ಮನೆ-ಮನೆಯಲ್ಲಿ ಹಣ್ಣು, ಹೂ, ತರಕಾರಿ, ಔಷಧೀಯ ಗಿಡ, ಜೇನುಪೆಟ್ಟಿಗೆ, ಅಕ್ವೇರಿಯಂ ಇರಲಿ
ಜನವರಿ 07, 08ರಂದು ನಡೆದ ಪುತ್ತೂರಿನ ಸಸ್ಯಜಾತ್ರೆ ನಿರೀಕ್ಷೆಗೆ ಮೀರಿ ಯಶಸ್ವಿಯಾಗಿದೆ. ಅತ್ಯಂತ ಸಂತೋಷ ತಂದುಕೊಟ್ಟಿದೆ. ಗ್ರಾಹಕರಿಗೂ (ಕೃಷಿಕರಿಗೆ) – ಮಳಿಗೆಯವರಿಗೂ ಪ್ರಯೋಜನವಾಗಿದೆ, ಲಾಭವಾಗಿದೆ. ಸಸ್ಯಜಾತ್ರೆ ಇನ್ನೂ ಎರಡು ದಿನ ಇರಬೇಕಿತ್ತು ಎಂಬ ಬೇಡಿಕೆ ಎರಡೂ ಕಡೆಯಿಂದಲೂ ಬಂದಿದೆ. ಬೆಟ್ಟಂಪಾಡಿ ಸ.ಪ್ರ.ದ. ಕಾಲೇಜಿನ ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳು, ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆ, ಶ್ರೀ ಮಹಾಲಿಂಗೇಶ್ವರ ಐಟಿಐ, ಸರಕಾರಿ ಪ.ಪೂ. ಕಾಲೇಜು ಕೊಂಬೆಟ್ಟು, ಪ್ರಗತಿ ಸ್ಟಡಿ ಸೆಂಟರ್, ಸುದಾನ ವಸತಿಯುತ ಶಾಲೆ, ಅಕ್ಷಯ ಕಾಲೇಜು ಸಂಪ್ಯ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸ್ನೇಹ ಸಂಗಮ ಅಟೋ ಸಂಘಟನೆಯವರ, ಸಾರ್ವಜನಿಕರ ಸಹಭಾಗಿತ್ವದಲ್ಲಿ ನಡೆದ ಸಸ್ಯಜಾತ್ರೆಯ ವರ್ಣರಂಜಿತ ಮೆರವಣಿಗೆಯು ಚೆಂಡೆ ವಾದ್ಯ, ಕೊಡೆಗಳು, ವೇಷಧಾರಿ ತಂಡ, ವಿವಿಧ ಘಲಕಗಳು, ಬ್ಯಾನರ್‌ಗಳು, ಕೃಷಿ ಗಿಡಗಳ ಟ್ಯಾಬ್ಲೋದೊಂದಿಗೆ ಖಾಸಗಿ ಬಸ್‌ನಿಲ್ದಾಣದಿಂದ ಪೇಟೆಯಲ್ಲಿ ಹಾದು ಕಿಲ್ಲೆಮೈದಾನದ ಸಭಾಂಗಣ ತಲುಪಿದೆ. ಬಾಯಾರಿಕೆ ಮತ್ತು ಉಪಾಹಾರದ ನಂತರ ಪ್ರಾರಂಭವಾದ ಸಭಾ ಕಾರ್ಯಕ್ರಮದಲ್ಲಿ ಸಂಜೀವಿನಿ ಒಕ್ಕೂಟದ ಸಾಧಕರನ್ನು ಹಾಗೂ ಕೃಷಿ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗಿದೆ. ಅಪರಾಹ್ನದ ನಂತರ ಟೆರೆಸ್ ಗಾರ್ಡನ್, ಮನೆ ಹೂವಿನ ಗಿಡ, ಔಷಧೀಯ ಗಿಡಗಳು, ಮನೆ ಪರಿಸರದ ಔಷಧೀಯ ಸಸ್ಯಗಳು, ಮೀನುಗಾರಿಕೆ ವಿಚಾರ ಸಂಕಿರಣಗಳು ನಡೆದು ನಂತರ ಪ್ರಗತಿ ಸ್ಟಡಿ ಸೆಂಟರ್ ಪುತ್ತೂರು, ಅಕ್ಷಯ ಕಾಲೇಜ್ ಸಂಪ್ಯ, ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳಿಂದ ವಿವಿಧ ಸಾಂಸ್ಕೃತಿಕ ಮನರಂಜನೆಗಳು ನಡೆದಿವೆ. ಮರುದಿನ ಬೆಳಿಗ್ಗೆ, ಮಧ್ಯಾಹ್ನ ಅಡಿಕೆ ಕಾಯಿಲೆಗಳ ತಡೆ, ಅಡಿಕೆಗೆ ಪರ್ಯಾಯ ವಾಣಿಜ್ಯ ಬೆಳೆಗಳು, ಸಾಂಬಾರ ಬೆಳೆಗಳು, ಜೇನುಕೃಷಿ, ಅಕ್ವೇರಿಯಂ, ಹಣ್ಣಿನ ಗಿಡಗಳು, ಕೃಷಿ ಉತ್ಪಾದನೆಗಳ ಮೌಲ್ಯವರ್ಧನೆ ಕುರಿತ ವಿಚಾರ ಸಂಕಿರಣಗಳು ನಡೆದು ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕೃಷಿ ಸಾಧಕರನ್ನು ಮತ್ತು ಕೃಷಿ ಮೌಲ್ಯವರ್ಧನೆ ಮಾಡಿದವರನ್ನು ಗುರುತಿಸಿ ಗೌರವಿಸಲಾಗಿದೆ. ಅಂದು ಸಂಜೆ ಅದಿತಿ ಪುತ್ತೂರು ಇವರಿಂದ ಪೈಂಟಿಂಗ್ಸ್, ಡ್ಯಾನ್ಸ್, ವಿದುಷಿ ಶ್ರೀಮತಿ ರೋಹಿಣಿ ಉದಯ್ ಶಿಷ್ಯರಿಂದ, ಲೋಕೇಶ್ ಊರುಬೈಲು ಸುಳ್ಯ ತಂಡದವರಿಂದ ಮನರಂಜನೆ ಕಾರ್ಯಕ್ರಮ ನಡೆದಿದೆ. ಎರಡು ದಿನವೂ ವಿದ್ಯಾರ್ಥಿಗಳಿಂದ ಮತ್ತು ಸಾರ್ವಜನಿಕರಿಂದ ಚಿತ್ರಕಲೆ, ಪ್ರಬಂಧ ರಚನೆ ಮತ್ತು ಕವಿತೆ ರಚನಾ ಸ್ಪರ್ಧೆ, ಪೇಪರ್ ಕಟ್ಟಿಂಗ್ ಕೊಲಾಜ್ (ಗುಂಪು ಸ್ಪರ್ಧೆ), ಸಸ್ಯಜಾತ್ರೆಯಲ್ಲಿ ಗುರುತಿಸುವ ಸ್ಪರ್ಧೆಗಳು ನಡೆದಿವೆ. ವಾಟ್ಸಾಪ್, ಫೇಸ್‌ಬುಕ್‌ನಲ್ಲಿ ಮೈ ಹೋಂ ಗಾರ್ಡನ್ ಸ್ಪರ್ಧೆಯನ್ನು ಆಯೋಜಿಸಲಾಗಿ ವಿಜೇತರಿಗೆ ಬಹುಮಾನವನ್ನು ನೀಡಲಾಗಿದೆ. ಎರಡು ದಿನವೂ ಬೆಳಿಗ್ಗೆಯಿಂದ ರಾತ್ರಿಯ ವರೆಗೆ ಉಪಹಾರ, ಊಟದ ವ್ಯವಸ್ಥೆ ನಡೆದಿದೆ. ಮಳಿಗೆಗಳು ಜನರಿಂದ ಭರ್ತಿಯಾಗಿ ಎಲ್ಲಾ ಸ್ಟಾಲ್‌ನವರಿಗೆ, ಸಂಜೀವಿನಿ ಒಕ್ಕೂಟದವರಿಗೆ ಉತ್ತಮ ವ್ಯಾಪಾರವಾಗಿ ಆಹಾರ ಮಳಿಗೆಗಳಲ್ಲಿ ಆಹಾರ ಸವಿಯಲು ಇದ್ದ ಜನ ಜಂಗುಳಿಯ ಚಿತ್ರಣ ಎಲ್ಲರ ಕಣ್ಣ ಮುಂದಿದೆ. ಈ ರೀತಿಯ ಸಸ್ಯಜಾತ್ರೆಯನ್ನು ನೋಡಿ ಆನಂದಿಸಿದ ಜನ ವರ್ಷಕ್ಕೆ ಎರಡು ಬಾರಿ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಸುದ್ದಿ ಮಾಹಿತಿ ಟ್ರಸ್ಟ್‌ನಿಂದ ಪ್ರಥಮ ಬಾರಿ ಕೈಗೊಂಡ ಈ ಸಲದ ಸಸ್ಯಜಾತ್ರೆಯನ್ನು ಯಶಸ್ವಿಗೊಳಿಸಲು ನಡೆಸಿದ ಅನೇಕ ಪ್ರಯೋಗಗಳು, ಕ್ರಮಗಳು ಸಹಜವಾಗಿ ಕಲೆಕ್ಷನ್‌ಕ್ಕಿಂತ ಹೆಚ್ಚು ಖರ್ಚಿಗೆ ಕಾರಣವಾಗಿದೆ. ಅದನ್ನು ಸರಿದೂಗಿಸಲು ಸುದ್ದಿ ಮಾಹಿತಿ ಟ್ರಸ್ಟ್‌ಗೆ ಆರ್ಥಿಕ ಪ್ರಾಯೋಜಕತ್ವಕ್ಕೆ ಕರೆ ನೀಡಿದ್ದೆವು. ಹೆಚ್ಚಿನ ಜನರಿಗೆ ನಾವು ಮಾಡಲು ಉದ್ಧೇಶಿಸಿದ ಸಸ್ಯಜಾತ್ರೆ ಏನೆಂಬುದರ ಬಗ್ಗೆ ಕಲ್ಪನೆ ಇಲ್ಲದೇ ಇದ್ದುದರಿಂದ ಮತ್ತು ನಮಗೆ ಸಮಯದ ಅಭಾವ ಇದ್ದುದರಿಂದ ಪ್ರಾಯೋಜಕತ್ವದ ಪ್ರಯೋಜನವನ್ನು ಸಾಕಷ್ಟು ಪ್ರಮಾಣದಲ್ಲಿ ಪಡೆಯಲು ಸಾಧ್ಯವಾಗಿರುವುದಿಲ್ಲ. ಆದರೆ ಒಂದು ಅತ್ಯಂತ ಸಂತಸದ ಸಂಗತಿಯೆಂದರೆ ಕೆಲವು ಜನರು ಕಾರ್ಯಕ್ರಮದ ಬಗ್ಗೆ ಸಂತೋಷಪಟ್ಟು ತಾವಾಗಿಯೇ ಪ್ರಾಯೋಜಕತ್ವ ನೀಡಿದ್ದಾರೆ. ಮುಂದೆ ನಡೆಸುವ ಕಾರ್ಯಕ್ರಮಗಳಿಗೂ ಆರ್ಥಿಕ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ನಮ್ಮ ಮುಂದಿನ ಯೋಜನೆಗಳಿಗೆ ಸಾಥ್ ನೀಡುವುದಾಗಿ ಹೇಳಿದ್ದಾರೆ. ಆ ಭರವಸೆಯಿಂದ ‘ಗಿಡಗಳಿಂದ ದೊರಕುವ ಆಕ್ಸಿಜನ್‌ಗಾಗಿ, ಆರೋಗ್ಯಕ್ಕಾಗಿ, ಸಂತೋಷಕ್ಕಾಗಿ, ಆದಾಯಕ್ಕಾಗಿ ಮನೆಗೊಂದು ಗಾರ್ಡನ್, ಜೇನುಕೃಷಿ, ಅಕ್ವೇರಿಯಂ’ ಎಂಬ ಘೋಷಣೆಯನ್ನು ಕಾರ್ಯರೂಪಕ್ಕೆ ತರಲಿದ್ದೇವೆ. ಆಸಕ್ತರಿಗೆ ಆ ಕುರಿತು ಬೇಕಾದ ಮಾಹಿತಿ ಮಾತ್ರವಲ್ಲ ಅವರು ಬಯಸುವ ಗಿಡಗಳು, ಜೇನುಕೃಷಿ ಮತ್ತು ಅಕ್ವೇರಿಯಂಗೆ ಬೇಕಾದ ವ್ಯವಸ್ಥೆಗಳು ಸರಿಯಾದ ಸಮಯಕ್ಕೆ ಸಿಗಬೇಕೆಂಬ ಉದ್ದೇಶದಿಂದ ಅದಕ್ಕೆ ಅಡ್ವಾನ್ಸ್ ಬುಕ್ಕಿಂಗ್ ಪ್ರಾರಂಭಿಸಲಿದ್ದೇವೆ. ಅದಕ್ಕಾಗಿ ಜನರಿಗೆ ಬೇಕಾದ ಹಣ್ಣಿನ ಗಿಡಗಳ, ತರಕಾರಿ ಗಿಡಗಳ, ಔಷಧೀಯ ಗಿಡಗಳ ಪಟ್ಟಿಯನ್ನು, ಜೇನುಕೃಷಿಗೆ ಮತ್ತು ಅಕ್ವೇರಿಯಂಗೆ ಬೇಕಾದ ಮಾಹಿತಿಯನ್ನು ಪ್ರಚಾರ ಮಾಡಲಿದ್ದೇವೆ. ಅವುಗಳು ದೊರಕುವ ಸ್ಥಳಗಳ, ನರ್ಸರಿಗಳ ವಿವರಗಳನ್ನು ನೀಡುವ ಮೂಲಕ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದಲ್ಲಿ ಅವುಗಳು ದೊರಕುವಂತೆ ಮಾಡಬೇಕೆಂದಿದ್ದೇವೆ. ಮುಂಗಡವಾಗಿ ಕಾದಿರಿಸಿದರೆ ಮಾತ್ರ ತಮಗೆ ಬೇಕಾದ ಗಿಡಗಳು ದೊರಕಬಹುದಾದ್ದರಿಂದ ಆ ಬಗ್ಗೆ ಸಾಕಷ್ಟು ವ್ಯವಸ್ಥೆ ಮಾಡಲಿದ್ದೇವೆ. ಮೇ ಮತ್ತು ಜೂನ್ ಸಂದರ್ಭಗಳಲ್ಲಿ ಅಥವಾ ಅವುಗಳ ಸರಿಯಾದ ಸಮಯದಲ್ಲಿ ಬೇಕಾದಷ್ಟು ಪ್ರಮಾಣದಲ್ಲಿ ಸಿಗುವಂತೆ ಮಾಡುವುದು ನಮ್ಮ ಸುದ್ದಿ ಮಾಹಿತಿ ಟ್ರಸ್ಟ್‌ನ ಮತ್ತು ಸುದ್ದಿ ಕೃಷಿಸೇವಾ ಕೇಂದ್ರದ ಉದ್ದೇಶವಾಗಿದೆ. ಇದನ್ನು ಪ್ರಥಮವಾಗಿ ಕೃಷಿ ಸೊಸೈಟಿಗಳಲ್ಲಿ ಮತ್ತು ಶಾಲಾ ಕಾಲೇಜುಗಳಲ್ಲಿ ಪ್ರಾರಂಭಿಸಲು ಚಿಂತಿಸಿದ್ದೇವೆ. ಪುತ್ತೂರಿನಲ್ಲಿ ಈಗಾಗಲೇ ಸುದ್ದಿ ಕೃಷಿ ಸೇವಾ ಕೇಂದ್ರ ಕಾರ್ಯಾಚರಣೆ ಮಾಡುತ್ತಿದ್ದು, ಸುಳ್ಯದಲ್ಲಿ ಇದೇ ಜನವರಿ 29ಕ್ಕೆ ಕಚೇರಿ ಪ್ರಾರಂಭವಾಗಲಿದೆ. ಬೆಳ್ತಂಗಡಿಯಲ್ಲಿಯೂ ಶೀಘ್ರ ಕಚೇರಿ ತೆರೆಯಲಿದ್ದೇವೆ. ಅಂಗಾರಾಮ್ಲ ಹೀರಿ ಗಿಡಗಳಿಂದ ಬಿಡುಗಡೆಯಾಗುವ ನಿರಂತರ ಆಕ್ಸಿಜನ್‌ಗಾಗಿ, ಆರೋಗ್ಯಕ್ಕಾಗಿ, ಆದಾಯಕ್ಕಾಗಿ ಮನೆ-ಮನೆಯಲ್ಲಿ ಗಾರ್ಡನ್ ಯೋಜನೆ ಎಲ್ಲಾ ಕಡೆ ತಲುಪಿಸಲು, ಹಸಿರೇ ಉಸಿರಾಗಲು ಆಸಕ್ತ ಜನರ ಸಹಯೋಗವನ್ನು, ಬೆಂಬಲವನ್ನು ಬಯಸುತ್ತೇವೆ.