ಬೆಂಗಳೂರು:‘ಪೊಕ್ಸೊ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯಗಳು ಪೊಕ್ಸೊ ಕಾಯ್ದೆ-2012ರ ಅಡಿಯಲ್ಲಿ ಅಪರಾಧ ಕೃತ್ಯಕ್ಕೆ ವಿಧಿಸಲಾಗುವ ನಿಗದಿತ ಪ್ರಮಾಣದ ಶಿಕ್ಷೆಯನ್ನು ಕಡಿಮೆ ಮಾಡುವ ಯಾವುದೇ ಅಧಿಕಾರ ಹೊಂದಿಲ್ಲ’ ಎಂದು ಹೈಕೋರ್ಟ್ ಆದೇಶಿಸಿದೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಕಾಲವಾಡಿ ಗ್ರಾಮದ ಶೇಖ್ ರೌಫ್ ಎಂಬ ಆರೋಪಿಗೆ ಸ್ಥಳೀಯ ಪೊಕ್ಸೊ ವಿಶೇಷ ನ್ಯಾಯಾಲಯ ಏಳು ವರ್ಷಗಳ ಬದಲಾಗಿ ಐದು ವರ್ಷ ಜೈಲು ಶಿಕ್ಷೆ ವಿಧಿಸಿದ್ದನ್ನು ಪ್ರಶ್ನಿಸಿ ಭಾಲ್ಕಿ ಟೌನ್ ಠಾಣಾ ಪೊಲೀಸರ ಪರ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.
ಆರೋಪಿ ಶೇಖ್ ರೌಫ್ನನ್ನು ದೋಷಿಯಾಗಿ ತೀರ್ಮಾನಿಸಿರುವ ವಿಶೇಷ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿರುವ ಹೈಕೋರ್ಟ್ ನ್ಯಾಯಪೀಠ, ಅಪರಾಧಿಗೆ ವಿಧಿಸಲಾಗಿದ್ದ ಐದು ವರ್ಷಗಳ ಜೈಲು ಶಿಕ್ಷೆಯನ್ನು ಏಳು ವರ್ಷಕ್ಕೆ ಹೆಚ್ಚಿಸಿ, ‘ಈ ಆದೇಶದಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸುವ ಅಗತ್ಯ ಕಂಡು ಬರುತ್ತಿಲ್ಲ’ ಎಂದು ತಿಳಿಸಿದೆ. ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಪ್ರಕರಣದಲ್ಲಿ ಶೇಖರ್ ರೌಫ್ಗೆ ವಿಶೇಷ ನ್ಯಾಯಾಲಯ, ಐದು ವರ್ಷ ಸಾಧಾರಣ ಜೈಲು ಶಿಕ್ಷೆ ವಿಧಿಸಿ 2012ರ ಸೆಪ್ಟೆಂಬರ್ 7ರಂದು ಆದೇಶಿಸಿತ್ತು.ಈ ಆದೇಶವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು.