ನೆಲ್ಯಾಡಿ: ಬಯಲು ಆಲಯ ಪ್ರಸಿದ್ಧಿಯ ಕೊಕ್ಕಡ ಸಮೀಪದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಜ.23ರಿಂದ 25ರ ತನಕ ಭಜನೆ, ಯಕ್ಷೋತ್ಸವ, 108 ಕಾಯಿ ಗಣಹೋಮ, ಮೂಡಪ್ಪ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ಹರೀಶ್ ರಾವ್ ತಿಳಿಸಿದ್ದಾರೆ.
ಜ.23ರಂದು ಬೆಳಿಗ್ಗೆ ಕಡಬ ಸರಸ್ವತಿ ವಿದ್ಯಾಲಯದ ಸಂಚಾಲಕ ವೆಂಕಟ್ರಮಣ ರಾವ್ ಮಂಕುಡೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಳಿಕ ಹರೀಶ್ ನೆರಿಯ ಇವರ ನೇತೃತ್ವದಲ್ಲಿ ಜಿಲ್ಲೆಯ ಆಹ್ವಾನಿತ ಭಜನಾ ಮಂಡಳಿಗಳಿಂದ ಕುಣಿತ ಭಜನೆ ನಡೆಯಲಿದೆ. ಸಂಜೆ ಕಾಮಧೇನು ಗೋಶಾಲೆಯಿಂದ ಶ್ರೀ ಕ್ಷೇತ್ರದ ತನಕ ಭಜನಾ ಶೋಭಾ ಯಾತ್ರೆ ನಡೆಯಲಿದೆ. ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು ಶಾಸಕ ಹರೀಶ್ ಪೂಂಜಾ ಉದ್ಘಾಟಿಸಲಿದ್ದಾರೆ. ಉಜಿರೆ ಎಸ್ಡಿಎಂ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ| ಶ್ರೀಧರ ಭಟ್ ಧಾರ್ಮಿಕ ಪ್ರವಚನ ನೀಡಲಿದ್ದು ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ. ರಾತ್ರಿ ಭಜನಾ ಮಂಗಳೋತ್ಸವ, ಸ್ಯಾಕ್ಸೋಫೋನ್ ವಾದನ ನಡೆಯಲಿದೆ.
ಜ.24ರಂದು ಸಂಜೆ ಯಕ್ಷೋತ್ಸವ ನಡೆಯಲಿದ್ದು ಶಿಬಾಜೆ ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ರಾಘವೇಂದ್ರ ನಾಯಕ್ ಬರ್ಗುಳ ಉದ್ಘಾಟಿಸಲಿದ್ದಾರೆ. ಬಳಿಕ ಯಕ್ಷಶ್ರೀ ಹವ್ಯಾಸಿ ಬಳಗ ಪುತ್ತೂರು ಇವರಿಂದ ಯಕ್ಷಗಾನ ತಾಳಮದ್ದಲೆ, ಪ್ರಕಾಶ ದೇವಾಡಿಗ ಮತ್ತು ಬಳಗದವರಿಂದ ಸಾಕ್ಸೋಫೋನ್ ವಾದನ ನಡೆಯಲಿದೆ. ದುರ್ಗಾಪೂಜೆ ನಡೆಯಲಿದೆ. ಸಂಜೆ ವಿಧಾನಪರಿಷತ್ ಸದಸ್ಯ ಹರೀಶ್ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ರಾತ್ರಿ ಯಕ್ಷ ಭಾರತಿ ಬೆಳ್ತಂಗಡಿ ಹಾಗೂ ಅತಿಥಿ ಕಲಾವಿದರಿಂದ ’ಜಾಂಭವತಿ ಕಲ್ಯಾಣ ’ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಜ.25ರಂದು ಬೆಳಿಗ್ಗೆ 8 ಗಂಟೆಯಿಂದ ವಾಮನ್ ನಾಯಕ್ ಉಪ್ಪಿನಂಗಡಿ ಅವರ ನೇತೃತ್ವದಲ್ಲಿ ಸ್ಥಳೀಯ ಪ್ರಸಿದ್ಧ ಭಜನಾ ತಂಡಗಳಿಂದ ಭಜನಾ ಸೇವೆ, ಸಂಜೆ 4.30ರಿಂದ ಯಜ್ಞೇಶ್ ಆಚಾರ್ಯ ಸುಬ್ರಹ್ಮಣ್ಯ ಇವರಿಂದ ಭಕ್ತಿ ರಸಮಂಜರಿ ನಡೆಯಲಿದೆ. ರಾತ್ರಿ 7ರಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಶಿವಮೊಗ್ಗ ನಟೇಶ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕೆ.ಸೂರ್ಯನಾರಾಯಣ ಕಶೆಕೋಡಿ ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಶಾಸಕ ಹರೀಶ್ ಪೂಂಜಾ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾಧಿಕಾರಿ ರವಿಕುಮಾರ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಸಹಾಯಕ ಆಯುಕ್ತ ಗುರುಪ್ರಸಾದ್, ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವೀ ಸಾನಿಕಮ್, ಕೊಕ್ಕಡ ಗ್ರಾ.ಪಂ.ಅಧ್ಯಕ್ಷ ಯೋಗೀಶ್ ಆಲಂಬಿಲ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾತ್ರಿ 8.30ರಿಂದ ರಾಷ್ಟ್ರ ಮತ್ತು ಧರ್ಮ ಜಾಗೃತಿಯ ’ಪುಣ್ಯ ಭೂಮಿ ಭಾರತ’ ನೃತ್ಯ ವೈಭವ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಜ.25: ಮೂಡಪ್ಪ ಸೇವೆ:
ಜ.25ರಂದು ಬೆಳಿಗ್ಗೆ 8 ಗಂಟೆಯಿಂದ ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ 108 ಕಾಯಿ ಗಣಹೋಮ ಹಾಗೂ ರಾತ್ರಿ 9 ಗಂಟೆಗೆ ಮೂಡಪ್ಪ ಸೇವೆ ನಡೆಯಲಿದೆ.