ಪುತ್ತೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ದೃಷ್ಟಿಯಿಂದ ಕಂದಾಯ ತಾಲೂಕುಗಳಾದ ಪುತ್ತೂರು, ಸುಳ್ಯ, ಬಂಟ್ವಾಳ, ಕಡಬ ಮತ್ತು ಬೆಳ್ತಂಗಡಿ ತಾಲೂಕುಗಳನ್ನೊಳಗೊಂಡ ಪುತ್ತೂರು ಜಿಲ್ಲೆಯ ಸಂಘ ಕಾರ್ಯದ ಶಕ್ತಿ ಕೇಂದ್ರ ಹಾಗೂ ಕಾರ್ಯಾಲಯದ ಹೆಸರು ‘ಪಂಚವಟಿ’ ಸಂಘದ ಸ್ವಯಂಸೇವಕರ ಪಾಲಿಗೆ ಇದೊಂದು ಕೇವಲ ಕಾರ್ಯಾಲಯವಾಗದೆ ಇದು ಸಂಘಮಂದಿರವೂ ಹೌದು. 1973ರಲ್ಲಿ ನಿರ್ಮಾಣವಾದ ಈ ಕಾರ್ಯಾಲಯವು ಕೇಶವ ಸ್ಮೃತಿ ಸಂವರ್ಧನಾ ಸಮಿತಿಯ ಹೆಸರಿನಲ್ಲಿ ಕಾರ್ಯ ನಡೆಸುತ್ತಿದೆ. ಸಂಘದ ಕಾರ್ಯಾಲಯ ಪುರಾತನ ಮತ್ತು ಶಿಥಿಲಾವಸ್ಥೆಯಲ್ಲಿರುವುದನ್ನು ಮನಗಂಡು ಸಂಘ ಕಾರ್ಯದ ಅವಶ್ಯಕತೆಗಳಿಗೆ ಬೇಕಾಗಿ ಹೆಚ್ಚಿನ ಸ್ಥಳಾವಕಾಶ, ವ್ಯವಸ್ಥೆಗಳನ್ನು ಒದಗಿಸುವ ಹಿನ್ನೆಲೆಯಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲು ನಿರ್ಧರಿಸಲಾಗಿತ್ತು. ಇದರ ಮುಂದುವರಿದ ಭಾಗವಾಗಿ ಸುಮಾರು 3 ಕೋಟಿ ರೂ ವೆಚ್ಚದಲ್ಲಿ ನೆಲಮಹಡಿ ಮತ್ತು ಎರಡು ಅಂತಸ್ತಿನ ಸುಮಾರು 8,300 ಚದರ ಅಡಿ ನಿರ್ಮಾಣದ ಕಟ್ಟಡ ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿತ್ತು.
ಕಟ್ಟಡ ನಿರ್ಮಾಣಕ್ಕೆ ಸ್ವಯಂ ಸೇವಕರಿಂದಲೇ ನಡೆದಿತ್ತು ಸಮರ್ಪಣಾ ಅಭಿಯಾನ : ಸಂಘ ಕಾರ್ಯದಲ್ಲಿ ಪುತ್ತೂರು ಜಿಲ್ಲೆಗೆ ವಿಶೇಷವಾದ ಹೆಸರಿದೆ. ಪುತ್ತೂರು ಜಿಲ್ಲೆ ಅಂದಾಗ ಅಖಿಲ ಭಾರತ ಮಟ್ಟದಲ್ಲಿ ಯೋಜನೆಯಾದ ಕಾರ್ಯವನ್ನು ಅಚ್ಚುಕಟ್ಟಾಗಿ ತಳಮಟ್ಟದಲ್ಲಿ ಕಾರ್ಯಗತಗೊಳಿಸಿದ ಹೆಗ್ಗಳಿಕೆ ಇಲ್ಲಿನ ಸ್ವಯಂಸೇವಕರಿಗಿದೆ. ಮಂಗಳೂರು ಕೆಂಜಾರ್ ಬಳಿ ನಡೆದ ಮಂಗಳೂರು ವಿಭಾಗ ಸಾಂಕ್‌ನಲ್ಲಿ 40,000ಕ್ಕೂ ಮಿಕ್ಕಿ ಸ್ವಯಂಸೇವಕರು ಭಾಗವಹಿಸಿರುವುದು ಹಾಗೂ ವಿವಿಧ ಕ್ಷೇತ್ರಗಳನ್ನು ಸಂಘ ಗಣನೀಯವಾಗಿ ತಲುಪಿರುವ ಕಾರಣಕ್ಕೆ ಪುತ್ತೂರು ಜಿಲ್ಲೆಯನ್ನು ಸಂಘದ ಪ್ರಯೋಗ ಶಾಲೆಯೆಂದು ಕರೆಯುವುದುಂಟು. ಇಲ್ಲಿನ ಪ್ರತಿ ಗ್ರಾಮದಲ್ಲಿ ಶಾಖೆಗಳ ಗುರಿಯನ್ನು ಈಗಾಗಲೇ ತಲುಪಿದೆ. 2025ನೇ ಇಸವಿಗೆ ಸಂಘದ ನೂರು ವರ್ಷದ ಆಚರಣೆಯ ಹಿನ್ನೆಲೆಯಲ್ಲಿ ಪ್ರತಿ ಉಪವಸತಿ ಮಟ್ಟದಲ್ಲಿ ಶಾಖೆಗಳನ್ನು ತಲುಪುವ ಗುರಿ ಹೊಂದಲಾಗಿದೆ. ಸಂಘದ ಕಾರ್ಯಾಲಯ ನಿರ್ಮಾಣಕ್ಕೆ ಬೇಕಾದ ಆರ್ಥಿಕ ಸಂಪನ್ಮೂಲ ಇನ್ನಿತರ ಅವಶ್ಯಕತೆಗಳಿಗಾಗಿ ಪ್ರತಿ ಬೂತ್ ಮಟ್ಟದಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸಿದ್ದ ಮತ್ತು ಪ್ರಸ್ತುತ ಕಾರ್ಯ ನಿರ್ವಹಿಸುವ ಸ್ವಯಂಸೇವಕರ ಹಾಗೂ ಸಂಘದ ಹಿತೈಷಿಗಳ ಪ್ರತಿ ಮನೆಯಿಂದಲೂ ದೇಣಿಗೆ ಸಂಗ್ರಹ ನಡೆದಿದೆ. ಇದಕ್ಕಾಗಿ ಪುತ್ತೂರು ಜಿಲ್ಲೆಯ ಎಲ್ಲಾ ಪರಿವಾರ ಕ್ಷೇತ್ರದ ಸ್ವಯಂಸೇವಕರ ಅಹರ್ನಿಶಿ ಓಡಾಟ, ಚಟುವಟಿಕೆಗಳು ನಡೆದು ತನು ಮನ ಧನದ ಸಮರ್ಪಣೆಯ ಧ್ಯೋತಕವಾಗಿ ಭವ್ಯ ಮಂದಿರ ಪಂಚವಟಿ ಕಾರ್ಯಾಲಯ ತಲೆ ಎತ್ತಿ ನಿಂತಿದೆ.
ಸಹಸ್ರಾರು ಸ್ವಯಂಸೇವಕರ ಉಪಸ್ಥಿತಿಯಲ್ಲಿ ಲೋಕಾರ್ಪಣೆ : ಪಂಚವಟಿ ಕಾರ್ಯಾಲಯದ ಲೋಕಾರ್ಪಣೆ ಸಮಾರಂಭದಲ್ಲಿ ಗಣವೇಷಧಾರಿ ವಿದ್ಯಾರ್ಥಿ ಸ್ವಯಂಸೇವಕರಿಂದ ಆಕರ್ಷಕ ಪಥಸಂಚಲನದ ಬಳಿಕ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವಠಾದಲ್ಲಿ ಸಾರ್ವಜನಿಕ ಸಮಾರಂಭ ಜರಗಲಿದೆ. ಕಾರ್ಯಕ್ರಮದಲ್ಲಿ ಸಂಘದ ಸಹ ಸರಕಾರ್ಯವಾಹ ಮುಕುಂದ್ ಬೌದ್ದಿಕ್ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲೆಯ ಪರಿವಾರ ಕ್ಷೇತ್ರದ 20,000ಕ್ಕೂ ಮಿಕ್ಕಿ ಸ್ವಯಂಸೇವಕರು ಭಾಗವಹಿಸುವ ನಿರೀಕ್ಷೆಯಿದ್ದು, ವಿವಿಧ ಭಾಗಗಳಿಂದ ಬರುವ ವಾಹನಗಳಿಗೆ ಮಾರ್ಗಸೂಚಿ, ವಾಹನ ನಿಲುಗಡೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ನಿರ್ವಹಣೆಗೆ ಅಚ್ಚುಕಟ್ಟಾದ ವ್ಯವಸ್ಥೆಗಳನ್ನು ಯೋಜಿಸಲಾಗಿದೆ. ಒಟ್ಟಿನಲ್ಲಿ ಸಹಸ್ರಾರು ಹಿರಿಯ ಕಿರಿಯ ಸ್ವಯಂಸೇವಕರ ತ್ಯಾಗ ಸಮರ್ಪಣೆ, ವ್ಯಕ್ತಿ ನಿರ್ಮಾಣದ ಧ್ಯೋತಕವಾದ ಸಂಘ ಕಾರ್ಯಾಲಯವೆಂದರೆ ಸ್ವಯಂಸೇವಕರ ಪಾಲಿಗೆ ದೇವಾಲಯ ನಿರ್ಮಾಣದ ಸಂಭ್ರಮ ಮನೆ ಮಾಡಿದೆ.