ಸಂಘ ಕಾರ್ಯ ಕಾರ್ಯಾಲಯದಲ್ಲಲ್ಲ – ಸಮಾಜ ಬಂಧುಗಳ ಮನಸ್ಸಿನಲ್ಲಿ – ಮುಕುಂದ
ಮುಕುಂದ್ ಅವರ ಬೌಧಿಕ್ ಹೈಲೈಟ್ಸ್
ಸಂಘದ ಕಾರ್ಯಾಲಯ ಒಂದು ತಪ್ಪಿಸ್ಸಿನ ಕೇಂದ್ರ
ಸಂಘಟನೆಯ ಮನಸ್ಸು ದೇಶ, ಸಮಾಜದ ನಿಜವಾದ ಸ್ಥಿತಿ ತೆರೆದಿಡುತ್ತದೆ
ಜಗತ್ತಿನ ಸವಾಲು, ಸಮಸ್ಯೆಗಳಿಗೆ ಉತ್ತರ ಕೊಡುವ ಹಿಂದು
ಸಮಾಜದ ಸಂಘಟನೆ ಆರ್ಎಸ್ಎಸ್
ರೋಟಿ, ಕಪಡಾ, ಮಕಾನ್, ಶಿಕ್ಷಾ, ಸ್ವಾಸ್ಥ್ಯ, ಸನ್ಮಾನ್ಗಾಗಿ
ಸ್ವಯಂಸೇವಕರು ಪ್ರಯತ್ನ ಪಟ್ಟಿದ್ದಾರೆ
ಹೋರಾಟ ಮಾಡುತ್ತಾ ಮಾಡುತ್ತಾ ಜೈಲು ಸೇರಿದ್ದಾರೆ. ಜೈಕಾರ ಹಾಕಿದ್ದಾರೆ.
ಶಾಖೆ ಹಾಡು ಆಟ ವಚನ ಶ್ಲೋಕಾದಿಗಳಿಂದ ಗುಣಗಳನ್ನು ಪಡೆಯಬಹುದು
ಸಮಾಜ ಪರಿವರ್ತನೆ ಆಗದಿದ್ದರೆ ವ್ಯವಸ್ಥೆಯ ಪರಿವರ್ತನೆ ಕುಸಿಯಬಹುದು
ಪುತ್ತೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಾಲಯ ಆ ಪ್ರದೇಶದ ಸಂಘ ಕಾರ್ಯಕ್ಕೆ ಪ್ರೇರಣೆ ಕೊಡುವ ಕುಂಡಲಿನಿ ಇದ್ದಂತೆ. ಅಲ್ಲಿ ನಡೆಯುವ ಬೈಠೆಕ್, ಸಂವಾದ, ಚಿಂತನೆ ಆ ಪ್ರದೇಶದ ಕಾರ್ಯಕರ್ತರ ಕಾರ್ಯದ ಕುಂಡಲಿನಿಯನ್ನು ಜಾಗೃತಿ ಮಾಡುತ್ತದೆ. ಆ ರೀತಿಯ ಜಾಗೃತಿಯು ಹಿಂದೂ ಸಮಾಜದ ಜಾಗೃತಿಯಾಗಿ ಸಾವಿರಾರು ಕೇಂದ್ರಗಳಾಗಿ ಮೂಡಿದೆ. ಇದರಿಂದಾಗಿ ದೇಶದಲ್ಲಿ ಕಳೆದ 100 ವರ್ಷದಿಂದ ಆದ ಬದಲಾವಣೆ ಇವತ್ತು ನಮ್ಮ ಕಣ್ಣ ಮುಂದಿದೆ. ಇದನ್ನು ನೋಡಿದಾಗ ಸಂಘ ಕಾರ್ಯವು ಕಾರ್ಯಾಲಯದಲ್ಲಲ್ಲ ಸಂಘ ಕಾರ್ಯ ಇರುವುದು ಸಮಾಜದಲ್ಲಿ, ಸಮಾಜದ ಬಂಧುಗಳ ಕುಟುಂಬಗಳ ಹೃದಯ ಮನಸ್ಸುಗಳಲ್ಲಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸರಕಾರ್ಯವಾಹ ಮುಕುಂದ ಅವರು ಹೇಳಿದರು.
ಅವರು ಜ.14ರಂದು ಇಲ್ಲಿನ ಹಳೆ ಪೊಲೀಸ್ ವಸತಿಗೃಹದ ಬಳಿಯಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲೆಯ ಕಾರ್ಯಾಲಯ ‘ಪಂಚವಟಿ ‘ಇದರ ದ್ವಾರಪೂಜೆಯೊಂದಿಗೆ ನಡೆದ ಪ್ರವೇಶ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜ.16ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ನಡೆದ ಲೋಕಾರ್ಪಣೆ ಸಮಾವೇಶದಲ್ಲಿ ಬೌಧಿಕ್ ನೀಡಿದರು.
ಸಂಘದ ಶಾಖೆಯ ಸಂಘ ಸ್ಥಾನದ ಮೂಲಕ, ಕಾರ್ಯಕರ್ತರ ಮೂಲಕ ನಡೆಯುವ ಅನೇಕ ಚಟುವಟಿಕೆ, ಸೇವಾ ಕಾರ್ಯಗಳ ಮೂಲಕ, ಸಮಾಜದ ಸಂರಕ್ಷಣೆಗಾಗಿ ನಡೆಯುವ ಜನಜಾಗೃತಿಯ, ಸಮಾಜದ ಪರಿವರ್ತನೆಗಾಗಿ ಮನಸ್ಸನ್ನು ಬದಲಾಯಿಸುವ ಪ್ರಯತ್ನದ ಮೂಲಕ ಸಂಘ ಕಾರ್ಯ ವ್ಯಕ್ತ ಆಗುತ್ತದೆ. ಹಾಗಾಗಿ ಸಮಾಜದಲ್ಲಿರುವ ಬಂಧುಗಳ ಹೃದಯ ಮತ್ತು ಮನಸ್ಸುಗಳಲ್ಲಿ ಸಂಘ ಇರುತ್ತದೆ ಎಂದು ಅವರು ಹೇಳಿದರು. ಪಂಚವಟಿ ಕೇಂದ್ರ ಸಾವಿರಾರು ದಶಕಗಳಿಂದ ಸ್ವಯಂ ಸೇವಕರಿಗೆ ಪ್ರೇರಣೆ ಕೊಡುತ್ತಾ ಬಂದಿದೆ. ದೇಶದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಕ್ಷೆಯಲ್ಲಿ ನೋಡಿದರೆ ಪುತ್ತೂರು ಜಿಲ್ಲೆಗೆ ಅದರದ್ದೆ ಆದ ಬಹಳ ದೊಡ್ಡ ಸ್ಥಾನವಿದೆ ಎಂದರು.
ಸಂಘದ ಅನುಶಾಸನ ವಿರೋಧಿಗಳೂ ಮೆಚ್ಚುವಂತಿದೆ:
ನಮ್ಮಲ್ಲಿ ಸುಮಾರು 36 ಉಪ ಸಂಘಟನೆಗಳು ದೇಶದಾದ್ಯಂತ ಕೆಲಸ ಮಾಡುತ್ತಿವೆ. 6 ಆಂದೋಲನಾತ್ಮಕ ಸಂಘಟನೆಗಳು ಕೆಲಸ ಮಾಡುತ್ತಿವೆ. ವ್ಯವಸ್ಥೆ ಪರಿವರ್ತನೆ, ಮನಸ್ಸು ಪರಿವರ್ತನೆ ಎಂಬ 2 ಆಯಾಮಗಳಲ್ಲಿ ಆರೆಸ್ಸೆಸ್ 98 ವರ್ಷಗಳಿಂದಲೂ ಕೆಲಸ ಮಾಡುತ್ತಾ ಬಂದಿದೆ. ನಮ್ಮ ಸ್ವಯಂ ಸೇವಕರ ಪ್ರಾಮಾಣಿಕತೆ, ದೇಶಭಕ್ತಿ ಮತ್ತು ಅನುಶಾಸನವನ್ನು ವಿರೋಧಿಗಳು ಕೂಡ ಮೆಚ್ಚುತ್ತಾರೆ ಎಂದು ಹೇಳಿದ ಮುಕುಂದ ಅವರು ಅನುಶಾಸನ ಮೀರಿದರೆ ಚಿನ್ನದ ಜಿಂಕೆ ಹಿಂದೆ ಹೋದರೆ ಆಗುವ ಅನಾಹುತವಾದೀತು ಎಂದು ಎಚ್ಚರಿಸಿದರು.
ಸಂಘ ಸದಾ ಯುವಕನಾಗಿಯೇ ಇದೆ:
ಸದಾ ಸರ್ವದಾ ಯುಗಾನುಕೂಲವಾಗಿ ಇರುವುದು ಸಂಘದ ಸ್ವಭಾವ. ಸಾಮೂಹಿಕ ನಿರ್ಣಯ, ಪ್ರಾರ್ಥನೆ, ಗಣವೇಷ, ಶಾರೀರಿಕ, ಬೌದ್ಧಿಕ ಚಟುವಟಿಕೆ ಕಾಲಕ್ಕೆ ತಕ್ಕಂತೆ ಬದಲಾಯಿಸಿಕೊಂಡೆವು. ಹಾಗಾಗಿ ಇಂದಿಗೂ ಸಂಘ ಯುವ ಸಂಘಟನೆ ಆಗಿ ಉಳಿದಿದೆ. ಸರಾಸರಿ 15 ರಿಂದ 16 ವರ್ಷ ಪ್ರಾಯದ ಒಂದೂಕಾಲು ಲಕ್ಷ ತರುಣರು ಪ್ರತೀ ವರ್ಷ ಸಂಘದ ಪ್ರಾಥಮಿಕ ಶಿಕ್ಷಾ ವರ್ಗ ಮುಗಿಸುತ್ತಾರೆ. ಸರಾಸರಿ 18 ವರ್ಷ ಪ್ರಾಯದ 20 ಸಾವಿರ ತರುಣರು ಪ್ರತೀ ವರ್ಷ ಸಂಘ ಶಿಕ್ಷಾ ವರ್ಗ ಪೂರೈಸುತ್ತಾರೆ. 100 ವರ್ಷದ ಹೊಸ್ತಿಲಲ್ಲಿದ್ದರೂ ಈಗಲೂ ಅತ್ಯಧಿಕ ಸಂಖ್ಯೆಯ ಸ್ವಯಂ ಸೇವಕರು ನಮ್ಮಲ್ಲಿ ಯುವಕರೇ ಆಗಿದ್ದಾರೆ. ವಯಸ್ಸಿನ ದೃಷ್ಟಿಯಿಂದ ಮಾತ್ರವಲ್ಲ ಚಿಂತನೆ ಮತ್ತು ಚಟುವಟಿಕೆ ದೃಷ್ಟಿಯಿಂದಲೂ ಸಂಘ ಯುವಕನಾಗಿಯೇ ಇದೆ ಎಂದು ಮುಕುಂದ ಹೇಳಿದರು. ಪ್ರಾಂತ ಸಂಘಚಾಲಕರಾಗಿರುವ ಕೇಶವ ಸ್ಮ್ರತಿ ಸಂವರ್ಧನ ಸಮಿತಿ ಅಧ್ಯಕ್ಷ ಡಾ. ಪಿ ವಾವನ ಶೆಣೈ, ಪುತ್ತೂರು ಜಿಲ್ಲೆಯ ಸಂಘಚಾಲಕರಾಗಿರುವ ಪಂಚವಟಿ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಕೊಡ್ಮಣ್ ಕಾಂತಪ್ಪ ಶೆಟ್ಟಿ ಮುಖ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹಕ ಪ್ರಕಾಶ್ ಪಿ.ಎಸ್, ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರಕ್ ಗುರುಪ್ರಸಾದ್, ಕರ್ನಾಟಕ ದಕ್ಷಿಣ ಪ್ರಾಂತ ಸಹ ಪ್ರಚಾರಕ್ ನಂದೀಶ್, ಕರ್ನಾಟಕ ದಕ್ಷಿಣ ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತಾರಾಮ, ಹಿಂದು ಸೇವಾ ಪ್ರತಿಷ್ಠಾನದ ರಾಜ್ಯ ಸಂಚಾಲಕ ಸುಧಾಕರ್, ಅಖಿಲ ಭಾರತೀಯ ಕಾರ್ಯಕಾರಿಣಿ ಆಮಂತ್ರಿತ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಆಮಂತ್ರಿತ ಸದಸ್ಯ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಹಿರಿಯರಾದ ಸೀತಾರಾಮ ಕೆದಿಲಾಯ, ವನವಾಸಿ ಕಲ್ಯಾಣ ಆಶ್ರಮದ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಶ್ರೀಪಾದ್, ಆರೋಗ್ಯಭಾರತಿ ಕ್ಷೇತ್ರ ಸಂಘಟನಾ ಮಂತ್ರಿ ಸದಾಶಿವ, ಪ್ರಾಂತ ಶಾರೀರಿಕ್ ಪ್ರಮುಖ್ ಸತೀಶ್ ಕುತ್ತಾರು, ಕರ್ನಾಟಕ ಪ್ರಾಂತ ಘೋಷ್ ಪ್ರಮುಖ್ ಗಿರೀಶ್, ಪ್ರಾಂತದ ವೆಂಕಟೇಶ್ ಪಾಟಕ್ ವೇದಿಕೆ ಬಲ ಎಡ ಭಾಗದಲ್ಲಿ ಉಪಸ್ಥಿತರಿದ್ದರು. ಬಂದರು ಮತ್ತು ಮೀನುಗಾರಿಕೆ ಸಚಿವ ಎಸ್.ಅಂಗಾರ, ಶಾಸಕ ಸಂಜೀವ ಮಠಂದೂರು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಸಹಿತ ಅನೇಕ ಮಂದಿ ಸ್ವಯಂ ಸೇವಕರು ಉಪಸ್ಥಿತರಿದ್ದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲಾ ಕಾರ್ಯವಾಹ ವಿನೋದ್ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಪುತ್ತೂರು ಜಿಲ್ಲೆಯ ಸಹಕಾರ್ಯವಾಹ ನವೀನ್ ಪ್ರಸಾದ್ ಕೈಕಾರ ವಂದಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಅತಿಥಿಗಳು ವೇದಿಕೆಗೆ ಬಂದ ತಕ್ಷಣ ಧ್ವಜಾರೋಹಣ, ಪರಿಚಯ, ವಂದನಾರ್ಪಣೆ, ವೈಯುಕ್ತಿಕ ಗೀತೆ ನಡೆಯಿತು. ಇದಾದ ಬಳಿಕ ಬೌಧಿಕ್ ಕಾರ್ಯಕ್ರಮ ನಡೆಯಿತು. ಕೊನೆಯಲ್ಲಿ ಸಂಘ ಗೀತೆ ಹಾಡಲಾಯಿತು. ಧ್ವಜಾವತರಣದ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿತ್ತು.
ಪಥ ಸಂಚಲನ
ಪಂಚವಟಿ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗಣವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಸಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಿಂದ ಹೊರಟ ಪಥ ಸಂಚಲನ ಎಪಿಎಂಸಿ ರಸ್ತೆಯಾಗಿ ಮುಖ್ಯರಸ್ತೆಯಿಂದ ಪುನಃ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿ ಸಮಾಪನಗೊಂಡಿತ್ತು. ಬಳಿಕ ಸಮಾವೇಶ ನಡೆಯಿತು.
ಪಂಚವಟಿ ಕಟ್ಟಡ ವೀಕ್ಷಣೆ:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ನಡೆಯುವ ಸಮಾವೇಶಕ್ಕಾಗಿ ವಿವಿಧ ಕಡೆಗಳಿಂದ ಆಗಮಿಸಿದ ಸ್ವಯಂ ಸೇವಕರು ತಮ್ಮ ತಮ್ಮ ವಾಹನಗಳನ್ನು ಸೂಚಿಸಿದ ಸ್ಥಳದಲ್ಲೇ ಪಾರ್ಕ್ ಮಾಡುವಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ವಿನಂತಿಸಲಾಗಿತ್ತು. ಎಲ್ಲಾ ವಾಹನಗಳನ್ನು ಬೈಪಾಸ್ ರಸ್ತೆಯಲ್ಲಿ ನಿಲ್ಲಿಸಿ ಅಲ್ಲಿಂದ ಸ್ವಯಂ ಸೇವಕರು ಪಂಚವಟಿ ನೂತನ ಕಟ್ಟಡ ವೀಕ್ಷಣೆ ಮಾಡಿ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಗೆ ಪಾದಯಾತ್ರೆ ಮಾಡಿದರು.