ಸೌತಡ್ಕ: ಭಜನೋತ್ಸವ, ಗೋಬರ್ ಗ್ಯಾಸ್ ಘಟಕದ ಶಿಲಾನ್ಯಾಸ, ವಿವಿಧ ಯೋಜನೆಗಳ ಉದ್ಘಾಟನೆ

0

ನೆಲ್ಯಾಡಿ: ಬಯಲು ಆಲಯ ಪ್ರಸಿದ್ಧಿಯ ಕೊಕ್ಕಡ ಸಮೀಪದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಜ.23ರಂದು ಭಜನೋತ್ಸವ ನಡೆಯಿತು. ಇದೇ ವೇಳೆ ಕ್ಷೇತ್ರದಲ್ಲಿ ಗೋಬರ್ ಗ್ಯಾಸ್ ಘಟಕ ನಿರ್ಮಾಣಕ್ಕೆ ಶಿಲಾನ್ಯಾಸ ಹಾಗೂ ಶಾಸಕರ ಅನುದಾನದಲ್ಲಿ ನಡೆದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ನಡೆಯಿತು.

ಭಜನೋತ್ಸವ ಕಾರ್ಯಕ್ರಮವನ್ನು ಕಡಬ ಸರಸ್ವತಿ ವಿದ್ಯಾಲಯದ ಸಂಚಾಲಕ ವೆಂಕಟ್ರಮಣ ರಾವ್ ಮಂಕುಡೆ ಉದ್ಘಾಟಿಸಿ ಶುಭಹಾರೈಸಿದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಕೊಕ್ಕಡ ಗ್ರಾ.ಪಂ.ಅಧ್ಯಕ್ಷ ಯೋಗೀಶ್ ಆಲಂಬಿಲ, ಉಪಾಧ್ಯಕ್ಷೆ ಪವಿತ್ರಾ ಗುರುಪ್ರಸಾದ್, ಸದಸ್ಯ ಪ್ರಭಾಕರ ಗೌಡ, ಪಿಡಿಒ ದೀಪಕ್ ರಾಜ್, ಮೂಡಪ್ಪ ಸೇವಾ ಸಮಿತಿ ಸಂಚಾಲಕ ಕುಶಾಲಪ್ಪ ಗೌಡ ಪೂವಾಜೆ, ಆರ್‌ಎಸ್‌ಎಸ್ ಮುಖಂಡ ಕೃಷ್ಣ ಭಟ್, ಭಜನೋತ್ಸವ ಉಸ್ತುವಾರಿ ಹರೀಶ್ ನೆರಿಯ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ರಾವ್, ಸದಸ್ಯರಾದ ಸುಬ್ರಹ್ಮಣ್ಯ ತೋಡ್ತಿಲ್ಲಾಯ, ಪುರಂದರ ಕೆ., ಪ್ರಶಾಂತ್ ಪಿ., ವಿಠಲ ಕೆ., ನವೀನ ಕೆ., ಹೇಮಾವತಿ, ಯಶೋಧ ಉಪಸ್ಥಿತರಿದ್ದರು.

ಕಾರ್ಯನಿರ್ವಾಹಣಾಧಿಕಾರಿ ದಯಾನಂದ ಹೆಗ್ಡೆ ಸ್ವಾಗತಿಸಿ, ಕೇಶವ ಹಳ್ಳಿಂಗೇರಿ ವಂದಿಸಿದರು. ಹೇಮಾವತಿ ಶಿವಾನಂದ ನಿರೂಪಿಸಿದರು. ಹರೀಶ್ ನೆರಿಯ ಪ್ರಾರ್ಥಿಸಿದರು. ಸಭಾ ಕಾರ್ಯಕ್ರಮದ ಬಳಿಕ ಹರೀಶ್ ನೆರಿಯ ಅವರ ನೇತೃತ್ವದಲ್ಲಿ ಜಿಲ್ಲೆಯ ಆಹ್ವಾನಿತ ಭಜನಾ ಮಂಡಳಿಗಳಿಂದ ಕುಣಿತ ಭಜನೆ ನಡೆಯಿತು. ಸಂಜೆ ಕಾಮಧೇನು ಗೋ ಶಾಲೆಯಿಂದ ಶ್ರೀ ಕ್ಷೇತ್ರದ ತನಕ ಭಜನಾ ಶೋಭಾಯಾತ್ರೆ ನಡೆಯಿತು. ಸಂಜೆ ಸಮಾರೋಪ ಸಮಾರಂಭ, ರಾತ್ರಿ ಭಜನಾ ಮಂಗಳೋತ್ಸವ ನಡೆಯಿತು.

ಶಿಲಾನ್ಯಾಸ, ಉದ್ಘಾಟನೆ:

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಗೋ ಶಾಲೆಯಲ್ಲಿ ದೇವಳದ ಉಪಯೋಗಕ್ಕಾಗಿ ಗೋಬರ್ಧನ್ ಯೋಜನೆಯ ಮೂಲಕ ಜಿಲ್ಲಾ ಪಂಚಾಯತ್ ವತಿಯಿಂದ ನಿರ್ಮಿಸಲ್ಪಡುವ ಗೋಬರ್ ಗ್ಯಾಸ್ ಘಟಕ ನಿರ್ಮಾಣಕ್ಕೆ ಶಾಸಕ ಹರೀಶ್ ಪೂಂಜ ಅವರು ಶಿಲಾನ್ಯಾಸ ಮಾಡಿದರು. ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಬಳಿ ಶಾಸಕರ ಅನುದಾನದಲ್ಲಿ ನಿರ್ಮಿಸಿರುವ ರಸ್ತೆ ವಿಭಜಕದ ಹೈಮಾಸ್ಟ್ ಸೋಲಾರ್ ದೀಪ ಉದ್ಘಾಟನೆ ಹಾಗೂ ಕ್ಷೇತ್ರದ ಬಳಿ ಕೆಆರ್‌ಐಡಿ 75 ಲಕ್ಷ ರೂ.ಅನುದಾನದಲ್ಲಿ ನಿರ್ಮಾಣಗೊಂಡ ಯಾತ್ರಿ ನಿವಾಸದ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ಅವರು ನೆರವೇರಿಸಿದರು.

LEAVE A REPLY

Please enter your comment!
Please enter your name here