ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಸ್ತ್ರೀ ಸಬಲೀಕರಣದ ಕಾರ್ಯಾಗಾರ

0

ಸ್ತ್ರೀ ಸ್ವಾತಂತ್ರ್ಯದ ಅರಿವಿನ ಕೊರತೆ ನೀಗಿಸಬೇಕಿದೆ: ರಾಜಶ್ರೀ ಎಸ್ ನಟ್ಟೋಜ

ಪುತ್ತೂರು: ಸ್ತ್ರೀ ಸ್ವಾತಂತ್ರ್ಯದ ಅರಿವಿನ ಕೊರತೆ ನಮ್ಮ ಸಮಾಜದಲ್ಲಿ ಕಂಡು ಬರುವ ಸಮಸ್ಯೆಗಳಲ್ಲಿ ಒಂದಾಗಿದೆ. ಆದ್ದರಿಂದ ಈ ಬಗೆಗಿನ ಅರಿವನ್ನು ಹೆಣ್ಣುಮಕ್ಕಳಲ್ಲಿ ಮೂಡಿಸುವುದು ಅತ್ಯಂತ ಆವಶ್ಯಕವಾಗಿದೆ. ನಮ್ಮ ಸನಾತನ ಸಂಸ್ಕೃತಿಯಲಿ, ಎಲ್ಲೆಲ್ಲಿ ಬೇಕೋ ಅಲ್ಲಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನಮಾನವನ್ನು ಕೊಟ್ಟಿರುತ್ತಾರೆ. ಸಿಕ್ಕಿರುವ ಸ್ವಾತಂತ್ರ್ಯವನ್ನು ಸರಿಯಾಗಿ ಬಳಸಿಕೊಂಡು ಸ್ತ್ರೀಯರು ಸಮಾಜದಲ್ಲಿ ಸ್ಥಾನಮಾನಗಳನ್ನು ಗಳಿಸಿಕೊಂಡು ನೆಮ್ಮದಿಯಿಂದ ಬಾಳಬಹುದು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೊಜ ಹೇಳಿದರು.


ಅವರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ವಿಶ್ವ ಹಿಂದೂ ಪರಿಷತ್, ದುರ್ಗಾ ವಾಹಿನಿ ಪುತ್ತೂರು ಹಾಗೂ ಅಂಬಿಕಾ ವಿದ್ಯಾಲಯದ ಸಹಯೋಗದೊಂದಿಗೆ ನಡೆದ ಸ್ತ್ರೀ ಸಬಲೀಕರಣದ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿ ಮೀನಾಕ್ಷಿ ಕಲ್ಲಡ್ಕ ಮಾತನಾಡಿ ವ್ಯಕ್ತಿತ್ವ ನಿರ್ಮಾಣ, ಸಂಸ್ಕಾರ, ಸಂಸ್ಕೃತಿಗಳು, ಜೀವನ ಮೌಲ್ಯಗಳು ಮಹಿಳೆಯರ ರಕ್ಷಣೆಗೆ ಆಧಾರ. ಇವನ್ನು ತಮ್ಮ ಬಾಳಲ್ಲಿ ಅಳವಡಿಸಿಕೊಂಡು ವ್ಯಕ್ತಿತ್ವ ರೂಪಿಸಿ ಸ್ತ್ರೀಯರು ಅಭಿಮಾನದಿಂದ ಬಾಳಬೇಕು ಎಂದು ಕರೆ ಕೊಟ್ಟರು.


ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಯೋಗ ಶಿಕ್ಷಕಿ ಶರಾವತಿ ಅವರು ಮಾತನಾಡಿ ಮಹಿಳೆಯರು ಸಮಾಜದಲ್ಲಿ ತಮ್ಮ ಗೌರವವನ್ನು ಉಳಿಸಿಕೊಳ್ಳಬೇಕಾದರೆ ನಮ್ಮ ಸನಾತನ ಸಂಸ್ಕೃತಿಯ ಉಡುಗೆ ತೊಡುಗೆ, ನಡೆ ನುಡಿ, ಸಂಸ್ಕಾರ, ಸೇವೆ, ಸುರಕ್ಷತೆಯ ಬಗ್ಗೆ ಅರಿತುಕೊಳ್ಳಬೇಕು ಎಂದು ಹೇಳಿದರು.

ವಿದ್ಯಾರ್ಥಿನಿ ರಶ್ಮಿ.ಕೆ ಇವರು ಸ್ವಯಂ ರಕ್ಷಣೆ ಉದ್ದೇಶದ ಬಗ್ಗೆ ಮಾಹಿತಿ ಹಾಗೂ ಪ್ರಾಯೋಗಿಕವಾಗಿ ತಿಳಿಸಿ ಕೊಟ್ಟರು. ಸಂಪನ್ಮೂಲ ವ್ಯಕ್ತಿ ಪ್ರೇಮಲತಾ ರಾವ್ ದುರ್ಗಾವಾಹಿನಿ ಘಟಕದ ಬಗ್ಗೆ ಮಾಹಿತಿ ನೀಡಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾರ್ಯದರ್ಶಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಪ್ರಸ್ತುತ ಸಮಾಜದಲ್ಲಿ ಸ್ತ್ರೀಯರಿಗೆ ಆತ್ಮ ಗೌರವ ಹಾಗೂ ಸಂಸ್ಕಾರಯುತ ಶಿಕ್ಷಣದ ಅಗತ್ಯವಿದೆ. ಇದರಿಂದ ಸ್ತ್ರೀ ಸಬಲೀಕರಣ ಸಾಧ್ಯ ಎಂದರು.

ವಿಶ್ವ ಹಿಂದೂ ಪರಿಷತ್‌ನ ಘಟಕಾಧ್ಯಕ್ಷ ಡಾ.ಕೃ? ಪ್ರಸನ್ನ, ಕಾರ್ಯದರ್ಶಿ ಬಿ.ಎಸ್.ಸತೀಶ್, ಸೇವಾ ಪ್ರಮುಖ್ ಸೀತಾರಾಮ ಭಟ್, ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ, ಉಪನ್ಯಾಸಕಿಯರು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ವಿಧಾತ್ರಿ, ಶರಧಿ, ವೈಷ್ಣವಿ, ಹಿತ ಕಜೆ ಪ್ರಾರ್ಥಿಸಿದರು. ಉಪನ್ಯಾಸಕಿ ವಿನುತಾ ಎಂ.ಸಾಲೆ ವಂದಿಸಿದರು. ಉಪನ್ಯಾಸಕಿ ಸಂಧ್ಯಾಕುಮಾರಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here