ಭೈರವೈಕ್ಯ ಶ್ರೀ ಡಾ| ಬಾಲಗಂಗಾಧರನಾಥ ಸ್ವಾಮೀಜಿಯವರ 78 ನೇ ಜಯಂತ್ಯೋತ್ಸವ ಹಿನ್ನಲೆ – ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ನೇತೃತ್ವದಲ್ಲಿ ಪ್ರಮುಖರ ತುರ್ತು ಸಭೆ

ಬನ್ನಿ ಭಾಗವಹಿಸಿ, ಸ್ವಾಮೀಜಿಯವರ ಆಶೀರ್ವಾದ ಪಡೆದುಕೊಳ್ಳಿ – ಡಿ.ವಿ.ಸದಾನಂದ ಗೌಡ ವಿನಂತಿ

ಪುತ್ತೂರು: ಜ.22 ರಂದು ಪುತ್ತೂರಿನಲ್ಲಿ ನಡೆಯಲಿರುವ ಭೈರವೈಕ್ಯ ಡಾ| ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ೭೮ನೇ ಜಯಂತ್ಯೋತ್ಸವ, ಶ್ರೀ ಆದಿ ಚುಂಚನಗಿರಿ ಮಠದ ಶ್ರೀ ಡಾ| ನಿರ್ಮಲಾನಂದನಾಥ ಸ್ವಾಮೀಜಿಯವರ ಪೀಠಾಧ್ಯಕ್ಷತೆಯ ದಶಮಾನೋತ್ಸವ, ಮಂಗಳೂರು ಶಾಖಾ ಮಠದ ಡಾ| ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ರಚಿಸಿದ ಡಾ| ಬಾಲಗಂಗಾಧರನಾಥ ಶ್ರೀಗಳ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದ ಕುರಿತು ಜಿಲ್ಲಾ ಸಮಿತಿ ಗೌರವಾಧ್ಯಕ್ಷರಾಗಿರುವ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ನೇತೃತ್ವದಲ್ಲಿ ಪ್ರಮುಖರ ತುರ್ತು ಸಭೆಯು ಶ್ರೀ ಮಹಾಲಿಂಗೇಶ್ವರ ದೇವಳದ ಸಭಾಭವನದ ಕಟ್ಟಡದಲ್ಲಿರುವ ಜಯಂತ್ಯೋತ್ಸವ ಕಾರ್ಯಾಲಯದಲ್ಲಿ ಜ.16ರಂದು ನಡೆಯಿತು.

ಬನ್ನಿ ಭಾಗವಹಿಸಿ, ಸ್ವಾಮೀಜಿಯವರ ಆಶೀರ್ವಾದ ಪಡೆದು ಕೊಳ್ಳಿ:
ಡಿ.ವಿ.ಸದಾನಂದ ಗೌಡ ಅವರು ಮಾತನಾಡಿ, ಕೇವಲ ಪ್ರಚಾರಕ್ಕೆ ಮಾಡುವ ಕಾರ್ಯಕ್ರಮ ಇದಲ್ಲ. ಭೈರವೈಕ್ಯ ಡಾ| ಶ್ರೀ ಬಾಲಗಂಗಾಧರನಾಥ ಶ್ರೀಗಳು ಕೊಟ್ಟಂತಹ ಸಾಮಾಜಿಕ ಸೇವೆಯನ್ನು ಮತ್ತೆ ವಿಸ್ತರಣೆ ಮಾಡಬೇಕೆಂಬ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಸುಮಾರು 464ಕ್ಕೂ ಮಿಕ್ಕಿ ವಿದ್ಯಾಸಂಸ್ಥೆಗಳು, ಮೆಡಿಕಲ್, ಇಂಜಿನಿಯರಿಂಗ್ ಸೇರಿದಂತೆ ಹಲವಾರು ವಿದ್ಯಾಸಂಸ್ಥೆಗಳು ರಾಜ್ಯ, ದೇಶದೆಲ್ಲೆಡೆ ಹಾಗೂ ಅಮೇರಿಕಾದಲ್ಲಿವೆ. ಕುರುಡರ ಶಾಲೆ, ಕಿವಿ ಇಲ್ಲದವರಿಗೆ ವಿಚಾರ ತಿಳಿಸುವ ಶಾಲೆ, ಅಂಗವಿಕಲರಿಗೆ ಬೇಕಾದ ಪ್ರತ್ಯೇಕ ಶಾಲೆ, ಗೋ ರಕ್ಷಣೆಗೆ ಸಂಬಂಧಿಸಿ ಗೋ ಶಾಲೆ ಹೀಗೆ ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ರೀತಿಯಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ವಿಶೇಷವಾಗಿ ಡಾ| ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಕಾಲಘಟ್ಟದಲ್ಲಿ ನಡೆದಿದೆ. ಆದಿಚುಂಚನಗಿರಿ ಕ್ಷೇತ್ರ ಒಂದು ಸಮುದಾಯದ ಮಠವಾಗಿದ್ದರೂ ಎಲ್ಲಾ ಸಮುದಾಯದ ಹಿತಕ್ಕಾಗಿ, ದೇಶಕ್ಕಾಗಿ ತನ್ನದೇ ರೀತಿಯ ಸೇವೆ ನೀಡುತ್ತಿದೆ. ಈ ನಿಟ್ಟಿನಲ್ಲಿ ಜ.22 ರಂದು ನಡೆಯುವ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ನಮ್ಮೆಲ್ಲರ ಜವಾಬ್ದಾರಿ ಇದೆ. ಬಹಳ ದೊಡ್ಡ ಸಂಖ್ಯೆಯಲ್ಲಿ ಸೇರುವಂತಾಗಬೇಕು. ಏಳೆಂಟು ಮಂತ್ರಿಗಳು ಭಾಗವಹಿಸಲಿದ್ದಾರೆ. ಕಾಂಗ್ರೆಸ್‌ನ ಡಿ.ಕೆ ಶಿವಕುಮಾರ್, ಜೆಡಿಎಸ್‌ನ ಹೆಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಆಮಂತ್ರಿಸಿದ್ದೆವೆ. ನಾನು ಹಿಂದೆ ಪುತ್ತೂರು ಕ್ಷೇತ್ರವನ್ನು ಪ್ರತಿನಿಧಿಸಿದ್ದೆ. ಇವತ್ತು ಸಂಜೀವ ಮಠಂದೂರು ಅವರು ಪ್ರತಿನಿಧಿಸುತ್ತಿದ್ದಾರೆ. ಪವಾಡ ಸದೃಶ್ಯವಾಗಿ ಅವರು ಮಾಡುತ್ತಿರುವ ಸಾರ್ವಜನಿಕ ಸೇವೆಗಳನ್ನು ನೆನಪಿಸುವ ಸೌಭಾಗ್ಯ ಪುತ್ತೂರಿಗೆ ಲಭಿಸಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಬಂದು ಭಾಗವಹಿಸಬೇಕು. ಸಮಾಜ ಸೇವೆ ಮಾಡುವವರಿಗೆ ಗೌರವ ಕೊಡುವುದು ಕೂಡಾ ಒಂದು ಸಮಾಜ ಸೇವೆ. ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಣ್ಯ ಕಟ್ಟಿಕೊಳ್ಳಿ. ಬನ್ನಿ ಭಾಗವಹಿಸಿ, ಸ್ವಾಮೀಜಿಯವರ ಆಶೀರ್ವಾದ ಪಡೆದುಕೊಳ್ಳಿ. ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ನಡೆಯುವ ಕಾರ್ಯಕ್ರಮವಾಗಿರುವುದರಿಂದ ಮಹಾಲಿಂಗೇಶ್ವರನ ಆಶೀರ್ವಾದ ಎಲ್ಲರಿಗೂ ಲಭಿಸಲಿ ಎಂದು ಹೇಳಿದರು.

ಸಮಯ ಬಹಳ ಕಡಿಮೆ ಇದೆ:
ಕಾರ್ಯಕ್ರಮದ ಪೂರ್ವ ತಯಾರಿಯ ಕುರಿತು ಪ್ರಮುಖರಿಂದ ಮಾಹಿತಿ ಪಡೆದ ಡಿ.ವಿ.ಸದಾನಂದ ಗೌಡರವರು ಇನ್ನು ಸಮಯ ಬಹಳ ಕಡಿಮೆ ಇದೆ. ಇದಕ್ಕೆ ಪೂರಕವಾಗಿ ಆರ್ಥಿಕ ವ್ಯವಸ್ಥೆ ಮತ್ತು ಜನರನ್ನು ಸಂಪರ್ಕಿಸುವ ಕೆಲಸ ಆಗಬೇಕು. ಗ್ರಾಮ ಗ್ರಾಮಗಳಲ್ಲಿ ತಯಾರಿಯ ಸಭೆಗಳನ್ನು ಮಾಡಬೇಕು. ಪ್ರತಿ ದಿನ ಸಂಜೆ ಪ್ರಮುಖರು ಕೂತು ನಿತ್ಯದ ಪ್ರಗತಿಯ ಮಾಹಿತಿ ಹಂಚಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಯಂತ್ಯೋತ್ಸವ ಸಂಸ್ಮರಣೆ ಸಮಿತಿ ಅಧ್ಯಕ್ಷ ಶಾಸಕ ಸಂಜೀವ ಮಠಂದೂರು, ಆರ್ಥಿಕ ಸಮಿತಿ ಸಂಚಾಲಕ ಎಂ.ಪಿ ಉಮೇಶ್ ಬೆಳ್ಳಾರೆ, ಜಿಲ್ಲಾ ಸಮಿತಿ ಸಂಚಾಲಕ ಚಿದಾನಂದ ಬೈಲಾಡಿ, ತಾಲೂಕು ಸಹ ಸಂಚಾಲಕ ಪುರುಷೋತ್ತಮ ಮುಂಗ್ಲಿಮನೆ, ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ, ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು, ಯುವ ಗೌಡ ಸೇವಾ ಸಂಘದ ಅಧ್ಯಕ್ಷ ನಾಗೇಶ್ ಕೆಡೆಂಜಿ, ಮಹಿಳಾ ಗೌಡ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ ಗೌಡ, ಪ್ರವೀಣ್ ಕುಂಟ್ಯಾನ, ಗಣೇಶ್ ನೈತ್ತಾಡಿ, ಮಧು ನರಿಯೂರು, ಗೌರಿ ಬನ್ನೂರು, ಶ್ರೀಧರ ಗೌಡ ಕಣಜಾಲು, ಒಕ್ಕಲಿಗ ಸ್ವಸಹಾಯ ಸಂಘದ ಅಧ್ಯಕ್ಷ ಮನೋಹರ್ ಡಿ ವಿ, ರವಿ ಮುಂಗ್ಲಿಮನೆ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.