ಆರ್ಯಾಪು: ಮೆಸ್ಕಾಂ ಜನ ಸಂಪರ್ಕ ಸಭೆ

0

ಗ್ರಾಹಕರ ಬೇಡಿಕೆ ಈಡೇರಿಸಲು ಮೆಸ್ಕಾಂ ಶ್ರಮಿಸುತ್ತಿದೆ-ಕಿಶೋರ್ ಕುಮಾರ್

ಪುತ್ತೂರು: ಮೆಸ್ಕಾಂ ಇಲಾಖೆ ಗ್ರಾಹಕರ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದು ವಿದ್ಯುತ್ ಬಳಕೆದಾರರ ಸಮಸ್ಯೆ ಪರಿಹಾರಕ್ಕೆ ಮತ್ತು ಬೇಡಿಕೆ ಈಡೇರಿಕೆಗೆ ಸದಾ ಪ್ರಯತ್ನ ಮಾಡುತ್ತಿದೆ ಎಂದು ಮೆಸ್ಕಾಂ ನಿರ್ದೇಶಕ ಕಿಶೋರ್ ಕುಮಾರ್ ಬೊಟ್ಯಾಡಿ ಹೇಳಿದರು.ಜ.21ರಂದು ಆರ್ಯಾಪು ಗ್ರಾ.ಪಂ ಸಭಾಂಗಣದಲ್ಲಿ ನಡೆದ ಮೆಸ್ಕಾಂ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

ಚಿತ್ರ: ಯೂಸುಫ್ ರೆಂಜಲಾಡಿ


ವಿದ್ಯುತ್ ಕಂಬ, ಲೈನ್ ಮತ್ತಿತರ ವಿಚಾರಗಳಲ್ಲಿ ಜನರು ಸಹಕಾರ ಮನೋಭಾವ ಹೊಂದಿರಬೇಕು. ಸಣ್ಣಪುಟ್ಟ ವಿಚಾರಗಳನ್ನಿಟ್ಟುಕೊಂಡು ಸಮಸ್ಯೆಯನ್ನು ಸೃಷ್ಟಿಸಿಕೊಳ್ಳಬಾರದು, ಸ್ಥಳೀಯವಾಗಿ ಮಾತುಕತೆ ಮೂಲಕ ಪರಿಹಾರವಾಗುವ ಸಮಸ್ಯೆಗಳಿದ್ದರೆ ಅದನ್ನು ಸ್ಥಳೀಯವಾಗಿಯೇ ಸೌಹಾರ್ದಯುತವಾಗಿ ಮುಗಿಸಿಕೊಳ್ಳಬೇಕು, ನಮ್ಮ ಮನಸ್ಸು ಎಲ್ಲದಕ್ಕೂ ಪ್ರಮುಖವಾಗಿದ್ದು ಮನಸ್ಸು-ಮನಸ್ಸುಗಳು ಬೆಸೆದಾಗ ನಮ್ಮೊಳಗೆ ಯಾವ ಸಮಸ್ಯೆಯೂ ಉದ್ಭವಿಸುವುದಿಲ್ಲ ಎಂದು ಅವರು ಹೇಳಿದರು.

ಗ್ರಾಮಸ್ಥ ಸುಧಾಕರ ರಾವ್ ಆರ್ಯಾಪು ಮಾತನಾಡಿ ಇತ್ತೀಚೆಗೆ ಮೆಸ್ಕಾಂ ಇಲಾಖೆ ಬಹಳಷ್ಟು ಸುಧಾರಣೆಯಾಗಿದ್ದು ಖುಷಿ ತಂದಿದೆ. ಹಾಗಂತ ಸಮಸ್ಯೆ ಇಲ್ಲ ಎಂದರ್ಥವಲ್ಲ, ಲೈನ್‌ಮೆನ್‌ಗಳನ್ನು ಆಗಾಗ ಬದಲಾಯಿಸುತ್ತಿರುತ್ತೀರೋ ಏನೋ ಗೊತ್ತಿಲ್ಲ, ಲೈನ್‌ಮೆನ್‌ಗಳು ಯಾರೆಂದೇ ಗೊತ್ತಾಗುವುದಿಲ್ಲ ಮಾತ್ರವಲ್ಲದೇ ರಾತ್ರಿ ವೇಳೆ ಎಡ್ಜ್ ಫೀಸ್ ಹೋದರೂ ಸರಿಪಡಿಸಲು ಬೆಳಗ್ಗಿನವರೆಗೆ ಕಾಯಬೇಕಾದ ಪರಿಸ್ಥಿತಿ ಇದೆ, ಇದು ಬದಲಾಗಬೇಕಿದೆ ಎಂದು ಅವರು ಹೇಳಿದರು. ಎಇಇ ರಾಮಚಂದ್ರ ಉತ್ತರಿಸಿ ರಾತ್ರಿ ವೇಳೆ ವಿದ್ಯುತ್ ಕೈ ಕೊಟ್ಟಾಗ ಸಮಸ್ಯೆ ಆಗುವುದು ನಿಜ. ಗ್ರಾಮಾಂತರ ಪ್ರದೇಶದಲ್ಲಿ ರಾತ್ರಿ ಕಾರ್ಯನಿರ್ವಹಿಸಲು ಸರಿಯಾದ ಲೈನ್‌ಮೆನ್ ವ್ಯವಸ್ಥೆ ಇಲ್ಲ. ಮುಂದಿನ ದಿನಗಳಲ್ಲಿ ಸಮಸ್ಯೆ ಆಗದ ರೀತಿಯಲ್ಲಿ ನಾವು ಸ್ಪಂಧಿಸಲು ಪ್ರಯತ್ನಿಸುತ್ತೇವೆ ಎಂದು ಅವರು ಭರವಸೆ ನೀಡಿದರು.

ಆರ್ಯಾಪು ಗ್ರಾ.ಪಂ ಸದಸ್ಯ ಯಾಕೂಬ್ ಮಾತನಾಡಿ ನಮ್ಮ ಗ್ರಾ.ಪಂ.ನ ಲಕ್ಷಾಂತರ ರೂ ವಿದ್ಯುತ್ ಬಿಲ್ ಬಾಕಿ ಇದೆ. ಅದನ್ನು ಸರಕಾರದ ವತಿಯಿಂದ ಏನಾದರೂ ಭರಿಸುವ ಕಾರ್ಯ ಮಾಡಬೇಕೆಂದು ಮನವಿ ಮಾಡಿದರು.

ಗ್ರಾಮಸ್ಥ ವಿಜಯಹರಿ ಮಾತನಾಡಿ ನಮ್ಮ ಮನೆ ಬಳಿಯಿಂದ ಸುಮಾರು 20 ಮನೆಗಳಿಗೆ ವಿದ್ಯುತ್ ಲೈನ್ ಹೋಗಿದ್ದು ಕೇಬಲ್ ಮತ್ತಿತರ ವಯರ್‌ಗಳೂ ಮನೆಯ ಮುಂಭಾಗದಿಂದ ಹೋಗಿದೆ. ಮಾನವೀಯ ನೆಲೆಯಲ್ಲಿ ನಾವು ಅವಕಾಶ ನೀಡಿದ್ದೆವು ಎಂದರು. ಇದಕ್ಕೆ ಮೆಸ್ಕಾಂ ನಿರ್ದೇಶಕ ಕಿಶೋರ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮಸ್ಥ ಮಹಮ್ಮದ್ ಫಾರೂಕ್ ಮಾತನಾಡಿ ನಮ್ಮ ಮನೆ ಸಂಪ್ಯದಲ್ಲಿದೆ, ವಿದ್ಯುತ್ ಬಿಲ್ ಪುತ್ತೂರಿನಿಂದ ಬರುತ್ತಿದೆ. ಈ ಹಿಂದೆಯೇ ನಾನು ಮನವಿ ಸಲ್ಲಿಸಿದ್ದರೂ ಸ್ಪಂದನೆ ಸಿಕ್ಕಿಲ್ಲ. ನಮ್ಮದು ಗ್ರಾಮಾಂತರ ಬಿಲ್ ಮಾಡಬೇಕು ಎಂದು ಹೇಳಿದರು. ಮೆಸ್ಕಾಂ ನಿರ್ದೇಶಕ ಕಿಶೋರ್ ಕುಮಾರ್ ಬೊಟ್ಯಾಡಿ ಉತ್ತರಿಸಿ ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ಸರಿಪಡಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಪವರ್ ಸಪ್ಲೈ ಸಮಸ್ಯೆ ಇಲ್ಲ:
ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಮಾತನಾಡಿ ಪ್ರಸ್ತುತ ಪವರ್ ಸಪ್ಲೈ ಸಮಸ್ಯೆ ಪರಿಹಾರವಾಗಿದ್ದು ಹಿಂದಿನ ಲೋಡ್ ಶೆಡ್ಡಿಂಗ್ ಈಗ ಇಲ್ಲ. ಗ್ರಾಹಕರು ವಿದ್ಯುತ್ತನ್ನ ಉಳಿತಾಯ ಮಾಡುವ ಕಡೆಗೆ ಗಮನಕೊಡಬೇಕು ಎಂದು ಹೇಳಿದರು. ವಿದ್ಯುತ್‌ಗೆ ಸಂಬಂಧಿಸಿ ಯಾವುದೇ ದೋಷ, ಸಮಸ್ಯೆಗಳಿದ್ದರೂ ಮೆಸ್ಕಾಂ ಗಮನಕ್ಕೆ ತರಬೇಕೇ ಹೊರತು ನೀವು ಅದನ್ನು ಸರಿಪಡಿಸುವುದಕ್ಕೆ ಹೋಗಬಾರದು. ವಿದ್ಯುತ್ ಹೆಚ್ಚು ಅಪಾಯಕಾರಿಯಾಗಿದ್ದು ಸಣ್ಣ ತಪ್ಪು ಕೂಡಾ ಜೀವವನ್ನೇ ತೆಗೆಯಬಲ್ಲದು, ಹಾಗಾಗಿ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಸರಸ್ವತಿ ಕೆ, ಕೆಪಿಟಿಸಿಎಲ್ ಪುತ್ತೂರು ಇದರ ಸ.ಕಾ.ಇಂಜಿನಿಯರ್ ಅಭಿಜಿತ್ ಉಪಸ್ಥಿತರಿದ್ದರು. ಸಭೆಯಲ್ಲಿ ಗ್ರಾ.ಪಂ ಸದಸ್ಯರಾದ ರುಕ್ಮಯ ಮೂಲ್ಯ, ಪವಿತ್ರ ರೈ, ಹರೀಶ್ ನಾಯ್ಕ, ಗೀತಾ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಆರ್ಯಾಪು ಗ್ರಾ.ಪಂ ಪಿಡಿಓ ನಾಗೇಶ್ ಸ್ವಾಗತಿಸಿದರು. ಜೆ.ಇ ಸುಂದರ್ ವಂದಿಸಿದರು.

ಡೈನಾಮಿಕ್ ಅಧಿಕಾರಿ ರಾಮಚಂದ್ರ..!
ಮೆಸ್ಕಾಂ ನಿರ್ದೇಶಕರಾದ ಕಿಶೋರ್ ಕುಮಾರ್ ಬೊಟ್ಯಾಡಿ ಅವರು ಮಾತನಾಡುತ್ತಾ ಪ್ರಾರಂಭದಲ್ಲೇ ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಅವರನ್ನು ಉದ್ದೇಶಿಸಿ ಡೈನಾಮಿಕ್ ಅಧಿಕಾರಿ ಎಂದು ಸಂಬೋಧಿಸಿದರು. ರಾಮಚಂದ್ರ ಅವರಿಗೆ ಮೆಸ್ಕಾಂ ಇಲಾಖೆಯ, ಗ್ರಾಹಕರ ಸಮಸ್ಯೆಯ ನರನಾಡಿ ಗೊತ್ತಿದೆ. ಅವರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಸಿ ಮುಟ್ಟಿಸಿದಾಗ ಕೆಲಸಕ್ಕೆ ವೇಗ:
ಮೆಸ್ಕಾಂ ಇಲಾಖೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಸಣ್ಣಪುಟ್ಟ ಲೋಪದೋಷ ಇರಬಹುದು, ಅದಕ್ಕೆ ನೀವು ಬಿಸಿ ಮುಟ್ಟಿಸಿದಾಗ ಸಮಸ್ಯೆ ಕೂಡಲೇ ಪರಿಹಾರವಾಗುತ್ತದೆ. ಹಾಗಾಗಿ ಯಾವುದೇ ಕೆಲಸವನ್ನು ಫಾಲೋಅಪ್ ಮಾಡುವ ಜವಾಬ್ದಾರಿ ಗ್ರಾಹಕರದ್ದಾಗಿದೆ.
-ಕಿಶೋರ್ ಕುಮಾರ್ ಬೊಟ್ಯಾಡಿ, ಮೆಸ್ಕಾಂ ನಿರ್ದೇಶಕರು

ಮನವಿ ಸಲ್ಲಿಕೆ:
ಹಲವು ಗ್ರಾಹಕರು ವಿವಿಧ ಬೇಡಿಕೆಗಳನ್ನು ಅಧಿಕಾರಿಗಳಿಗೆ ಸಲ್ಲಿಸಿದರು. ಗ್ರಾಹಕರ ಅನೇಕ ಬೇಡಿಕೆ, ಪ್ರಶ್ನೆಗಳಿಗೆ ಅಧಿಕಾರಿಗಳು ಸ್ಥಳದಲ್ಲೇ ಪರಿಹಾರ ಸೂಚಿಸಿದರು. ಇನ್ನೂ ಅನೇಕ ಬೇಡಿಕೆಗಳನ್ನು ಶೀಘ್ರದಲ್ಲೇ ಬಗೆಹರಿಸುವ ಭರವಸೆ ನೀಡಿದರು.

LEAVE A REPLY

Please enter your comment!
Please enter your name here