ಮಂಗಳೂರು: ಮಂಗಳೂರು ಪ್ರಾಂತ್ಯದ ಹವ್ಯಕ ಸಮುದಾಯ ಮತ್ತು ಸಮಸ್ತ ಸಮಾಜದ ಶ್ರದ್ಧಾಕೇಂದ್ರವಾಗಿ ಐದು ದಶಕಗಳಿಂದ ಮನೆ ಮಾತಾಗಿರುವ ಮಾಣಿಯ ಪೆರಾಜೆ ಶ್ರೀರಾಮಚಂದ್ರಾಪುರ ಮಠದ ಆರಾಧ್ಯ ದೈವ ಸಪರಿವಾರ ಶ್ರೀರಾಮದೇವರ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಜ. 22ರಿಂದ 26ರವರೆಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ. ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಂದ್ರ ಭಾರತೀ ಸ್ವಾಮೀಜಿಯವರಿಂದ ಪ್ರತಿಷ್ಠಾಪಿಸಲ್ಪಟ್ಟು 48 ವರ್ಷಗಳ ಒಂದು ಮಂಡಲವನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಐದು ದಿನಗಳ ಕಾಲ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿ ಮತ್ತು ಮಾರ್ಗದರ್ಶನದಲ್ಲಿ ನಡೆಯಲಿದೆ ಎಂದು ಶ್ರೀಮಠದ ಮಹಾಸಮಿತಿ ಅಧ್ಯಕ್ಷ ಹಾರಕೆರೆ ನಾರಾಯಣ ಭಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಜಿಲ್ಲೆಯಲ್ಲಿ ತೀರ ಅಪರೂಪ ಎನ್ನಬಹುದಾದ ಶಿಲಾಮಯ ಗರ್ಭಗುಡಿಯನ್ನು ರಚಿಸಲಾಗಿದ್ದು ಇದರ ಸುಂದರ ರಚನೆ ಶಿಲೆಯ ಏರಿಳಿತ,ಉಬ್ಬು ತಗ್ಗು, ಸಿಂಹದ ರೂಪ, ಕಾಲಿನ ನಖಗಳು, ಹೂವಿನ ಅಲಂಕಾರ ಆಸ್ತಿಕರ ಪಾಲಿಗೆ ಅಪೂರ್ವವಾದದ್ದು ಎಂದೆನಿಸಲಿದ್ದು ಈ ಗರ್ಭಗುಡಿಯನ್ನು 1.5ಕೋ. ರೂ ವೆಚ್ಚದಲ್ಲಿ ಮುರಡೇಶ್ವರದ ಕೃಷ್ಣ ಶಿಲ್ಪಿ ನಿರ್ಮಿಸಿದ್ದಾರೆ ಎಂದು ಅವರು ಹೇಳಿದರು.
ನಾಡಿನ ಮೂಲೆ ಮೂಲೆಗಳಿಂದ ಬಂದ ಹಸಿರುವಾಣೆ ಮೆರವಣಿಗೆ ಜ.21ರಂದು ಸಂಜೆ 4ಕ್ಕೆ ಪೆರಾಜೆ ಕೋದಂಡರಾಮ ಮಹದ್ವಾರದಿಂದ ಆರಂಭವಾಗಲಿದೆ.ಜ.22ರಂದು ಮಧ್ಯಾಹ್ನ 3 ಗಂಟೆಗೆ ಶ್ರೀ ರಾಘವೇಶ್ಚರ ಭಾರತೀ ಸ್ವಾಮೀಜಿಯವರು ಪುರಪ್ರವೇಶ ಮಾಡಲಿದ್ದು ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣಿಗೆಯಲ್ಲಿ ಮಠಕ್ಕೆ ಕರೆತರಲಾಗುವುದು, ನಾಡಿನ ಖ್ಯಾತ ಸಾಂಸ್ಕೃತಿಕ ಮತ್ತು ಜಾನಪದ ತಂಡಗಳು ಈ ಮೆರವಣಿಗೆಗೆ ಮೆರುಗು ನೀಡಲಿದೆ.ಜ.23ರಿಂದ 26ರವರೆಗೆ ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಭಜನೆ ಮತ್ತು ಜ.22ರಿಂದ 25ರವರೆಗೆ ಪ್ರತಿದಿನ ಸಂಜೆ 7ರಿಂದ 10ರವರೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಜ.23ರಂದು ಬೆ.11.20ರ ಮೀನಾ ಲಗ್ನದಲ್ಲಿ ಗೋಕರ್ಣದ ವೇದಮೂರ್ತಿ ಅಮೃತೇಶ ಭಟ್ಟ ಹಿರೇ ಅವರ ಆಚಾರ್ಯತ್ವದಲ್ಲಿ ಸಪರಿವಾರ ಸೀತಾ ರಾಮಚಂದ್ರ, ಚಂದ್ರ ಮೌಲ್ವೀಶ್ವರ, ರಾಜರಾಜೇಶ್ವರಿ ದೇವರ ಪುನಃ ಪ್ರತಿಷ್ಠೆ ನಡೆಯಲಿದ್ದು ಸರ್ವಾಲಂಕಾರಿತ ಸ್ವರ್ಣಮಂಟಪದಲ್ಲಿ ಶ್ರೀ ಪೂಜೆ, ಶ್ರೀ ಗುರು ಬಿಕ್ಷಾ ಸೇವೆ ಮತ್ತು ಸೂತ್ರ ಜಂಗಮ ಜರುಗಲಿದ್ದು ಜ.25ರಂದು ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ ಹಾಗು ಶ್ರೀರಾಮ ದೇವರಿಗೆ ಸ್ವರ್ಣ ಕವಚ, ಶ್ರೀ ಮಹಾಗಣಪತಿ ದೇವರಿಗೆ ರಜತ ಕವಚ ಸಮರ್ಪಣೆಗೊಳ್ಳಲಿದೆ.
ಜ.23ರಂದು ಮಧ್ಯಾಹ್ನ 2ಗಂಟೆಗೆ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಜಿ ಸಾನಿಧ್ಯದಲ್ಲಿ ಧರ್ಮಸಭೆ ನಡೆಯಲಿದ್ದು ರಾಜ್ಯ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಡಾ.ಕಲ್ಲಡ್ಕ ಪ್ರಭಾಕರ ಭಟ್, ಗೋಕರ್ಣದ ತಂತ್ರಿಗಳಾದ ವೇದಮೂರ್ತಿ ಅಮೃತೇಶ ಭಟ್ಟ ಹಿರೇ, ವಾಸ್ತು ತಜ್ಞ ಮಹೇಶ್ ಮುನಿಯಂಗಣ, ವೇದಮೂರ್ತಿ ಕುಂಟಾರು ರವೀಶ ತಂತ್ರಿ, ಸಚಿವ ಸುನೀಲ್ ಕುಮಾರ್, ಎಸ್.ಅಂಗಾರ, ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಸಂಸದ ನಳೀನ್ ಕುಮಾರ್ ಕಟೀಲು, ಶಾಸಕ ರಾಜೇಶ ನಾಯ್ಕ್, ಸಂಜೀವ ಮಠಂದೂರು, ಹರೀಶ್ ಪೂಂಜಾ, ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಪ್ರತಾಪ್ ಸಿಂಹ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಶ್ರೀ ಮಠದ ಸಮ್ಮುಖ ಸರ್ವಾಧಿಕಾರಿ ತಿಮ್ಮಪ್ಪಯ್ಯ ಮಡಿಯಾಲ, ಕರ್ನಾಟಕ ಬ್ಯಾಂಕ್ ಎಂಡಿ ಎಂ.ಎಸ್.ಮಹಾಬಲೇಶ್ವರ ಭಟ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರ್ನಳ್ಳಿ, ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ, ಹವ್ಯಕ ಮಹಾಮಂಡಲದ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಸೇರಿದಂತೆ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹಾರಕೆರೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹವ್ಯಕ ಮಹಾಮಂಡಲ ಉಪಾಧ್ಯಕ್ಷೆ ಮತ್ತು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಶೈಲಜಾ ಕೊಂಕೋಡಿ, ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಗಣೇಶ ಮೋಹನ ಕಾಶೀಮಠ, ಉಪ್ಪಿನಂಗಡಿ ಹವ್ಯಕ ಮಂಡಲ ಕಾರ್ಯದರ್ಶಿ ವೇಣು ಕೆದಿಲ ಉಪಸ್ಥಿತರಿದ್ದರು.