ಬಾಯಂಬಾಡಿ ಶ್ರೀ ಷಣ್ಮುಖದೇವ ದೇವಸ್ಥಾನದ ಜಾತ್ರೋತ್ಸವ, ಧಾರ್ಮಿಕ ಸಭೆ

0

ಹಿಂದೂಗಳು ಕಲೆಯಲ್ಲೂ ಭಗವಂತನನ್ನು ಕಾಣುವವರಾಗಿದ್ದೇವೆ : ಸಂಜೀವ ಮಠಂದೂರು

ಜಗತ್ತಿಗೆ ಮಾನವೀಯತೆಯ ಪಾಠ ಕಲಿಸಿದ ದೇಶ ಭಾರತ : ಮುರಳೀಕೃಷ್ಣ ಹಸಂತಡ್ಕ

ಪುತ್ತೂರು: ಕೊಳ್ತಿಗೆ ಗ್ರಾಮದ ಬಾಯಂಬಾಡಿ ಶ್ರೀ ಷಣ್ಮುಖದೇವ ದೇವಸ್ಥಾನದಲ್ಲಿ ನಡೆಯುತ್ತಿರುವ ವರ್ಷಾವಧಿ ಜಾತ್ರಾ ಮಹೋತ್ಸವ ಹಾಗೂ ನೂತನ ರಥ ಸಮರ್ಪಣೆಯ ಅಂಗವಾಗಿ ಜ.20 ರಂದು ರಾತ್ರಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಜಾತ್ರೋತ್ಸವ ಎಂದರೆ ದೇವರ ಉತ್ಸವ, ಈ ಉತ್ಸವದಲ್ಲಿ ನಾವೆಲ್ಲರೂ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದಾಗ ನಮ್ಮ ಜೀವನ ಪಾವನವಾಗುತ್ತದೆ. ಭಗವಂತನ ಅನುಗ್ರಹ ಮತ್ತು ಊರ ಭಕ್ತಾದಿಗಳ ಸಹಕಾರದಿಂದ ಒಂದು ಸುಂದರವಾದ ರಥ ನಿರ್ಮಾಣವಾಗಿದೆ. ಇದು ದೇವರ ಕೃಪಾನುಗ್ರಹವಾಗಿದೆ. ಇಡೀ ಜಗತ್ತಿಗೆ ಮಾನವತೆಯ ಪಾಠವನ್ನು ಕಲಿಸಿದ ರಾಷ್ಟ್ರ ಭಾರತವಾಗಿದೆ, ಮನುಷ್ಯ ಹೇಗೆ ಬದುಕಬೇಕು ಎಂದು ಕಲಿಸಿದ ಧರ್ಮ ಅದು ಹಿಂದೂ ಧರ್ಮವಾಗಿದೆ. ಆದ್ದರಿಂದ ಹಿಂದೂ ಧರ್ಮ ಸನಾತನ ಧರ್ಮವಾಗಿದೆ. ಇವತ್ತಿನ ದಿನಗಳಲ್ಲಿ ಜಗತ್ತಿನ ಜನ ನಮ್ಮ ಕಡೆ ನೋಡುವಂತಾಗಿದ್ದರೆ ಇದು ನಮ್ಮ ಹಿಂದೂ ಧರ್ಮದ ಶಕ್ತಿಯಾಗಿದೆ. ದೇಶದ ಮೂಲನಂಬಿಕೆಗಳನ್ನು ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ, ಇದಕ್ಕೆ ವೈಜ್ಞಾನಿಕ ಸತ್ಯ ಇದೆ. ಇಂತಹ ಮೂಲನಂಬಿಕೆ, ವಿಜ್ಞಾನ, ತಂತ್ರಜ್ಞಾನಗಳನ್ನು ಒಳಗೊಂಡ ಹಿಂದೂ ಧರ್ಮದಲ್ಲಿ ಹುಟ್ಟಿರುವ ನಾವುಗಳು ಧನ್ಯರು. ಇಂತಹ ಹಿಂದೂ ಹಿಂದುತ್ವವನ್ನು ಉಳಿಸಿ ರಕ್ಷಣೆ ಮಾಡುವ ಕೆಲಸ ನಮ್ಮೆಲ್ಲರ ಕೈಯಲ್ಲಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಾಸಕ ಸಂಜೀವ ಮಠಂದೂರುರವರು ಮಾತನಾಡಿ, ಧರ್ಮದ ಆಧಾರದಲ್ಲಿ ಸಮಾಜವನ್ನು ಕಟ್ಟುವ ಕೆಲಸವನ್ನು ಮಾಡಬೇಕಾದ ಅಗತ್ಯತೆ ಇದೆ. ನಮ್ಮ ಪರಂಪರೆ ಇವತ್ತು ಜಗತ್ತಿಗೆ ಭಾರತ ಏನು, ಭಾರತೀಯರು ಅಂದರೆ ಯಾರು? ಎಂಬುದನ್ನು ತೋರಿಸಿ ಕೊಡುವ ಕೆಲಸ ಆಗಿದೆ. ದೇವಸ್ಥಾನ, ದೈವಸ್ಥಾನ, ನಾಗಸ್ಥಾನಗಳು ಧರ್ಮದ ನೆಲೆಗಟ್ಟಲ್ಲಿ ಅಭಿವೃದ್ಧಿಯನ್ನು ಹೊಂದುತ್ತಿರುವುದು ಒಳ್ಳೆಯ ವಿಚಾರವಾಗಿದೆ. ಕಲೆಯಲ್ಲೂ ಕೂಡ ಭಗವಂತನನ್ನು ಕಾಣುವ ನಾವುಗಳು ಹಿಂದೂಗಳ ಮನಸ್ಸಿನ ಭಾವನೆ, ಭಗವಂತನನ್ನು ಕೇವಲ ದೇವಸ್ಥಾನಗಳಲ್ಲಿ ಮಾತ್ರವಲ್ಲ ಕಲೆಯಲ್ಲಿ, ಭಜನೆಯಲ್ಲೂ ಭಗವಂತನನ್ನು ಕಾಣುತ್ತೇವೆ. ಒಂದು ದೇವಸ್ಥಾನ ಆ ಊರಿನ ಜನರ ಹೃದಯಶ್ರೀಮಂತಿಕೆ, ಭಕ್ತಿಯನ್ನು ತೋರಿಸಿಕೊಡುತ್ತದೆ. ಜಾತಿ, ಮತ, ಶ್ರೀಮಂತಿಕೆ ಇತ್ಯಾದಿ ಬೇಧಭಾವಗಳನ್ನು ಬಿಟ್ಟು ನಾವೆಲ್ಲರೂ ಒಂದು ಎಂಬ ಭಾವನೆಯನ್ನು ದೇವಸ್ಥಾನಗಳಲ್ಲಿ ಕಾಣಲು ಸಾಧ್ಯವಿದೆ. ಇದಕ್ಕೆ ಮೂಲ ಕಾರಣ ಭಗವಂತನ ಕಾರಣಿಕತೆಯಾಗಿದೆ ಎಂದು ಹೇಳಿ ಶುಭ ಹಾರೈಸಿದರು.

ದೇವಸ್ಥಾನದ ಅಭಿವೃದ್ಧಿಗೆ ಸಹಕರಿಸಿದವರಿಗೆ ಅಭಿನಂದನೆಗಳು: ನೇಮಿರಾಜ ಪಾಂಬಾರು

ಸಭಾಧ್ಯಕ್ಷತೆ ವಹಿಸಿದ್ದ ಶ್ರೀ ಷಣ್ಮುಖದೇವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನೇಮಿರಾಜ ಪಾಂಬಾರುರವರು ಮಾತನಾಡಿ, ಊರವರ ಹಾಗೂ ದಾನಿಗಳ ಮತ್ತು ಶಾಸಕರ ಸಹಕಾರದೊಂದಿಗೆ ದೇವಸ್ಥಾನವು ಅಭಿವೃದ್ಧಿ ಹೊಂದುತ್ತಿರುವುದು ಒಳ್ಳೆಯ ವಿಚಾರವಾಗಿದೆ. ದೇವಸ್ಥಾನಕ್ಕೆ ಬರುವ ರಸ್ತೆ ಅಭಿವೃದ್ಧಿಯಾಗಬೇಕಾಗಿದ್ದು ಸುಮಾರು 1 ಕೋಟಿ ರೂ.ಅನುದಾನದ ಅವಶ್ಯಕತೆ ಇದೆ. ಇದನ್ನು ಶಾಸಕರು ನೆರವೇರಿಸಿಕೊಟ್ಟರೆ ಬಹಳ ಸಂತೋಷ ಎಂದರು. ಅದೇ ರೀತಿ ಬಾಕಿ ಇರುವ ತಡೆಗೋಡೆಗೂ ಅನುದಾನದ ಅವಶ್ಯಕತೆ ಇದೆ ಎಂದರು.

ಪ್ರಕೃತಿಯಲ್ಲಿ ದೇವರನ್ನು ಕಂಡವರು ನಾವುಗಳು : ಕಶೆಕೋಡಿ ಸೂರ್ಯನಾರಾಯಣ ಭಟ್

ಮುಖ್ಯ ಅತಿಥಿಯಾಗಿದ್ದ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಮಾತನಾಡಿ, ಸನಾತನ ಹಿಂದೂ ಸಂಸ್ಕೃತಿ ಎಂದರೆ ಪ್ರಕೃತಿಯಲ್ಲೂ ದೇವರನ್ನು ಕಾಣುವವರು ನಾವಾಗಿದ್ದೇವೆ. ಇಲ್ಲಿನ ಕಲ್ಲು, ಮಣ್ಣಿನಲ್ಲೂ ದೇವರನ್ನು ಕಂಡವರು. ಪ್ರತಿಯೊಬ್ಬರ ಹೃದಯದೇಗುಲದಲ್ಲೂ ಭಗವಂತ ನೆಲೆಸಿರುತ್ತಾನೆ. ನಾವು ಶ್ರದ್ಧೆ, ಭಕ್ತಿಯಿಂದ ಒಳ್ಳೆಯ ಕೆಲಸ ಮಾಡಿದರೆ ಭಗವಂತ ಖಂಡಿತವಾಗಿಯೂ ಅನುಗ್ರಹ ಮಾಡುತ್ತಾನೆ ಎಂದರು.

ನಂಬಿಕೆ ಆಡಂಬರವಾಗದೇ ಶ್ರದ್ಧೆ, ಭಕ್ತಿಯಿಂದ ಕೂಡಿರಲಿ : ಶ್ಯಾಮ್‌ಸುಂದರ ರೈ ಕೊಪ್ಪಳ

ಕೊಳ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳ ಮಾತನಾಡಿ, ನಾವು ಭಕ್ತಿಯಿಂದ ಭಗವಂತನನ್ನು ಪ್ರಾರ್ಥಿಸಿದರೆ ನಮ್ಮ ಇಷ್ಟಾರ್ಥಗಳು ಈಡೇರುತ್ತವೆ. ನಮ್ಮ ನಂಬಿಕೆ ಆಡಂಬರವಾಗದೆ ಶ್ರದ್ಧೆ,ಭಕ್ತಿಯಿಂದ ಕೂಡಿರಬೇಕು ಆಗ ಮಾತ್ರ ದೇವರ ಅನುಗ್ರಹ ಪ್ರಾಪ್ತಿಯಾಗಲು ಸಾಧ್ಯ ಎಂದರು.

ಉತ್ಸವ ಸಮಿತಿ ಅಧ್ಯಕ್ಷ ತೀರ್ಥಾನಂದ ದುಗ್ಗಳ ಸ್ವಾಗತದೊಂದಿಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಊರವರ ಸಹಕಾರ ಹಾಗೂ ದೇವರ ಅನುಗ್ರಹದಿಂದ ಸುಮಾರು 20 ಲಕ್ಷ ರೂ.ವೆಚ್ಚದಲ್ಲಿ ಸುಂದರವಾದ ರಥ ನಿರ್ಮಾಣವಾಗಿದೆ ಅದೇ ರೀತಿ ಶಾಸಕರಾದ ಸಂಜೀವ ಮಠಂದೂರುರವರ ರೂ.50 ಲಕ್ಷ ಅನುದಾನದಲ್ಲಿ ದೇವಸ್ಥಾನದ ರಕ್ಷಣೆಗೆ ತಡೆಗೋಡೆ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಶ್ರೀ ಷಣ್ಮುಖದೇವ ಪ್ರೌಢ ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ವ್ಯವಸ್ಥಾಪನ ಸಮಿತಿ ಸದಸ್ಯರುಗಳಾದ ಮುರಳೀಕೃಷ್ಣ ಸಿದ್ಧಮೂಲೆ, ಸುಧೀರ್ ಕಟ್ಟಪುಣಿ, ಪುಷ್ಪರಾಜ ರೈ ಕಲಾಯಿ, ಸರೋಜಿನಿ ಎಂ. ಮೇರಡ್ಕ, ಕೆ.ಆರ್.ಲಕ್ಷ್ಮಣ ಗೌಡ ಕುಂಟಿಕಾನರವರುಗಳು ಅತಿಥಿಗಳಿಗೆ ಹೂ ಕೊಟ್ಟು ಶಾಲು ಹೊದಿಸಿ ಸ್ವಾಗತಿಸಿ ಗೌರವಿಸಿದರು. ಉತ್ಸವ ಸಮಿತಿ ಸದಸ್ಯ ದಿವಾಕರ ರೈ ಕೆರೆಮೂಲೆ ವಂದಿಸಿದರು. ಡಾ.ದೇವಿಪ್ರಸಾದ್ ನೂಜಿ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ

ನೂತನ ರಥ ನಿರ್ಮಾಣಕ್ಕೆ ಮರ ಕೊಡುಗೆಯಾಗಿ ನೀಡಿದ ದಾನಿಗಳಾದ ಉದಯ ಭಟ್ ಮೂಲೆತ್ತಡ್ಕ, ಮುರಳೀಧರ ಎಸ್.ಪಿ ಕೆಮ್ಮಾರ, ವೆಂಕಟರಮಣ ಭಟ್ ಹಾಲುಮಜಲು, ಶ್ರೀರಾಮ ಸಿದ್ಧಮೂಲೆ, ಎಸ್.ಜಿ ಕೃಷ್ಣ ಸುಮವನ, ಸುಬ್ರಹ್ಮಣ್ಯ ಭಟ್ ಮತ್ತು ಸಹೋದರರು ಕೆಮ್ಮಾರ, ಪುಷ್ಪರಾಜ ರೈ ಕಲಾಯಿ, ಸುದರ್ಶನ ಭಟ್ ಒರ್ಕೊಂಬು, ಕರಿಯ ಕುಂಟಿಕಾನರವರುಗಳಿಗೆ ಶಾಲು, ಹಾರ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ತಡೆಗೋಡೆಗೆ ಅನುದಾನ ಒದಗಿಸಿದ ಶಾಸಕ ಸಂಜೀವ ಮಠಂದೂರುರವರಿಗೆ ಶಾಲು, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಜಾತ್ರೋತ್ಸವಕ್ಕೆ ಸಹಕರಿಸುತ್ತಿರುವ ಸ್ಥಳೀಯ ಎಲ್ಲಾ ಸಂಘ ಸಂಸ್ಥೆಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜ.20ರಂದು ಬೆಳಿಗ್ಗೆ ಉಗ್ರಾಣ ಮುಹೂರ್ತ ನಡೆದು ಭಕ್ತಾಧಿಗಳಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯಿತು. ರಾತ್ರಿ ಶ್ರೀ ದೇವರಿಗೆ ರಂಗಪೂಜೆ ನಡೆಯಿತು.

LEAVE A REPLY

Please enter your comment!
Please enter your name here