ಕಾಂತಾರ ಹವಾ….: ನೇಮೋತ್ಸವ ವೀಕ್ಷಿಸಿದ ಕ್ರೀಡಾಳುಗಳು

ಉಪ್ಪಿನಂಗಡಿ: ತುಳುನಾಡಿನ ಭೂತಾರಾಧನೆಯ ಸೊಗಸನ್ನು ಜಗತ್ತಿಗೆ ಪರಿಚಯಿಸಿದ ‘ಕಾಂತಾರ’ ಸಿನಿಮಾವನ್ನು ನೋಡಿದ್ದ ರಾಜಸ್ಥಾನ ರಾಜ್ಯದ ಕ್ರೀಡಾಪಟುಗಳು ಉಪ್ಪಿನಂಗಡಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾಗವಹಿಸಲೆಂದು ಬಂದವರಿಗೆ ಇಲ್ಲಿನ ನಟ್ಟಿಬೈಲು ಎಂಬಲ್ಲಿ ನಡೆಯುತ್ತಿದ್ದ ಭೂತ ಕೋಲವನ್ನು ಕಂಡು ಖುಷಿಯೋ ಖುಷಿ. ತಮ್ಮ ತಮ್ಮ ಮೊಬೈಲ್ ಗಳಲ್ಲಿ ವಿಡಿಯೋ ಕರೆ ಮಾಡುತ್ತಾ ‘ನಾವು ಕಾಂತಾರ ಸಿನೆಮಾವನ್ನು ಲೈವ್ ಆಗಿ ನೋಡುತ್ತಿದ್ದೇವೆ’ ಎನ್ನುತ್ತಿದ್ದ ದೃಶ್ಯ ಕಾಂತಾರ ಸಿನಿಮಾದ ಪ್ರಭಾವವನ್ನು ಸಾದರಪಡಿಸುತ್ತಿತ್ತು.

ಉಪ್ಪಿನಂಗಡಿಯ ನಟ್ಟಿಬೈಲು ಎಂಬಲ್ಲಿನ ಡ್ರೈವರ್ ಕೃಷ್ಣಪ್ಪ ಗಾಣಿಗ ಹಾಗೂ ಪುರಂದರ ಗಾಣಿಗ ಸಹೋದರರ ಮನೆಯಂಗಳದಲ್ಲಿ ಐದು ದೈವಗಳಿಗೆ ನೇಮೋತ್ಸವವು ಕಳೆದ ರಾತ್ರಿ ಆಯೋಜಿಸಲ್ಪಟ್ಟಿತ್ತು. ಪರಿಸರದ ವಿವಿಧ ಶಾಲಾ ಕೊಠಡಿಗಳಲ್ಲಿ ವಾಸ್ತವ್ಯವನ್ನು ಹೊಂದಿರುವ ದೇಶದ ವಿವಿಧ ವಿಶ್ವ ವಿದ್ಯಾನಿಲಯದ ಕ್ರೀಡಾಪಟುಗಳಲ್ಲಿ ಮಹಾರಾಷ್ಟ್ರ ಹಾಗೂ ರಾಜಸ್ಥಾನ ರಾಜ್ಯಗಳ ವಿವಿ ಕ್ರೀಡಾಪಟುಗಳಿಗೆ ಶ್ರೀರಾಮ ಶಾಲೆಯಲ್ಲಿ ವಾಸ್ತವ್ಯ ವ್ಯವಸ್ಥೆಯಿತ್ತು. ದಾರಿ ಮಧ್ಯದಲ್ಲಿನ ನೇಮೋತ್ಸವದ ಸ್ಥಳವನ್ನು ಕಂಡ ಕ್ರೀಡಾಪಟುಗಳು ಕುತೂಹಲಿಗರಾಗಿ ರಾತ್ರಿ ವೇಳೆ ನೇಮೋತ್ಸವಕ್ಕೆ ಆಗಮಿಸಿದ್ದರು. ನೇಮೋತ್ಸವದಲ್ಲಿ ಕಲ್ಲುರ್ಟಿ, ವರ್ಣರ ಪಂಜುರ್ಲಿ ದೈವಗಳ ನೇಮೋತ್ಸವವು ನಡೆದಾಗ ಸ್ಥಳದಲ್ಲೇ ಇದ್ದ ಈ ಕ್ರೀಡಾಪಟುಗಳು ನೇಮೋತ್ಸವವನ್ನು ವಿಡಿಯೋ ಮೂಲಕ ಸೆರೆ ಹಿಡಿಯಲು ಮುಂದಾದರೆ ಇನ್ನು ಕೆಲವರು ತಮ್ಮ ತಮ್ಮ ಬಂಧುಗಳಿಗೆ, ಸ್ನೇಹಿತರಿಗೆ ವಿಡಿಯೋ ಕರೆ ಮಾಡಿ, ನಾವಿಲ್ಲಿ ಕಾಂತಾರ ಸಿನಿಮಾವನ್ನು ಲೈವ್ ಆಗಿ ನೋಡುತ್ತಿದ್ದೇವೆ ಎನ್ನುತ್ತಾ ಅವರಿಗೂ ದೈವದ ನೇಮೋತ್ಸವವನ್ನು ತೋರಿಸಿ ಸಂಭ್ರಮಿಸುತ್ತಿದ್ದರು.

ಕ್ರೀಡಾಕೂಟದಲ್ಲಿ ಭಾಗವಹಿಸಲೆಂದು ಬಂದು ಕಾಂತಾರ ಸಿನೆಮಾದಲ್ಲಿನ ದೃಶ್ಯಾವಳಿಗಳು ನಿಜವೋ ಕಾಲ್ಪನಿಕವೋ ಎಂಬ ಸಂದೇಹದಲ್ಲಿದ್ದ ಈ ಕ್ರೀಡಾಪಟುಗಳಿಗೆ ದ.ಕ. ಜಿಲ್ಲೆಯ ಜನತೆಯ ಜೀವನದಲ್ಲಿ ಭೂತಾರಾಧನೆ ಎನ್ನುವುದು ಹಾಸುಹೊಕ್ಕಾಗಿದೆ ಎನ್ನುವುದನ್ನು ಕಣ್ಣಾರೆ ಕಂಡು ಸಂತಸಪಟ್ಟರೆ, ಉತ್ತರ ಭಾರತೀಯ ಕ್ರೀಡಾಪಟುಗಳಿಗೆ ನೇಮೋತ್ಸವದ ಕಾರಣಕ್ಕೆ ಆತಿಥ್ಯ ನೀಡುವ ಸೌಭಾಗ್ಯ ನಮಗೆ ದೊರಕಿತೆಂಬ ಸಂತೃಪ್ತ ಭಾವ ಕೃಷ್ಣಪ್ಪ ಗಾಣಿಗ ಹಾಗೂ ಪುರಂದರ ಗಾಣಿಗ ಸಹೋದರರದ್ದಾಗಿತ್ತು.

ನೇಮೋತ್ಸವದಲ್ಲಿ ದೈವದಲ್ಲಿ ಪ್ರಾರ್ಥನೆ ಸಲ್ಲಿಸಿದ ರಾಜಸ್ಥಾನ ರಾಜ್ಯದ ಯುನಿವರ್ಸಿಟಿಯೊಂದರ ಕ್ರೀಡಾಪಟುಗಳು ಮರುದಿನ ಪಂದ್ಯಾಟದಲ್ಲಿ ಸುಲಭ ಸಾಧ್ಯ ಗೆಲುವು ದಾಖಲಿಸಿಕೊಂಡು ‘ನಾವು ಕಾಂತಾರ ದೈವದ ಕೃಪೆಯಿಂದಲೇ ಗೆದ್ದೆವೆಂದು’ ತಮ್ಮ ಗೆಲುವನ್ನು ದೈವಕ್ಕೆ ಸಮರ್ಪಿಸಿ ಕೃತಾರ್ಥ ಭಾವವನ್ನು ಹೊಂದಿರುವುದು ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ಎಂಬಂತಿದೆ ಕಾಂತಾರದ ಮಹಿಮೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.