್ರಮದಲ್ಲಿ ಬ್ರಹ್ಮಕಲಶ ಕಲಾ ಸಂಭ್ರಮ ನಡೆಯಲಿದೆ.