ಉಪ್ಪಿನಂಗಡಿ ಗ್ರಾ.ಪಂ ಸಾಮಾನ್ಯ ಸಭೆ ಬಹಿಷ್ಕರಿಸಿದ ಹಿನ್ನೆಲೆ – ಜ.27ಕ್ಕೆ ವಲಯ ಕಾಂಗ್ರೆಸ್, ನಾಗರಿಕರಿಂದ ಪಂಚಾಯತ್ ಎದುರು ಪ್ರತಿಭಟನೆ

0

ಪುತ್ತೂರು: ಉಪ್ಪಿನಂಗಡಿ ಗ್ರಾ.ಪಂನಲ್ಲಿ ಜನವರಿ ತಿಂಗಳ ಸಾಮಾನ್ಯ ಸಭೆ ಕರೆದ ಆಡಳಿತ ನಡೆಸುತ್ತಿರುವ ಬಿಜೆಪಿ ಬೆಂಬಲಿತ ಅಧ್ಯಕ್ಷರು ಮತ್ತು ಸದಸ್ಯರು ತಮ್ಮ ದುರಾಡಳಿತ ಮತ್ತು ಭ್ರಷ್ಟಾಚಾರ ಬಯಲಿಗೆ ಬರುತ್ತದೆಂದು ಹೆದರಿ ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿದ್ದಾರೆ. ಇದರ ವಿರುದ್ಧ ಜ.27ಕ್ಕೆ ಉಪ್ಪಿನಂಗಡಿ ಗ್ರಾ.ಪಂ ಎದುರು ಉಪ್ಪಿನಂಗಡಿ ವಲಯ ಕಾಂಗ್ರೆಸ್ ಮತ್ತು ಉಪ್ಪಿನಂಗಡಿಯ ನಾಗರಿಕರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಉಪ್ಪಿನಂಗಡಿ, ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


ಪಂಚಾಯತ್ ಅಧ್ಯಕ್ಷರಿಂದ ಅಗುತ್ತಿರುವ ದುರಾಡಳಿತ ಮತ್ತು ಭ್ರಷ್ಟಾಚಾರವನ್ನು ಪ್ರಶ್ನೆ ಮಾಡುವ ಮೂಲಕ ಜನಸಾಮಾನ್ಯರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ನಮ್ಮ ಹೋರಾಟ ನಡೆಯಲಿದೆ. ಸಾಮಾನ್ಯ ಸಭೆಯಲ್ಲಿ ಜನರ ಅರ್ಜಿಗಳನ್ನು ಇತ್ಯರ್ಥ ಮಾಡುವುದನ್ನು ಬಿಟ್ಟು ತಮ್ಮ ಬ್ರಹ್ಮಾಂಡ ಭ್ರಷ್ಟಾಚಾರ ಮತ್ತು ದುರಾಡಳಿತ ಎಲ್ಲಿ ಬೆಳಕಿಗೆ ಬರುತ್ತದೋ ಎಂದು ಹೆದರಿ ಸಭೆಯಿಂದ ಪಲಾಯನ ಮಾಡುವ ಐತಿಹಾಸಿಕ ನಿರ್ಣಯವನ್ನು ಬಿಜೆಪಿ ಬೆಂಬಲಿತ ಅಧ್ಯಕ್ಷರು ಮತ್ತು ಸದಸ್ಯರು ತೆಗೆದುಕೊಂಡಿದ್ದಾರೆ. ನಿನ್ನೆ ನಡೆದ ಘಟನೆ ದುರಾಡಳಿತಕ್ಕೆ ಕೈಗನ್ನಡಿಯಂತಿದೆ ಎಂದು ಆರೋಪಿಸಿದರು. ಪಂಚಾಯತ್ ಅಧ್ಯಕ್ಷರು ಗ್ರಾಮ ಪಂಚಾಯತಿನ ಸಾಮಾನ್ಯ ಸಭೆಯಲ್ಲಿ ಆದ ನಿರ್ಣಯಗಳನ್ನು ಗಣನೆಗೆ ತೆಗೆದುಕೊಳ್ಳದೆ ತಮಗೆ ತೋಚಿದಂತೆ ಬೇಕಾ ಬಿಟ್ಟಿಯಾಗಿ ಪಂಚಾಯತ್ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ಸ್ವಂತ ನೆಲೆಯಲ್ಲಿ ಪಂಚಾಯತಿಯಿಂದ ಪಡೆದ ಬಾಡಿಗೆ ಕೊಠಡಿಯ ಅವಧಿ ಮುಗಿಯುತ್ತಾ ಬಂದಿದ್ದು, ಅದರ ಬದಲಿಗೆ ಬೇರೊಂದು ಕೊಠಡಿಯನ್ನು ಮೂರು ವರ್ಷಗಳ ಅವಧಿಗೆ ಏಲಂ ರಹಿತವಾಗಿ ಪಡೆದುದಲ್ಲದೆ ಅದಕ್ಕೆ ಬೇಕಾದ ಪರವಾನಿಗೆಗೆ ಸಾಮಾನ್ಯ ಸಭೆಯಲ್ಲಿ ಅರ್ಜಿಯನ್ನು ಇಡದೆ ಪಂಚಾಯತ್ ಪಿಡಿಒ ಮೇಲೆ ಒತ್ತಡ ತಂದು ಪರವಾನಿಗೆಯನ್ನು ಪಡೆದುಕೊಂಡಿದ್ದಾರೆ. ಹೊಸ ಬಸ್‌ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತ ಪ್ರಸಾದ್ ಭಂಡಾರಿಯವರಿಗೆ ಸೆಲೂನ್ ನಡೆಸಲು ಕೊಟ್ಟಿದ್ದ ಕೊಠಡಿಯ ಬಾಡಿಗೆ ಚೆಕ್ ಬೌನ್ಸ್ ಆಗಿ ಮೂರು ಬಾರಿ ಎಚ್ಚರಿಕೆ ನೀಡಿದರೂ ಆ ಬಗ್ಗೆ ಪಂಚಾಯತ್‌ನಿಂದ ಯಾವ ಕ್ರಮವನ್ನು ಕೈಗೊಂಡಿಲ್ಲ. ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಠ ಎಂಬಲ್ಲಿ ಒಂದು ಸಮುದಾಯಕ್ಕೆ ಸೇರಿದವರು ಕಟ್ಟಿದ ಮನೆಗಳಿಗೆ 94 ಸಿ ಮಾಡಬಾರದೆಂದು ಗ್ರಾಮಕರಣಿಕರಿಗೆ ತಾಕೀತು ಮಾಡಿದ್ದಲ್ಲದೆ, ಬೇರೆ ಕಡೆಗಳಲ್ಲಿ ಮನೆ ಕಟ್ಟಿದ ಜಾಗಕ್ಕೆ 94 ಸಿ ಕೊಡುವ ಮೂಲಕ ತಾರತಮ್ಯ ಮಾಡಿದ್ದಾರೆ. ಹೀಗೆ ಹಲವಾರು ಭ್ರಷ್ಟಾಚಾರವನ್ನು ಪ್ರಶ್ನಿಸಿ ನಾವು ಪ್ರತಿಭಟನೆ ಮಾಡಲಿದ್ದೇವೆ ಎಂದರು.

ಸಾಮಾನ್ಯ ಸಭೆ ನಡೆಯದೆ ಖಂಡನಾ ನಿರ್ಣಯ ಆಗುವುದಿಲ್ಲ:

ಉಪ್ಪಿನಂಗಡಿ ಗ್ರಾ.ಪಂ ಮಾಜಿ ಅಧ್ಯಕ್ಷರಾಗಿರುವ ಹಾಲಿ ಸದಸ್ಯ ಕೆ.ಅಬ್ದುಲ್ ರೆಹಮಾನ್ ಮಠ ಅವರು ಮಾತನಾಡಿ ಅನಧಿಕೃತ ಬ್ಯಾನರ್ ತೆರವಿಗೆ ಪಂಚಾಯತ್‌ನಿಂದ ನಿರ್ಣಯ ಆಗಿತ್ತು. ಅದರಂತೆ ಇತ್ತೀಚೆಗೆ ಪಿಡಿಒ ಮತ್ತು ಸಿಬ್ಬಂದಿಗಳು ಕಾರ್ಯಯೋಜನೆ ಮಾಡಲು ಹೋದಾಗ ಬೆಳಕಿಗೆ ಬಂದ ಅನಧಿಕೃತ ಬ್ಯಾನರ್ ತೆರವಿಗೆ ಸಂಬಂಧಿಸಿ ಅಲ್ಲಿ ಮಾತಿನ ಚಕಮಕಿ ನಡೆದಿದೆ. ಈ ಕುರಿತು ಪಿಡಿಒ ಅವರು ದೂರು ನೀಡಿದ್ದರು. ಇದನ್ನು ಪಂಚಾಯತ್ ಅಧ್ಯಕ್ಷರು ಮಧ್ಯೆ ಪ್ರವೇಶಿಸಿ ವಿಚಾರ ಮುಗಿಸಬಹುದಿತ್ತು. ಈ ಕುರಿತು ನಾನು ಕೂಡಾ ಪಂಚಾಯತ್ ಅಧ್ಯಕ್ಷರಿಗೆ ತಿಳಿಸಿದ್ದೆ. ಆದರೆ ಅವರು ಅದನ್ನು ಗಣನೆಗೆ ತೆಗೆದುಕೊಳ್ಳದೆ ಪಂಚಾಯತ್ ಸಾಮಾನ್ಯ ಸಭೆಯ ವೇಳೆ ಬಿಜೆಪಿ ಬೆಂಬಲಿತ ಸದಸ್ಯರೊಬ್ಬರು ಆರಂಭದಲ್ಲೇ ಪಿಡಿಒ ಮತ್ತು ಸಿಬ್ಬಂದಿ ವಿರುದ್ಧ ಖಂಡನಾ ನಿರ್ಣಯ ಮಾಡುವಂತೆ ಆಗ್ರಹಿಸಿದರು.  ನಾವು ವಿಚಾರ ಏನು ಎಂದು ತಿಳಿಸಿ ಮತ್ತೆ ಖಂಡನಾ ನಿರ್ಣಯ ಮಾಡೋಣ ಎಂದಿದ್ದೆವು. ಆದರೆ ನಮ್ಮ ಮಾತನ್ನು ಕೇಳದೆ ಏಕಾಏಕಿ ಬಿಜೆಪಿ ಬೆಂಬಲಿತ ಅಧ್ಯಕ್ಷರು ಸಭೆ ಬಹಿಷ್ಕರಿಸಿದ್ದಾರೆ. ಆದರೆ ಸಭೆಯೇ ಆಗದೆ ಖಂಡನಾ ನಿರ್ಣಯ ಮಾಡುವುದು ಹೇಗೆ ಎಂಬುದು ಸ್ವಲ್ಪವೂ ತಿಳಿಯದ ಬಿಜೆಪಿ ಬೆಂಬಲಿತ ಆಡಳಿತಕ್ಕೆ ಜನಸಾಮಾನ್ಯರ ಬಗ್ಗೆ ಕಾಳಜಿ ಇಲ್ಲದಂತಾಗಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಉಪ್ಪಿನಂಗಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಆದಂ ಕೊಪ್ಪಳ, ಪಂಚಾಯತ್ ಸದಸ್ಯೆ ವಿದ್ಯಾಲಕ್ಷ್ಮೀ ಪ್ರಭು, ದ..ಕ ಜಿ.ಪಂ ಮಾಜಿ ಅಧ್ಯಕ್ಷ ಸೋಮನಾಥ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here