ಬೆಂಗಳೂರು:ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶ ಪಾಲನೆಯಲ್ಲಿ ಉದ್ದೇಶಪೂರ್ವಕ ಅವಿಧೇಯತೆ ಪ್ರದರ್ಶಿಸಿದ ಕಾರಣಕ್ಕೆ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ.ರಶ್ಮಿ ಮಹೇಶ್ ಅವರಿಗೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ರೂ.50 ಸಾವಿರ ದಂಡ ವಿಧಿಸಿದೆ.
‘ದಯಾನಂದ ಸಾಗರ್ ಶೈಕ್ಷಣಿಕ ಸಂಸ್ಥೆಗಳ ನೌಕರರ ಮನವಿ ಪರಿಗಣಿಸಲು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ 2020ರ ಮಾರ್ಚ್ 11ರಂದು ನೀಡಿದ್ದ ಆದೇಶ ಪಾಲಿಸಿಲ್ಲ’ ಎಂದು ಆಕ್ಷೇಪಿಸಿ ದಯಾನಂದ ಸಾಗರ ಕಾಲೇಜ್ ಆಫ್ ಎಂಜಿನಿಯರಿಂಗ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಲ್.ಹರ್ಷ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ವಿಭಾಗೀಯ ನ್ಯಾಯಪೀಠ, ವಿ.ರಶ್ಮಿ ಮಹೇಶ್ ಅವರಿಗೆ ರೂ.50 ಸಾವಿರ ದಂಡ ವಿಧಿಸಿದೆ. ‘ದಂಡದ ಮೊತ್ತವನ್ನು 15 ದಿನಗಳಲ್ಲಿ ಪಾವತಿಸಬೇಕು. ತಪ್ಪಿದಲ್ಲಿ ನ್ಯಾಯಾಂಗ ನಿಂದನೆ ಆರೋಪದಡಿ ಕ್ರಮ ಜರುಗಿಸಬೇಕಾಗುತ್ತದೆ’ ಎಂದು ನ್ಯಾಯಪೀಠವು 2022ರ ನವೆಂಬರ್ 8ರಂದು ಆದೇಶಿಸಿತ್ತು. ಈ ಆದೇಶದ ಪಾಲನೆಯ ಹಿನ್ನೆಲೆಯಲ್ಲಿ ರಶ್ಮಿ ಮಹೇಶ್‌ರವರು ವೈಯಕ್ತಿಕವಾಗಿ ರೂ.50 ಸಾವಿರ ಪಾವತಿ ಮಾಡಿದ್ದಾರೆ. ಇದನ್ನು ಪರಿಗಣಿಸಿದ ನ್ಯಾಯಪೀಠ, ರಶ್ಮಿ ಮಹೇಶ್ ಮತ್ತು ರಾಜ್ಯ ಉನ್ನತ ಶಿಕ್ಷಣ ಇಲಾಖೆ ಮೇಲಿನ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ಕೈಬಿಟ್ಟಿದೆ.