ಮಂಗಳೂರಿನಲ್ಲಿ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮ: ಸಾವಿರಾರು ಮಂದಿಯ ಸಮ್ಮುಖದಲ್ಲಿ ಕೋಡಿಂಬಾಡಿ ಅಶೋಕ್ ರೈ ಕಾಂಗ್ರೆಸ್ ಸೇರ್ಪಡೆ

0

 

  • ಪುತ್ತೂರಿನಿಂದ ಮಂಗಳೂರಿಗೆ ನೂರಕ್ಕೂ ಅಧಿಕ ವಾಹನಗಳ ಮೆರವಣಿಗೆ
  • ಹಷೋದ್ಘಾರ, ಕರತಾಡನದೊಂದಿಗೆ ‘ಕೈ’ ಹಿಡಿದ ಬಿಜೆಪಿ ನಾಯಕ

ಪುತ್ತೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಜ.22ರಂದು ಸಂಜೆ ಮಂಗಳೂರು ಲಾಲ್ ಬಾಗ್ ನಲ್ಲಿರುವ ಕರಾವಳಿ ಉತ್ಸವ ಮೈದಾನದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿಯ ಸದಸ್ಯರಾಗಿದ್ದ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ ಕಾಂಗ್ರೆಸ್ ಸೇರ್ಪಡೆಯಾದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕರ್ನಾಟಕ ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಮಾಜಿ ಅಧ್ಯಕ್ಷರಾಗಿರುವ ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಕೇಂದ್ರದ ಮಾಜಿ ಸಚಿವ ಬಿ‌. ಜನಾರ್ದನ ಪೂಜಾರಿ, ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕರಾಗಿರುವ ಮಂಗಳೂರು ಶಾಸಕ ಯು.ಟಿ.ಖಾದರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾಗಿರುವ ರಾಜ್ಯಸಭಾ ಮಾಜಿ ಸದಸ್ಯ ಬಿ.ಕೆ. ಹರಿಪ್ರಸಾದ್, ಮಾಜಿ ರಾಜ್ಯಸಭಾ ಸದಸ್ಯ ಇಬ್ರಾಹಿಂ,ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸದಸ್ಯ ಐವನ್ ಡಿ’ಸೋಜಾ, ಮಾಜಿ ಶಾಸಕ ಜೆ.ಆರ್.ಲೋಬೋ ಸೇರಿದಂತೆ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಉಪಸ್ಥಿತಿಯಲ್ಲಿ ಸಾವಿರಾರು ಮಂದಿಯ ಹರ್ಷೋದ್ಘಾರ, ಕರತಾಡನದೊಂದಿಗೆ ಅಶೋಕ್ ಕುಮಾರ್ ರೈ ಕಾಂಗ್ರೆಸ್ ಕೈ ಹಿಡಿದರು.
ದರ್ಬೆಯಲ್ಲಿರುವ ಅಶೋಕ್ ಕುಮಾರ್ ರೈ ಸಾರಥ್ಯದ ರೈ ಎಸ್ಟೇಟ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಕಛೇರಿ ಬಳಿ ಮಧ್ಯಾಹ್ನ ವಾಹನ ಮೆರವಣಿಗೆಗೆ ಚಾಲನೆ‌ ನೀಡಲಾಯಿತು. ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಪಿ. ಸಂಕಪ್ಪ ಶೆಟ್ಟಿ ಮತ್ತು ಹಿರಿಯ ಮುಂದಾಳು ಹೆಗ್ಡೆಹಿತ್ಲು ಸೀತಾರಾಮ ಶೆಟ್ಟಿಯವರು ಧ್ವಜ ಹಸ್ತಾಂತರಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರೂ, ಬಿಜೆಪಿಯ ಜಿಲ್ಲಾ ಕಾರ್ಯಕಾರಿಣಿ ಸದಸ್ಯರೂ ಆಗಿದ್ದ ಹಲವು ದೇವಸ್ಥಾನ ಮತ್ತು ದೈವಸ್ಥಾನಗಳ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವದ ರೂವಾರಿ ಅಶೋಕ್ ಕುಮಾರ್ ರೈ, ಸುಮಾ ಅಶೋಕ್ ರೈ, ನಳಿನಿ ಪಿ. ಶೆಟ್ಟಿ ಕಲ್ಲಾರೆ, ತಾಲೂಕು ಇಂಟಕ್ ಅಧ್ಯಕ್ಷರಾದ ಕೋಡಿಂಬಾಡಿ ಗ್ರಾ.ಪಂ. ಸದಸ್ಯ ಜಯಪ್ರಕಾಶ್ ಬದಿನಾರು, ಉದ್ಯಮಿಗಳಾದ ಸುದೇಶ್ ಶೆಟ್ಟಿ ಶಾಂತಿನಗರ, ನಿಹಾಲ್ ಶೆಟ್ಟಿ ಕಲ್ಲಾರೆ, ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಎಂ. ನಿರಂಜನ ರೈ ಮಠಂತಬೆಟ್ಟು, ನೆಕ್ಕಿಲಾಡಿಯ ನಮ್ಮೂರು ಸಂಸ್ಥೆಯ ಅಧ್ಯಕ್ಷ ಎ.ಜತೀಂದ್ರ ಶೆಟ್ಟಿ ಅಲಿಮಾರ, ಯೋಗೀಶ್ ಸಾಮಾನಿ ಸಂಪಿಗೆದಡಿ ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬಳಿಕ ಅಶೋಕ್ ಕುಮಾರ್ ರೈ ಅಭಿಮಾನಿ ಬಳಗದವರ ನೇತೃತ್ವದಲ್ಲಿ ಬಸ್, ಕಾರು ಸಹಿತ 100ಕ್ಕೂ ಅಧಿಕ ವಾಹನಗಳಲ್ಲಿ ಮೆರವಣಿಗೆ ನಡೆಯಿತು. ಅಶೋಕ್ ಕುಮಾರ್ ರೈ ಅಭಿಮಾನಿ ಬಳಗದ ಸ್ಟಿಕ್ಕರ್ ಅಂಟಿಸಿದ್ದ ವಾಹನಗಳಲ್ಲಿ ಪುತ್ತೂರಿನಿಂದ ಮಂಗಳೂರು ತನಕವೂ ಅಶೋಕ್ ರೈ ಪರ ಘೋಷಣೆಯೊಂದಿಗೆ ಮೆರವಣಿಗೆ ಸಾಗಿತು. ಕರಾವಳಿ ಉತ್ಸವ ಮೈದಾನದ ಮುಂಭಾಗದಲ್ಲಿ ಅಶೋಕ್ ಕುಮಾರ್ ರೈ ಅಭಿಮಾನಿ ಬಳಗದ ಮಹಿಳೆಯರ ಸಹಿತ ನೂರಾರು ಮಂದಿ ಒಗ್ಗೂಡಿ ಜಯಘೋಷ ಮೊಳಗಿಸಿದರು. ನಂತರ ಜೈಕಾರ, ಹರ್ಷೋದ್ಘಾರ, ಚಪ್ಪಾಳೆಯೊಂದಿಗೆ ಅಶೋಕ್ ರೈಯವರನ್ನು ಅವರ ಅಭಿಮಾನಿ ಬಳಗದವರು ಸಭೆಗೆ ಕರೆ ತಂದರು. ಈ ವೇಳೆ ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಅಶೋಕ್ ರೈಯವರ ಶಕ್ತಿ ಪ್ರದರ್ಶನ ಮಾಡಿದಂತಾಗಿತ್ತು. ನಂತರ ಸಭಾ ಕಾರ್ಯಕ್ರಮದಲ್ಲಿ ರಾಜ್ಯ, ರಾಷ್ಟ್ರ ನಾಯಕರ ಉಪಸ್ಥಿತಿಯಲ್ಲಿ ಅಶೋಕ್ ಕುಮಾರ್ ರೈಯವರನ್ನು ವೇದಿಕೆಗೆ ಕರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು. ಈ ವೇಳೆ ಅಶೋಕ್ ರೈ ಅಭಿಮಾನಿ ಬಳಗದವರ ಹರ್ಷೋದ್ಘಾರ ಮತ್ತೆ ಮೊಳಗಿತು.‌ ಕಾಂಗ್ರೆಸ್ ಸಮಾವೇಶದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಸಚಿವರಾದ ಬಿ.ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಸಹಿತ ಹಲವು ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮ್ಮದ್ ಆಲಿ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ ಕೆ.ಬಿ. ನೇತೃತ್ವದಲ್ಲಿ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪುತ್ತೂರು ತಾ.ಪಂ.ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ನೇತೃತ್ವದ ತಂಡ ಸಭಾ ಕಾರ್ಯಕ್ರಮ ನಿರ್ವಹಿಸಿತ್ತು.

ತಾ.ಪಂ.ಮಾಜಿ ಅಧ್ಯಕ್ಷ ಪಕೀರರವರ ಪತ್ನಿ ಧರಣಿ ಕಾಂಗ್ರೆಸ್ ಸೇರ್ಪಡೆ

ಬಿಜೆಪಿಯ ಪ್ರಭಾವಿ ನಾಯಕರೂ ಆಗಿದ್ದ ಪುತ್ತೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರೂ, ಜಿ.ಪಂ.ಮಾಜಿ ಸದಸ್ಯರೂ ಆಗಿರುವ ಪಕೀರ ಅವರ ಪತ್ನಿ ಧರಣಿ ಅವರೂ ಅಶೋಕ್ ರೈ ಜತೆ ಕಾಂಗ್ರೆಸ್ ಸೇರ್ಪಡೆಯಾದರು.‌

LEAVE A REPLY

Please enter your comment!
Please enter your name here