ಕೌಡಿಚ್ಚಾರು ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಶ್ರೀಕೃಷ್ಣ ದೇವರ ರಜತ ಛಾಯಾ ಫಲಕ ಪ್ರತಿಷ್ಠೆ

0

ಅರಿಯಡ್ಕ : ಮನೋವೈದ್ಯರ ವೈದ್ಯ ಶ್ರೀಕೃಷ್ಣ, ಭಗವದ್ ಗೀತೆಯನ್ನು ಓದಿದರೆ ಅದರಲ್ಲಿ ಎಲ್ಲಾ ರೋಗಕ್ಕೆ ಮದ್ದಿದೆ. ಕಲಿಯುಗದಲ್ಲಿ ದೇವರನ್ನು ಒಲಿಸಿಕೊಳ್ಳುವ ಸುಲಭ ಕಾರ್‍ಯವೇ ಭಜನೆ. ಭಜನೆಯಿಂದ ಶತ್ರುತ್ವ ನಾಶ ಆಗಿ ಭ್ರಾತೃತ್ವ ಬೆಳೆಯಲು ಸಾಧ್ಯ ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನಮ್‌ನ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಕೌಡಿಚ್ಚಾರು ಶ್ರೀಕೃಷ್ಣ ಭಜನಾಮಂದಿರದ ಪ್ರತಿಷ್ಠಾ ಮಹೋತ್ಸವ, ಪುನರ್ ನಿರ್ಮಿತ ಭಜನಾ ಮಂದಿರದಲ್ಲಿ ಶ್ರೀಕೃಷ್ಣ ದೇವರ ರಜತ ಛಾಯಾ ಫಲಕ ಪ್ರತಿಷ್ಠೆ ಮತ್ತು ಶ್ರೀಕೃಷ್ಣ ಸಭಾ ಭವನ ಲೋಕಾರ್ಪಣೆ ಕಾರ್‍ಯಕ್ರಮದ ಪ್ರಯುಕ್ತ ಜ.8 ರಂದು ಭವಾನಿ ಅಮ್ಮ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭಾಕಾರ್‍ಯಕ್ರಮದಲ್ಲಿ ಅವರು ದೀಪಪ್ರಜ್ವಲನೆ ಮಾಡಿ ಆಶೀರ್ವಚನ ನೀಡಿದರು. ನಾವೆಲ್ಲರೂ ಶ್ರೀಕೃಷ್ಣನ ಬಂಗಾರದ ಕೊಳಲು ಆಗಲು ಪ್ರಯತ್ನಿಸಬೇಕು. ಕೊಳಲಿನಲ್ಲಿ ಆರು ತೂತುಗಳಿವೆ. ಇವು ನಮ್ಮಲ್ಲಿರುವ ಅರಿಷಡ್ವರ್ಗಗಳನ್ನು ದೂರ ಮಾಡುತ್ತವೆ. ಈ ಜಗತ್ತಿನಲ್ಲಿ ಯಾವುದೂ ಸುಲಭವಲ್ಲ ಯಾವುದು ಅಸಾಧ್ಯವೂ ಅಲ್ಲ ಎಲ್ಲವೂ ನಂಬಿಕೆ, ಧೈರ್‍ಯಗಳ ಮೇಲೆ ನಿಂತಿದೆ. ಯಾರು ತನ್ನಿಂದ ಸಾಧ್ಯ ಎಂದುಕೊಳ್ಳುತ್ತಾನೋ ಅವನು ಸಾಧನೆಯ ಪಥದತ್ತ ಮುನ್ನಡೆಯುತ್ತಾನೆ ಎಂದು ಹೇಳಿದರು.


ಧಾರ್ಮಿಕ ಉಪನ್ಯಾಸ ನೀಡಿ ಮಾತಾಡಿದ ವಾಗ್ಮಿ ಶ್ರೀಕಾಂತ್ ಶೆಟ್ಟಿ ಕಾರ್ಕಳರವರು ಯಾವ ಯಾವ ಕಾಲದಲ್ಲಿ ಧರ್ಮದ ಸಂಸ್ಥಾಪನೆ ಮಾಡಲು ಶ್ರೀಕೃಷ್ಣ ಅವತಾರ ಎತ್ತಿ ಬರುತ್ತಾನೆ ಹಾಗೆಯೇ ಶ್ರೀಕೃಷ್ಣ ಮಂದಿರ ಕೌಡಿಚ್ಚಾರಿನಲ್ಲಿ ಬಹಳ ಸುಂದರವಾಗಿ ಮೂಡಿ ಬಂದು ನಾಡು ಸುಭಿಕ್ಷೆಯಾಗಲಿ. ಭಗವಂತ ಮನುಷ್ಯನನ್ನು ಉದ್ದಾರ ಮಾಡಬೇಕಿದ್ದರೆ ಮನುಷ್ಯ, ಮನುಷ್ಯನ ರೀತಿಯಲ್ಲಿ ಇರಬೇಕು. ಧರ್ಮದ ಅರಿವನ್ನು ಮೂಡಿಸಬೇಕು, ಅತ್ಯಂತ ಸರಳರೀತಿಯಲ್ಲಿ ದೇವರನ್ನು ಉಪಾಸನೆ ಮಾಡುವುದೇ ಭಜನೆ ಎಂದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಪುತ್ತೂರು ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕ ಹೇಮನಾಥ ಶೆಟ್ಟಿ ಮಾತಾಡಿ ಶ್ರೀಕೃಷ್ಣ ಭಜನಾ ಮಂದಿರ ದೇವಸ್ಥಾನವೋ ಭಜನಾ ಮಂದಿರವೋ ಎಂದು ಅರ್ಥೈಸಿಕೊಳ್ಳಲಾಗದ ರೀತಿಯಲ್ಲಿ ಸುಂದರವಾಗಿ ನಿರ್ಮಾಣವಾಗಿದೆ. ಈ ಮಂದಿರಕ್ಕೆ ಕಾರಣೀಭೂತರಾದ ಎಲ್ಲರಿಗೂ ಶುಭನಮನಗಳು ಎಂದು ಹೇಳಿದರು. ಉದ್ಯಮಿ ಜಯಂತ ನಡುಬೈಲು ಮಾತಾಡಿ ಹಿಂದುತ್ವದ ಮೂಲಕ ಭಜನಾ ಮಂದಿರ ನಿರ್ಮಾಣವಾಗಿದೆ. ಪ್ರತಿ ಮನೆಯಲ್ಲಿ ಆಚರಿಸುತ್ತಿದ್ದ ಭಜನಾ ಕಾರ್‍ಯಕ್ರಮ ಇಂದು ಸಾಮೂಹಿಕವಾಗಿ ಮಂದಿರದಲ್ಲಿ ಆಗುತ್ತಿದೆ. ಕಲಿಯುಗದಲ್ಲಿ ಭಜನೆಯೇ ಅತ್ಯಂತ ಶ್ರೇಷ್ಠ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿ ಅಧ್ಯಕ್ಷ ರಾಮದಾಸ ರೈ ಮದ್ಲ ಮಾತನಾಡಿ ಸರ್ವರ ಸಹಕಾರವನ್ನು ನೆನಪಿಸಿಕೊಂಡು ಕೃತಜ್ಞತೆಯನ್ನು ಸಲ್ಲಿಸಿದರು.

ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಭಾಸ್ಕರ ಎಂ. ಪೆರುವಾಯಿ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಮೈಸೂರು ಇದರ ಉಪಾಧ್ಯಕ್ಷ ಮಂಜುನಾಥ ಎನ್.ಎಸ್, ಕಾವು ಪಂಚಲಿಂಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಶರತ್ ಕುಮಾರ್‌ರೈ, ಸ.ಉ.ಹಿ.ಪ್ರಾ ಶಾಲೆ ಹಿರೇಬಂಡಾಡಿ ಇದರ ಮುಖ್ಯಗುರುಗಳಾದ ಬಾಬು ಕೆ. ಸಂದರ್ಭೋಚಿತವಾಗಿ ಮಾತಾಡಿದರು. ವೇದಿಕೆಯಲ್ಲಿ ಜೀರ್ಣೊದ್ದಾರ ಸಮಿತಿ ಗೌರವಾಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಅಧ್ಯಕ್ಷ ವಾಸು ಪೂಜಾರಿ ಗುಂಡ್ಯಡ್ಕ ಉಪಸ್ಥಿತರಿದ್ದರು.

ಸನ್ಮಾನ: ದಾನಿಗಳಾದ ನಾರಾಯಣ ರೈ ಮಡ್ಯಂಗಳ, ಅಮ್ಮಣ್ಣ ರೈ ಪಾಪೆಮಜಲು, ತಿಮ್ಮಪ್ಪ ಭಂಡಾರಿ ಕುತ್ಯಾಡಿ ಮಂದಿರಕ್ಕೆ ವಯರಿಂಗ್ ಮಾಡಿರುವ ಜನಾರ್ಧನ ಬಳ್ಳಿಕಾನ, ಮಂದಿರದ ಇಂಜಿನಿಯರಿಂಗ್ ಕೆಲಸ ಮಾಡಿರುವ ಮನಮೋಹನ್ ಕೆಯ್ಯೂರು, ಮಂದಿರದಲ್ಲಿ ಕಳೆದ ಒಂದು ವರ್ಷದಿಂದ ಕರಸೇವೆಯನ್ನು ಮಾಡಿರುವ ಕುಂಞರಾಮ ಮಣಿಯಾಣಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅನ್ನದಾನಿಗಳಾದ ಲಕ್ಷ್ಮೀಶ ಎಲ್.ಎನ್ ಶಾಮಿಯಾನ, ಸಂದೀಪ್ ಬೆಂಗಳೂರು, ವಯರಿಂಗ್‌ನಲ್ಲಿ ಸಹಕರಿಸಿದ ಜಗದೀಶ್ ಕೆಯ್ಯೂರು, ಸೆಂಟ್ರಿಂಗ್ ಕೆಲಸ ಮಾಡಿರುವ ಬಾಲಕೃಷ್ಣ ಪಾಟಾಳಿ ಪಟ್ಟೆ, ವೇದಿಕೆಯಲ್ಲಿ ನಾಮಫಲಕ ನಿರ್ಮಿಸಿದ ಚಂದ್ರ ಮಯೂರ್ ಆಟ್ಸ್ ಕುಂಬ್ರರವರನ್ನು ಶಾಲು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಒಡಿಯೂರು ಗುರುದೇವಾನಂದ ಸ್ವಾಮೀಜಿಯವರಿಗೆ ವಿಶ್ವನಾಥ ರೈ ಕುತ್ಯಾಡಿ ಮತ್ತು ಲತಾ ದಂಪತಿ ಫಲಪುಷ್ಪ ನೀಡಿ ಗೌರವಿಸಿದರು. ಶಿವಣ್ಣ ಗೌಡ ಮಾಯಿಲಕೊಚ್ಚಿ, ಗಣೇಶ್ ದಾಸ್ ಬಪ್ಪುಂಡೇಲು, ತಿಮ್ಮಪ್ಪಣ್ಣ ನಾಯ್ಕ ಅಕಾಯಿ, ಸಂತೋಷ್ ಕುಲಾಲ್ ಕೌಡಿಚ್ಚಾರು, ಪ್ರಭಾಕರ ಗೌಡ ಹೊಸಮನೆ, ಸಂಜೀವ ನೆಕ್ಕರೆ, ಕೊರಗಪ್ಪ ಗೌಡ ಮಡ್ಯಂಗಳ, ರಾಜೇಶ್ ರೈ ಕುತ್ಯಾಡಿ, ಪದ್ಮನಾಭ ಅಚಾರ್‍ಯ ಶೇಖಮಲೆ, ಹರಿಪ್ರಸಾದ್ ಎಂ.ಎಸ್ ಮಾಯಿಲಕೊಚ್ಚಿ, ಗಣೇಶ್ ಕುರಿಂಜ ಗಣ್ಯರಿಗೆ ಶಾಲು ಹಾಕಿ ಸ್ವಾಗತಿಸಿದರು, ಶಾಂಭವಿ, ಅನನ್ಯ, ಧನ್ಯ ಪ್ರಾರ್ಥಿಸಿದರು. ಭಜನಾ ಮಂದಿರದ ಆಡಳಿತ ಸಮಿತಿ ಪ್ರ,ಕಾರ್‍ಯದರ್ಶಿ ದುರ್ಗಾಪ್ರಸಾದ್ ಕುತ್ಯಾಡಿ ಸ್ವಾಗತಿಸಿ ಜೀರ್ಣೋದ್ಧಾರ ಸಮಿತಿ ಕಾರ್‍ಯದರ್ಶಿ ಹರೀಶ್ ರೈ ಜಾರತ್ತಾರು ವಂದಿಸಿದರು. ಕೀರ್ತಿ ಮಾಯಿಲಕೊಚ್ಚಿ ಕಾರ್‍ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಕಾರ್‍ಯಕ್ರಮ: ಕೋಟಿ ಚೆನ್ನಯ ಗೆಳಯರ ಬಳಗ ಪಾಪೆಮಜಲು ಇವರ ಪ್ರಾಯೋಜಕತ್ವದಲ್ಲಿ ವಿಠಲನಾಯಕ್ ಕಲ್ಲಡ್ಕ ಇವರಿಂದ ಗೀತಾ ಸಾಹಿತ್ಯ ಸಂಭ್ರಮ ಕಾರ್‍ಯಕ್ರಮ, ಕೋಟಿ ಚೆನ್ನಯ ಬಳಗದಿಂದ ಪಿಲಿನಲಿಕೆ ಹಾಗೂ ಸಿಡಿಮದ್ದು ಪ್ರದರ್ಶನ ನಡೆಯಿತು.

LEAVE A REPLY

Please enter your comment!
Please enter your name here