ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಪಟ್ಟಾಭಿಷೇಕ ದಶಮಾನೋತ್ಸವ – ರಜತ ತುಲಾಭಾರ-ಗುರುವಂದನೆ – ಗ್ರಂಥ ಬಿಡುಗಡೆ
ದೀಪ ಪ್ರಜ್ವಲಿಸಿ, ಹಿಂಗಾರ ಅರಳಿಸಿ ಉದ್ಘಾಟನೆ
ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಪ್ರಜ್ವಲಿಸಿ ಬಳಿಕ ಹಿಂಗಾರ ಅರಳಿಸುವುದರ ಮೂಲಕ ಮಾಡಲಾಯಿತು. ಶ್ರೀಗಳು ಮತ್ತು ಗಣ್ಯರು ಹಿಂಗಾರಕ್ಕೆ ಹಾಲು ಹೂ ಸಮರ್ಪಿಸಿದರು. ಆಸನ ಸ್ವೀಕಾರಕ್ಕೆ ಮೊದಲು ಶ್ರೀಗಳನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಹಸಿರುವಾಣಿ ಜೋಡಿಸಿಟ್ಟಿದ್ದಲ್ಲಿಗೆ ಬಂದ ಶ್ರೀಗಳು ಮತ್ತು ಗಣ್ಯರು ಬಾಲಗಂಗಾಧರನಾಥ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ, ದೀಪದಾರತಿ ಮಾಡಿದರು. ಬಳಿಕ ವೇದಿಕೆಯಲ್ಲಿ ಪ್ರತ್ಯೇಕ ಜಾಗದಲ್ಲಿ ಚೌಡೇಶ್ವರಿ ದೇವಿ ಮತ್ತು ಬಾಲಗಂಗಾಧರನಾಥ ಶ್ರೀಗಳ ಪುತ್ಹಳಿ ಇಡಲಾಗಿತ್ತು. ಅಲ್ಲಿ ಶ್ರೀಗಳು ಮತ್ತು ಗಣ್ಯರು ಪುಷ್ಪಾರ್ಚನೆ, ದೀಪದಾರತಿ ಮಾಡಿ ಆಸನ ಸ್ವೀಕರಿಸಿದರು.
ಪುತ್ತೂರು: ಕರ್ಮ, ಭಕ್ತಿ ಮತ್ತು ಜ್ಞಾನವಿದ್ದಲ್ಲಿ ವ್ಯಕ್ತಿಯಾದವನು ಶಕ್ತಿಯಾಗಿ ಪರಿಣಮಿಸುತ್ತಾನೆ. ಜೀವನದ ಈ ತ್ರಿವಳಿ ಮಾರ್ಗಗಳನ್ನು ಅನುಸರಿಸಲು ಹೇಳಿ ಜೀವನ ಸಾಕ್ಷಾತ್ಕಾರ ಮಾಡಿಸಿದವರು ಭೈರವೈಕ್ಯ ಜಗದ್ಗುರು ಶ್ರೀ ಬಾಲಗಂಗಾಧರನಾಥ ಶ್ರೀಗಳು. ಅಂತಹ ನಮ್ಮ ಗುರುಗಳನ್ನು ಸ್ಮರಿಸುವುದು ನಮ್ಮ ಕಾರ್ಯ ಎಂದು ಶ್ರೀ ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ನುಡಿದರು.
ಜಯಂತ್ಯೋತ್ಸವ ಸಂಸ್ಮರಣಾ ಜಿಲ್ಲಾ ಸಮಿತಿ ಪುತ್ತೂರು ಇದರ ವತಿಯಿಂದ ಜ. 22 ರಂದು ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ಚಾರಿತ್ರಿಕವಾಗಿ ಹಮ್ಮಿಕೊಳ್ಳಲಾದ ಆದಿಚುಂಚನಗಿರಿ ಪೀಠದ ಭೈರವೈಕ್ಯ ಜಗದ್ಗುರು ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78 ನೇ ಜಯಂತ್ಯೋತ್ಸವ ಸಂಸ್ಮರಣೆ, ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಪಟ್ಟಾಭಿಷೇಕದ ದಶಮಾನೋತ್ಸವ, ಗುರುವಂದನೆ, ರಜತ ತುಲಾಭಾರದ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ಮಕ್ಕಳಿಗೆ ಯಾವ ಶಿಕ್ಷಣ ನೀಡಬೇಕೆಂಬ ದೂರದೃಷ್ಟಿಯ ಕೊರತೆಯಿದ್ದ ಕಾಲದಲ್ಲಿ ಅನೇಕಾನೇಕ ಮಕ್ಕಳಿಗೆ ವಿಷನ್ ತೋರಿಸಿಕೊಟ್ಟವರು ಪೂಜ್ಯ ಬಾಲಗಂಗಾಧರನಾಥ ಶ್ರೀಗಳು. ಇಂದು ಮಠದ ಅಧೀನದಲ್ಲಿ 1 ಲಕ್ಷದ 52 ಸಾವಿರ ಮಂದಿ ವಸತಿಯೊಂದಿಗೆ ಅನ್ನ ಶಿಕ್ಷಣ ದಾಹ ಇಂಗಿಸಿಕೊಳ್ಳುತ್ತಿದ್ದಾರೆ. ಸಾವಿರಾರು ಮಂದಿ ಉತ್ತಮ ಪದವಿ ಪಡೆದು ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳಾಗಿ ಗುರುತಿಸಲ್ಪಡುತ್ತಿದ್ದಾರೆ’ ಎಂದ ಅವರು ದಕ್ಷಿಣ ಕನ್ನಡಕ್ಕೆ ವಿಶೇಷ ಸ್ಥಾನಮಾನವಿದೆ. ಪೂಜ್ಯ ಗುರುಗಳ 3ನೇ ಜನ್ಮ ದಿನೋತ್ಸವವನ್ನು ಆಚರಿಸಿದ್ದೆವೆ. ಕರ್ಮದ ನಿಷ್ಠೆಯನ್ನು ಕಲಿಸಿಕೊಟ್ಟವರು ಗುರುಗಳು. ಸೋಮಾರಿತನ ಹೋಗದೇ ಇದ್ದರೆ ವಿದ್ಯೆ ಶ್ರೀಮಂತಿಕೆ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಅಂತಹ ಜಾಢ್ಯವನ್ನು ನಿವಾರಿಸಿ ಸದಾ ಚೈತನ್ಯ ಬರಲು ಕರ್ಮ ನಿಷ್ಠೆ ಹೇಳಿಕೊಟ್ಟವರು ಗುರುಗಳು. ಇನ್ನೊಂದೆಡೆ ಭಕ್ತಿ ಭಾವ ವನ್ನೂ ಹೇಳಿಕೊಟ್ಟು, ಜ್ಞಾನ ದೀಕ್ಷೆ ಕರುಣಿಸಿದ್ದಾರೆ. ನಮ್ಮೊಳಗಿನ ಶಕ್ತಿಯನ್ನು ಯಾವತ್ತೂ ಮರೆಯದಂತೆ ಜೀವನ ತಿಳುವಳಿಕೆ ಮೂಡಿಸಿದ್ದಾರೆ. ಅಂತಹ ಕರ್ಮ, ಭಕ್ತಿ ಮತ್ತು ಜ್ಞಾನವನ್ನು ಕರುಣಿಸಿದ ಶ್ರೀಗಳ ಸ್ಮರಣೆ ಸದಾ ಮಾಡೋಣ. ಈ ಭಾಗದಲ್ಲಿ ನಮ್ಮ ಗುರುಗಳಿಗೆ, ಮಠಕ್ಕೆ ಅತೀವ ಗೌರವ ದೊರೆಯುತ್ತಿರುವುದು ಸಂತಸ ತಂದಿದೆ’ ಎಂದರು. ಅನ್ಯಾನ್ಯ ಕ್ಷೇತ್ರಗಳ ಗಣ್ಯರು, ವೈದ್ಯರು, ಸಂತರನ್ನು, ಸಮಾಜ ಸೇವಕರನ್ನು ಸೃಷ್ಟಿಸಿರುವ ಗುರುಗಳು ಪ್ರತಿಯೊಬ್ಬ ವ್ಯಕ್ತಿಯೂ ಶಕ್ತಿಯಾಗಿ ಬೆಳೆಯಬೇಕೆಂದು ಉತ್ತಮ ವ್ಯವಸ್ಥೆ, ಅಡಿಪಾಯ ಮಾಡಿಕೊಟ್ಟಿದ್ದಾರೆ. ಅವರ ಆದರ್ಶ ಎಂಬುದು ಒಂದು ಬೆಳಕು. ಆದರ್ಶ ನಮ್ಮ ಕಣ್ಣಮುಂದೆ ಗೋಚರಿಸುವ ನಿಟ್ಟಿನಲ್ಲಿ ಕೆಂಪೇಗೌಡರ ಪ್ರತಿಮೆಯನ್ನು ಅನಾವರಣಗೊಳಿಸುವಲ್ಲಿ ಅಶ್ವಥ್ ನಾರಾಯಣ ರ ಕೊಡುಗೆಯನ್ನು ಶ್ರೀಗಳು ಶ್ಲಾಸಿದರು. ಗುರುಗಳ ಈ ಹಿಂದಿನ ಎರಡು ಜಯಂತಿ ಆಚರಣೆಯಲ್ಲೂ ಡಿ.ವಿ. ಸದಾನಂದ ಗೌಡರ ಕೊಡುಗೆಯನ್ನು ಶ್ರೀಗಳು ಅಭಿನಂದಿಸಿದರು. ಶ್ರಮಿಸಿದ ಪ್ರತಿಯೊಬ್ಬರನ್ನೂ ಸ್ಮರಿಸಿದ ಶ್ರೀಗಳು ಗುರುಗಳ ಆಶೀರ್ವಾದ ಅವರೆಲ್ಲರ ಮೇಲಿರಲಿ ಎಂದರು. ಅಚ್ಚುಕಟ್ಟಿನ ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದ ಪ್ರತಿಯೋರ್ವರಿಗೂ ಕಾಲಭೈರವೇಶ್ವರನ ಅನುಗ್ರಹ ಪ್ರಾಪ್ತಿಯಾಗಲಿ ಎಂದರು.
ಬದುಕಿಗೆ ಅರ್ಥಪೂರ್ಣ ಮೌಲ್ಯ ಕೊಟ್ಟವರು ಗುರುಗಳು – ಡಾ. ಧರ್ಮಪಾಲನಾಥ ಶ್ರೀ:
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿಯವರು ಆಶೀರ್ವಚನ ನೀಡಿ ‘ಪೂಜ್ಯ ಬಾಲಗಂಗಾಧರನಾಥ ಶ್ರೀಗಳ ಗ್ರಂಥ ಬರೆಯಲು ಪ್ರೇರಣೆ ಮತ್ತು ಶಕ್ತಿ ನೀಡಿದ್ದು ಪೂಜ್ಯ ಗುರುಗಳು, ಭೈರವೇಶ್ವರ ಮತ್ತು ಚೌಡೇಶ್ವರಿ ದೇವಿ. 3 ವರ್ಷದ ಮಗುವಾಗಿದ್ದಾಗ `ಸ್ವಾಮೀಜಿ’ ಎಂಬ ಪದ ಹೇಳಲೂ ಸಾಧ್ಯವಾಗದ ಪ್ರಾಯದಲ್ಲಿ ಮಠಕ್ಕೆ ಕರೆತಂದು ಅನ್ನ, ವಿದ್ಯೆ, ಬುದ್ದಿ ನೀಡಿ ಇವತ್ತು ಪಿಎಚ್‌ಡಿ ಮಾಡುವಲ್ಲಿಯವರೆಗೆ ಬೆಳೆಸಿದವರು ನಮ್ಮ ಪೂಜ್ಯ ಗುರುಗಳು. ಬದುಕಿಗೆ ಅರ್ಥಪೂರ್ಣ ಮೌಲ್ಯವನ್ನು ಕೊಟ್ಟ ಗುರುಗಳನ್ನು ಎಂದಿಗೂ ಮರೆಯಲಾರೆ. ನನ್ನಂತಹ ಶೂನ್ಯದಲ್ಲಿದ್ದ ಅನೇಕರನ್ನು ತಂದು ಮಠದ ವಟವೃಕ್ಷದ ಕೆಳಗಡೆ ನಿಲ್ಲಿಸಿ ಬೆಳೆಸಿದವರು ಪೂಜ್ಯ ಗುರುಗಳು. ಅವರ ಕೊಡುಗೆಗಳನ್ನು ಸ್ಮರಿಸತಕ್ಕಂತಹ ಕೃತಿ ಬರೆಯುವ ಸಾಧನೆ ಎಲ್ಲಾ ಶಾಖಾ ಮಠಗಳ ಯತಿಶ್ರೇಷ್ಠರಿಗೆ ಸಲ್ಲಬೇಕು’ ಎಂದರು. ಪ್ರಾಚೀನ ಪರಂಪರೆಯ ಮಠ ಅನ್ನ, ಅಕ್ಷರ, ಆರೋಗ್ಯ ದಾನ ಇತ್ಯಾದಿಗಳಲ್ಲಿ ಸಮಾಜಕ್ಕೆ ಬಹುಮುಖದ ಕೊಡುಗೆ ನೀಡಿದೆ. ಮಮಕಾರ, ಸಹಕಾರ ಜವಾಬ್ದಾರಿ ಹೆಚ್ಚಿಸಿದೆ. ಅವಿಸ್ಮರಣೀಯ ಕಾರ್ಯಕ್ರಮ ಆಯೋಜನೆಗೆ ಆತಿಥ್ಯ ಸ್ವೀಕರಿಸಿರುವ ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘಕ್ಕೆ ನಮ್ಮ ವಿಶೇಷ ಅಭಿನಂದನೆ’ ಎಂದರು.
ನಾಡು ಕಟ್ಟಿ, ಬೆಳಗಿಸಿದವರು ಒಕ್ಕಲಿಗರು – ಡಿ.ವಿ. ಸದಾನಂದ ಗೌಡ:
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ, ಕೇಂದ್ರ ಮಾಜಿ ಸಚಿವ, ಜಯಂತ್ಯೋತ್ಸವ ಸಂಸ್ಮರಣಾ ಸಮಿತಿಯ ಗೌರವಾಧ್ಯಕ್ಷ, ಸಂಸದ ಡಿ.ವಿ. ಸದಾನಂದ ಗೌಡ ರವರು ಮಾತನಾಡಿ ‘ಬಾಲಗಂಗಾಧರನಾಥ ಸ್ವಾಮೀಜಿಯವರ ಪಾದಸ್ಪರ್ಶ ಈ ಭಾಗದಲ್ಲಿ ಒಕ್ಕಲಿಗರ ಶಕ್ತಿಯಾಗಿ ಪರಿಣಮಿಸಿತು. ನಮ್ಮನ್ನು ಅಳೆದು ನೋಡಬೇಕಾದ ಕಾಲದಲ್ಲಿರುವ ನಾವುಗಳು ಅದಕ್ಕಾಗಿ ಪೂಜ್ಯ ಶ್ರೀಗಳ ರಜತ ತುಲಾಭಾರ ಸೇವೆ ಮಾಡುತ್ತಿದ್ದೆವೆ. ಇಂದು ಒಂದು ಸಮಾಜದ ಮಠ ಇಡೀ ಸಮಾಜದ ಮಠವಾಗಿ ಬೆಳೆಯುತ್ತಿದೆ. ಪೂಜ್ಯ ಬಾಲಗಂಗಾಧರನಾಥ ಶ್ರೀಗಳ ಸಂದೇಶಗಳು ಶಾಶ್ವತವಾಗಿ ನೆಲೆಯೂರಿವೆ’ ಎಂದು ಹೇಳಿದರು. ಒಕ್ಕಲಿಗ ಸಮಾಜ ಸ್ವಾತಂತ್ರ್ಯಪೂರ್ವದಲ್ಲಿಯೇ ಸಮಾಜಕ್ಕೆ ಬಲಿದಾನಗೈದಿದೆ. ಗುಡ್ಡೆಮನೆ ಅಪ್ಪಯ್ಯ ಗೌಡರು, ಕೆದಂಬಾಡಿ ರಾಮಯ್ಯ ಗೌಡರ ಬಲಿದಾನ ನಮಗೆ ಸಂದೇಶ ಮತ್ತು ಪ್ರೇರಣಾ ಶಕ್ತಿ’ ಎಂದರು. ಈ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ಒಕ್ಕಲಿಗ ಸೇನಾನಿಗಳನ್ನು ನಾವು ಕಾಣುತ್ತೇವೆ. ಬೆಂಗಳೂರು ಕಟ್ಟಿದ ನಾಡಪ್ರಭು ಕೆಂಪೇಗೌಡ, ರಾಷ್ಟ್ರಕವಿ ಕುವೆಂಪು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಂತಹವರು ಈ ಸಮಾಜದಿಂದ ಬಂದು ವಿಶ್ವಮಾನ್ಯರಾದವರು ಎಂದು ಹೇಳಿದ ಅವರು ನನಗೆ ಈ ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರದ ಸಚಿವನಾಗಿ ಜನರ ಸೇವೆ ಮಾಡಲು ಪೂಜ್ಯ ಗುರುಗಳ ಅನುಗ್ರಹ ಪ್ರೇರಣೆಯಾಗಿದೆ. ಮೈಕ್ರೋ ಮ್ಯಾನೆಜ್‌ಮೆಂಟ್ ಮಾಡುತ್ತಿರುವ ಸಚಿವರಾದ ಡಾ. ಅಶ್ವಥ್ ನಾರಾಯಣ್‌ರವರು ನಮ್ಮ ಸಮಾಜದವರು ಎಂದು ಹೇಳಲು ಹೆಮ್ಮೆಯಿದೆ. ನಮ್ಮ ಸಂಘಟನೆ ಸಂಘರ್ಷಕ್ಕಲ್ಲ. ಗೌಡ ಸಮಾಜದಲ್ಲಿರುವ ಸಂಪ್ರದಾಯ, ಪದ್ದತಿ ಆಚರಣೆಗಳು ಬೇರೆ ಸಮಾಜದಲ್ಲಿಲ್ಲ. ಸಮುದಾಯದ ಭಾವನೆ ನಮ್ಮೆಲ್ಲರನ್ನು ಎತ್ತರಕ್ಕೆ ಕೊಂಡೊಯ್ದಿದೆ. ಮತ್ತೊಮ್ಮೆ ಪುತ್ತೂರಿನಲ್ಲಿ ಕಾರ್ಯಕ್ರಮ ಸಂಘಟಿಸಿ ಪೂಜ್ಯ ಗುರುಗಳ ಪಾದಸ್ಪರ್ಶ ಇಲ್ಲಿಗೆ ಆಗುವಂತೆ ಮಾಡಿದ್ದೆವೆ. ಇದು ಖಂಡಿತಾ ಪುತ್ತೂರು ಜಿಲ್ಲೆಯಾಗಲು ಪ್ರೇರಕಶಕ್ತಿಯಾಗಿ ಪರಿಣಮಿಸಲಿದೆ’ ಎಂದರು.
ಒಕ್ಕಲಿಗರ ಜಾತಿ ವಿಶ್ವ ಜಾತಿ – ಡಿ.ಕೆ. ಶಿವಕುಮಾರ್:
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ರವರು ಮಾತನಾಡಿ `ಭೂಮಿಯನ್ನು ಹಸನಾಗಿಸಿ ಸಮಾಜಕ್ಕೆ ಅನ್ನದಾತನಾಗುವ ಭಾಗ್ಯ ಸಿಕ್ಕಿರುವುದು ವಿಶೇಷ. ಒಕ್ಕಲಿಗರ ಜಾತಿ ವಿಶ್ವ ಜಾತಿ. ಒಂದು ಭಾಗಕ್ಕೆ ಸೀಮಿತವಾದುದಲ್ಲ. ಈ ಹೆಸರು ಯಾರೂ ಕೊಟ್ಟದ್ದಲ್ಲ. ನಮ್ಮ ಧರ್ಮ, ನೀತಿ, ಕೆಲಸ, ನಿಷ್ಠೆಯಿಂದಾಗಿ ಅನಾದಿಕಾಲದಿಂದ ಒಕ್ಕಲುತನದ ಜವಾಬ್ದಾರಿ ನಮಗೆ ಕೊಟ್ಟಿದ್ದಾರೆ. ಕರ್ಣನ ದಾನಶೂರತ್ವ, ಅರ್ಜುನನ ಗುರಿ, ವಿದುರನ ನೀತಿ, ಭೀಮನ ಬಲ, ಕೃಷ್ಣನ ತಂತ್ರ ಇದ್ದಾಗ ಯಶಸ್ಸು ಕಾಣಲು ಸಾಧ್ಯ. ನಮ್ಮ ಸಮಾಜವೂ ಈ ನೀತಿಯನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದರು. ಇಲ್ಲಿನ ಶಿಸ್ತು, ಬದ್ದತೆ, ಹಸಿವು, ಜ್ಞಾನ ನೋಡಿದಾಗ ನನಗೆ ಸಂತೋಷವಾಗುತ್ತಿದೆ. ಈ ಕಾರ್ಯಕ್ರಮ, ಮಹಾಲಿಂಗ ದೇವರ ದರ್ಶನ, ಚೌಡೇಶ್ವರಿ ದೇವಿಯ ದರ್ಶನ, ಆಮೇಲೆ ನಿಮ್ಮೆಲ್ಲರನ್ನು ನೋಡುವ ಭಾಗ್ಯ ನನಗೆ ಸಿಕ್ಕಿತಲ್ಲ’ ಎಂದು ಹೇಳಿ `ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯಾ… ದಾಸರ ಉಕ್ತಿ ಹೇಳಿದರು.
ಶ್ರೀಗಳ ಕಾರ್ಯಕ್ರಮ, ಸಮಾಜದ ಕಾರ್ಯಕ್ರಮ, ಈ ಸಮಾಜದಲ್ಲಿ ಹುಟ್ಟಿದ್ದೆನೆ ಎನ್ನುವ ಕಾರಣಕ್ಕೆ ಈ ಕಾರ್ಯಕ್ರಮಕ್ಕೆ ಡಿವಿ ಸದಾನಂದ ಗೌಡರು ಮಾಡಿದ ಆಹ್ವಾನವನ್ನು ತಿರಸ್ಕರಿಸಲು ಸಾಧ್ಯವಾಗದೆ ಉಡುಪಿಯಲ್ಲಿ ನಡೆಯುತ್ತಿರುವ ಪಕ್ಷದ ಕಾರ್ಯಕ್ರಮದಿಂದ ಬಂದಿದ್ದೆನೆ’ ಎಂದು ಹೇಳಿದ ಡಿಕೆಶಿಯವರು ನಿಮ್ಮ ಜೊತೆಯಲ್ಲಿದ್ದೆನೆ’, ನಿಮ್ಮ ಕಷ್ಟ ಸುಖದಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿಕೊಳ್ಳಲು ಇಲ್ಲಿಗೆ ಬಂದಿದ್ದೆನೆ. ಸ್ತ್ರೀಯರಿಗೆ ನಮ್ಮ ಹಿಂದು ಸಮಾಜದಲ್ಲಿ ಗೌರವವಿದೆ. ವಿಶೇಷ ಸ್ಥಾನವಿದೆ. ಅದು ಈ ಕಾರ್ಯಕ್ರಮದಲ್ಲಿಯೂ ಪ್ರಕಟಗೊಂಡಿದೆ. ಹೆಣ್ಣು ಕುಟುಂಬದ ಕಣ್ಣು ಎಂದರು.
ಶೇ. 12 ಮೀಸಲಾತಿ ಕಲ್ಪಿಸಬೇಕು:
ಒಕ್ಕಲಿಗ ಸಮಾಜಕ್ಕೆ ಶೇ. 12 ಮೀಸಲಾತಿ ಕೊಡುವ ನಿಟ್ಟಿನಲ್ಲಿ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆರ್. ಅಶೋಕ್ ರವರು ಮಾತು ಕೊಟ್ಟು ಹೋಗಿದ್ದಾರೆ. ನುಡಿದಂತೆ ನಡೆಯಬೇಕಾದದ್ದು ಈ ನಾಡಿನ ಗುಣ’ ಎಂದು ಡಿಕೆಶಿ ಹೇಳಿದರು. ಇದು ರಾಜಕಾರಣದ ಸಭೆಯಲ್ಲ, ಸಮಾಜದ ಅನ್ನದಾತರ ಸಭೆ. ಸಮಾಜಕ್ಕೆ ದೊಡ್ಡ ಶಕ್ತಿಯಾಗಿ ಬರಲಿ. ನಿಮ್ಮ ಧ್ವನಿಯಾಗಿ ಸೇವೆ ಮಾಡಲು ಡಿಕೆ ಶಿವಕುನಾರ್ ಬದ್ದನಾಗಿದ್ದೆನೆ ಎಂದ ಅವರು ಈ ದೇಶದಲ್ಲಿ ಹುಟ್ಟಿದ ಮಹಾತ್ಮರುಗಳು ಅಧಿಕಾರ ವಹಿಸಿಕೊಂಡ ದಿವ್ಯ ಘಳಿಗೆಯಲ್ಲಿ ನಮ್ಮ ಸ್ವಾಮೀಜಿಯವರೂ ಸಮಾಜದ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಅವರಿಗೆ ನಾವೆಲ್ಲಾ ಬೆಂಬಲವಾಗಿ ನಿಲ್ಲೋಣ ಅಂದರು.
ನಮ್ಮ ಭಾಗದಲ್ಲಿಯೂ ಬಿಜಿಎಸ್ ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾಗಲಿ – ಶೋಭಾ ಕರಂದ್ಲಾಜೆ:
ಮುಖ್ಯ ಅತಿಥಿಯಾಗಿದ್ದ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆಯವರು ಮಾತನಾಡಿ ‘ಒಕ್ಕಲಿಗ ಸಮಾಜ ಜಾಗೃತ, ವಿದ್ಯಾವಂತ, ಧಾರ್ಮಿಕತೆಯೊಂದಿಗೆ ಜೋಡಣೆಯಾದ ಸಮಾಜವಾಗಿದೆ. ಆದಿಚುಂಚನಗಿರಿ ಕೇವಲ ಮಠವಾಗಿರದೆ ದೇಶದ ನಾಥಪಂಥದ ಮಠಗಳಲ್ಲಿ ಒಂದಾಗುತ್ತಿದೆ. ದೇಶದ ಇತರ ಪ್ರಭಾವಿ ಮಠಗಳೊಂದಿಗೆ ಬೆಳೆಯುತ್ತಿದೆ. ಇತರ ರಾಜ್ಯಗಳ ಪೀಠಾಧಿಪತಿಗಳೊಂದಿಗೆ ಚರ್ಚಿಸುವ, ಪ್ರಧಾನಿ ನರೇಂದ್ರ ಮೋದಿಯವರೂ ಆಹ್ವಾನಿಸುವಂತಹ ಪೀಠಗಳಲ್ಲಿ ನಮ್ಮ ಚುಂಚನಗಿರಿಯೂ ಒಂದಾಗುತ್ತಿದೆ. ಮಠ ಮಂದಿರಗಳು ಉಳಿದಿರುವುದು ಹಿಂದುತ್ವದ ಆಧಾರದಲ್ಲಿ. ದಕ್ಷಿಣ ಕನ್ನಡದ ಭಾಗದವರು ಹಿಂದುತ್ವ ಬಿಟ್ಟು ಬೇರೆಯಿಲ್ಲ. ಇತರ ಸಮಾಜದಲ್ಲಿ ಬಿದ್ದವರನ್ನು ಮೇಲಕ್ಕೆತ್ತುವ ಕಾರ್ಯ ನಮ್ಮ ಸಮಾಜ ಮಾಡುತ್ತಿದೆ. ಶಕ್ತಿಹೀನರಿಗೆ ಶಕ್ತಿ ನೀಡುವ, ಶಿಕ್ಷಣ ವಂಚಿತರಿಗೆ ಶಿಕ್ಷಣ ನೀಡಿ ವ್ಯಕ್ತಿಯನ್ನು ಸಮಾಜಕ್ಕೆ ನೀಡುವ ಕಾರ್ಯ ಮಠದಿಂದ ನಡೆಯುತ್ತಿದೆ. ಸಂಸ್ಕಾರಯುತ ಶಿಕ್ಷಣದ ಜೊತೆ ಧಾರ್ಮಿಕತೆ ಮಕ್ಕಳಲ್ಲಿ ಅಳವಡಿಸುವ ಕಾರ್ಯ ಶ್ರೀ ಮಠದಿಂದ ನಡೆಯುತ್ತಿದೆ. 5-6 ತಾಲೂಕುಗಳಲ್ಲಿಯೂ ಸಂಸ್ಕಾರಯುತ ಶಿಕ್ಷಣ ನೀಡಲು ಶೈಕ್ಷಣಿಕ ಕೇಂದ್ರಗಳನ್ನು ಸ್ಥಾಪಿಸಬೇಕೆಂಬುದು ನಮ್ಮ ಕೋರಿಕೆಯಾಗಿದೆ. ಮಠದ ಜೊತೆ ಈ ಭಾಗದ ಬಾಂಧವ್ಯ ಇನ್ನಷ್ಟು ವೃದ್ಧಿಯಾಗಲಿ’ ಎಂದು ಆಶಿಸಿದರು.
ಒಕ್ಕಲಿಗರ ಅಭಿವೃದ್ಧಿಗೆ ಸರಕಾರದಿಂದ ಪ್ರಾಮಾಣಿಕ ಪ್ರಯತ್ನ – ಡಾ. ಅಶ್ವಥ್ ನಾರಾಯಣ್:
ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್ ರವರು ಮಾತನಾಡಿ `ಪೂಜ್ಯ ಭೈರವೈಕ್ಯ ಶ್ರೀಗಳ ಅವಿರತವಾದ ಕೊಡುಗೆಯನ್ನು ಸ್ಮರಿಸುವ ಕಾರ್ಯ, ಕರ್ತವ್ಯ ಪಾಲನೆ ಪ್ರತೀ ವರ್ಷ ನಡೆಯುತ್ತಿದೆ. ಕೆದಂಬಾಡಿ ರಾಮಯ್ಯ ಗೌಡರು ನಮ್ಮ ಸ್ಪೂರ್ತಿ. ಸಾಮಾನ್ಯ ರೈತನಾಗಿ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿದ ಕುರುಂಜಿ ವೆಂಕಟ್ರಮಣ ಗೌಡರಂತವರನ್ನು ಎಷ್ಟು ಸ್ಮರಿಸಿದರೂ ಸಾಲದು. ಸಮಾಜಕ್ಕೆ ಕೊಡುವ ಅಥವಾ ದಾನ ಸಂಸ್ಕೃತಿ ಒಕ್ಕಲಿಗರ ರಕ್ತಗತವಾಗಿ ಬಂದಿದೆ. ಸ್ವಾರ್ಥಪರತೆಯಿಂದ ಆಚೆಗೆ ಬಂದು ಸಮಾಜದಲ್ಲಿ ತನ್ನ ಕೊಡುಗೆಯ ಅವಶ್ಯಕತೆಯನ್ನು ಕಾಣಬೇಕು. ಎಲ್ಲಾ ಸಮಾಜದವರು ಈ ಆಶಯ ಹೊಂದಿದಾಗ ಒಟ್ಟು ಸಮಾಜ ಆರೋಗ್ಯಕರವಾಗಿ ಬೆಳೆಯುತ್ತದೆ’ ಎಂದರು.
ಕೆಂಪೇಗೌಡ ನಮ್ಮ ಶಕ್ತಿಯ ಪ್ರತೀಕ:
ಒಕ್ಕಲಿಗರ ಜನಾಂಗಕ್ಕೆ ಆದ್ಯತೆಗೆ ಸರಕಾರ ಸ್ಪಂದಿಸುತ್ತಿದೆ. ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ‘ನಾಡಪ್ರಭು ಕೆಂಪೇಗೌಡ’ರ ಹೆಸರು’ ಕೆಂಪೇಗೌಡರ ಪ್ರತಿಮೆ’ ನಿರ್ಮಾಣ, ವಿಶ್ವದರ್ಜೆಯ ನಗರವಾಗಿ ಬೆಳೆದ ಕೆಂಪೆಗೌಡರು ಸ್ಥಾಪಿಸಿದ ಬೆಂಗಳೂರು ನಮ್ಮ ಶಕ್ತಿಯ ಪ್ರತೀಕವಾಗಿದೆ. ಪೂಜ್ಯ ಗುರುಗಳು ‘ಸ್ಟ್ಯಾಚ್ಯು ಆಫ್ ಪ್ರಾಸ್ಪರಿಟಿ’ ಹೆಸರು ಕೊಟ್ಟು ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಿzವೆ. ಭಾರತಕ್ಕೆ ಮುನ್ನುಡಿ ಬರೆಯುವ ನಿಟ್ಟಿನಲ್ಲಿ ಬೆಂಗಳೂರು ಬೆಳೆದಿದೆ’ ಎಂದಿದೆ ಅಂದರೆ ಅದು ಒಕ್ಕಲಿಗರ ಶಕ್ತಿಯ ಧ್ಯೋತಕ’ ಎಂದರು. ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ ಪ್ರಥಮ ಸರ್ಕಾರ ನಮ್ಮ ಸರ್ಕಾರವಾಗಿದೆ. ಒಕ್ಕಲಿಗರ ಮೀಸಲಾತಿ ಬೇಡಿಕೆ, ಜನಾಂಗದ ಅಪೇಕ್ಷೆಯಾಗಿದೆ. ಸರಕಾರದ ಕಡೆಯಿಂದ ಪ್ರಾಮಾಣಿಕವಾಗಿ ಮೀಸಲಾತಿ ಹೆಚ್ಚಿಸುವ ಕಾರ್ಯ ನಡೆಯುತ್ತಿದೆ’ ಎಂದರು.
ಶ್ರೇಷ್ಠ ನಾಥಪಂಥದ ಪೀಠ – ಜಗ್ಗೇಶ್:
ನವರಸ ನಾಯಕ ನಟ, ಸಂಸದ ಜಗ್ಗೇಶ್ ರವರು ಮಾತನಾಡಿ `ಭೈರವ ಅಂದರೆ ನನಗೆ ಅಗಾಧ ಭಕ್ತಿ. ಶ್ರೀ ಆದಿಚುಂಚನಗಿರಿ ಮಠದ ಉತ್ಸವಗಳಲ್ಲಿ ಬಾಲ್ಯದಿಂದಲೇ ಪಾಲ್ಗೊಳ್ಳುತ್ತಿದೆ. ಮಠದ ಒಡನಾಟ ಅತ್ಯಂತ ಶ್ರದ್ಧಾಪೂರ್ವಕವಾಗಿದೆ. ಜಾತಕದ ದೋಷ ಇದ್ದಲ್ಲಿ ಜ್ಯೋತಿಷಿಗಳ ಮುಂದೆ ಹೋಗುವ ಬದಲು ಭೈರವನ ಮುಂದೆ ಪ್ರಾರ್ಥಿಸಿದರೆ ಪರಿಹಾರ ಖಂಡಿತ. ಯಾವುದೇ ದುಷ್ಟ ಶಕ್ತಿ ಅಡ್ಡ ಬರಲ್ಲ. ಅಂತಹ ಶ್ರೇಷ್ಠ ಭಕ್ತಿ, ಕಾರಣಿಕತೆಯನ್ನು ಹೊಂದಿರುವ ಪೀಠವಾಗಿದೆ ಆದಿಚುಂಚನಗಿರಿ. ಭೈರವೈಕ್ಯ ಸ್ವಾಮೀಜಿಯವರಿಗೆ ದಿವ್ಯಶಕ್ತಿಯಿತ್ತು. ಅವರು ಅಂದ ಹಾಗೆ ನನ್ನ ಜೀವನದಲ್ಲಿ ಘಟಿಸಿವೆ’ ಎಂದು ಸ್ವಅನುಭವ ಹಂಚಿಕೊಂಡರು. ವಿಶ್ವದ ಮೂಲೆ ಮೂಲೆಯಲ್ಲಿ ನಿಂತು ಅರ್ಥಪೂರ್ಣವಾಗಿ ಮಾತಾಡಬಲ್ಲ ಓರ್ವ ವಿದ್ಯಾವಂತ, ಶಕ್ತಿವಂತನಿಗೆ ಶ್ರೀ ಪೀಠದ ಜವಾಬ್ದಾರಿಯನ್ನು ಹಿಂದಿನ ಗುರುಗಳು ನೀಡಿದ್ದಾರೆ. ಅದನ್ನು ಈಗಿನ ಶ್ರೀಗಳು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. `ಸಾವಿರಾರು ವರ್ಷದ ಇತಿಹಾಸವಿರುವ ವಿಶ್ವದ ಉದ್ದಕ್ಕೂ ಅನ್ನದಾತನಾಗಿರುವ ಒಕ್ಕಲಿಗ. ಹಿಂದೆಯೂ ಕೊಟ್ಟಿದ್ದಾನೆ. ಮುಂದೆಯೂ ಕೊಡುತ್ತಾನೆ. ಒಕ್ಕಲಿಗನ ಉಲ್ಲೇಖ 5ನೇ ಶತಮಾನದಿಂದ ಇದೆ. ಒಕ್ಕಲುತನ ಅಂದರೆ ಕೆಲಸ, ಗೌಡ ಅಂದರೆ ಪರಿಸರಕ್ಕೆ ಯಜಮಾನಿಕೆ. ಯಜಮಾನಿಕೆ ಮತ್ತು ಒಕ್ಕಲುತನ ಸಮ್ಮಿಶ್ರವಾಗಿರುವ ಈ ಗುಂಪು ಒಕ್ಕಲಿಗ ಸಂಪ್ರದಾಯದ ಗುಂಪು ಎಂದು ಕರೆಯಲ್ಪಟ್ಟಿದೆ. ಇದಕ್ಕೊಂದು ಪಂಥ ನಾಥಪಂಥ. ಈ ನಾಥಪಂಥದ ಆದಿಗುರು ನಮ್ಮ ಗುರು, ನಮ್ಮ ಮಠವಾಗಿದೆ’ ಎಂದರು. ನಮ್ಮ ಮಠಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ಕಾಶಿಯಿಂದ ವಲಸೆ ಬಂದವರು ನಮ್ಮ ಭೈರವ ದೇವರು’ ಎಂದರು. ಅಂತಹ ಭೈರವ ದೇವರ ದೇವಸ್ಥಾನವನ್ನು ನನ್ನ ಸ್ವಗ್ರಾಮದಲ್ಲಿಯೂ ಜೀರ್ಣೋದ್ಧಾರ ಮಾಡಿದ್ದೇನೆ. ಆರಡಿಯ ಭೈರವ ನನ್ನ ಪುಟ್ಟ ಗ್ರಾಮದಲ್ಲಿದೆ. ಅದು ಆಗಿರುವುದು ಶ್ರೀಮಠದ ಒಡನಾಟದಿಂದ’ ಎಂದು ಜಗ್ಗೇಶ್ ಹೇಳಿದರು.
`ವನಸಾಂಡ’ ? :
ತನ್ನ ಮಾತಿನ ಆರಂಭದಲ್ಲಿ ನಟ ಜಗ್ಗೇಶ್‌ರವರು `ವನಸಾಂಡ’? ಎಂದು ತುಳುವಿನಲ್ಲಿ ಕೇಳಿದಾಗ ನೆರೆದ ಸಭಿಕರಿಂದ ಕರತಾಡನ ಕೇಳಿ ಬಂತು. ಸಭೆಯ ಮಧ್ಯದಲ್ಲಿ ಜಗ್ಗೇಶ್‌ರವರು ಆಗಮಿಸಿದಾಗಲೂ ಸಭೆಯಿಂದ ಶಿಳ್ಳೆ, ಕರತಾಡನ ಕೇಳಿಬಂತು.
ಆದಿಚುಂಚನಗಿರಿ ಚಿನ್ನದ ಗಿರಿ – ಬಾಲಕೃಷ್ಣ ಸಿ.ಎನ್.:
ರಾಜ್ಯ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ, ಶಾಸಕ ಬಾಲಕೃಷ್ಣ ಸಿ.ಎನ್. ರವರು ಮಾತನಾಡಿ `ಆದಿಚುಂಚನಗಿರಿಯನ್ನು ಚಿನ್ನದ ಗಿರಿಯನ್ನಾಗಿ ಮಾಡಿದವರು ಬಾಲಗಂಗಾಧರನಾಥ ಸ್ವಾಮೀಜಿಯವರು. ಜಾತಿ ಮತವಿಲ್ಲದೇ ಶಿಕ್ಷಣ, ಆಸರೆ ನೀಡಿದ, ಪರಿಸರ ಪ್ರೇಮಿ ಸ್ವಾಮೀಜಿಯವರು. ಅವರ ಶ್ರೇಷ್ಠ ಪರಂಪರೆಯನ್ನು ಈಗಿನ ಶ್ರೀಗಳು ಅತ್ಯಂತ ಪಾವಿತ್ರ್ಯತೆಯಿಂದ ಮುನ್ನಡೆಸುತ್ತಿದ್ದಾರೆ’ ಎಂದರು. `ಸುಳ್ಯದಲ್ಲಿ 1 ಎಕರೆ 8 ಗುಂಟ ನಿವೇಶನ ಖರೀದಿಸಿ ಒಕ್ಕಲಿಗ ವಸತಿ ಸೌಕರ್ಯದ ಅವಕಾಶ ಕಲ್ಪಿಸುತ್ತಿದ್ದೆವೆ ಎಂದ ಅವರು ರಾಜ್ಯ ಒಕ್ಕಲಿಗರ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಅಶ್ವಥ್ ನಾರಾಯಣ್‌ರವರು ಸರಕಾರದ ಮುಂದೆ ಪ್ರಸ್ತಾಪ ಇಟ್ಟಿದ್ದಾರೆ’ ಎಂದರು.
ಬಾಲಗಂಗಾಧರನಾಥ ಶ್ರೀಗಳು ಮಾನವತಾವಾದಿ – ಭೋಜೇಗೌಡ:
ವಿಧಾನಪರಿಷತ್ ಸದಸ್ಯರಾದ ಎಸ್.ಎಲ್. ಭೋಜೆಗೌಡರು ಮಾತನಾಡಿ ‘ಮಾನವತಾವಾದವನ್ನು ಸಾರಿದವರು ಬಾಲಗಂಗಾಧರನಾಥ ಸ್ವಾಮೀಜಿಯವರು. ನಮ್ಮ ಮಠ ಸಮಾಜಮುಖಿ ಕೆಲಸ ಮಾಡುವುದರ ಮೂಲಕ ಸಂಬಂಧ ಕಟ್ಟಿದೆ. ನಾಡಿನೆತ್ತರಕ್ಕೆ ಕೀರ್ತಿ ಪತಾಕೆ ಹಾರಿಸಿದೆ. ಶಿಕ್ಷಣ, ಆರೋಗ್ಯ, ಹಸಿರು ಕ್ರಾಂತಿ ಮೂಲಕ, ಜಾನಪದ ದಾಸ ಸಾಹಿತ್ಯದ ಉನ್ನತಿಯಾಗಿದೆ. ಸಂಸ್ಕಾರ ಕಲಿತವನು ಎಂದಿಗೂ ಭ್ರಷ್ಟಾಚಾರಿಯಾಗಲಾರ. ಅಂತಹ ಸಂಸ್ಕಾರವನ್ನು ಸಮಾಜಕ್ಕೆ ಕೊಟ್ಟಿರುವ ಮಠಕ್ಕೆ ನಾವು ಗೌರವ ಸಲ್ಲಿಸಬೇಕಾಗಿದೆ’ ಎಂದರು.
ಕೃಷಿ ಬದುಕು ತೋರಿಸಬೇಕು:
ಒಕ್ಕಲಿಗರು ಮೂಲ ಕೃಷಿಕರಾದರೂ ಈಗಿನ ಕಾಲಘಟ್ಟದಲ್ಲಿ ಕೃಷಿ ಬದುಕನ್ನು ನಮ್ಮ ಮಕ್ಕಳಿಗೆ ತೋರಿಸಬೇಕಾಗಿದೆ. ಸ್ವಾಮೀಜಿಯವರೂ ಈ ಆಶಯ ಹೊಂದಿದ್ದರು. ಅನ್ನ, ನೀರು ಕೊಟ್ಟ ಭೂಮಿ, ಕೃಷಿ ಬದುಕು ಮತ್ತೊಮ್ಮೆ ನಮಗೆ ಬರುವಂತಾಗಲು ನಾವೆಲ್ಲಾ ಪ್ರಯತ್ನಿಸೋಣ’ ಎಂದು ಭೋಜೇಗೌಡ ಹೇಳಿದರು.
ಒಕ್ಕಲಿಗ ಸಂಗ್ರಾಮಕ್ಕೂ ಸೈ, ನಾಯಕತ್ವಕ್ಕೂ ಸೈ – ಸಂಜೀವ ಮಠಂದೂರು
ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಜಯಂತ್ಯೋತ್ಸವ ಸಂಸ್ಮರಣಾ ಸಮಿತಿಯ ಅಧ್ಯಕ್ಷರೂ ಆದ ಶಾಸಕ ಸಂಜೀವ ಮಠಂದೂರುರವರು ಮಾತನಾಡಿ `ಜ್ಞಾನ, ವಿಜ್ಞಾನ, ತಂತ್ರಜ್ಞಾನ ಮತ್ತು ದಿವ್ಯಜ್ಞಾನ ಹೊಂದಿರುವ ಪೂಜ್ಯ ಡಾ. ನಿರ್ಮಲಾನಂದನಾಥ ಶ್ರೀಗಳ ಮಾರ್ಗದರ್ಶನದಲ್ಲಿ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಶ್ರೀಗಳ ಜಯಂತ್ಯೋತ್ಸವ ಪುತ್ತೂರಿನಲ್ಲಿ ಆಯೋಜಿಸಲು ನಮಗೆ ಸುಯೋಗ ಒದಗಿ ಬಂತು. ಸ್ವಾತಂತ್ರ್ಯಪೂರ್ವದಿಂದ ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು ಸಾಮಾಜಿಕವಾಗಿ, ಧಾರ್ಮಿಕವಾಗಿ ಒಕ್ಕಲಿಗ ಸಮಾಜ ಯಾವ ರೀತಿಯಲ್ಲಿ ಸಮಾಜದ ಅಭ್ಯುದಯಕ್ಕೆ ಶ್ರಮಿಸಿದೆ ಅನ್ನುವುದರ ಒಂದು ಅವಲೋಕನ ಈ ಕಾರ್ಯಕ್ರಮದಿಂದ ಆಗಬೇಕು. ಮುಂದಿನ ಹಾದಿಯೂ ಸ್ವಾವಲಂಬೀ, ಸುಗಮ ಜೀವನ ನಮ್ಮದಾಗಬೇಕೆಂಬ ಆಶಯ ಈ ಕಾರ್ಯಕ್ರಮದ ಹಿಂದಿದೆ. ಒಕ್ಕಲಿಗನೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ, ಈ ರಾಜ್ಯದ, ದೇಶದ ನಾಯಕತ್ವವವನ್ನೂ ವಹಿಸಲೂ ಒಕ್ಕಲಿಗ ವ್ಯಕ್ತಿ ಸೈ ಎನಿಸಿಕೊಂಡಿದ್ದಾನೆ. ಸಮಾಜವನ್ನು ಸಂಘಟಿಸಿ, ಅಧ್ಯಾತ್ಮಿಕ ಮಹತ್ವ ನೀಡಿ, ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ತೊಡಗಿಸಿಕೊಂಡ ಗುರುಪೀಠವನ್ನು ಸ್ಮರಿಸಬೇಕಾದದ್ದು ಸಮಾಜದ ಪ್ರತಿಯೊಬ್ಬನ ಕರ್ತವ್ಯ ಎಂದು ಭಾವಿಸಿದ್ದೆವೆ. ಶ್ರೀಗಳ 58, 68 ಮತ್ತು 78 ನೇ ಜಯಂತಿ ಆಚರಣೆ ಮಾಡುವ ಸೌಭಾಗ್ಯ ನಮ್ಮ ಪಾಲಿಗೆ ಬಂದಿರುವುದಕ್ಕೆ ಹೆಮ್ಮೆಯಿದೆ’ ಎಂದರು.
ಗ್ರಂಥ ಅವಲೋಕನ ಮಾತುಗಳನ್ನಾಡಿದ ಸಾಹಿತಿ ಡಾ. ಎಚ್.ಎಸ್. ಸತ್ಯನಾರಾಯಣರವರು `ಪೂಜ್ಯ ಗುರುಗಳ ಬಗೆಗಿನ ಈ ಕೃತಿ ಚಾರಿತ್ರಿಕ, ಸಾಹಿತ್ಯಿಕ, ಶೈಕ್ಷಣಿಕ ಮಹತ್ತರ ಕೃತಿಯಾಗಿದೆ. ಇದು ಬುದ್ದಿ, ಧೀಮಂತಿಕೆ ಮತ್ತು ಹೃದಯವಂತಿಕೆಯನ್ನು ಪ್ರಸ್ತುತಪಡಿಸುತ್ತಿದೆ. ಒಕ್ಕಲಿಗ ಸಮಾಜದ ಸ್ಪಷ್ಟ ಚಿತ್ರಣ ಮತ್ತು ಶ್ರೀ ಮಠದ ಸರ್ವತೋಮುಖ ದೃಷ್ಟಿಕೋನವನ್ನು ಅತ್ಯಂತ ಅರ್ಥಪೂರ್ಣವಾಗಿ ವಿವರಿಸಲಾಗಿದೆ’ ಎಂದರು.
ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ. ತೀರ್ಥರಾಮ, ಮಾಜಿ ಸಚಿವ ಗಂಗಾಧರ ಗೌಡ ಬೆಳ್ತಂಗಡಿ, ಕೆವಿಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಗೌಡ, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ಕೆ.ವಿ. ರೇಣುಕಾ ಪ್ರಸಾದ್, ದ.ಕ. ಗೌಡ ವಿದ್ಯಾಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ, ದ.ಕ. ಮತ್ತು ಕೊಡಗು ಗೌಡ ಅಭಿವೃದ್ಧಿ ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ, ಸುಳ್ಯ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರು, ಬೆಳ್ತಂಗಡಿ ಒಕ್ಕಲಿಗ ಸೇವಾ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಮಂಗಳೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸದಾನಂದ ಗೌಡ ಡಿ.ಪಿ., ಬಂಟ್ವಾಳ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಮೋನಪ್ಪ ಗೌಡ ಬಿ., ಬೆಳ್ತಂಗಡಿ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ಕೇರಿಮಾರ್, ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು, ಉಡುಪಿ ಒಕ್ಕಲಿಗ ಗೌಡರ ಸೇವಾ ಸಂಘದ ಅಧ್ಯಕ್ಷ ಡಿ.ಎಂ. ಸುರೇಶ್ ಗೌರವ ಉಪಸ್ಥಿತಿ ಇದ್ದರು.
ಸನ್ಮಾನ – ಗೌರವಾರ್ಪಣೆ:
ಸಂಸದ ಡಿ.ವಿ. ಸದಾನಂದ ಗೌಡ, ಶಾಸಕ ಸಂಜೀವ ಮಠಂದೂರುರವರನ್ನು ಡಾ. ನಿರ್ಮಲಾನಂದನಾಥ ಶ್ರೀಗಳು ಸನ್ಮಾನಿಸಿ ಗೌರವಿಸಿದರು.
ಹರೀಶ್ ಪೂಂಜಾರವರಿಗೆ ಗೌರವಾರ್ಪಣೆ:
ಕಾರ್ಯಕ್ರಮಕ್ಕೆ ಆಗಮಿಸಿದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜರವರಿಗೆ ಡಾ. ನಿರ್ಮಲಾನಂದನಾಥ ಶ್ರೀಗಳು ಗೌರವಾರ್ಪಣೆ ಮಾಡಿದರು. ಪೂಂಜರವರು ಶ್ರೀಗಳಿಗೆ ತುಳಸಿ ಹಾರಾರ್ಪಣೆ ಮಾಡಿ ಗೌರವಿಸಿದರು.
ಒಕ್ಕಲಿಗ ಗೌಡ ಸ್ವ-ಸಹಾಯ ಟ್ರಸ್ಟ್‌ನಿಂದ 5 ಲಕ್ಷ ದೇಣಿಗೆ:
ಕಾರ್ಯಕ್ರಮಕ್ಕೆ ಪುತ್ತೂರು ಒಕ್ಕಲಿಗ ಗೌಡ ಸ್ವ-ಸಹಾಯ ಸಂಘದ ಟ್ರಸ್ಟ್ ವತಿಯಿಂದ ಸಂಗ್ರಹಿಸಲಾದ ರೂ. 5 ಲಕ್ಷ ದೇಣಿಗೆಯನ್ನು ಚೆಕ್ ಮುಖಾಂತರ ವೇದಿಕೆಯಲ್ಲಿ ಶ್ರೀಗಳಿಗೆ ಹಸ್ತಾಂತರಿಸಲಾಯಿತು. ಟ್ರಸ್ಟ್ ಸ್ಥಾಪಕಾಧ್ಯಕ್ಷ ಎ.ವಿ. ನಾರಾಯಣ ಗೌಡ, ಅಧ್ಯಕ್ಷ ಮನೋಹರ ಡಿ.ವಿ. ಮತ್ತಿತರರು ಚೆಕ್ ಹಸ್ತಾಂತರಿಸಿದರು.
`ಒಕ್ಕಲಿಗರು’ ಪ್ರಾರ್ಥನಾ ಗೀತೆಯ ಧ್ವನಿಸುರುಳಿ ಬಿಡುಗಡೆ:
ಎ.ವಿ. ನಾರಾಯಣ ಗೌಡರ ಸಂಯೋಜನೆಯಲ್ಲಿ ನಿರ್ಮಿಸಲಾದ `ಒಕ್ಕಲಿಗರು’ ಪ್ರಾರ್ಥನಾ ಗೀತೆಯನ್ನು ಬಿಡುಗಡೆಗೊಳಿಸಲಾಯಿತು. ಸಂಗೀತ ನಿರ್ದೇಶಕ ಪದ್ಮರಾಜ್ ಬಿ.ಸಿ. ಚಾರ್ವಕ ಉಪಸ್ಥಿತರಿದ್ದರು.
ಸಭೆಯ ಆರಂಭದಲ್ಲಿ ಶ್ರೀ ಆದಿಚುಂಚನಗಿರಿ ಮಠದ ವಟುಗಳಿಂದ ವೇದಘೋಷ ನಡೆಯಿತು. ಬಳಿಕ ರೆಕಾರ್ಡಿಂಗ್ ನಾಡಗೀತೆ ಪ್ರಸ್ತುತಪಡಿಸಲಾಯಿತು. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕಿ ಪ್ರೊ. ನೀಮಾರವರು ಪ್ರಾರ್ಥಿಸಿದರು. ಜಯಂತ್ಯೋತ್ಸವ ಸಂಸ್ಮರಣಾ ಸಮಿತಿ ಜಿಲ್ಲಾ ಸಂಚಾಲಕ ಚಿದಾನಂದ ಬೈಲಾಡಿ ವಂದಿಸಿದರು. ಟಿವಿ ನಿರೂಪಕ ಹರಿಪ್ರಸಾದ್ ಅಡ್ಪಂಗಾಯ, ಡಾ. ಸುಬ್ರಹ್ಮಣ್ಯ ಹಾಗೂ ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಪ್ರೊ. ಸೀತಾರಾಮ ಕೇವಳ ಕಾರ್ಯಕ್ರಮ ನಿರೂಪಿಸಿದರು.
ವೇದಿಕೆಯಲ್ಲಿ ತಾಲೂಕು ಗೌಡ ಸಂಘದ ಅಧ್ಯಕ್ಷ ವಿಶ್ವನಾಥಗೌಡ ಕೆಯ್ಯೂರು, ಜಯಂತ್ಯೋತ್ಸವ ಸಂಸ್ಮರಣಾ ಸಮಿತಿಯ ಕಾರ್ಯದರ್ಶಿ ನಾಗೇಶ್ ಕಡೆಂಜಿ, ಆರ್ಥಿಕ ಸಮಿತಿ ಸಂಚಾಲಕ ಎಂ. ಪಿ. ಉಮೇಶ್, ಬೆಳ್ಳಾರೆ, ಮೋಹನ ಗೌಡ ಇಡ್ಯಡ್ಕ, ಯು.ಪಿ. ರಾಮಕೃಷ್ಣ, ತಾಲೂಕು ಸಂಚಾಲಕ ದಿನೇಶ್ ಮೆದು, ಸಹ ಸಂಚಾಲಕ ಪುರುಷೋತ್ತಮ ಮುಂಗ್ಲಿಮನೆ, ಎ.ವಿ. ತೀರ್ಥರಾಮ ಸುಳ್ಯ, ಭಾಸ್ಕರ್ ದೇವಸ್ಯ, ಕಿರಣ್ ಬುಡ್ಲೆಗುತ್ತು, ಎ.ವಿ ನಾರಾಯಣ, ಮೋಹನ್ ಗೌಡ ಕಾಯರಮಾರ್, ಪದ್ಮಯ್ಯ ಗೌಡ ಬೆಳ್ತಂಗಡಿ, ರಂಜನ್ ಗೌಡ ಬೆಳ್ತಂಗಡಿ, ಕೆ.ಸಿ. ಕುರುಂಜಿ, ದ.ಕ. ಜಿಲ್ಲಾ ಒಕ್ಕಲಿಗರ ಯುವ ಸಂಘದ ಅಧ್ಯಕ್ಷ ಚಂದ್ರಶೇಖರ್ ಗೌಡ ಕೋಡಿಬೈಲು, ಸಿದ್ಧರಾಜು ಉಡುಪಿ, ಪ್ರವೀಣ್ ಕುಂಟ್ಯಾನ, ಶ್ರೀಮತಿ ಗೌರಿ ಬನ್ನೂರು, ಅಮರನಾಥ ಗೌಡ ಬಪ್ಪಳಿಗೆ, ಶ್ರೀಮತಿ ತೇಜಸ್ವಿನಿ ಕಟ್ಟಪುಣಿ, ಡಾ| ರೇವತಿ ನಂದನ್ ಸುಳ್ಯ, ಆಶೀರ್ವಾದ್ ಹೊಸಮನೆ ಕಾಸರಗೋಡು ಉಪಸ್ಥಿತರಿದ್ದರು.
ಶ್ರೀಮಠದ ಶಾಖಾ ಮಠದ ಯತಿಗಳ ಉಪಸ್ಥಿತಿ
ವೇದಿಕೆಯಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ, ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ದಸರೀಘಟ್ಟ ಶಾಖಾ ಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ, ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ, ಬಾಗಲಕೋಟೆ ಶಂಕರಾರೂಢ ಸ್ವಾಮೀಜಿ, ಕಬಳಿ ಶಾಖಾ ಮಠ ಶ್ರೀ ಶಿವಪುತ್ರ ಸ್ವಾಮೀಜಿಯವರು ಉಪಸ್ಥಿತರಿದ್ದರು.
ಅಪ್ಪ ನೆಟ್ಟ ಮರಕ್ಕೆ ನೇತು ಹಾಕಬೇಡ್ರೀ..
ತನ್ನ ಮಾತಿನ ಕೊನೆಯಲ್ಲಿ ನಟ ಜಗ್ಗೇಶ್‌ರವರು ಒಕ್ಕಲಿಗರನ್ನು ಉದ್ದೆಶಿಸಿ `ನಮ್ಮಪ್ಪ ಮಾಡಿಟ್ಟಿದ್ದಾನೆ ಅಂತ ಹಳೇ ಮರಕ್ಕೆ ನೇತು ಹಾಕಿಕೊಳ್ಳಲು ಹೋಗಬೇಡಿ. ಸ್ವಲ್ಪ ಮುಂದೆ ಹೋಗೋದು ಕಲಿಯಿರಿ. ರಾಷ್ಟ್ರದ ಬಗ್ಗೆ ಬಹಳ ದೊಡ್ಡಮಟ್ಟದಲ್ಲಿ ಆಲೋಚನೆ ಮಾಡ್ರೀ.. ನಮ್ಮನ್ನು ನಿಮ್ಮೆಲ್ಲರನ್ನು ನೋಡಲು ರಾಷ್ಟ್ರಮಟ್ಟದಲ್ಲಿ ಒಂದು ಉತ್ತಮ ವ್ಯಕ್ತಿತ್ವ ಕಾದಿದೆ. ಅದರ ಮೇಲೆ ಸ್ವಲ್ಪ ಗಮನ ಇರಲಿ. `ಲೆಕ್ಕ ಹಾಕಿ ಒಕ್ಕಲಿಗ ಕೆಟ್ಟ’ ಮಾತು ಇದೆ. ಲೆಕ್ಕ ಹಾಕೋದನ್ನು ನಿಲ್ಲಿಸಿ. ಹಾಕಿದ್ರೆ ಲೆಕ್ಕ ಪಕ್ಕವಾಗಿರಬೇಕು. ರಾಷ್ಟ್ರ ಮುಗಿಲೆತ್ತರಕ್ಕೆ ಹಾರಬೇಕು. ಅಂತಹ ಅದ್ಭುತವಾದ ಲೆಕ್ಕ ಒಕ್ಕಲಿಗರು ಮುಂದೆ ಹಾಕ್ಲಿ’ ಎಂದರು.
ಗುರುಸ್ಮರಣೆ
ಭೈರವೈಕ್ಯ ಡಾ. ಬಾಲಗಂಗಾಧರನಾಥ ಶ್ರೀಗಳ 78 ನೇ ಜಯಂತ್ಯೋತ್ಸವವನ್ನು ಶ್ರೀಗಳ ಪುತ್ಥಳಿಗೆ ಬುಟ್ಟಿ ಬುಟ್ಟಿ ಪುಷ್ಪಾರ್ಚನೆಗೈದು, ದೀಪಾರಾತಿ ಬೆಳಗಿಸುವುದರೊಂದಿಗೆ ಗುರುಪೂಜೆ ಮಾಡಿ ಆಚರಿಸಲಾಯಿತು.
ಒಕ್ಕಲಿಗ ಮೀಸಲಾತಿ ಹೆಚ್ಚಳಕ್ಕೆ ಸರಕಾರಕ್ಕೆ ಆಗ್ರಹ
ತನ್ನ ಆಶೀರ್ವಚನದ ವೇಳೆ ಡಾ. ನಿರ್ಮಲಾನಂದನಾಥ ಶ್ರೀಗಳು `18ರಿಂದ 20 ಶೇಕಡಾ ಇರುವ ಒಕ್ಕಲಿಗ ಸಮುದಾಯದವರಿಗೆ ಸರಕಾರದ ಸೌಲಭ್ಯಗಳು ಸಿಗುವಲ್ಲಿ ಮೀಸಲಾತಿಯನ್ನು ಶೇ. 4 ರಿಂದ ಹೆಚ್ಚಿಸಬೇಕೆಂಬ ಬೇಡಿಕೆಯನ್ನು ಈಗಾಗಲೇ ಸರ್ಕಾರಕ್ಕೆ ನೀಡಿದ್ದೆವೆ. ಸರ್ಕಾರದಿಂದ ಪಾಸಿಟಿವ್ ಸ್ಪಂದನೆ ದೊರೆತಿದೆ. ಈ ಬಗ್ಗೆ ನಾಳೆ ದೊಡ್ಡ ಸಮಾವೇಶ ಆಗಬೇಕಿತ್ತು. ಆದರೆ ಸರಕಾರದಿಂದ ಪಾಸಿಟಿವ್ ಸ್ಪಂದನೆ ದೊರೆತಿರುವುದರಿಂದ ಸರಕಾರದ ಸ್ಪಷ್ಟ ನಿಲುವುಗಾಗಿ ಕಾಯುತ್ತಿದ್ದೆವೆ. ಸೌಲಭ್ಯ ಮೀಸಲಾತಿ ಕೊಡಬೇಕು. ಸರಕಾರ ಇದನ್ನು ಸ್ಪಷ್ಟವಾಗಿ ಪ್ರಕಟಿಸಬೇಕು ಎಂದು ಸೌಜನ್ಯಯುಕ್ತವಾಗಿ ಸಮುದಾಯದ ಪರವಾಗಿ ಈ ಮೂಲಕವೂ ಸರಕಾರವನ್ನು ಕೇಳಿಕೊಳ್ಳುತ್ತೇವೆ’ ಎಂದರು.
ಕಾರ್ಯಕ್ರಮದಲ್ಲಿ ಕಂಡು ಬಂದ ವಿಶೇಷತೆಗಳು
7 ವಲಯಗಳಿಂದ 7 ವರ್ಣ ಸೀರೆಯುಟ್ಟ ನಾರಿಯರು
ಒಕ್ಕಲಿಗ ಗೌಡ ಸ್ವ-ಸಹಾಯ ಟ್ರಸ್ಟ್‌ನ 7 ವಲಯಗಳಿಂದ 7 ವರ್ಣಗಳ ಸೀರೆಯುಟ್ಟ ನಾರಿಯರು ಮೆರವಣಿಗೆಯಲ್ಲಿ ಭಾಗವಹಿಸಿ ಬಳಿಕ ಸಭಾಂಗಣದಲ್ಲಿ ಪ್ರತ್ಯೇಕ ಆಸನದಲ್ಲಿ ಕಂಡುಬಂದರು.
ಪ್ರಸಾದ ಭೋಜನ ಕಾರ್ಯಕ್ರಮಕ್ಕೆ ಆಗಮಿಸಿದ ಸುಮಾರು 25 ಸಾವಿರಕ್ಕೂ ಮಿಕ್ಕಿ ಮಂದಿಗೆ ಪ್ರಸಾದ ಭೋಜನ ವ್ಯವಸ್ಥೆ ಮಾಡಲಾಗಿತ್ತು. ವಿಶಾಲವಾದ ಪಾಕಶಾಲೆಯಲ್ಲಿ ತುಳಸಿ ಕ್ಯಾಟರಿಂಗ್ ಸರ್ವೀಸ್‌ನ ಹರೀಶ್ ಭಟ್ ನೇತೃತ್ವದಲ್ಲಿ 30ಕ್ಕೂ ಮಿಕ್ಕಿ ಬಾಣಸಿಗರಿಂದ ಅಡುಗೆ ವ್ಯವಸ್ಥೆ ತಯಾರಾಗಿತ್ತು. ಬೆಳಿಗ್ಗೆ ಟೊಮೆಟೊ ಬಾತ್, ಚಿತ್ರಾನ್ನ, ಅವಲಕ್ಕಿ ಮತ್ತು ಚಹಾದ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ಭೋಜನಕ್ಕೆ ಉಪ್ಪಿನಕಾಯಿ, ಅಳಸಂಡೆ ಪಲ್ಯ, ಕುಚ್ಚಲಕ್ಕಿ ಅನ್ನ, ಬೆಳ್ತಿಗೆ ಅನ್ನ, ಸಾರು, ಸಾಂಬಾರು, ಕಡ್ಲೆ ಬೇಳೆ ಪಾಯಸ ಐಟಂ ಮಾಡಲಾಗಿತ್ತು.
ಪ್ರಾಥಮಿಕ ಚಿಕಿತ್ಸಾ ವಿಭಾಗ:
ಕಾರ್ಯಾಲಯದ ಬಳಿ ಆರೋಗ್ಯ ಇಲಾಖೆ ವತಿಯಿಂದ ಪ್ರಾಥಮಿಕ ಚಿಕಿತ್ಸಾ ಕೇಂದ್ರ ಹಾಗೂ ಕೋವಿಡ್ ಲಸಿಕಾ ಕೇಂದ್ರವನ್ನೂ ತೆರೆಯಲಾಗಿತ್ತು.
ತುರ್ತು ಸೇವೆಗಳು:
ಸ್ಥಳದಲ್ಲಿ ಮುಂಜಾಗ್ರತಾ ಕ್ರಮವಾಗಿ ಪುತ್ತೂರು ಅಗ್ನಿಶಾಮಕ ದಳದವರು ರಕ್ಷಣಾ ವಾಹನ ಇರಿಸಿದ್ದರು. ಭದ್ರತೆಯ ದೃಷ್ಟಿಯಿಂದ ಮಹಿಳಾ ಪೊಲೀಸ್ ಸೇರಿದಂತೆ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿತ್ತು.
ಜಗದೀಶ್ ಪುತ್ತೂರು ಬಳಗದಿಂದ ಸಂಗೀತ ಕಾರ್ಯಕ್ರಮ: ಸಭಾ ಕಾರ್ಯಕ್ರಮಕ್ಕೆ ಮೊದಲು ಜಗದೀಶ್ ಪುತ್ತೂರು ಬಳಗದಿಂದ `ಭಕ್ತಿ ಸುಗಮ ಸಂಗೀತ’ ಕಾರ್ಯಕ್ರಮ ನಡೆಯಿತು.
75 ಕೆ.ಜಿ ಬೆಳ್ಳಿಯಿಂದ ತುಲಾಭಾರ
ಡಾ. ನಿರ್ಮಲಾನಂದನಾಥ ಶ್ರೀಗಳಿಗೆ ಗುರುವಂದನೆ ಮತ್ತು ರಜತ ತುಲಾಭಾರ ಸೇವೆ ಒಕ್ಕಲಿಗ ಸಮಾಜದವರ ವತಿಯಿಂದ ನಡೆಯಿತು. ಶ್ರೀಗಳಿಗೆ ರೇಷ್ಮೆ ಶಾಲು ಹೊದೆಸಿ, ಸುಮಾರು 75 ಕೆ.ಜಿ. ಬೆಳ್ಳಿಯ ಗಟ್ಟಿಯಿಂದ ಸ್ವಾಮೀಜಿಯವರನ್ನು ಪುಷ್ಪಾಲಂಕೃತ ತಕ್ಕಡಿಯಲ್ಲಿ ತುಲಾಭಾರ ಮಾಡಲಾಯಿತು. ಬುಟ್ಟಿ ಬುಟ್ಟಿ ಪುಷ್ಪಗಳಿಂದ ಶ್ರೀಗಳಿಗೆ ಪುಷ್ಪಾರ್ಚನೆ ಮಾಡಿ ಆರತಿ ಬೆಳಗಲಾಯಿತು. ಇದಕ್ಕೂ ಮೊದಲು ಚೆಂಡೆ, ವಾದ್ಯಘೋಷಗಳೊಂದಿಗೆ ಮಂಗಳದ್ರವ್ಯ, ಬೆಳ್ಳಿಗಟ್ಟಿಗಳನ್ನು ಪಲ್ಲಕ್ಕಿಯಲ್ಲಿ ವೇದಿಕೆಯ ಬಳಿಗೆ ತರಲಾಯಿತು. ಸುಮಂಗಲೆಯರು ಫಲಫುಷ್ಪಗಳನ್ನು ತಂದು ಅರ್ಪಿಸಿದರು. ತುಲಾಭಾರಕ್ಕೆ ಬೆಳ್ಳಿ ದಾನ ಮಾಡಿದ ದಾನಿಗಳಿಗೆ ಇದೆ ವೇಳೆ ಡಾ. ಧರ್ಮಪಾಲನಾಥ ಶ್ರೀಗಳು ಮತ್ತು ಶಾಖಾ ಮಠದ ಶ್ರೀಗಳು ಶಾಲು ಹೊದೆಸಿ ಸ್ಮರಣಿಕೆ ನೀಡಿ ಗೌರವಿಸಿದರು.
ಅಧ್ಯಯನ ಗ್ರಂಥ ಬಿಡುಗಡೆ
ಮಂಗಳೂರು ಶಾಖಾ ಮಠದ ಡಾ. ಧರ್ಮಪಾಲನಾಥ ಶ್ರೀಗಳು ಬರೆದಿರುವ ಅಧ್ಯಯನ ಗ್ರಂಥವಾದ `ಸಂಸ್ಕೃತ-ಸಂಸ್ಕೃತಿ’ಗೆ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಕೊಡುಗೆ’ ಕೃತಿಯನ್ನು ಡಾ. ನಿರ್ಮಲಾನಂದನಾಥ ಶ್ರೀಗಳು ಬಿಡುಗಡೆಗೊಳಿಸಿದರು. ಸಾಹಿತಿ ಡಾ. ಎಚ್.ಎಸ್. ಸತ್ಯನಾರಾಯಣ ಗ್ರಂಥ ಅವಲೋಕನ ಮಾಡಿದರು.
ದರ್ಬೆಯಿಂದ ನಡೆದ ವೈಭವದ ಶೋಭಾಯಾತ್ರೆ
ಪುತ್ತೂರು: ಜ.22 ರಂದು ಇತಿಹಾಸ ಪ್ರಸಿದ್ದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ಜರುಗಿದ ಭೈರವೈಕ್ಯ ಶ್ರೀ ಡಾ| ಬಾಲಗಂಗಾಧರನಾಥ ಸ್ವಾಮೀಜಿಯವರ ಜಯಂತ್ಯೋತ್ಸವ ಸಂಸ್ಮರಣೆ ಕಾರ್ಯಕ್ರಮಕ್ಕೆ ಮುನ್ನ ಬೆಳಿಗ್ಗೆ ದರ್ಬೆ ವೃತ್ತದಿಂದ ವೈಭವದ ಶೋಭಾಯಾತ್ರೆ ನಡೆಯಿತು. ಶ್ರೀ ಚೌಡೇಶ್ವರಿ ದೇವಿಗೆ ಆರತಿ ಎತ್ತಿ ಶೋಭಾಯಾತ್ರೆಗೆ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು ಚಾಲನೆ ನೀಡಿದರು.
ಮಹಾಸಂಸ್ಥಾನದ ಶಾಖಾ ಮಠದ ಎಲ್ಲಾ ಸ್ವಾಮೀಜಿಯವರು ಉಪಸ್ಥಿತರಿದ್ದರು. ಶೋಭಾಯಾತ್ರೆಯಲ್ಲಿ ಆರಂಭದಲ್ಲಿ ಧ್ವನಿವರ್ಧಕ ವಾಹನ, ಭಾರತಮಾತೆಯ ಆಲಂಕೃತ ವಾಹನ, ಭಗವಾಧ್ವಜ, ಚಾರ್ವಾಕ ಭಜನಾ ತಂಡ, ಚೆಂಡೆ, ನಾದಸ್ವರ, ದೇವಿ ಚೌಡೇಶ್ವರಿಯ ರಥ, ಭೈರವೈಕ್ಯ ಡಾ| ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಕಂಚಿನ ಪುತ್ಹಳಿ ಇದ್ದ ರಥ, ಡಾ. ನಿರ್ಮಲಾನಂದನಾಥ ಮತ್ತು ಡಾ. ಧರ್ಮಪಾಲನಾಥ ಸ್ವಾಮೀಜಿಯವರು ಇದ್ದ ಬೆಳ್ಳಿಬಣ್ಣದ ರಥ, ಬಣ್ಣ ಬಣ್ಣದ ಕೊಡೆಗಳು, ಕೀಲುಕುದುರೆ, ಶಿಲ್ಪಾ ಗೊಂಬೆ ಬಳಗದ ಗೊಂಬೆನೃತ್ಯಗಳು, ಬ್ಯಾಂಡ್ ಸೆಟ್, 7 ವಲಯದ 7 ಬಣ್ಣದ ಸೀರೆಯೊಂದಿಗೆ ಒಕ್ಕಲಿಗ ಸ್ವಸಹಾಯ ಗುಂಪಿನ ಸುಮಾರು 5 ಸಾವಿರ ಮಹಿಳೆಯರು, ಗೌಡ ಸಮಾಜದ ಆಚಾರ – ಸಂಪ್ರದಾಯ ಬಿಂಬಿಸುವ ಸ್ತಬ್ದಚಿತ್ರಗಳು, ಶ್ರೀ ಆದಿಚುಂಚನಗಿರಿ ಮಠದ ಬಗೆಗೆ ವಿವರಿಸುವ ಸ್ತಬ್ದಚಿತ್ರ, ಗೌಡ ಯುವ ಸೇವಾ ಸಂಘ ಸುಳ್ಯದವರ ಕೊಡವ ಸಂಪ್ರದಾಯ ಬಿಂಬಿಸುವ ಸ್ತಬ್ದಚಿತ್ರ, ಕೆದಂಬಾಡಿ ರಾಮಯ್ಯ ಗೌಡರ ಭಾವಚಿತ್ರವಿದ್ದ ವಾಹನ, ಒಕ್ಕಲಿಗ ಗೌಡರ ಸೇವಾ ಸಂಘ ಮಂಗಳೂರು, ಒಕ್ಕಲಿಗ ಗೌಡ ಸೇವಾ ಸಂಘ ಕಡಬದವರಿಂದ `ಅಕ್ಷಯ ಆಸರೆ’ ಸ್ತಬ್ದಚಿತ್ರ, ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ಪುತ್ತೂರು ತಾಲೂಕು ರವರ ಗೌಡ ಸಮಾಜದ ಬೇಸಾಯ ಬಿಂಬಿಸುವ ಸ್ತಬ್ದಚಿತ್ರ, ದ.ಕ. ಗೌಡ ವಿದ್ಯಾ ಸಂಘ ಸುಳ್ಯ, ಒಕ್ಕಲಿಗ ಗೌಡ ಸೇವಾ ಸಂಘ ಬೆಳ್ತಂಗಡಿ ಮತ್ತು ಮಹಿಳಾ ವೇದಿಕೆ ಸ್ಪಂದನ ಸೇವಾ ಸಂಘದ `ಗೌಡ ಯಾನೆ ಒಕ್ಕಲಿಗ ಸಮುದಾಯ ಭವನ’ದ ಸ್ತಬ್ದಚಿತ್ರ, ಒಕ್ಕಲಿಗ ಗೌಡ ಸೇವಾ ಸಂಘ ಬೆಳ್ತಂಗಡಿಯವರ ಕೆದಂಬಾಡಿ ರಾಮಯ್ಯ ಗೌಡ ಮತ್ತು ಭೂತಾರಾಧನೆ ಬಿಂಬಿಸುವ ಸ್ತಬ್ದಚಿತ್ರ, ವೀರಗಾಸೆ, ಕಂಸಾಲೆ, ಡೊಳ್ಳುಕುಣಿತ, ಕೊಡವ ನೃತ್ಯ ಸಹಿತ ಸಾಂಸ್ಕೃತಿಕ ನೃತ್ಯ ತಂಡಗಳು ಮೆರವಣಿಗೆಗೆ ಮೆರುಗು ನೀಡಿದ್ದವು.