ಜ.26: ಗಡಿನಾಡ ಸಂಸ್ಕೃತಿ ಉತ್ಸವ, ಗೌರವ ಸನ್ಮಾನ ವಿವೇಕಾನಂದ ಕಾಲೇಜು ಸಭಾಂಗಣದಲ್ಲಿ ದಿನಪೂರ್ತಿ ಕಾರ್ಯಕ್ರಮ

0

ಪುತ್ತೂರು-ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರ್ಕಾರ ಬೆಂಗಳೂರು, ನೃತ್ಯೋಪಾಸನಾ ಕಲಾ ಕೇಂದ್ರ ಪುತ್ತೂರು ಇದರ ವತಿಯಿಂದ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜು ಪುತ್ತೂರು ಇವರ ಸಹಯೋಗದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜ.26 ರಂದು ಪುತ್ತೂರಿನ ವಿವೇಕಾನಂದ ಕಾಲೇಜಿನ ಗೋಲ್ಡನ್ ಜುಬಿಲಿ ಹಾಲ್‌ನಲ್ಲಿ ಗಡಿನಾಡ ಸಂಸ್ಕೃತಿ ಉತ್ಸವ-ಗೌರವ ಸನ್ಮಾನ ಕಾರ್ಯಕ್ರಮ ದಿನಪೂರ್ತಿ ನಡೆಯಲಿದೆ.

ಬೆಳಗ್ಗೆ 10.30 ಕ್ಕೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಗಡಿನಾಡ ಸಂಸ್ಕೃತಿ ಉತ್ಸವ ಉದ್ಘಾಟಿಸುವರು.ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸುವರು.ನಗರ ಸಭೆ ಅಧ್ಯಕ್ಷ ಜೀವಂಧರ ಜೈನ್ ಅತಿಥಿಗಳಾಗಿ ಆಗಮಿಸಲಿದ್ದು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್, ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ನೃತ್ಯೋಪಾಸನಾ ಕಲಾ ಕೇಂದ್ರದ ನೃತ್ಯಗುರು, ವಿದುಷಿ ಶಾಲಿನಿ ಆತ್ಮಭೂಷಣ್, ಕಾಲೇಜು ಸಂಚಾಲಕ ಮುರಳಿಕೃಷ್ಣ ಚಳ್ಳಂಗಾರು, ಪ್ರಾಂಶುಪಾಲ ಪ್ರೊ|ವಿ.ಜಿ.ಭಟ್ ಉಪಸ್ಥಿತರಿರುವರು.

ಸಾಧಕರಿಗೆ ಗೌರವ:
ಇದೇ ಸಂದರ್ಭ ಐವರು ಸಾಧಕರಿಗೆ ಗೌರವ ಸನ್ಮಾನ ನೆರವೇರಲಿದೆ. ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್, ಪುತ್ತೂರಿನ ಚರ್ಮವಾದ್ಯ ತಯಾರಕ ರಾಜರತ್ನಂ ದೇವಾಡಿಗ, ಹಿರಿಯ ಅರ್ಥಶಾಸಜ್ಞ ಡಾ|ವಿಘ್ನೇಶ್ವರ ವರ್ಮುಡಿ, ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ ಎಡನೀರು ಇದರ ವಿದುಷಿ ಅನುಪಮಾ ರಾಘವೇಂದ್ರ ಹಾಗೂ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು,ಇವರನ್ನು ಸನ್ಮಾನಿಸಲಾಗುವುದು.

ಗಡಿನಾಡು ವಿಚಾರಗೋಷ್ಠಿ:
ಬೆಳಗ್ಗೆ 11.30ರಿಂದ ಗಡಿನಾಡ ಕನ್ನಡ-ಸವಾಲು-ಸಾಧ್ಯತೆ ಬಗ್ಗೆ ಕಾಸರಗೋಡು ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳಕುರಾಯ ಅಧ್ಯಕ್ಷತೆಯಲ್ಲಿ ವಿಚಾರ ಗೋಷ್ಠಿ ನಡೆಯಲಿದೆ. ಸವಾಲುಗಳ ಬಗ್ಗೆ ಕಾಸರಗೋಡಿನ ಸಾಹಿತ್ಯ ವಿದ್ಯಾರ್ಥಿ ಕಾರ್ತಿಕ್ ಪಡ್ರೆ ಹಾಗೂ ಸಾಧ್ಯತೆ ಕುರಿತು ಮಂಗಳೂರು ವಿವಿ ಕನ್ನಡ ವಿಭಾಗ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ವಿಚಾರ ಮಂಡಿಸಲಿದ್ದಾರೆ.

ರಘುರಾಮ ಹೊಳ್ಳರ ಗಾನ ವೈಭವ:
ಮಧ್ಯಾಹ್ನ 12.30ರಿಂದ ಕಲಾವಿದ ನಾ.ಕಾರಂತ ಪೆರಾಜೆ ನಿರೂಪಣೆಯಲ್ಲಿ, ಭಾಗವತಹಂಸ ಪುತ್ತಿಗೆ ರಘುರಾಮ ಹೊಳ್ಳ ಭಾಗವತಿಕೆಯಲ್ಲಿ ಯಕ್ಷ-ಗಾನ ವೈಭವ ನಡೆಯಲಿದೆ.ಮೃದಂಗದಲ್ಲಿ ಚೈತನ್ಯಕೃಷ್ಣ ಪದ್ಯಾಣ, ಚೆಂಡೆಯಲ್ಲಿ ಜಗನ್ನಿವಾಸ ರಾವ್ ಪಿ.ಜಿ.ಸಹಕರಿಸುವರು.

ಸಾಂಸ್ಕೃತಿಕ ಕಾರ್ಯಕ್ರಮ:
ಮಧ್ಯಾಹ್ನ 2 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಪುತ್ತೂರಿನ ವಿದುಷಿ ಸುಚಿತ್ರಾ ಹೊಳ್ಳ ಅವರಿಂದ ದಾಸ ಸಿಂಚನ ಪ್ರಸ್ತುತಿಯಾಗಲಿದೆ 2.30ರಿಂದ ಪುತ್ತೂರಿನ ನೃತ್ಯೋಹಂ ಬಳಗದಿಂದ ಸಮೂಹ ನೃತ್ಯ, ಸಂಜೆ 3 ರಿಂದ ವಿವೇಕಾನಂದ ಕಾಲೇಜು ಲಲಿತಕಲಾ ಸಂಘದಿಂದ ಜಾನಪದ ನೃತ್ಯ, 3.30ರಿಂದ ಮೂಡುಬಿದಿರೆ ಆರಾಧನಾ ನೃತ್ಯ ಕೇಂದ್ರದವರಿಂದ ವಿದುಷಿ ಸುಖದಾ ಬರ್ವೆ ನಿರ್ದೇಶನದಲ್ಲಿ ಭರತನಾಟ್ಯ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here