ಪುತ್ತೂರು: ಮೌಲ್ಯಾಂಕನ ಹಾಗೂ ಶ್ರೇಣೀಕರಣಕ್ಕಾಗಿ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜು ಕಳೆದ ಸಪ್ಟೆಂಬರ್ ತಿಂಗಳಲ್ಲಿ ನ್ಯಾಕ್ ಸಂಸ್ಥೆಗೆ ಸಲ್ಲಿಸಿದ ಸ್ವ-ಅಧ್ಯಯನ ವರದಿಯ ಮೌಲ್ಯಮಾಪನಕ್ಕಾಗಿ ನ್ಯಾಕ್ ಸಂಸ್ಥೆಯಿಂದ ನಿಯೋಜಿಸಲ್ಪಟ್ಟ ತ್ರಿ ಸದಸ್ಯ ತಂಡವು ಜ. 4 ಮತ್ತು 5 ರಂದು ಕಾಲೇಜಿಗೆ ಭೇಟಿ ನೀಡಿತ್ತು.
ನ್ಯಾಕ್ ತಂಡದ ಅಧ್ಯಕ್ಷರಾದ ಉತ್ತರ ಪ್ರದೇಶದ ಮಹರ್ಷಿ ಮಾಹಿತಿ ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿಗಳೂ ಹಾಗೂ ಪ್ರಸ್ತುತ ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಆಗಿರುವ ಡಾ| ಹೆಚ್.ಕೆ.ಸಿಂಗ್, ಸದಸ್ಯ ಸಂಯೋಜಕರಾದ ಹರಿಯಾಣದ ಕುರುಕ್ಷೇತ್ರ ವಿಶ್ವವಿದ್ಯಾನಿಲಯದ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ| ಪವನ್ ಕುಮಾರ್ ಶರ್ಮ, ಸದಸ್ಯರಾದ ಸೋಲಾಪುರ ವಾಲ್ಚಂದ್ ಕಲಾ ಮತ್ತು ವಿಜ್ಞಾನ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲರಾದ ಡಾ| ಸಂತೋಶ್ ಕೋಠಿ ಇವರುಗಳನ್ನು ಕಾಲೇಜಿನ ಎನ್.ಸಿ.ಸಿ ಆರ್ಮಿ ಮತ್ತು ನೇವಿಯ ಸದಸ್ಯರ ಗೌರವ ವಂದನೆಯೊಂದಿಗೆ ಸ್ವಾಗತಿಸಲಾಯಿತು.
ತಂಡವು ಕಾಲೇಜಿನ ಪ್ರಾಂಶುಪಾಲರು, ಐಕ್ಯೂಎಸಿ ಸಂಯೋಜಕರು, ಆಡಳಿತ ಮಂಡಳಿಯ ಸದಸ್ಯರು, ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಆಡಳಿತ ಸಿಬ್ಬಂದಿ, ವಿದ್ಯಾರ್ಥಿಗಳು, ಹೆತ್ತವರು, ಹಿರಿಯ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿತು. ಕಾಲೇಜು ಸ್ವ-ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿದ ಹಲವಾರು ಅಂಶಗಳ ಬಗ್ಗೆ ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ಕಾಲೇಜಿನ ಯಕ್ಷಕಲಾಕೇಂದ್ರ ಹಾಗೂ ವಿದ್ಯಾರ್ಥಿ ಸಂಘದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.
ಜನವರಿ 5 ರಂದು ಕಾಲೇಜಿನ ಹಲವಾರು ಕ್ರಿಯಾತ್ಮಕ ಘಟಕಗಳಿಗೆ ಭೇಟಿ ನೀಡಿದ ನಂತರ ಉಪನ್ಯಾಸಕರು, ಆಡಳಿತ ಸಿಬ್ಬಂದಿ, ವಿದ್ಯಾರ್ಥಿ ಸಂಘದ ಸದಸ್ಯರ ಸಮ್ಮುಖದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆಂಟನಿ ಪ್ರಕಾಶ್ ಮೊಂತೆರೋ ರವರಿಗೆ ತಂಡದ ಅಧ್ಯಕ್ಷರಾದ ಡಾ. ಹೆಚ್. ಕೆ.ಸಿಂಗ್ ರವರು ನಿರ್ಗಮನ ವರದಿಯನ್ನು ಹಸ್ತಾಂತರಿಸಿದರು.
ಜನವರಿ 10 ರಂದು ಸದರಿ ಮೌಲ್ಯಾಂಕನ ಪ್ರಕ್ರಿಯೆಯ ಫಲಿತಾಂಶವು ಹೊರ ಬಂದಿದ್ದು ಕಾಲೇಜಿಗೆ ‘ಎ’ ಶ್ರೇಣಿ ದೊರಕಿರುತ್ತದೆ. ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆಂಟನಿ ಪ್ರಕಾಶ್ ಮೊಂತೆರೊ ರವರ ನಿರ್ದೇಶನದಲ್ಲಿ ಪ್ರಾರಂಭಗೊಂಡ ಮೌಲ್ಯಾಂಕನಕ್ಕೊಳಪಡುವ ಪ್ರಕ್ರಿಯೆಯಲ್ಲಿ ಕಾಲೇಜಿನ ಕ್ಯಾಂಪಸ್ ನಿರ್ದೇಶಕರಾದ ವಂ| ಸ್ಟ್ಯಾನಿ ಪಿಂಟೋ, ಐಕ್ಯೂಎಸಿ ಸಂಯೋಜಕರಾದ ಡಾ|ಎ.ಪಿ ರಾಧಾಕೃಷ್ಣ, ಉಪ ಪ್ರಾಂಶುಪಾಲರಾದ ಪ್ರೊ| ಗಣೇಶ್ ಭಟ್, ಸ್ವ-ಅಧ್ಯಯನ ವರದಿ ತಯಾರಿಕಾ ತಂಡದ ಮುಖ್ಯಸ್ಥರಾದ ಪ್ರೊ| ವಿನಯಚಂದ್ರ, ಕಾಲೇಜಿನ ಶಿಕ್ಷಕ ವೃಂದ, ಆಡಳಿತ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಸಹಕಾರ ನೀಡಿರುತ್ತಾರೆ.
ಫಲಿತಾಂಶ ದೊರಕಿದ ಹಿನ್ನೆಲೆಯಲ್ಲಿ ಮಂಗಳೂರು ಕಥೋಲಿಕ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಧರ್ಮಾಧ್ಯಕ್ಷ ಅತಿ ವಂ| ಡಾ|ಪೀಟರ್ ಪಾವ್ಲ್ ಸಲ್ದಾನರವರು ಕಾಲೇಜಿನ ಪ್ರಾಂಶುಪಾಲರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿರುತ್ತಾರೆ. ಕ್ಯಾಥೊಲಿಕ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾದ ಅತಿ ವಂ| ಆಂಟನಿ ಶೆರಾ, ಕಾಲೇಜಿನ ಸಂಚಾಲಕರಾದ ಅತಿ ವಂ|ಲಾರೆನ್ಸ್ ಮಸ್ಕರೇನ್ಹಸ್ ಹಾಗೂ ಆಡಳಿತ ಮಂಡಳಿಯ ಸದಸ್ಯರು ಫಲಿತಾಂಶದ ಬಗ್ಗೆ ಸಂತಸ ವ್ಯಕ್ತಪಡಿಸಿರುತ್ತಾರೆ.