ಇಲಾಖೆಗಳಿಗೆ ಬರೆಯುವ ಪತ್ರಗಳು ನೋಂದಣಿ‌ ಅಂಚೆ ಮೂಲಕ ಹೋಗಬೇಕು :ಪಾಣಾಜೆ ಗ್ರಾ.ಪಂ. ಸಾಮಾನ್ಯ ಸಭೆ

0

ಪಾಣಾಜೆ: ಪಂಚಾಯತ್‌ನಿಂದ‌ ಕೈಗೊಳ್ಳಲಾದ ನಿರ್ಣಯದಂತೆ ಇಲಾಖೆಗಳಿಗೆ ಬರೆಯಲಾಗುವ ಪತ್ರಗಳು ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಸಿಗುತ್ತಿಲ್ಲ. ಸಾಮಾನ್ಯ ಅಂಚೆ ಬದಲು ಅದನ್ನು ನೋಂದಣಿ ಅಂಚೆ ಮೂಲಕ ಕಳುಹಿಸುವ ವ್ಯವಸ್ಥೆಯಾಗಬೇಕೆಂದು ಪಾಣಾಜೆ ಪಂಚಾಯತ್ ಸದಸ್ಯರು ಆಗ್ರಹಿಸಿದರು.
ಜ. 19 ರಂದು ಪಂಚಾಯತ್ ಅಧ್ಯಕ್ಷೆ ಭಾರತೀ ಭಟ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಆಗ್ರಹ ವ್ಯಕ್ತವಾಯಿತು.
ಇಲಾಖೆಯಿಂದ ಕೇಳಲಾಗುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಗುತ್ತಿಲ್ಲ. ಕಾರಣ, ಪಂಚಾಯತ್‌ನಿಂದ ಹೋಗುವ ಲೆಟರ್ ಗಳು ಇಲಾಖೆಗಳಿಗೆ ಸರಿಯಾದ ರೀತಿಯಲ್ಲಿ ತಲುಪುತ್ತಿಲ್ಲ.  ಸಾಮಾನ್ಯ ಪೋಸ್ಟ್  ಮಾಡಿದರೆ ಅದು ಹೋಗುವುದಿಲ್ಲ. ಹಾಗಾಗಿ ರಿಜಿಸ್ಟರ್ ಅಂಚೆ ಮೂಲಕ ಕಳುಹಿಸಬೇಕು. ಈ ಬಗ್ಗೆ ಯಾಕೆ ಪಂಚಾಯತ್‌ನಿಂದ ಸಮರ್ಪಕ ಕ್ರಮ ಕೈಗೊಳ್ಳಲಾಗುತ್ತಿಲ್ಲ ? ಎಂದು ಸದಸ್ಯರಾದ ಮೈಮೂನತ್ತುಲ್ ಮೆಹ್ರಾ ಮತ್ತು ವಿಮಲ ಪ್ರಶ್ನಿಸಿದರು‌. 
ಲೆಟರ್ ಹೋಗಿರುವುದರ ಬಗ್ಗೆ ಪಂಚಾಯತ್‌ನಲ್ಲಿ ಸರಿಯಾದ ದಾಖಲೆಗಳನ್ನು ಇಟ್ಟುಕೊಳ್ಳಬೇಕಾದದ್ದು ಅಧಿಕಾರಿಗಳ ಕರ್ತವ್ಯವಾಗಿದೆ. ಅಪನಂಬಿಕೆಗೆ ಗುರಿಯಾಗುವುದು ಬೇಡ ಎಂದು ಸದಸ್ಯ ಸುಭಾಸ್ ರೈ ಹೇಳಿದರು.
ತಿಂಗಳು ತಿಂಗಳು ಪಂಚಾಯತ್ ನಿಂದ ಇಲಾಖೆಗಳಿಗೆ ಅನೇಕ ಪತ್ರಗಳು ಹೋಗುತ್ತವೆ. ಆದರೆ ಒಂದಕ್ಕೂ ಉತ್ತರ ಬರುತ್ತಿಲ್ಲ.‌ಹಾಗಾದರೆ ಗ್ರಾಮ‌ ಪಂಚಾಯತ್ ಸಾಮಾನ್ಯ ಸಭೆ ಯಾಕೆ ? ನಿರ್ಣಯ ಕೈಗೊಳ್ಳುವುದಕ್ಕೆ ಬೆಲೆ ಇಲ್ಲವಾ ? ಎಂದು ಸದಸ್ಯರು ಪ್ರಶ್ನಿಸಿದರು.
ಸಾಮಾನ್ಯ ಅಂಚೆಯಲ್ಲಿ ಹೋದರೂ ಹೋಗುತ್ತದೆ ಎಂದು ಪಿಡಿಒ ಚಂದ್ರಮತಿ ಸಮರ್ಥಿಸಿಕೊಂಡಾಗ ಅರಣ್ಯ ಇಲಾಖೆ ಬರೆಯಲಾದ ಪತ್ರ ಇನ್ನೂ ಸಂಬಂಧಿಸಿದ ಅಧಿಕಾರಿಗೆ ತಲುಪಿಲ್ಲ ಯಾಕೆ ? ನಾರ್ಮಲ್ ಪೋಸ್ಟ್ ಮಾಡಿದರೆ ಹೇಗೆ ಅಲ್ಲಿಂದ ಉತ್ತರ ಬರುವುದು ? ಎಂದು ಮೈಮೂನತ್ತುಲ್ ಮೆಹ್ರಾ ಕೇಳಿದರು.
ರೋಡ್ ಮಾರ್ಜಿನ್ ಅಳತೆ ಕಡ್ಡಾಯ
ಯಾವುದೇ ಕಟ್ಟಡ ಲೈಸೆನ್ಸ್ ನೀಡುವ‌ ಮೊದಲು ಪಂಚಾಯತ್ ನಿಂದ ರೋಡ್ ಮಾರ್ಜಿನ್ ಅಳತೆ ಮಾಡಬೇಕು. ಡೋರ್ ನಂ. ನೀಡುವಾಗಲೂ ಮತ್ತೊಮ್ಮೆ ಅಳತೆ ಮಾಡಬೇಕು. ಇದರಿಂದ ರೋಡ್ ಮಾರ್ಜಿನ್ ನಿಯಮ ಸರಿಯಾಗಿ ಅನುಷ್ಠಾನಗೊಳ್ಳುತ್ತದೆ  ಎಂದು ಸದಸ್ಯೆ ವಿಮಲ ಒತ್ತಾಯಿಸಿದರು‌.
ಸರಕಾರದ ಸುತ್ತೋಲೆಯಂತೆ ಗ್ರಂಥಾಲಯ ಡಿಜಿಟಲೀಕರಣಕ್ಕೆ ಪಂಚಾಯತ್‌ನಿಂದ ಕ್ರಮ ಕೈಗೊಳ್ಳುವುದರ ಬಗ್ಗೆ ಚರ್ಚಿಸಿ ಮುಂದಿನ ಕ್ರಿಯಾ ಯೋಜನೆಯಲ್ಲಿಟ್ಟು ಗ್ರಂಥಾಲಯಕ್ಕೆ ಕಂಪ್ಯೂಟರ್, ಪೀಠೋಪಕರಣ ಇತ್ಯಾದಿಗಳನ್ನು ಪೂರೈಸುವುದು ಎಂದು ನಿರ್ಣಯಿಸಲಾಯಿತು. ನಿರ್ಭಂಧಿತ ಕ್ರಿಯಾಯೋಜನೆಯಲ್ಲಿ ಉಳಿಕೆಯಾದ ಹಣವನ್ನು ವಿಂಗಡಣೆ ಮಾಡುವ ಬಗ್ಗೆ ಚರ್ಚಿಸಲಾಯಿತು.
ಶಾಸಕರ ನಿಧಿಯಿಂದ ಪಾಣಾಜೆ ಗ್ರಾಮ ವ್ಯಾಪ್ತಿಗೆ ಮಂಜೂರಾದ 80 ಲಕ್ಷ ರೂ. ಅನುದಾನಗಳ ವಿವರವನ್ನು ಅಧ್ಯಕ್ಷರು ಓದಿ ಹೇಳಿದರು.
ಮೊದಲು ವಾರ್ಡು ಸಭೆ ನಂತರ ಗ್ರಾಮ ಸಭೆ
ಗ್ರಾಮಸಭೆಯ ನಂತರ ವಾರ್ಡು ಸಭೆ ಮಾಡುವುದಲ್ಲ. ಮೊದಲು ವಾರ್ಡು ಸಭೆ ನಡೆಸಿ ಬಳಿಕ ಅದರ ಮಾಹಿತಿ, ಅರ್ಜಿಗಳನ್ನು ಗ್ರಾಮಸಭೆಗೆ ತರುವುದು ನಿಯಮ ಎಂದು ಕಾರ್ಯದರ್ಶಿ ಆಶಾ ಹೇಳಿದರು. ಪಾಣಾಜೆ ಜಾತ್ರೋತ್ಸವ ಕಳೆದ ಮೇಲೆ ಜನವಸತಿ ಸಭೆ ನಡೆಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಫೆ. 8 ದ್ವಿತೀಯ ಸುತ್ತಿನ ಗ್ರಾಮ ಸಭೆ
ಫೆ. 8 ರಂದು ಪಂಚಾಯತ್ ನ ದ್ವಿತೀಯ ಸುತ್ತಿನ ಗ್ರಾಮ ಸಭೆ ನಡೆಯಲಿದೆ. ಈ ಬಗ್ಗೆ  ಗ್ರಾಮ ಸಭೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವ ನಿಟ್ಟಿನಲ್ಲಿ ವ್ಯಾಪಕ ಪ್ರಚಾರ ನಡೆಸಬೇಕು. ಮನೆ ಮನೆಗೆ ಗ್ರಾಮ ಸಭೆಯ ಮಾಹಿತಿ ತಲುಪುವಂತೆ ಕ್ರಮ ಕೈಗೊಳ್ಳುವುದು ಎಂದು ಸದಸ್ಯರು ಹೇಳಿದರು. ಜ. 30 ಕ್ಕೆ ವಾರ್ಡು ಸಭೆ ಮಾಡುವುದೆಂದು ನಿರ್ಣಯಿಸಲಾಯಿತು.
ಗ್ರಾಮೀಣ ಭಾಗದಲ್ಲಿ ಸ್ವದ್ಯೋಗ ಸೃಷ್ಟಿಸುವ ಸರಕಾರದ ಯೋಜನೆಯಂತೆ ವಿವೇಕಾನಂದ ಸ್ವ-ಸಹಾಯ ಸಂಘವನ್ನು ರಚಿಸುವುದು ಮತ್ತು ಸರಕಾರದಿಂದ ಅದಕ್ಕೆ ಸಿಗುವ ಸವಲತ್ತು ಸೌಲಭ್ಯಗಳ ಬಗ್ಗೆ ಪಿಡಿಒ ಚಂದ್ರಮತಿ ಮಾಹಿತಿ ನೀಡಿದರು.
ಆರ್ಲಪದವಿನಲ್ಲಿ ಅಡ್ಡ ಮೋರಿ
ಆರ್ಲಪದವು ಪೇಟೆಯಲ್ಲಿ ಅಡ್ಡ‌‌ಮೋರಿ ಹಾಕಿ ಮಳೆಗಾಲದಲ್ಲಿ ರಸ್ತೆಗೆ ನೀರು ಹರಿದು ಬಾರದ ಹಾಗೆ ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಯಿಂದ ಬಂದ ಪತ್ರವನ್ನು ಪ್ರಸ್ತಾಪಿಸಲಾಗಿ ಅದರ ಬಗ್ಗೆ ಚರ್ಚಿಸಲಾಯಿತು. ಲೋಕೋಪಯೋಗಿ ಇಲಾಖೆ ಪಂಚಾಯತ್ ಮೇಲೆ ಇದನ್ನು ಹೊರಿಸಿದೆ. ಅಡ್ಡ ಮೋರಿ ಹಾಕುವ ರಸ್ತೆಯು ಜಿ.ಪಂ.‌ ರಸ್ತೆಯಾಗಿರುವುದರಿಂದ ಈ ಬಗ್ಗೆ ಜಿ.ಪಂ. ಗೆ ಬರೆದು ಕ್ರಮ ಕೈಗೊಳ್ಳಲು ಲೋಕೋಪಯೋಗಿ ಇಲಾಖೆಗೆ ಮರುಪತ್ರ ಬರೆಯಲು ನಿರ್ಣಯಿಸಲಾಯಿತು.
ಗ್ರಾಮ ಸಭೆಗೆ ನಾವು ಪೂರ್ವತಯಾರಿ ಸರಿಯಾಗಿ ನಡೆಸಬೇಕು. ಸಮರ್ಪಕ ದಾಖಲೆಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡುವಲ್ಲಿ ನಾವು ತಯಾರಾಗಿರಬೇಕು ಎಂದು ಸದಸ್ಯರು ಹೇಳಿದರು.
ಉಪಾಧ್ಯಕ್ಷ ಅಬೂಬಕ್ಕರ್ ಇಬ್ರಾಹಿಂ, ಸದಸ್ಯರಾದ ಕೃಷ್ಣಪ್ಪ ಪೂಜಾರಿ, ನಾರಾಯಣ ನಾಯಕ್, ಮೋಹನ ನಾಯ್ಕ್, ಸುಲೋಚನಾ ವಿವಿಧ ವಿಷಯಗಳಲ್ಲಿ ಚರ್ಚಿಸಿದರು.ಸಿಬಂದಿಗಳಾದ ವಿಶ್ವನಾಥ, ಅರುಣ್ ಕುಮಾರ್ ಸಹಕರಿಸಿದರು.

LEAVE A REPLY

Please enter your comment!
Please enter your name here