ಪುತ್ತೂರು:ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮಿಗಳ ೭೮ನೇ ಜಯಂತ್ಯೋತ್ಸವ ಸಂಸ್ಮರಣೆ ಮತ್ತು ಮಂಗಳೂರು ಶಾಖಾಮಠದ ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿ ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮಂಡಿಸಿರುವ ಮಹಾಪ್ರಬಂಧ `ಸಂಸ್ಕೃತ, ಸಂಸ್ಕೃತಿಗೆ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಕೊಡುಗೆ ಒಂದು ಅಧ್ಯಯನ’ ಗ್ರಂಥ ಲೋಕಾರ್ಪಣೆ ಹಾಗು ಶ್ರೀ ಕ್ಷೇತ್ರದ ೭೨ನೇ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ `ಪಟ್ಟಾಭಿಷೇಕದ ದಶಮಾನೋತ್ಸವ’ ಅಂಗವಾಗಿ ಗುರುವಂದನೆ, ರಜತ ತುಲಾಭಾರ ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಜ.೨೨ರಂದು ನಡೆಯಲಿದೆ.ಈ ಸಮಾರಂಭಕ್ಕಾಗಿ ಇಡೀ ದ.ಕ.ಜಿಲ್ಲೆಯೇ ಸಜ್ಜಾಗಿದೆ.
ಕೇಂದ್ರ, ರಾಜ್ಯದ ಹಲವು ಮಂತ್ರಿಗಳು, ಪಕ್ಷದ ನಾಯಕರು, ಯತಿವರ್ಯರ ಆಗಮನ:
ಸಮಾರಂಭಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರದ ಹಲವು ಮಂತ್ರಿಗಳು, ಶಾಸಕರು, ಪಕ್ಷದ ನಾಯಕರು,ಆದಿಚುಂಚನಗಿರಿ ಮಠದ ವಿವಿಧ ಶಾಖೆಗಳ ಮಠಾಧೀಶರು ಆಗಮಿಸಲಿದ್ದಾರೆ.
ಶಾಸಕ ಸಂಜೀವ ಮಠಂದೂರು ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಗಳಾಗಿರುವ ಸಂಸದ ಡಿ.ವಿ.ಸದಾನಂದ ಗೌಡ, ಹೆಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕಂದಾಯ ಸಚಿವ ಆರ್.ಅಶೋಕ್, ಗೃಹ ಸಚಿವ ಆರಗ ಜ್ಞಾನೇಂದ್ರ, ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್,ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಅಬಕಾರಿ ಸಚಿವ ಕೆ.ಗೋಪಾಲಯ್ಯ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣ ಗೌಡ, ಒಕ್ಕಲಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೃಷ್ಣಪ್ಪ, ರಾಜ್ಯಸಭಾ ಸದಸ್ಯ,ನಟ ಜಗ್ಗೇಶ್, ಎಂ.ಎಲ್.ಸಿ ಎಸ್.ಎಲ್.ಭೋಜೆಗೌಡ, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ಒಕ್ಕಲಿಗ ಸಂಘ ಬೆಂಗಳೂರು ಇದರ ಅಧ್ಯಕ್ಷ ಬಾಲಕೃಷ್ಣ ಸಿ.ಎನ್, ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣ ಸ್ವಾಮಿ ಅವರು ಆಗಮಿಸಲಿದ್ದಾರೆ.ಸಾಹಿತಿ ಡಾ|ಎಚ್.ಎನ್.ಸತ್ಯನಾರಾಯಣ ಅವರು ಗ್ರಂಥ ಅವಲೋಕನ ಮಾಡಲಿದ್ದಾರೆ.
ಗಮನ ಸೆಳೆಯುತ್ತಿರುವ ಭವ್ಯ ವೇದಿಕೆ: ಕಾರ್ಯಕ್ರಮಕ್ಕಾಗಿ ದೇವಳದ ಗದ್ದೆಯಲ್ಲಿ ನಿರ್ಮಾಣವಾಗಿರುವ ಭವ್ಯ ವೇದಿಕೆ ಎಲ್ಲರ ಗಮನ ಸೆಳೆಯುತ್ತಿದೆ.ವಿಶಾಲ ವೇದಿಕೆಯನ್ನು ಅತ್ಯಂತ ಸುಂದರವಾಗಿ ಸಜ್ಜುಗೊಳಿಸಲಾಗಿದೆ.ಕಾರ್ಯಕ್ರಮದ ನೇರ ಪ್ರಸಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಸುಮಾರು ೮೬ ಸಾವಿರ ಚದರ ಅಡಿಗೂ ಮಿಕ್ಕಿ ವಿಸ್ತೀರ್ಣತೆ ಹೊಂದಿರುವ ಸುಂದರ ಸಭಾಂಗಣ ನಿರ್ಮಾಣ ಮಾಡಲಾಗಿದೆ.ವಿಶಾಲ ವೇದಿಕೆಯಲ್ಲಿ ೩೬ ಮಂದಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದ್ದು, ವೇದಿಕೆಯ ಬಲಭಾಗದಲ್ಲಿ ಶ್ರೀ ಡಾ| ನಿರ್ಮಲಾನಂದನಾಥ ಸ್ವಾಮೀಜಿಯವರಿಗೆ ರಜತ ತುಲಾಭಾರ, ಎಡ ಭಾಗದಲ್ಲಿ ಭೈರವೈಕ್ಯ ಶ್ರೀಗಳ ಪ್ರತಿಮೆ, ಕಾಳಭೈರವೇಶ್ವರ ಪ್ರತಿಮೆ ಇದ್ದು, ಇಲ್ಲಿ ಗುರುವಂದನೆ ಕಾರ್ಯಕ್ರಮ ನಡೆಯಲಿದೆ.
೧೨೦೦ ಚದರ ಅಡಿ ಉದ್ದದ ಪೆಂಡಾಲ್:
ದೇವಳದ ಗದ್ದೆಯ ತುದಿಯಲ್ಲಿರುವ ಧ್ಯಾನಾರೂಢ ಶಿವನ ಪ್ರತಿಮೆಯ ಬಳಿಯಿಂದ ಹಿಡಿದು ದೇವಳದ ಬಳಿಯ ಶ್ರೀ ಅಯ್ಯಪ್ಪ ಸನ್ನಿಧಿಯ ತನಕ ಶೀಟ್ ಹಾಸು ಮತ್ತು ಪೆಂಡಾಲ್ ಅಳವಡಿಸಲಾಗಿದ್ದು, ಸುಮಾರು ೧೨೦೦ ಚದರ ಅಡಿ ಉದ್ದದಲ್ಲಿ ಸಭಾಂಗಣ ಸಿದ್ದಗೊಂಡಿದೆ.ಸುಮಾರು ೧೨೦ ಚದರ ಅಡಿ ಅಗಲ ಮತ್ತು ೪೦ ಚದರ ಅಡಿ ಉದ್ದದ ವೇದಿಕೆ ನಿರ್ಮಾಣಗೊಂಡಿದೆ.ಅಲ್ಲಿಂದ ೪೦೦ ಮೀಟರ್ ಉದ್ದಕ್ಕೂ ೩೦೦ ಮೀಟರ್ ಅಗಲದ ಶೀಟ್ ಅಳವಡಿಕೆಯ ಪೆಂಡಾಲ್, ಬಳಿಕ ದೇವಳದ ಬಳಿಯ ತನಕವೂ ಶಾಮೀಯಾನದ ಪೆಂಡಾಲ್ ಅಳವಡಿಸಲಾಗಿದೆ.ಪೆಂಡಾಲ್ ಪೂರ್ಣ ಧೂಳು ಬಾರದಂತೆ ನೆಲಕ್ಕೆ ನೈಲಾನ್ ಶೇಡ್ ನೆಟ್‌ನ ಹೊದಿಕೆ ಹಾಕಲಾಗಿದೆ.
ಸಭಾಂಗಣದ ತುಂಬ ಶ್ರೀಗಳ ಚರಿತ್ರೆಯ ಚಿತ್ರ: ಸಭಾಂಗಣದ ಎಲ್ಲಾ ಕಡೆ ಶ್ರೀಗಳ ಚರಿತ್ರೆಯುಳ್ಳ ಚಿತ್ರವನ್ನು, ಅವರು ಪುತ್ತೂರಿಗೆ ಭೇಟಿ ನೀಡಿದ್ದ ಸಂದರ್ಭದ ಚಿತ್ರ ಹಾಗೂ ಅವರ ಪೂರ್ವಾಶ್ರಮದ ಚಿತ್ರಗಳನ್ನು ಅಳವಡಿಸಲಾಗಿದೆ.ಭವ್ಯ ವೇದಿಕೆಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನು ಸಭಾಂಗಣದಲ್ಲಿ ಅಳವಡಿಸಿದ ೬ ಎಲ್‌ಇಡಿಯಲ್ಲಿ ಪ್ರಸಾರ ಮಾಡಲಾಗುತ್ತದೆ.ಸಭಾಂಗಣದ ಮುಂದಿನ ಭಾಗದಲ್ಲಿ ವಿಶೇಷ ಗಣ್ಯರಿಗೆ, ಹಿಂದೆ ಸಾರ್ವಜನಿಕರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.ಒಟ್ಟು ೧೪೦ಕ್ಕೂ ಮಿಕ್ಕಿ ಸೀಲಿಂಗ್ ಮತ್ತು ವಾಲ್ ಫ್ಯಾನ್ ಅಳವಡಿಸಲಾಗಿದೆ.
ಬ್ರಹ್ಮಕಲಶೋತ್ಸವಕ್ಕೆ ನಿರ್ಮಾಣಗೊಂಡ ಪಾಕಶಾಲೆಯ ಸ್ಥಳದಲ್ಲೇ ಪಾಕಶಾಲೆ:
೨೦೧೩ರಲ್ಲಿ ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ನಿರ್ಮಿಸಲಾದ ಪಾಕಶಾಲೆ ಸ್ಥಳದಲ್ಲೇ ಜಯಂತ್ಯೋತ್ಸವ ಸಂಸ್ಮರಣಾ ಕಾರ್ಯಕ್ರಮದ ಪಾಕಶಾಲೆಯೂ ನಿರ್ಮಾಣಗೊಂಡಿರುವುದು ವಿಶೇಷ.
ಸುದ್ದಿ ಚಾನೆಲ್‌ನಲ್ಲಿ ನೇರ ಪ್ರಸಾರ
ಸಂಪೂರ್ಣ ಕಾರ್ಯಕ್ರಮ ಸುದ್ದಿ ನ್ಯೂಸ್ ಪುತ್ತೂರು ಯು ಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರವಾಗಲಿದೆ.
ಬೆಳಿಗ್ಗೆ ಪೆರಿಯಡ್ಕದಲ್ಲಿ ಬಿ.ಜಿ.ಎಸ್ ಶಾಲೆಯ ಶಿಲಾನ್ಯಾಸ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಶ್ರೀಗಳ ಭೇಟಿ, ಶ್ರೀ ಮಹಾಲಿಂಗೇಶ್ವರ ಐಟಿಐ ಕೌಶಲ್ಯ ಭವನ ಉದ್ಘಾಟನೆ ಹಾಗು ದರ್ಬೆಯಿಂದ ನಡೆಯುವ ಶೋಭಾಯಾತ್ರೆ ಸಹಿತ ಜಯಂತ್ಯೋತ್ಸವ ಸಮಾಂರಭವನ್ನು ಸುದ್ದಿ ಯುಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರ ಮಾಡಲಾಗುವುದು.
೫೦ ಸಾವಿರಕ್ಕೂ ಮಿಕ್ಕಿ ಮಂದಿಗೆ ಅನ್ನಪ್ರಸಾದ ವಿತರಣೆಗೆ ಸಿದ್ದತೆ
ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಸುಮಾರು ೫೦ ಸಾವಿರಕ್ಕೂ ಮಿಕ್ಕಿಜನರು ಸೇರುವ ನಿರೀಕ್ಷೆ ಇರುವುದರಿಂದ ಎಲ್ಲರಿಗೂ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಬೆಳಿಗ್ಗೆ ಸುಮಾರು ೨೦ ಸಾವಿರ ಮಂದಿಗೆ ಉಪಹಾರ ವ್ಯವಸ್ಥೆ ಮಾಡಲಾಗಿದೆ.ಉಪಹಾರದಲ್ಲಿ ಟೊಮೆಟೋಬಾತ್, ಅವಲಕ್ಕಿ ಚಹಾ, ಕಾಫಿ ವ್ಯವಸ್ಥೆ, ಮಧ್ಯಾಹ್ನ ಅನ್ನಪ್ರಸಾದಕ್ಕೆ ಉಪ್ಪಿನಕಾಯಿ, ಪಲ್ಯ, ಬೆಳ್ತಿಗೆ, ಕುಚ್ಚಲಕ್ಕಿ ಅನ್ನ, ಸಾರು, ಸಾಂಬಾರು, ಪಾಯಸ, ಮಜ್ಜಿಗೆ ವ್ಯವಸ್ಥೆ ಮಾಡಲಾಗಿದೆ.ಸುಮಾರು ೧೪ ಕೌಂಟರ್‌ನಲ್ಲಿ ಅನ್ನಪ್ರಸಾದ ವಿತರಣೆ ನಡೆಯಲಿದೆ.ಇದಕ್ಕಾಗಿ ಸಾವಿರಾರು ಸ್ವಯಂ ಸೇವಕರು ಸಿದ್ದರಾಗಿದ್ದಾರೆ.ಮಧ್ಯಾಹ್ನ ಸುಮಾರು ೧೨.೩೦ಕ್ಕೆ ಮೊದಲ ಎರಡು ಕೌಂಟರ್‌ನಲ್ಲಿ ಅನ್ನಪ್ರಸಾದ ವಿತರಣೆ ಆರಂಭಗೊಳ್ಳುತ್ತದೆ. ಶ್ರೀಗಳ ಪ್ರಧಾನ ಅಶೀವರ್ಚನ ಬಳಿಕ ಎಲ್ಲಾ ಕೌಂಟರ್‌ನಲ್ಲಿ ಅನ್ನಪ್ರಸಾದ ವಿತರಣೆ ನಡೆಯಲಿದೆ