ಶಿರಾಡಿಯ ಜಯೇಶ್‌ನಿಂದ ಸಚಿವ ಗಡ್ಕರಿ ಕಚೇರಿಗೆ ಬೆದರಿಕೆ ಕರೆ ಪ್ರಕರಣ -‘ಖೈದಿಗೆ ಜೈಲೊಳಗೆ ಮೊಬೈಲ್ ಎಲ್ಲಿಂದ ಬಂತು?’; ಮೂರು ದಿನಗಳೊಳಗೆ ಉತ್ತರ ನೀಡಲು ಬೆಳಗಾವಿ ಕಾರಾಗೃಹದ 7 ಮಂದಿಗೆ ನೋಟಿಸ್

0

ಪುತ್ತೂರು: ಬೆಳಗಾವಿ ಕೇಂದ್ರ ಕಾರಾಗೃಹದಲ್ಲಿರುವ ಖೈದಿ ಶಿರಾಡಿ ಪೊಲ್ಲೊಟ್ಟುವಿನ ಜಯೇಶ್ ಪೂಜಾರಿ ಯಾನೆ ಜಯೇಶ್‌ಕಾಂತ್ ಅಲಿಯಾಸ್ ಶಾಹೀರ್ ಯಾನೆ ಶಾಕೀರ್ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನಾಗ್ಪುರದ ಕಚೇರಿಗೆ ಬೆದರಿಕೆ ಕರೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಾಗೃಹದ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್ ಅವರು ಕಾರಾಗೃಹದ ನಾಲ್ವರು ಜೈಲರ್, ಇಬ್ಬರು ವಾರ್ಡನ್ ಹಾಗೂ ಒಬ್ಬ ಕಾನ್‌ಸ್ಟೆಬಲ್‌ಗೆ ನೋಟಿಸ್ ಜಾರಿ ಮಾಡಿದ್ದಾರೆ .ಜೈಲಲ್ಲಿರುವ ಖೈದಿಯ ಕೈಗೆ ಮೊಬೈಲ್ ಫೋನ್ ಸಿಕ್ಕಿದ್ದು ಹೇಗೆ, ಈಗ ಅದು ಎಲ್ಲಿದೆ ಎಂಬ ಬಗ್ಗೆ 3 ದಿನಗಳಲ್ಲಿ ಉತ್ತರಿಸಬೇಕು. ಇಲ್ಲದಿದ್ದರೆ ಶಿಸ್ತುಕ್ರಮ ವಹಿಸಲಾಗುವುದು ಎಂದು ನೋಟೀಸ್‌ನಲ್ಲಿ ತಿಳಿಸಲಾಗಿದೆ.


ನನ್ನ ಪಾತ್ರವಿಲ್ಲ- ಜಯೇಶ್ ಹೇಳಿಕೆ:

ನಿತಿನ್ ಗಡ್ಕರಿ ಕಚೇರಿಗೆ ಬೆದರಿಕ ಕರೆ ಮಾಡಿದ್ದ ಆರೋಪಿ ಜಯೇಶ್, ಈ ಕೃತ್ಯದಲ್ಲಿ ತನ್ನ ಪಾತ್ರವಿಲ್ಲ ಎಂದು ಹೇಳಿದ್ದಾನೆ. ಹೀಗಾಗಿ ಪೊಲೀಸರು ಆತನೊಂದಿಗೆ ದೂರವಾಣಿ ಸಂಪರ್ಕದಲ್ಲಿದ್ದ ಐವರು ವ್ಯಕ್ತಿಗಳ ಹೇಳಿಕೆಯನ್ನು ದಾಖಲು ಮಾಡಲಿದ್ದಾರೆ ಎಂದು ನಾಗ್ಪುರ ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.

2008ರಲ್ಲಿ ಶಿರಾಡಿಯಲ್ಲಿ ತನ್ನ ದೊಡ್ಡಪ್ಪನ ಮಗ ಲೋಹಿತ್‌ರವರ ಪತ್ನಿ ಸೌಮ್ಯ ಮತ್ತು ಆಕೆಯ ಮೂರು ವರ್ಷ ಪ್ರಾಯದ ಮಗು ಜಿಷ್ಣುವನ್ನು ಕೊಲೆ ಮಾಡಿ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ ಅಪರಾಧ ಸಾಬೀತಾಗಿದ್ದ ಹಿನ್ನೆಲೆಯಲ್ಲಿ ಜಯೇಶ್ ಯಾನೆ ಜಯೇಶ್‌ಕಾಂತ್ ಅಲಿಯಾಸ್ ಶಾಹೀರ್ ಯಾನೆ ಶಾಕೀರ್‌ಗೆ ಗಲ್ಲು ಶಿಕ್ಷೆ ವಿಧಿಸಿ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿತ್ತು. ಇದರ ವಿರುದ್ಧ ಆತ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಗಲ್ಲು ಶಿಕ್ಷೆಯನ್ನು ರದ್ದುಪಡಿಸಿ ಜೀವಾವಧಿ ಶಿಕ್ಷೆಗೆ ಇಳಿಸಿತ್ತು. ಸದ್ಯ ಬೆಳಗಾವಿಯ ಹಿಂಡಲಗಾ ಜೈಲಲ್ಲಿರುವ ಅಪರಾಧಿ ಜಯೇಶ್ ಅಲ್ಲಿಂದಲೇ, ತಾನು ಭೂಗತ ಪಾತಕಿ ದಾವೂದ್ ಇಬ್ರಾಹಿಂ ತಂಡದವನೆಂದು ಹೇಳಿಕೊಂಡು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನಾಗ್ಪುರ ಕಚೇರಿಗೆ ಬೆದರಿಕೆ ಕರೆ ಮಾಡಿ 100 ಕೋಟಿ ರೂ.ಹಣವನ್ನು ನೀಡುವಂತೆ ಬೇಡಿಕೆ ಇಟ್ಟಿದ್ದ. ಈ ಕುರಿತು ಗಡ್ಕರಿಯವರ ಕಚೇರಿಯಿಂದ ಪೊಲೀಸರಿಗೆ ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿರುವ ನಾಗ್ಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ, ಖೈದಿಗೆ ಜೈಲೊಳಗೆ ಮೊಬೈಲ್ ಫೋನ್ ಎಲ್ಲಿಂದ ಬಂತು ಎನ್ನುವುದು ನಿಗೂಢವಾಗಿದ್ದು ಈ ಹಿನ್ನೆಲೆಯಲ್ಲಿ ಮೂರು ದಿನಗಳೊಳಗೆ ಉತ್ತರ ನೀಡುವಂತೆ ಜೈಲಿನ ಮುಖ್ಯ ಅಧೀಕ್ಷಕರು ಜೈಲಿನ ಆರು ಮಂದಿ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಿದ್ದಾರೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ ಕಚೇರಿಗೆ ಬೆದರಿಕೆ ಕರೆ; ಶಿರಾಡಿಯ ತಾಯಿ, ಮಗುವಿನ ಹತ್ಯೆ ಪ್ರಕರಣದ ಅಪರಾಧಿ ಜಯೇಶ್ ಕೃತ್ಯ

LEAVE A REPLY

Please enter your comment!
Please enter your name here