ನೆಲ್ಯಾಡಿ ವಿಶ್ವವಿದ್ಯಾನಿಲಯ ಕಾಲೇಜು ವಿದ್ಯಾರ್ಥಿ ಸಂಘ ಉದ್ಘಾಟನೆ, ವೆಬ್‌ಸೈಟ್ ಅನಾವರಣ, ಸಾಂಸ್ಕೃತಿಕ ಪ್ರತಿಭಾ ಆಯ್ಕೆ ಸ್ಪರ್ಧೆ, ಸನ್ಮಾನ

ನೆಲ್ಯಾಡಿ: ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜು ಆಗಿರುವ ನೆಲ್ಯಾಡಿಯ ವಿಶ್ವವಿದ್ಯಾನಿಲಯ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ, ವೆಬ್‌ಸೈಟ್ ಅನಾವರಣ, ಸಾಂಸ್ಕೃತಿಕ ಪ್ರತಿಭಾ ಆಯ್ಕೆ ಸ್ಪರ್ಧೆ ಮತ್ತು ಸನ್ಮಾನ ಕಾರ್ಯಕ್ರಮ ನೆಲ್ಯಾಡಿಯ ಎಲೈಟ್ ಸಭಾಂಗಣದಲ್ಲಿ ನಡೆಯಿತು.


ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯರವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕಾಲೇಜಿನ ಪಠ್ಯ, ಪಠ್ಯೇತರ ಸೃಜನಶೀಲ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ಉತ್ತಮವಾಗಿ ಜವಾಬ್ದಾರಿ ನಿರ್ವಹಿಸಿ ವಿದ್ಯಾರ್ಥಿಗಳು ಕಾಲೇಜಿನ ಯಶಸ್ವಿಗೆ ಕಾರಣಕರ್ತರಾಗಬೇಕೆಂದು ಹೇಳಿದರು. ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು, ವ್ಯಕ್ತಿತ್ವ ವಿಕಸನಕ್ಕೆ ಅನುಕೂಲ ಮಾಡಿಕೊಡಬೇಕು. ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಸಾರ ವಿದ್ಯಾರ್ಥಿಗಳ ಶಾರೀರಿಕ, ಮಾನಸಿಕ, ಬೌದ್ಧಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ನೆಲೆಗಳಿಂದ ವ್ಯಕ್ತಿತ್ವ ವಿಕಾಸವಾಗಾಬೇಕು. ’ ಟೀಚರ್ ಈಸ್ ದ ಗೇಮ್ ಚೇಂಜರ್’ ಎಂದು ರಾಷ್ಟ್ರೀಯ ಶಿಕ್ಷಣ ನೀತಿಯು ಹೇಳುವ ಹಾಗೆ ವಿದ್ಯಾರ್ಥಿಗಳಲ್ಲಿರುವ ಅಂಧಕಾರ ದೂರ ಮಾಡಿ ಬೆಳಕನ್ನು ತೋರಬೇಕೆಂದು ಸಲಹೆ ನೀಡಿದರು. ಯಾವಾಗಲೂ ರಾಷ್ಟ್ರ ಮೊದಲು, ವ್ಯಕ್ತಿತ್ವ ಮುಖ್ಯ ಎಂಬ ಮಾತನ್ನು ವಿದ್ಯಾರ್ಥಿಗಳು ನೆನಪಿನಲ್ಲಿಟ್ಟುಕೊಂಡು ನಮ್ಮ ದೇಶದ ಬಗೆಗೆ ರಾಷ್ಟ್ರಾಭಿಮಾನ ಬೆಳೆಸಿಕೊಳ್ಳಬೇಕು ಎಂದರು. ಕಾಲೇಜಿನ ವೆಬ್‌ಸೈಟ್ ಅನಾವರಣಗೊಂಡಿದೆ. ಇನ್ನು ಮುಂದೆ ಕಾಲೇಜಿನ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡುವ ಮೂಲಕ ಎಲ್ಲರಿಗೂ, ಎಲ್ಲೆಡೆಯೂ ಕಾಲೇಜಿನ ಮಾಹಿತಿ ತಲುಪುವಂತೆ ಕಾರ್ಯನಿರ್ವಹಿಸಬೇಕು. ವೆಬ್‌ಸೈಟ್‌ನ ಉತ್ತಮ ಕಾರ್ಯನಿರ್ವಹಣೆಗಾಗಿ ಎಲ್ಲಾ ರೀತಿಯ ಆರ್ಥಿಕ ಸಹಕಾರದ ಜೊತೆಗೆ ಉತ್ತಮ ರೀತಿಯ ತಾಂತ್ರಿಕ ನೆರವನ್ನೂ ಕೂಡ ವಿಶ್ವವಿದ್ಯಾನಿಲಯದಿಂದ ನೀಡಲಾಗುತ್ತದೆ ಎಂದರು. ಕಾಲೇಜಿನ ಉಪನ್ಯಾಸಕಿ ಹೇಮಾವತಿ ಅವರ ಜೀವರಕ್ಷಣೆಯ ಸೇವೆಯನ್ನು ಪ್ರಶಂಸಿಸಿದ ಕುಲಪತಿಗಳು, ಇನ್ನೊಬ್ಬರಿಗಾಗಿ ಬದುಕುವ ಕ್ಷಣದ ತೃಪ್ತಿಯು ಎಷ್ಟು ಕೋಟಿ ಕೊಟ್ಟರೂ ಸಿಗಲಾರದು. ಅಂತಹ ಪುಣ್ಯದ ಕೆಲಸವನ್ನು ಉಪನ್ಯಾಸಕಿ ಹೇಮಾವತಿ ಅವರು ಮಾಡಿದ್ದಾರೆ. ಇದು ಎಲ್ಲರಿಗೂ ಮಾದರಿಯಾದ ವ್ಯಕ್ತಿತ್ವದ ನಿದರ್ಶನ ಎಂದರು. ಆತ್ಮಾನುಸಂಧಾನದ ಮೂಲಕ ಮಾತ್ರ ಇಂತಹ ಸೇವೆ ಮಾಡಲು ಸಾಧ್ಯ. ಅವರೊಳಗಿನ ಶಿಕ್ಷಕಿ ಎನ್ನುವ ವ್ಯಕ್ತಿತ್ವ ಜಾಗ್ರತವಾಗಿದ್ದ ಕಾರಣ ಈ ಪುಣ್ಯದ ಕೆಲಸ ಸಾಧ್ಯವಾಗಿದೆ. ಹೀಗೆ ಇನ್ನೊಬ್ಬರಿಗಾಗಿ ಬದುಕಿದಾಗ ಮಾತ್ರ ಭಗವಂತ ಒಳ್ಳೆಯ ಸಾಮರ್ಥ್ಯ ಕೊಡುತ್ತಾನೆ ಎಂದರು. ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ಐದು ಘಟಕ ಕಾಲೇಜುಗಳಿವೆ. ಪಂಚಮಂ ಕಾರ್ಯಸಿದ್ಧಿ ಎನ್ನುವ ಹಾಗೆ ಅವುಗಳಲ್ಲಿ ನೆಲ್ಯಾಡಿಯ ವಿಶ್ವವಿದ್ಯಾನಿಲಯ ಕಾಲೇಜು ಕೂಡ ಒಂದಾಗಿದೆ. ಈ ಕಾಲೇಜು ಭಿನ್ನವಾಗಿ ಬೆಳೆದು ಈ ಭಾಗದ ಗ್ರಾಮೀಣ ಪ್ರದೇಶದ ಅನೇಕ ವಿದ್ಯಾರ್ಥಿಗಳ ಬಾಳನ್ನು ಬೆಳಗಬೇಕು. ಈ ಕಾಲೇಜಿಗೆ ಸರಕಾರದ ಅನುಮತಿಯು ಇನ್ನು ಕೆಲವೇ ದಿವಸಗಳಲ್ಲಿ ಸಿಗುತ್ತದೆ. ಕಾಲೇಜಿಗೆ ಸಂಬಂಧಿಸಿದ ಭೂಮಿಯ ಎಲ್ಲಾ ದಾಖಲೆಗಳು ಸಿದ್ಧವಾಗಿ ಸಲ್ಲಿಕೆಯಾಗಿದ್ದು ಕಾಲೇಜು ಸರಕಾರದ ಅನುಮತಿಯೊಂದಿಗೆ ಯಶಸ್ವಿಯಾಗಿ ಮುನ್ನಡೆಯಲಿದೆ. ಈ ಕಾರ್ಯಕ್ಕೆ ಕಾಲೇಜಿನ ಅನುಷ್ಠಾನ ಸಮಿತಿಯ ಸಹಕಾರ, ಈ ಭಾಗದ ಜನರ, ರಾಜಕೀಯ ನಾಯಕರುಗಳ ಪ್ರಯತ್ನಪೂರಕ ಸಹಕಾರ ಕೂಡ ಅಷ್ಟೇ ಮುಖ್ಯವಾಗಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಗಳ ಸಂಚಾಲಕ ಅಬ್ರಹಾಂ ವರ್ಗೀಸ್‌ರವರು ಮಾತನಾಡಿ, ನೆಲ್ಯಾಡಿಯ ಈ ವಿಶ್ವವಿದ್ಯಾನಿಲಯ ಕಾಲೇಜು ಈ ಭಾಗದಲ್ಲಿ ಉತ್ತಮವಾದ ಶೈಕ್ಷಣಿಕ ಸೇವೆಯನ್ನು ನೀಡುತ್ತ ಬರುತ್ತಿದೆ. ನಾನು ಆರಂಭದಿಂದ ಈ ಕಾಲೇಜಿನೊಂದಿಗೆ ಒಡನಾಟವಿಟ್ಟುಕೊಂಡಿರುವ ಹಿನ್ನಲೆಯಲ್ಲಿ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳನ್ನು ಗಮನಿಸುತ್ತಾ ಬರುತ್ತಿದ್ದೇನೆ. ಈ ಕಾಲೇಜಿಗೆ ಅತ್ಯುತ್ತಮವಾದ ಉಪನ್ಯಾಸ ವೃಂದವಿದೆ. ಇಂತಹ ಉಪನ್ಯಾಸಕರನ್ನು ನೇಮಕ ಮಾಡಿ ಕಳಿಸಿರುವುದಕ್ಕೆ ಕುಲಪತಿಗಳಿಗೆ ಕೃತಜ್ಞತೆ ತಿಳಿಸುವುದರ ಜೊತೆಗೆ ಸುಂದರವಾದ ಪ್ರಕೃತಿಯ ಮಡಿಲಲ್ಲಿ ಈ ವಿಶ್ವವಿದ್ಯಾನಿಲಯ ಕಾಲೇಜಿಗೆ ಜಾಗ ದೊರೆತಿದೆ. ಹಾಗಾಗಿ ಇದು ಕೇವಲ ಕಾಲೇಜಾಗಿ ಮಾತ್ರ ಬೆಳೆದರೆ ಸಾಲದು, ಇದು ಉನ್ನತವಾದ ಅಧ್ಯಯನ ಕೇಂದ್ರವಾಗಬೇಕು. ಉತ್ತಮ ವಸತಿ ನಿಲಯಗಳೊಂದಿಗೆ ಸ್ನಾತಕೋತ್ತರ ಕೇಂದ್ರ ಮತ್ತು ಸಂಶೋಧನ ಅಧ್ಯಯನಕ್ಕೆ ಅವಕಾಶ ಕೊಟ್ಟು ವಿಶ್ವವಿದ್ಯಾನಿಲಯದ ಉನ್ನತ ಶೈಕ್ಷಣಿಕ ಕೇಂದ್ರವಾಗಿ ಬೆಳೆಯಬೇಕು. ಈ ನಿಟ್ಟಿನ ಬೆಳವಣಿಗೆಯಲ್ಲಿ ವಿಶ್ವವಿದ್ಯಾನಿಲಯವು ಕ್ರಮ ಕೈಗೊಳ್ಳಬೇಕೆಂದು ಆಶಿಸಿದರು.

ಇನ್ನೋರ್ವ ಅತಿಥಿ ನೆಲ್ಯಾಡಿಯ ಖ್ಯಾತ ಉದ್ಯಮಿ ಸತೀಶ್ ಕೆ.ಎಸ್ ದುರ್ಗಾಶ್ರೀ ಮಾತನಾಡಿ, ಕಾಲೇಜಿನ ಎಲ್ಲಾ ರೀತಿಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ವಿದ್ಯಾರ್ಥಿಗಳು ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು. ಪ್ರಸ್ತುತ ಕಾಲೇಜು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದರೂ ಕೂಡ ಉತ್ತಮವಾದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ಉತ್ತಮವಾದ ಶೈಕ್ಷಣಿಕ ವಾತಾವರಣ ಇಲ್ಲಿದೆ. ಹಾಗಾಗಿ ವಿದ್ಯಾರ್ಥಿಗಳು ಈ ವಾತಾವರಣದಲ್ಲಿ ತಮ್ಮ ಪ್ರಯತ್ನದ ಮೂಲಕ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಸಲಹೆ ನೀಡಿದರು. ಕುಲಪತಿಗಳಾದ ಪ್ರೊ.ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಇವರ ಆಡಳತಾವಧಿಯಲ್ಲಿಯೇ ಇವರಿಂದಲೇ ಈ ಕಾಲೇಜಿನ ನೂತನ ಕಟ್ಟಡದ ಶಿಲಾನ್ಯಾಸ ಜರುಗಬೇಕೆಂಬುದು ನಮ್ಮೆಲ್ಲರ ಆಶಯ ಎಂದರು.

ಸನ್ಮಾನ:

ವಿಶ್ವವಿದ್ಯಾನಿಲಯ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿ ವೃಂದ ಮತ್ತು ಕಾಲೇಜಿನ ಅನುಷ್ಠಾನ ಸಮಿತಿಯ ಪರವಾಗಿ ಕಾಲೇಜಿನ ಕನ್ನಡ ಉಪನ್ಯಾಸಕಿ ಹೇಮಾವತಿ ಅವರಿಗೆ ಸನ್ಮಾನ ಮಾಡಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಹೇಮಾವತಿಯವರು, ಈ ಸನ್ಮಾನವನ್ನು ನನ್ನ ವೈಯಕ್ತಿಕವಾಗಿ ಸ್ವೀಕರಿಸದೆ ನನ್ನ ಸೇವೆಗೆ ಸಂದ ಗೌರವವಾಗಿದ್ದು ಈ ಸೇವೆಯು ನನ್ನ ಎಲ್ಲ ವಿದ್ಯಾರ್ಥಿಗಳಿಗೆ ಮತ್ತು ಸಮಾಜಕ್ಕೆ ಪ್ರೇರಣೆಯಾಗುವ ಕಾರಣ ಸನ್ಮಾನ ಸ್ವೀಕರಿಸಿದ್ದೇನೆ ಎಂದರು. ಕಳೆದ ಸೆ.22ರಂದು ಬಂಟ್ವಾಳದ ರೈಲ್ವೆ ನಿಲ್ದಾಣದಲ್ಲಿ ನಡೆದ ಘಟನೆಯನ್ನು ಸ್ಮರಿಸುತ್ತಾ ಹೃದಯಾಘಾತವಾಗಿದ್ದ ವ್ಯಕ್ತಿಯನ್ನು ಕಾಪಾಡಲು ತಮ್ಮ ಪ್ರಯಾಣವನ್ನೇ ಮೊಟಕುಗೊಳಿಸಿ ಜೀವ ಕಾಪಾಡಿದ ಪ್ರಸಂಗವನ್ನು ವಿವರಿಸಿದರು.

ಸಾಂಸ್ಕೃತಿಕ ಸ್ಪರ್ಧೆ:

ಸಭಾ ಕಾರ್ಯಕ್ರಮದ ನಂತರ ಲಲಿತ ಕಲಾ ಸಂಘದ ವತಿಯಿಂದ ಸಂಘದ ಸಂಚಾಲಕಿ ದಿವ್ಯಶ್ರೀ ಜಿ ಮತ್ತು ಬೋಧಕ ವರ್ಗದ ಮೂಲಕ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಲಾಯಿತು. ಎಲ್ಲಾ ವಿದ್ಯಾರ್ಥಿಗಳು ಗಾಯನ, ನೃತ್ಯ, ಮೈಮ್, ಛದ್ಮವೇಷ ಮತ್ತು ಇನ್ನಿತರ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಪ್ರತಿಭೆಯನ್ನು ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಜಿ.ಪಂ ಮಾಜಿ ಸದಸ್ಯ ಪಿ.ಪಿ ವರ್ಗೀಸ್, ಕಾಲೇಜಿನ ಅನುಷ್ಠಾನ ಸಮಿತಿಯ ಅಧ್ಯಕ್ಷೆ ಉಷಾ ಅಂಚನ್, ಗೌರವಾಧ್ಯಕ್ಷ ಕೆ.ಪಿ.ತೋಮಸ್, ಕೋಶಾಧಿಕಾರಿ ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿ ಶಿವಪ್ರಸಾದ್, ಸದಸ್ಯರಾದ ತೀರ್ಥೇಶ್ವರ ಉರ್ಮಾನು, ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಅಬ್ದುಲ್ ಖಾದರ್, ಕಾಲೇಜಿನ ಕಟ್ಟಡದ ಮಾಲಕ ರವಿಚಂದ್ರಗೌಡ ಹೊಸವೊಕ್ಲು, ನೆಲ್ಯಾಡಿಯ ಐಐಸಿಟಿ ಕಂಪ್ಯೂಟರ್ ವಿದ್ಯಾಸಂಸ್ಥೆಯ ಮತ್ತು ನೇಸರ ಸುದ್ದಿ ಸಂಸ್ಥೆಯ ಮುಖ್ಯಸ್ಥರಾದ ಪ್ರಶಾಂತ್ ಸಿ.ಹೆಚ್, ನೆಲ್ಯಾಡಿ ವರ್ತಕರ ಸಂಘದ ಉಪಾಧ್ಯಕ್ಷ ಗಣೇಶ್ ಕೆ ರಶ್ಮಿ, ನೆಲ್ಯಾಡಿ ಸಂತಜಾರ್ಜ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ನಿವೃತ್ತ ಮುಖ್ಯಗುರು ರವೀಂದ್ರ ಟಿ., ಉಪಸ್ಥಿತರಿದ್ದರು.

ಕಾಲೇಜಿನ ಸಂಯೋಜಕರಾದ ಡಾ.ಜಯರಾಜ್ ಎನ್. ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಸಂಚಾಲಕ ಸುರೇಶ್ ಕೆ. ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು. ರಾಜ್ಯಶಾಸ್ತ್ರ ಉಪನ್ಯಾಸಕಿ ಡೀನಾ ಪಿ.ಪಿ ನಿರೂಪಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ವೆರೊಣಿಕಾ ಪ್ರಭಾ ಅಧ್ಯಕ್ಷರ, ಅತಿಥಿಗಳ ಪರಿಚಯ ಮಾಡಿಕೊಟ್ಟರು. ಬಿ.ಬಿ.ಎ ವಿಭಾಗದ ಮುಖ್ಯಸ್ಥರಾದ ನಿಶ್ಮಿತಾ ಪಿ ಸನ್ಮಾನ ಕಾರ್ಯಕ್ರಮವನ್ನು ನಿರ್ವಹಿಸಿದರು. ಡಾ.ಸೀತಾರಾಮ್ ಪಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.