ಮಕರ ಸಂಕ್ರಮಣದಂದು ಪುತ್ತೂರೊಡೆಯಗೆ ಕನಕಾಭಿಷೇಕ

0

ಪುತ್ತೂರು:ಇತಿಹಾಸ ಪ್ರಸಿದ್ಧ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧನುರ್ಮಾಸ ಮುಗಿದು ಉತ್ತರಾಯಣ ಪ್ರವೇಶದ ಪುಣ್ಯಕಾಲ ಮಕರ ಸಂಕ್ರಮಣದಂದು ಬೆಳಿಗ್ಗೆ ಅಯ್ಯಪ್ಪ ದೇವರ ಸನ್ನಿಧಿಯಲ್ಲಿ ಪೂಜೆ, ಅಭಿಷೇಕಗಳು, ಮಹಾಲಿಂಗೇಶ್ವರ ದೇವರಿಗೆ ರಾತ್ರಿಪೂಜೆ ನಂತರ ಬಲಿ ಉತ್ಸವದ ಕೊನೆಯ ಸುತ್ತಿನಲ್ಲಿ ಪೂರ್ವಶಿಷ್ಟ ಪದ್ಧತಿಯಂತೆ ಶ್ರೀ ದೇವರಿಗೆ ಕನಕಾಭಿಷೇಕ ನೆರವೇರಿಸಲಾಗುತ್ತದೆ.

ಶ್ರೀ ಅಯ್ಯಪ್ಪ ದೇವರ ಸನ್ನಿಧಿಯಲ್ಲಿ ಬೆಳಿಗ್ಗೆ ಗಂಟೆ 7-30ರಿಂದ ಗಣಪತಿ ಹವನ, ಪೂರ್ವಾಹ್ನ ಗಂಟೆ 10-30ರಿಂದ ಅಭಿಷೇಕಗಳು ಹಾಗೂ 11-30 ಗಂಟೆಗೆ ಮಹಾಪೂಜೆ ನಡೆಯಲಿರುವುದು.ರಾತ್ರಿ ಮಹಾಲಿಂಗೇಶ್ವರ ದೇವರಿಗೆ ಪೂಜೆ ನಂತರ ಬಲಿ ಉತ್ಸವದ ಕೊನೆಯ ಸುತ್ತಿನಲ್ಲಿ ಕನಕಾಭಿಷೇಕ ಜರುಗಲಿದೆ.ಅರಸೊತ್ತಿಗೆಯ ಕಾಲದಲ್ಲಿ ಅರಸರೇ ಈ ಕಾರ್ಯ ನೆರವೇರಿಸುತ್ತಿದ್ದರು.ಮುಂದುವರಿದು ಆಡಳಿತ ಪ್ರಮುಖರು, ಮೊಕ್ತೇಸರರು, ಕಾರ್ಯ ನಿರ್ವಹಣಾಧಿಕಾರಿಗಳು ಓರ್ವರು ಈ ಕಾರ್ಯವನ್ನು ಮುಂದುವರಿಸುತ್ತಿದ್ದಾರೆ.

ಸುವಸ್ತುಗಳಿಂದ ಕನಕಾಭಿಷೇಕ: ಭಂಡಾರದ ವತಿಯಿಂದ ಒಂದು ದೊಡ್ಡ ಹರಿವಾಣದಲ್ಲಿ ಹೊದ್ಲು, ವೀಳ್ಯದೆಲೆ, ಅಡಿಕೆ, ಕಾಳುಮೆಣಸು, ಚಿನ್ನ ಹಾಗೂ ಬೆಳ್ಳಿಯ ತುಣಕಗಳು ಚಾಲ್ತಿಯಲ್ಲಿರುವ ನಾಣ್ಯಗಳನ್ನು ಓರಣವಾಗಿ ಜೋಡಿಸಿ ದೇವರ ಬಲಿಯ ಕೊನೆಯ ಸುತ್ತಿನಲ್ಲಿ ಉಳ್ಳಾಲ್ತಿ ಅಮ್ಮನವರ ನಡೆಯಲ್ಲಿ ಕನಕಾಭಿಷೇಕ ನೆರವೇರಿಸಲಾಗುತ್ತದೆ. ಪ್ರಸ್ತುತ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಕನಕಾಭಿಷೇಕ ನೆರವೇರಿಸಲಿದ್ದಾರೆ.ಬಲ್ನಾಡಿನಲ್ಲೂ ಬಾಗಿಲು ತೆಗೆದು ತಂಬಿಲಾದಿಗಳು ಜರಗುತ್ತದೆ.ದೇವಳದ ಬಳಿ ಇರುವ ಶಾರದಾ ಭಜನಾ ಮಂದಿರದಿಂದ ನಗರ ಭಜನೆಯು ಬಲ್ನಾಡಿಗೆ ತೆರಳುತ್ತದೆ.ದೇವಳದ ವಠಾರದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ ನೆರವೇರುತ್ತದೆ. ಮಕರ ಸಂಕ್ರಮಣದಂದು ನಡೆಯುವ ವಿವಿಧ ಆಚರಣೆಗಳಲ್ಲಿ ಭಕ್ತರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ.

ಕನಕಾಭಿಷೇಕ ವಿಶೇಷಕ್ಕೆ ಸಂಬಂಧಿಸಿದಂತೆ ತುಳು ಪಾಡ್ದನಗಳಲ್ಲಿ ದೈವಗಳ ನುಡಿಕಟ್ಟಿನಲ್ಲಿ ಇದರ ಇತಿಹಾಸ ತಿಳಿದು ಬರುತ್ತದೆ. ಪೂರ್ವದಲ್ಲಿ ದೈವಗಳ ನಡುವೆ ಕಾಳಗ ನಡೆದು, ಉಳ್ಳಾಲ್ತಿ, ದಂಡನಾಯಕ ದೈವಗಳು ಪರಿವಾರ ದೈವಗಳೊಂದಿಗೆ ಕ್ಷೇತ್ರವನ್ನು ರಕ್ಷಿಸಿದ ಸಲುವಾಗಿ ಮತ್ತು ವಿಜಯದ ಸಂಕೇತವಾಗಿ ಈ ಆಚರಣೆ ನಡೆದು ಬಂದಿದೆ. ಆ ಸಂದರ್ಭದಲ್ಲೇ ನಡೆ ನಿರ್ಮಾಣವಾಗಿ ಇಂದಿಗೂ ದೇವರ ಯಾವುದೇ ಬಲಿ ಹೊರಡುವ ಮುನ್ನ ಬ್ರಹ್ಮವಾಹಕರು ಉಳ್ಳಾಲ್ತಿ ನಡೆಗೆ ಬಂದು, ಬಲಿ ಹೊರಡುವ ಸೂಚನೆ ನೀಡುವ ಪದ್ದತಿ ಈ ದೇಗುಲದಲ್ಲಿದೆ. ಜಾತ್ರೆಯ ವೇಳೆಯಲ್ಲಿ ಬರುವ ದೈವಗಳ ಭಂಡಾರವು ಪಶ್ಚಿಮಾಂಗಣ ಪ್ರವೇಶದ ಕ್ಷಣದಲ್ಲಿ ದಂಡನಾಯಕ ಪಾತ್ರಿಯು ಈ ನಡೆಗೆ ಬಂದು ಧಡಕ್ ಎಂದು ಪಾದದಿಂದ ಸದ್ದು ಮಾಡುವ ಕ್ರಮವಿದೆ.ಅರ್ಚಕರ ಹೊರತಾಗಿ, ಗರ್ಭಗುಡಿಯಲ್ಲಿ ಅಲ್ಲದೆ ನಿತ್ಯಬಲಿ ಮೂರ್ತಿಗೆ ಅಂಗಣದಲ್ಲಿ ಕನಕಾಭಿಷೇಕ ನಡೆಯುವ ವಿಶಿಷ್ಟ ಸೇವೆ ಈ ದೇವಾಲಯದಲ್ಲಿ ಮಾತ್ರ ಕಾಣಬಹುದು.

ಈ ಸೀಮೆಯ ಅಧಿಪತಿಗೆ ಮಾತ್ರ ಇದು ಸೀಮಿತ.

ಪಿ.ಜಿ.ಚಂದ್ರಶೇಖರ ರಾವ್, ದೇವಾಲಯಗಳ ಅಧ್ಯಯನಕಾರ

LEAVE A REPLY

Please enter your comment!
Please enter your name here